ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ ನಗರಸಭಾ ಚುನಾವಣೆ: ಸೋಲು, ಗೆಲುವಿನ ಆತ್ಮಾವಲೋಕನ

Last Updated 2 ಮೇ 2021, 3:51 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಟ್ಟಣದ ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಸರಳ ಬಹುಮತದೊಂದಿಗೆ ಅಧಿಕಾರ ಪಡೆದಿದ್ದು, ಕಾಂಗ್ರೆಸ್ ಪಕ್ಷದ ಸೋಲು ಹಾಗೂ ಬಿಜೆಪಿಯ 7 ಸ್ಥಾನಗಳ ಗೆಲುವಿನ ಬಗ್ಗೆ ರಾಜಕೀಯ ಪಂಡಿತರು ಚರ್ಚೆ ನಡೆಸಿದ್ದಾರೆ.

2013ರ ಚುನಾವಣೆಯಲ್ಲಿ 31 ಸ್ಥಾನಗಳ ಪೈಕಿ 14 ಸ್ಥಾನಗಳನ್ನು ಗೆದ್ದು ಇಬ್ಬರು ಪಕ್ಷೇತರರ ಬೆಂಬಲ ಪಡೆದು ಅಧಿಕಾರದ ಗದ್ದುಗೆಗೆ ಏರಿದ್ದ ಕಾಂಗ್ರೆಸ್, ಈ ಚುನಾವಣೆಯಲ್ಲಿ ಕೇವಲ 7 ಸ್ಥಾನಕ್ಕೆ ಕುಸಿದಿರುವುದು ತಾಲ್ಲೂಕಿನಲ್ಲಿ ಕಾಂಗ್ರೆಸ್‌ನ ಹಿನ್ನಡೆ ಎಂದೇ ಅರ್ಥೈಸಲಾಗುತ್ತಿದೆ.

2013ರಲ್ಲಿ 15 ಸ್ಥಾನಗಳನ್ನು ಗೆದ್ದೂ ಅಧಿಕಾರ ಪಡೆಯುವಲ್ಲಿ ವಿಫಲವಾಗಿದ್ದ ಜೆಡಿಎಸ್ ಈ ಬಾರಿ 16 ಸ್ಥಾನಗಳನ್ನು ಗೆದ್ದು ಸ್ವತಂತ್ರವಾಗಿ ಅಧಿಕಾರ ಪಡೆದಿದೆ. ಇದು ತಾಲ್ಲೂಕಿನಲ್ಲಿ ಜೆಡಿಎಸ್ ಪ್ರಬಲವಾಗಿದೆ ಎಂಬುದನ್ನು ಬಿಂಬಿಸುತ್ತದೆ. ಆದರೂ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಶಾಸಕ ಸ್ಥಾನದ ಕ್ಷೇತ್ರವಾಗಿದ್ದುಕೊಂಡು 16 ಸ್ಥಾನ ಗೆದ್ದಿರುವುದು ಕಡಿಮೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚಿಸಲಾಗುತ್ತಿದೆ.

ಇನ್ನು ಇದುವರೆಗೂ ನಗರಸಭೆಯಲ್ಲಿ ಒಂದೂ ಸ್ಥಾನವನ್ನೂ ಪಡೆಯದಿದ್ದ ಬಿಜೆಪಿ ಈ ಚುನಾವಣೆಯಲ್ಲಿ 7 ಸ್ಥಾನಗಳನ್ನು ಗೆದ್ದಿದ್ದು, ಇದು ಬಿಜೆಪಿಯ ಪ್ರಾಬಲ್ಯವನ್ನು ಬಿಂಬಿಸುತ್ತದೆ. ಆದರೂ, ಸಚಿವ ಸಿ.ಪಿ. ಯೋಗೇಶ್ವರ್ ತವರು ತಾಲ್ಲೂಕಿನಲ್ಲಿ ಇಷ್ಟು ಸ್ಥಾನ ಗೆದ್ದಿದ್ದು ಕಡಿಮೆಯಾಯಿತು ಎಂದು ಹೇಳಲಾಗುತ್ತಿದೆ.

ಪ್ರತಿಷ್ಠೆಯ ಕಣವಾಗಿದ್ದ ತಾಲ್ಲೂಕು: ನಗರಸಭಾ ಚುನಾವಣೆಯು ತ್ರಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿತ್ತು. ಕುಮಾರಸ್ವಾಮಿ ತಮ್ಮ ಪ್ರಾಬಲ್ಯ ತೋರಿಸಲು, ಡಿ.ಕೆ. ಬ್ರದರ್ಸ್ ತಮ್ಮ ಪ್ರತಿಷ್ಠೆ ಉಳಿಸಿಕೊಳ್ಳಲು ಹಾಗೂ ಯೋಗೇಶ್ವರ್ ತಮ್ಮ ಪ್ರಭಾವ ಬಿಂಬಿಸಲು ಈ ಚುನಾವಣೆ ವೇದಿಕೆ ಎಂದು ಅರ್ಥೈಸಲಾಗಿತ್ತು.

ಈ ಚುನಾವಣೆ ಮೂರು ಪಕ್ಷಗಳಿಗೂ ತಕ್ಕಪಾಠ ಕಲಿಸಿದೆ ಎಂಬ ಮಾತು ಕೇಳಿಬರುತಿದ್ದು, ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗೆ ಸೂಕ್ತ ತಯಾರಿ ನಡೆಸಲು ಈ ಚುನಾವಣಾ ಫಲಿತಾಂಶ ಎಚ್ಚರಿಕೆ ರವಾನಿಸಿದೆ.

2013ರ ನಗರಸಭಾ ಚುನಾವಣೆ ವೇಳೆ ಯೋಗೇಶ್ವರ್ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದರು. ಆಗ ಕಾಂಗ್ರೆಸ್ ತಾಲ್ಲೂಕಿನಲ್ಲಿ ಬಲಿಷ್ಠವಾಗಿತ್ತು. ಇಷ್ಟಿದ್ದರೂ ಜೆಡಿಎಸ್‌ಗಿಂತ ಒಂದು ಸ್ಥಾನ ಕಡಿಮೆ ಗೆದ್ದಿತ್ತು. ನಗರಸಭಾ ಅಧಿಕಾರ ಪಡೆಯುವುದು ಯೋಗೇಶ್ವರ್‌ಗೆ ಪ್ರತಿಷ್ಠೆಯ ವಿಷಯವಾಗಿತ್ತು. ಹಾಗಾಗಿ ಇಬ್ಬರು ಪಕ್ಷೇತರರ ಬೆಂಬಲ ಪಡೆದು ಕಾಂಗ್ರೆಸ್ ಗೆ ಅಧಿಕಾರ ಕೊಡಿಸುವಲ್ಲಿ ಅವರು ಶ್ರಮವಹಿಸಿದ್ದರು. ಆದರೆ, ಈಗ ನಾವಿಕನಿಲ್ಲದ ದೋಣಿಯಂತಿರುವ ಕಾಂಗ್ರೆಸ್ ಕೇವಲ 7 ಸ್ಥಾನಗಳಿಗೆ ಕುಸಿದಿದೆ.

ಇನ್ನು ಜೆಡಿಎಸ್ ತಾಲ್ಲೂಕಿನಲ್ಲಿ ಪ್ರಬಲವಾಗಿದ್ದರೂ ನಗರಸಭೆಯಲ್ಲಿ ಅಧಿಕಾರಕ್ಕೆ ಬೇಕಾದ ಸರಳ ಬಹುಮತದ ನಂಬರ್ ಪಡೆಯುವಲ್ಲಿ ಸಫಲವಾಗಿದ್ದರೂ ಇದು ಕುಮಾರಸ್ವಾಮಿ ಪ್ರಭಾವಕ್ಕೆ ಕಡಿಮೆ ಸಾಧನೆಯೇ. ಕ್ಷೇತ್ರದಲ್ಲಿನ ಅವರ ಪ್ರಭಾವಕ್ಕೆ ಕನಿಷ್ಠ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕಿತ್ತು ಎನ್ನುವುದು ಸಾರ್ವತ್ರಿಕ ವಾದ.

ಇನ್ನು ಬಿಜೆಪಿ 7 ಸ್ಥಾನಗಳಲ್ಲಿ ಗೆದ್ದು, ಮೊದಲ ಬಾರಿಗೆ ನಗರಸಭೆಗೆ ತನ್ನ ಸದಸ್ಯರನ್ನು ಕಳಿಸುತ್ತಿದ್ದರೂ ಯೋಗೇಶ್ವರ್ ಪ್ರಭಾವ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಯೋಗೇಶ್ವರ್ ತಾಲ್ಲೂಕಿನ ನಗರಸಭೆಯಲ್ಲಿ ಅಧಿಕಾರ ಪಡೆಯುವಲ್ಲಿ ಸೋತಿರುವುದು ಅವರ ಹಿನ್ನಡೆ ಎನ್ನುವುದು ಎಲ್ಲರ ವಾದ.

ನಗರಸಭಾ ಚುನಾವಣೆ ಮುಗಿದು ಫಲಿತಾಂಶ ಬಂದು ಜೆಡಿಎಸ್ ಅಧಿಕಾರ ಪಡೆದಿದ್ದರೂ ರಾಜಕೀಯ ಪಂಡಿತರ ಚರ್ಚೆ ಮಾತ್ರ ನಿಂತಿಲ್ಲ. ಹಾಗೆಯೆ ಸೋಲು, ಗೆಲುವಿನ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಅಭ್ಯರ್ಥಿಗಳು ತಮ್ಮ ತಮ್ಮ ಸೋಲು ಗೆಲುವಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ತ್ರಿಪಕ್ಷಗಳ ಮುಖಂಡರು ಸಹ ಆತ್ಮಾವಲೋಕನದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT