ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ: ರಾಜಕಾಲುವೆ ಸರಿಪಡಿಸಲು ಒತ್ತಾಯ

Published 30 ಆಗಸ್ಟ್ 2024, 5:13 IST
Last Updated 30 ಆಗಸ್ಟ್ 2024, 5:13 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಹೊಂಬಾಳಮ್ಮನ ಪೇಟೆ ರಾಜಕಾಲುವೆಯ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಇದರಿಂದಾಗಿ ರಾಜಕಾಲುವೆಯ ಅಕ್ಕ-ಪಕ್ಕದಲ್ಲಿ ವಾಸವಾಗಿರುವ ಜನಗಳಿಗೆ ಕಾಯಿಲೆಗಳ ಭೀತಿ ಎದುರಾಗಿದೆ. ಕೂಡಲೇ ಪುರಸಭೆ ಅಧಿಕಾರಿಗಳು ರಾಜಕಾಲುವೆಯನ್ನು ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಒತ್ತಾಯಿಸಿದರು.

ಪಟ್ಟಣದ ತಾಲ್ಲೂಕು ಕಚೇರಿ ಹಾಗೂ ಪುರಸಭಾ ಕಚೇರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು, ‘ಸೋಮೇಶ್ವರ ಕಾಲೋನಿಯಿಂದ ಬರುವ ಮೋರಿ ನೀರೆಲ್ಲ ಒಂದೇ ಕಡೆ ಶೇಖರಣೆಯಾಗುತ್ತಿದೆ. ಇದರೊಂದಿಗೆ ಮಳೆ ನೀರು ಸಹ ಸೇರಿಕೊಂಡು ಮನೆಗಳಿಗೆ ನುಗ್ಗುತ್ತಿದೆ. ಇದೆಲ್ಲಾ ಕಂಡೂ ಕಾಣದಂತೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಇದರಿಂದ ರಾಜಕಾಲುವೆ ಸಮೀಪದಲ್ಲಿರುವ ನಿವಾಸಿಗಳಿಗೆ ಉಸಿರುಗಟ್ಟಿ ಓಡಾಡುವ ಹಾಗಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ತಹಶೀಲ್ದಾರ್ ಹಾಗೂ ಪುರಸಭೆಯ ಮುಖ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇನ್ನು ಮೂರು ದಿನಗಳಲ್ಲಿ ಸಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸದಿದ್ದರೆ ರೈತ ಸಂಘದಿಂದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬೀಗ ಹಾಕಲು ಮುಂದಾದ ರೈತ ಸಂಘ: ಪುರಸಭೆ ಮುಖ್ಯಾಧಿಕಾರಿ ಶಿವರುದ್ರಯ್ಯ ರೈತರ ಮನವಿ ಸ್ವೀಕರಿಸುವುದಾಗಿ ಬೆಳಗ್ಗೆ 11ಕ್ಕೇ ಸಮಯ ನೀಡಿದ್ದರು. ರೈತರು ಮನವಿ ತೆಗೆದುಕೊಂಡು ತಾಲ್ಲೂಕು ಕಚೇರಿಗೆ ಹೋದಾಗ ಮುಖ್ಯಾಧಿಕಾರಿ ಬರಲಿಲ್ಲ.  ನಂತರ ಪುರಸಭಾ ಕಚೇರಿಗೆ ತೆರಳಿದಾಗಲೂ ಅವರು ಭೇಟಿಯಾಗಲಿಲ್ಲ. ಇದರಿಂದ ಕೆರಳಿದ ರೈತ ಸಂಘದ ಮುಖಂಡರು ಪುರಸಭೆ ಕಚೇರಿಗೆ ಬೀಗ ಹಾಕಲು ಮುಂದಾದರು. ನಂತರ ಪುರಸಭಾ ಮ್ಯಾನೇಜರ್ ಶಿವಣ್ಣ ರೈತರ ಮನವಿಯನ್ನು ಪಡೆದು, ಮುಖ್ಯಾಧಿಕಾರಿಗಳು ಬಂದ ಕೂಡಲೇ ತಲುಪಿಸುವುದಾಗಿ ಮನವರಿಕೆ ಮಾಡಿದ ನಂತರ ರೈತ ಮುಖಂಡರು ಹಿಂದಿರುಗಿದರು.

ರೈತ ಸಂಘಕ್ಕೆ ಬಾಡಿಗೆಗೆ ಮಳಿಗೆ ನೀಡಿ: ತಾಲ್ಲೂಕಿನಲ್ಲಿ ನಡೆಯುವ ರೈತರ ಕುಂದು ಕೊರತೆಯನ್ನು ಆಲಿಸಲು ಪುರಸಭಾ ವತಿಯಿಂದ ನಿರ್ಮಾಣವಾಗಿರುವ ವಾಣಿಜ್ಯ ಕಟ್ಟಡದಲ್ಲಿ ರೈತ ಸಂಘಕ್ಕೆ ಬಾಡಿಗೆ ರೂಪದಲ್ಲಿ ಮಳಿಗೆಯನ್ನು ಕೊಡಬೇಕು ರೈತ ಮುಖಂಡರು ಮನವಿ ಸಲ್ಲಿಸಿದರು.

ರೈತ ಸಂಘದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ರವಿಕುಮಾರ್, ಗೌರವಾಧ್ಯಕ್ಷ ಶಿವಲಿಂಗಯ್ಯ, ಪದಾಧಿಕಾರಿಗಳಾದ ಕಾಂತರಾಜು, ನಾರಾಯಣ್, ಮೇಗಳದೊಡ್ಡಿ ಷಡಾಕ್ಷರಿ, ಬುಡನ್ ಸಾಬ್, ಕಲೀಂ, ಗುಡ್ಡಹಳ್ಳಿ ರಾಮಣ್ಣ, ಬಾಳೆಕಾಯಿ ನಿಂಗಣ್ಣ, ಶಿವಲಿಂಗಯ್ಯ, ರಂಗಸ್ವಾಮಯ್ಯ, ಹೊನ್ನೇಗೌಡ್ರು, ವೆಂಕಟೇಶ್, ಕೃಷ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT