ಶನಿವಾರ, ಜುಲೈ 31, 2021
27 °C
VIJAYAPURA

‘ಡಿಕೆಶಿ ಸಾರಥ್ಯದಿಂದ ಪಕ್ಷಕ್ಕೆ ಹೊಸ ಚೈತನ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಸಾರಥ್ಯ ವಹಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರಿಂದ ಸಂಕಷ್ಟದಲ್ಲಿರುವ ಕಾಂಗ್ರೆಸ್‌ಗೆ ಹೊಸ ಚೈತನ್ಯ ಬರಲಿದೆ. ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ಕಾಂಗ್ರೆಸ್ ನಾಯಕ ಮುನಿನರಸಿಂಹಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಸಮಾರಂಭದ ಪೂರ್ವಸಿದ್ಧತೆ ಸಭೆಯಲ್ಲಿ ಹೋಬಳಿ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಜನರ ಮುಗ್ಧ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಬಿಜೆಪಿ, ಈ ದೇಶವನ್ನು ದಿವಾಳಿ ಮಾಡಿದೆ. ಸೈನಿಕರ ಹೋರಾಟವನ್ನು ಕಾಂಗ್ರೆಸ್ ಎಂದೂ ರಾಜಕೀಯಕ್ಕೆ ಬಳಸಿಕೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದರು. 

ಮುಖಂಡ ವೆಂಕಟಸ್ವಾಮಿ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ಅಧಿಕಾರ ಸ್ವೀಕಾರ ಪಕ್ಷಕ್ಕೆ ಹೊಸ ಆಯಾಮ ತಂದು ಕೊಡಲಿದೆ. ಪ್ರತಿಯೊಬ್ಬ ಕಾರ್ಯಕರ್ತ ಬೂತ್ ಮಟ್ಟದಿಂದಲೇ ಪಕ್ಷ ಸಂಘಟಿಸುವ ಕೆಲಸ ಮಾಡಬೇಕು ಎಂದು ‌ಹೇಳಿದರು.

ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಚೇತನ್ ಗೌಡ ಮಾತನಾಡಿ, ಬಿಜೆಪಿ ಸರ್ಕಾರ ತನಗೆ ಸಿಕ್ಕಿರುವ ಅಧಿಕಾರ ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾಗುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಲು ತಳಮಟ್ಟದಿಂದಲೇ  ಸಜ್ಜಾಗಬೇಕಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಾಗಿದೆ ಎಂದರು.

ಮುಖಂಡರಾದ ಚಿನ್ನಪ್ಪ, ಬೈರಾಪುರ ರಾಜಣ್ಣ, ಬುಳ್ಳಹಳ್ಳಿ ರಾಜಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ರಾಮಚಂದ್ರಪ್ಪ, ಮಾತನಾಡಿದರು.

ಮುಖಂಡರಾದ ವಿರೂಪಾಕ್ಷಪ್ಪ, ಮಂಡಿಬೆಲೆ ದೇವರಾಜಪ್ಪ, ರಾಮಕೃಷ್ಣಪ್ಪ, ಯುವ ಘಟಕದ ಅಧ್ಯಕ್ಷ ನಾಗೇಶ್, ನಗರ ಘಟಕದ ಅಧ್ಯಕ್ಷ ಯಲುವಹಳ್ಳಿ ನಟರಾಜ್, ಧರ್ಮಪುರ ಕೃಷ್ಣಪ್ಪ, ಹಾರೋಹಳ್ಳಿ ಚಂದ್ರಪ್ಪ, ಎಸ್.ಟಿ. ಘಟಕದ ಅಧ್ಯಕ್ಷ ಮುನಿಆಂಜಿನಪ್ಪ, ಚಿಕ್ಕತತ್ತಮಂಗಲ ನಾಗರಾಜ್, ಭಟ್ರೇನಹಳ್ಳಿ ನಾರಾಯಣಪ್ಪ, ನಟರಾಜ್, ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು