ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುರೇಶ್ ಸ್ಪರ್ಧೆಗೆ ಒತ್ತಡವಿದೆ: ಡಿಕೆಶಿ

ಚನ್ನಪಟ್ಟಣ ಉಪ ಚುನಾವಣೆ
Published 1 ಸೆಪ್ಟೆಂಬರ್ 2024, 16:48 IST
Last Updated 1 ಸೆಪ್ಟೆಂಬರ್ 2024, 16:48 IST
ಅಕ್ಷರ ಗಾತ್ರ

ಕನಕಪುರ (ರಾಮನಗರ): ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಸ್ಪರ್ಧಿಸುವಂತೆ ಒತ್ತಡವಿದೆ. ಆದರೆ, ಯಾರದ್ದೋ ಮಾತು ಕೇಳಿ ನಾನು ತೀರ್ಮಾನ ತೆಗೆದುಕೊಳ್ಳುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಭಾನುವಾರ ಜನಸ್ಪಂದನ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೇ ಚನ್ನಪಟ್ಟಣದಿಂದ ಸ್ಪರ್ಧಿಸಿದರೂ ನಾನೇ ಅಲ್ಲಿ ಅಭ್ಯರ್ಥಿ.‘ಬಿ ಫಾರಂ’ ಕೊಡುವವನೂ ನಾನೇ. ಜನ ನನ್ನ ಮುಖ ನೋಡಿ ಮತ ಹಾಕಬೇಕು’ ಎಂದರು.

‘ಅಭ್ಯರ್ಥಿ ಕುರಿತು ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದು ಬೇಡ. ಪಕ್ಷದ ವೇದಿಕೆಯಲ್ಲಿ ನಾವು ತೀರ್ಮಾನಿಸುತ್ತೇವೆ. ಕಾರ್ಯಕರ್ತರು ಪಕ್ಷ ಸಂಘಟನೆಯತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ಉಪ ಚುನಾವಣೆ ಬಗ್ಗೆ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಯಾವುದೇ ಚಿಂತೆ ಇಲ್ಲ. ಅವರ ಚುನಾವಣೆ ಆಗಿದ್ರೆ ಅವರಿಗೆ ಆತಂಕ ಇರುತ್ತಿತ್ತು. ಬೇರೆಯವರ ಚುನಾವಣೆಗೆ ಅವರು ಯಾಕೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣೆ ಗೆಲುವಿಗಾಗಿ ನಾನು, ಡಿ.ಕೆ.ಸುರೇಶ್ ಹಾಗೂ ಜಿಲ್ಲೆಯ ಕಾಂಗ್ರೆಸ್‌ ಶಾಸಕರು ಒಂದೊಂದು ಹೋಬಳಿ ಹಂಚಿಕೊಂಡು ಕೆಲಸ  ಮಾಡುತ್ತಿದ್ದೇವೆ ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ಮೈತ್ರಿ ಯಶಸ್ವಿಯಾಗಿ ಲೋಕಸಭೆ ಚುನಾವಣೆ ಗೆದ್ದಿದ್ದೇವೆ ಎಂಬ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರು ದೊಡ್ಡವರು. ಮಾತನಾಡಲಿ. ಸದ್ಯ ನಮ್ಮ ಹೆಣ ಹೊರುವುದಕ್ಕೆ ನಾಲ್ಕು ಜನ ತಯಾರಿದ್ದಾರಲ್ಲ. ಅಷ್ಟು ಸಾಕು. ಅವರ ಕೆಲಸ ಅವರು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ’ ಎಂದು ವ್ಯಂಗ್ಯವಾಡಿದರು.

ಆರ್.ವಿ. ದೇಶಪಾಂಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿರುವುದು ಬಹಳ ಸಂತೋಷ. ಅವರು ಹಿರಿಯ ನಾಯಕರು. ಯಾಕೆ ಆಗಬಾರದು?
ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT