ಶನಿವಾರ, ಜುಲೈ 24, 2021
22 °C

ಕೊರೊನಾ ಸೇನಾನಿಗಳಿಗೂ ತಟ್ಟಿದ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಮಂಗಳವಾರ 33 ಪ್ರಕರಣಗಳು ಪತ್ತೆಯಾಗಿವೆ. ಆದರೆ ಜಿಲ್ಲಾಡಳಿತ 19 ಪ್ರಕರಣಗಳನ್ನಷ್ಟೇ ದೃಢಪಡಿಸಿದೆ.

ಕೊರೊನಾ ಸೈನಿಕರಾಗಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯಲ್ಲಿ ಸೋಂಕು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸೋಮವಾರ ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಿಗೆ ಸೋಂಕು ತಗುಲಿದ್ದರೆ, ಮಂಗಳವಾರ ಇದೇ ಆರೋಗ್ಯ ಕೇಂದ್ರದ ಮತ್ತೊಬ್ಬ ಸಿಬ್ಬಂದಿಗೂ ಸೋಂಕು ಕಾಣಿಸಿಕೊಂಡಿದೆ. ಕೂದೂರಿನ ಖಾಸಗಿ ಪ್ರಯೋಗಾಲಯ ತಜ್ಞರೊಬ್ಬರಲ್ಲೂ ಕೋವಿಡ್ ಸೋಂಕು ದೃಢಪಟ್ಟಿದೆ. ಬಿಡದಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ರೋಗಿಗಳು ಹಾಗು ಕುದೂರಿನ ಖಾಸಗಿ ಲ್ಯಾಬ್‌ಗೆ ಭೇಟಿ ನೀಡಿದ್ದವರು ಸ್ವಯಂಪ್ರೇರಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಇನ್ನು ಖಾಸಗಿ ಲ್ಯಾಬ್ ಹಾಗು ಆರೋಗ್ಯ ಕೇಂದ್ರವನ್ನು ಸೀಲ್ ಡೌನ್ ಮಾಡಲಾಗಿದೆ.

ಜಿಲ್ಲೆಯಲ್ಲಿ ಮೊದಲು ಕನಕಪುರದ ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯ ದಂಪತಿಗೆ ಸೋಂಕು ಹರಡಿತ್ತು. ಬಳಿಕ ರಾಮನಗರದಲ್ಲಿ ಹಾಗೂ ಮಾಗಡಿಯಲ್ಲಿ ತಲಾ ಒಬ್ಬರು ವೈದ್ಯರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ.

ಜಿಲ್ಲಾಡಳಿತದ ಮಾಹಿತಿಯಂತೆ ಮಂಗಳವಾರ ರಾಮನಗರದಲ್ಲಿ 14, ಮಾಗಡಿ 3, ಚನ್ನಪಟ್ಟಣದಲ್ಲಿ ಇಬ್ಬರಲ್ಲಿ ಸೋಂಕು ದೃಢವಾಗಿದೆ. 13 ಜನರು ಕೋವಿಡ್ ಸೋಂಕಿನಿಂದ ಮಂಗಳವಾರ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಹೊರ ನಡೆದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 118 ಜನರು ಗುಣಮುಖರಾಗಿದ್ದಾರೆ.

ಇಬ್ಬರು ಸಾವು: ಅಂತ್ಯಕ್ರಿಯೆಗೂ ಹಿಂಜರಿಕೆ!
ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆಯತ್ತಿದ್ದ ಮಾಗಡಿಯ ಇಬ್ಬರು ಮಂಗಳವಾರ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.

ಮಾಗಡಿ ತಿರುಮಲೆ ನಿವಾಸಿ 32 ವರ್ಷದ ಯುವಕ ಸೋಂಕಿತನಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಮೃತಪಟ್ಟಿದ್ದು, ಕೋವಿಡ್ ನಿಯಮಾವಳಿಯಂತೆ ತಿರುಮಲೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆದಿದೆ. ಇದೇ ತಾಲ್ಲೂಕಿನ ಬಿಸ್ಕೂರು ಗ್ರಾಮದ 28 ವರ್ಷದ ಯುವಕ ಕೋವಿಡ್‌ನಿಂದ ಕುಣಿಗಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆದರೆ ತಮಗೂ ಸೋಂಕು ಹರಡಬಹುದು ಎನ್ನುವ ಭೀತಿಯಿಂದ ಈತನ ಕುಟುಂಬದವರು ಹಾಗೂ ಗ್ರಾಮಸ್ಥರು ಶವ ಪಡೆದು ಅಂತ್ಯಕ್ರಿಯೆ ನಡೆಸಲು ಹಿಂಜರಿದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯೇ ಶವ ಸಂಸ್ಕಾರ ನಡೆಸಿದರು ಎಂದು ತಿಳಿದುಬಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.