ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ| ನಿರ್ವಹಣೆ ಇಲ್ಲದೆ ಪಾಳುಬಿದ್ದ ‘ಇ–ಟಾಯ್ಲೆಟ್’

ಟಾಯ್ಲೆಟ್‌ಗಳತ್ತ ಸುಳಿಯಲಾಗದ ಸ್ಥಿತಿ; ನಗರಸಭೆ ಕಾರ್ಯವೈಖರಿಗೆ ನಾಗರಿಕರ ಅಸಮಾಧಾನ
Published 19 ಜೂನ್ 2023, 4:02 IST
Last Updated 19 ಜೂನ್ 2023, 4:02 IST
ಅಕ್ಷರ ಗಾತ್ರ

ರಾಮನಗರ: ಜನನಿಬಿಡ ಪ್ರದೇಶದಲ್ಲಿರುವ ಅತ್ಯಾಧುನಿಕ ‘ಇ.ಪಿ ಟಾಯ್ಲೆಟ್’ (ಎಲೆಕ್ಟ್ರಾನಿಕ್ ಪಬ್ಲಿಕ್ ಟಾಯ್ಲೆಟ್) ಅದು. ಆದರೆ, ಜನ ಅದರತ್ತ ಸುಳಿಯಲಾಗದಂತೆ ಕಳೆಗಳು ಬೆಳೆದಿವೆ. ಸುತ್ತಲೂ ಕಸ ತಂದು ಎಸೆಯಲಾಗಿದೆ. ಸ್ವಚ್ಛತೆ ಕಂಡು ವರ್ಷವಾಗಿರುವುದರಿಂದ ಅಲ್ಲಿನ ಆವರಣ ಗಬ್ಬೆದ್ದು ನಾರುತ್ತಿದೆ. ಟಾಯ್ಲೆಟ್‌ನ ಬಿಡಿ ಭಾಗಗಳು ತುಕ್ಕು ಹಿಡಿದು ಕಂದು ಬಣಕ್ಕೆ ತಿರುಗಿವೆ.

– ನಗರಸಭೆಯು ನಗರದ ವಿವಿಧೆಡೆ ನಿರ್ಮಿಸಿರುವ ಪಾವತಿಸಿ ಬಳಸುವ ಅತ್ಯಾಧುನಿಕ ‘ಇ.ಪಿ ಟಾಯ್ಲೆಟ್’ಗಳ ದುಸ್ಥಿತಿ ಇದು.

ಸಾರ್ವಜನಿಕ ಸ್ಥಳಗಳಲ್ಲಿ ಮಲ –ಮೂತ್ರ ವಿಸರ್ಜನೆಗಾಗಿ, ನಗರಸಭೆಯು ನಾಲ್ಕು ವರ್ಷಗಳ ಹಿಂದೆ 7 ಕಡೆ ಈ ಟಾಯ್ಲೆಟ್‌ಗಳನ್ನು ಅಳವಡಿಸಿತ್ತು. ಆರಂಭದಲ್ಲಿ ಅತ್ತ ಗಮನ ಹರಿಸಿದ್ದು ಬಿಟ್ಟರೆ, ಮತ್ತೆ ತಿರುಗಿ ನೋಡಲಿಲ್ಲ. ಜನ ಬಳಕೆಯಿಂದ ದೂರ ಉಳಿದಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಟಾಯ್ಲೆಟ್‌ಗಳು, ಇದೀಗ ಪಾಳು ಬಿದ್ದ ಸ್ಥಿತಿಯಲ್ಲಿವೆ.

₹45.50 ಲಕ್ಷ ವೆಚ್ಚ: 2019ರಲ್ಲಿ ನಗರಸಭೆ ಪೌರಾಯುಕ್ತರಾಗಿದ್ದ ಶುಭ ಬಿ. ಅವರ ಅವಧಿಯಲ್ಲಿ, 14ನೇ ಹಣಕಾಸು ಯೋಜನೆಯಡಿ ಇ–ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ಟಾಯ್ಲೆಟ್‌ಗೂ ₹6.50 ಲಕ್ಷದಂತೆ ಒಟ್ಟು 7ಕ್ಕೆ ₹45.50 ಲಕ್ಷ ವೆಚ್ಚವಾಗಿದೆ. ಸಾಮಾನ್ಯ ಸಾರ್ವಜನಿಕ ಶೌಚಾಲಯಗಳು ಇಲ್ಲದ ಜಾಗದಲ್ಲಿ, ಪಾವತಿಸಿ ಬಳಸುವ ಈ ಟಾಯ್ಲೆಟ್‌ಗಳನ್ನು ನಿರ್ಮಿಸಲಾಗಿತ್ತು.

ಟಾಯ್ಲೆಟ್‌ಗಳನ್ನು ನಿರ್ಮಿಸಿದ್ದ ಬೆಂಗಳೂರಿನ ಎನ್ .ಕೆ. ಮೆಟಲ್ ಶೀಟ್ ಸಂಸ್ಥೆಯೇ, ಕೆಲ ವರ್ಷಗಳವರೆಗೆ ನಿರ್ವಹಣೆ ಮಾಡಬೇಕು ಎಂಬ ಒಪ್ಪಂದ ಮಾಡಿಕೊಳ್ಳಲು ನಗರಸಭೆ ಮುಂದಾಗಿತ್ತು. ಆದರೆ, ಕೈಗೂಡಲಿಲ್ಲ. ಅಷ್ಟೊತ್ತಿಗಾಗಲೇ ಶುಭ ಅವರು ವರ್ಗಾವಣೆಯಾದರು. ನಂತರ ಬಂದವರು ಆ ಬಗ್ಗೆ ಗಮನ ಹರಿಸಲಿಲ್ಲ. ಇದೆಲ್ಲದರ ಪರಿಣಾಮವಾಗಿ ಟಾಯ್ಲೆಟ್‌ಗಳ ನಿರ್ವಹಣೆ ಮರೆತೇ ಹೋಯಿತು.

ನಿರ್ಲಕ್ಷ್ಯವೇ ಕಾರಣ: ‘ಇ–ಟಾಯ್ಲೆಟ್‌ಗಳು ನಗರದಲ್ಲಿ ವಿಫಲವಾಗಿರುವುದಕ್ಕೆ ನಗರಸಭೆಯ ನಿರ್ಲಕ್ಷ್ಯವೇ ಕಾರಣ. ಜನರಿಗೆ ಅವುಗಳ ಬಳಕೆ ಕುರಿತು ಅರಿವಿಲ್ಲದಿರುವುದು ಒಂದು ಕಾರಣವಾದರೆ, ನಗರಸಭೆ ನಿರ್ವಹಣೆ ಮಾಡದಿರುವುದು ಜನ ಅವುಗಳತ್ತ ಸುಳಿಯದಂತೆ ಮಾಡಿತು’ ಎಂದು ನಗರದ ಅರ್ಕಾವತಿ ಬಡಾವಣೆಯ ಹರೀಶ್ ನಗರಸಭೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಇನ್ನಾದರೂ ಅವುಗಳ ನಿರ್ವಹಣೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ, ಇ–ಟಾಯ್ಲೆಟ್‌ಗಳನ್ನು ಅಳವಡಿಸಿದ ಉದ್ದೇಶ ಈಡೇರುತ್ತದೆ. ಇಲ್ಲದಿದ್ದರೆ, ಲಕ್ಷಾಂತರ ರೂಪಾಯಿ ಜನರ ತೆರಿಗೆ ಹಣ ವಿನಾ ಕಾರಣ ವ್ಯರ್ಥವಾದಂತಾಗುತ್ತದೆ’ ಎಂದರು.

ರ‍್ಯಾಂಕಿಂಗ್‌ಗೆ ಪೂರಕ: ‘ನಗರಸಭೆಗಳಿಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ನೀಡುವ ‘ಸ್ವಚ್ಛ ಸರ್ವೇಕ್ಷಣ’ ಗುರಿ ನೀಡುತ್ತದೆ. ಆ ಮೂಲಕ ಸ್ವಚ್ಛತೆ ಸೇರಿದಂತೆ ನಾಗರಿಕ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಪ್ರೋತ್ಸಾಹ ನೀಡುತ್ತದೆ. ಅದಕ್ಕೆ ಪೂರಕವಾಗಿ ಇ–ಶೌಚಾಲಯ ಸೇರಿದಂತೆ, ಕೆಲ ಹೊಸ ಸೌಲಭ್ಯಗಳನ್ನು ಜಾರಿಗೊಳಿಸಲಾಗುತ್ತಿದೆ. ಆದರೆ, ಅವುಗಳ ನಿರ್ವಹಣೆಗೆ ನಗರಸಭೆ ತೋರುವ ನಿರ್ಲಕ್ಷ್ಯ ತೋರುತ್ತಿವೆ’ ಎಂದು ನಗರಸಭೆಯ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಸ್ವಚ್ಛ ಸರ್ವೇಕ್ಷಣೆಯಲ್ಲಿ ನಗರಸಭೆಗೆ ಉತ್ತಮ ರ‍್ಯಾಂಕ್‌ ಬರುವುದೇ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಹಾಗೂ ಶೌಚಾಲಯಗಳ ನಿರ್ವಹಣೆಯ ಆಧಾರದ ಮೇಲೆ. ಆದರೆ, ಅದರತ್ತ ಅಧಿಕಾರಿಗಳು ಸರಿಯಾದ ಗಮನ ಹರಿಸುತ್ತಿಲ್ಲ. ಇದರಿಂದಾಗಿ, ನಗರದ ಸಾರ್ವಜನಿಕ ಶೌಚಾಲಯಗಳು ಶೋಚನೀಯ ಸ್ಥಿತಿಯಲ್ಲಿವೆ. ರಸ್ತೆಗಳಲ್ಲಿ ಕಸದ ರಾಶಿ ಎದ್ದು ಕಾಣುತ್ತದೆ’ ಎಂದು ಹೇಳಿದರು.

ಬಳಸುವುದು ಹೇಗೆ: ತಂತ್ರಜ್ಞಾನ ಆಧಾರಿತ ಇ– ಟಾಯ್ಲೆಟ್‌ಗಳು, ಸ್ವಯಂ ಸ್ವಚ್ಛತೆ ವ್ಯವಸ್ಥೆ ಹೊಂದಿವೆ. ಶೌಚಾಲಯದ ಹೊರ ಬಾಗಿಲಲ್ಲಿ ಹಸಿರು ಬಣ್ಣ ಇದ್ದರೆ, ಅದು ಬಳಕೆಗೆ ಮುಕ್ತ ಎಂದರ್ಥ. ಕೆಂಪು ಬಣ್ಣ ಇದ್ದರೆ ಒಳಗೆ ಇನ್ನೊಬ್ಬರು ಇದ್ದಾರೆ ಎಂದರ್ಥ.

ಬಳಕೆದಾರರು ₹1 ನಾಣ್ಯವನ್ನು ಹಾಕಿದ ನಂತರ ಬಾಗಿಲು ತೆರೆದುಕೊಳ್ಳಲಿದೆ. ಬಾಗಿಲುಗಳು ಸೆನ್ಸರ್‌ ವ್ಯವಸ್ಥೆ ಹೊಂದಿದ್ದು, ಒಳಗಡೆ ಮತ್ತೊಬ್ಬರು ಇದ್ದರೆ ಹೊರಗಿನಿಂದ ನಾಣ್ಯ ಹಾಕಿದರೂ ತೆಗೆದುಕೊಳ್ಳುವುದಿಲ್ಲ. ಒಳ ಭಾಗದಲ್ಲಿ ವಿದ್ಯುತ್ ದೀಪ, ಪುಟ್ಟ ಫ್ಯಾನ್‌ , ಎಕ್ಸಾಸ್ಟರ್ ವ್ಯವಸ್ಥೆಯೂ ಇದೆ. ಬಳಕೆಯ ನಂತರ ನೀರು ಹರಿಯುತ್ತದೆ. ಹೊರಗೆ ಕೈ ತೊಳೆದುಕೊಳ್ಳುವ ವ್ಯವಸ್ಥೆಯೂ ಇದೆ.

ಶೌಚ ಗೃಹದ ಮೇಲೆ ಒಂದು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ ಅಳವಡಿಸಲಾಗುತ್ತದೆ. ಮೂರು ನಿಮಿಷ ಬಳಸಿದರೆ 1.5 ಲೀಟರ್ ನೀರು ಫ್ಲಶ್‌ ಆಗುತ್ತದೆ. 3 ನಿಮಿಷಕ್ಕಿಂತ ಹೆಚ್ಚು ಉಪಯೋಗಿಸಿದರೆ 4.5 ಲೀಟರ್ ಹರಿಯುತ್ತದೆ. ಸಾರ್ವಜನಿಕರು ಶೌಚಾಲಯ ಬಳಸಿದ ನಂತರ ತಾನಾಗಿಯೇ ಸ್ವಚ್ಛಗೊಳಿಸುವ ವ್ಯವಸ್ಥೆ ಮಾಡಿರುವುದರಿಂದ ಇ-ಟಾಯ್ಲೆಟ್‌ ಬಳಕೆಗೆ ಯಾವುದೇ ಮುಜುಗರವಿಲ್ಲದೆ ಜನರು ಮುಂದಾಗಬಹುದಾಗಿದೆ.

ರಾಮನಗರದ ಛತ್ರದ ಬೀದಿಯಲ್ಲಿರುವ ಸರ್ಕಾರಿ ಮೇಯಿನ್ ಶಾಲೆಗೆ ಹೊಂದಿಕೊಂಡಂತಿರುವ ಇ–ಟಾಯ್ಲೆಟ್‌ ಸುತ್ತ ಕಸ ಹಾಕಿರುವುದು
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಛತ್ರದ ಬೀದಿಯಲ್ಲಿರುವ ಸರ್ಕಾರಿ ಮೇಯಿನ್ ಶಾಲೆಗೆ ಹೊಂದಿಕೊಂಡಂತಿರುವ ಇ–ಟಾಯ್ಲೆಟ್‌ ಸುತ್ತ ಕಸ ಹಾಕಿರುವುದು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಜಾಲಮಂಗಲ ರಸ್ತೆಯಲ್ಲಿರುವ ಇ– ಟಾಯ್ಲೆಟ್‌ ಶಿಥಿಲಾವಸ್ಥೆ ತಲುಪಿದೆ
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಜಾಲಮಂಗಲ ರಸ್ತೆಯಲ್ಲಿರುವ ಇ– ಟಾಯ್ಲೆಟ್‌ ಶಿಥಿಲಾವಸ್ಥೆ ತಲುಪಿದೆ ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಕೋರ್ಟ್ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದ ಬಳಿ ನಿರ್ಮಿಸಿರುವ ಇ– ಟಾಯ್ಲೆಟ್‌ ಸ್ಥಿತಿ
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಕೋರ್ಟ್ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದ ಬಳಿ ನಿರ್ಮಿಸಿರುವ ಇ– ಟಾಯ್ಲೆಟ್‌ ಸ್ಥಿತಿ ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಎದುರು ಸರ್ಕಾರಿ ಹಾಸ್ಟೆಲ್‌ ಕಾಂಪೌಂಡ್‌ಗೆ ಹೊಂದಿಕೊಂಡಂತಿರುವ ಇ– ಟಾಯ್ಲೆಟ್‌
ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ರಾಮನಗರದ ಗೌಸಿಯಾ ಎಂಜಿನಿಯರಿಂಗ್ ಕಾಲೇಜು ಎದುರು ಸರ್ಕಾರಿ ಹಾಸ್ಟೆಲ್‌ ಕಾಂಪೌಂಡ್‌ಗೆ ಹೊಂದಿಕೊಂಡಂತಿರುವ ಇ– ಟಾಯ್ಲೆಟ್‌ ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಇ–ಟಾಯ್ಲೆಟ್‌ಗಳ ನಿರ್ವಹಣೆಗೆ ಕ್ರಮ ಕೈಗೊಳ್ಳಿ ಎಂದು ಹಿಂದೆ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಮತ್ತೊಮ್ಮೆ ಅವುಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದು ಆಯುಕ್ತರೊಂದಿಗೆ ಚರ್ಚಿಸುವೆ
– ಬಿ.ಕೆ. ಪವಿತ್ರ ಅಧ್ಯಕ್ಷೆ ನಗರಸಭೆ
ನಗರದಲ್ಲಿರುವ ಶೌಚಾಲಯಗಳ ಸ್ಥಿತಿಗತಿ ಕುರಿತು ಸಮೀಕ್ಷೆ ಮಾಡಿಸುತ್ತಿದ್ದು ವರದಿ ಕೈ ತಲುಪಿದ ಬಳಿಕ ಅವುಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು
– ಎಲ್‌. ನಾಗೇಶ್ ಪೌರಾಯುಕ್ತ ನಗರಸಭೆ
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಇ–ಟಾಯ್ಲೆಟ್‌ಗಳನ್ನು ನಿರ್ವಹಣೆ ಮಾಡದೆ ಪಾಳು ಬೀಳುವಂತೆ ಮಾಡಿರುವುದು ನಗರಸಭೆಯ ಲೋಪ. ಕೂಡಲೇ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು
– ಡಿ.ಜೆ. ಕಮಲಮ್ಮ ಮಾಜಿ ಸದಸ್ಯೆ ನಗರಸಭೆ
ನಗರದಲ್ಲಿ ಅಳವಡಿಸಿರುವ ಇ–ಟಾಯ್ಲೆಟ್‌ಗಳು ವ್ಯರ್ಥವಾಗಿವೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿ ನಿರ್ವಹಣೆ ಮಾಡದಿರುವುದು ನಗರಸಭೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ
- ಸುರೇಶ್ ಎಸ್. ದೊಡ್ಡಿ ಮಾಜಿ ಸದಸ್ಯ ನಗರಸಭೆ

ಎಲ್ಲೆಲ್ಲಿ ಇವೆ? ‌

ಜೂನಿಯರ್ ಕಾಲೇಜು ಬಳಿಯ ಜಿಲ್ಲಾ ಕ್ರೀಡಾಂಗಣದ ಪ್ರವೇಶ ದ್ವಾರ– ಬಿ.ಎಂ ರಸ್ತೆಯ‌ ಗೌಸಿಯಾ ಕಾಲೇಜು ಎದುರು– ಬಿ.ಎಂ. ರಸ್ತೆಯ ಬಿ.ಜಿ.ಎಸ್ ರೋಟರಿ ಆಸ್ಪತ್ರೆ ಎದುರು– ರಾಯರ ದೊಡ್ಡಿ ವೃತ್ತ– ಜಾಲಮಂಗಲ ವೃತ್ತ– ಜಾಲಮಂಗಲ ರಸ್ತೆ– ಛತ್ರದ ಬೀದಿಯಲ್ಲಿನ ಸರ್ಕಾರಿ ಮೇಯಿನ್ ಸ್ಕೂಲ್– ಕೋರ್ಟ್‌ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಭವನದ ಬಳಿ

‘ನಿರ್ವಹಣೆಗೆ ಟೆಂಡರ್ ಕರೆದಿದ್ದೇವೆ’

‘ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಅಳವಡಿಸಿರುವ ಇ–ಟಾಯ್ಲೆಟ್‌ಗಳು ಎಲ್ಲಿಯೂ ಯಶಸ್ವಿಯಾಗಿಲ್ಲ. ಸಾರ್ವಜನಿಕ ಸ್ಥಳಗಳ ಬದಲು ಒಳ ಪ್ರದೇಶಗಳಲ್ಲಿ ಅಳವಡಿಸದಿರುವುದು ಒಂದು ಕಾರಣವಾದರೆ ಅವುಗಳ ಬಳಕೆ ಬಗ್ಗೆ ಜನರಲ್ಲಿರುವ ನಿರಾಸಕ್ತಿ ಮತ್ತು ಅರಿವಿನ ಕೊರತೆ ಮತ್ತೊಂದು ಕಾರಣ’ ಎಂದು ಇ–ಟಾಯ್ಲೆಟ್‌ಗಳ ಸ್ಥಿತಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆಯ ಪರಿಸರ ಎಂಜಿನಿಯರ್ ಸುಬ್ರಮಣ್ಯ ‘ಆದರೂ ನಗರದಲ್ಲಿರುವ 7 ಟಾಯ್ಲೆಗಳ ನಿರ್ವಹಣೆಗೆ ಟೆಂಡರ್ ಕರೆಯಲಾಗಿದೆ’ ಎಂದರು. ‘ಆರು ತಿಂಗಳ ಹಿಂದೆಯೇ ಟೆಂಡರ್ ಕರೆದಿದ್ದೆವು. ಅದರೆ ಚುನಾವಣೆ ಬಂದಿದ್ದರಿಂದ ಅದರ ಪ್ರಕ್ರಿಯೆ ವಿಳಂಬವಾಯಿತು. ನಂತರ ಮರು ಟೆಂಡರ್ ಕರೆಯಲಾಗಿದೆ. ಟೆಂಡರ್ ಪಡೆಯುವ ಏಜೆನ್ಸಿಗೆ ಟಾಯ್ಲೆಟ್‌ ನಿರ್ವಹಣೆಗಾಗಿ ಪ್ರತಿ ತಿಂಗಳು ಇಂತಿಷ್ಟು ಹಣ ನಿಗದಿ ಮಾಡಿ ಪಾವತಿಸಲಾಗುವುದು’ ಎಂದ ಅವರು ಟೆಂಡರ್‌ ಮೊತ್ತದ ಮಾಹಿತಿಯನ್ನು ಹಂಚಿಕೊಳ್ಳಲು ನಿರಾಕರಿಸಿದರು. ‘ಸಾರ್ವಜನಿಕ ಸ್ಥಳದಲ್ಲಿರುವುದರಿಂದ ಟಾಯ್ಲೆಟ್‌ನ ಕೆಲ ಬಿಡಿ ಭಾಗಗಳನ್ನು ಕಳ್ಳರು ಕದ್ದೊಯ್ಯುವ ಸಾಧ್ಯತೆ ಹೆಚ್ಚಾಗಿದೆ. ಸರಿಯಾಗಿ ಬಳಕೆಯಾಗುವ ಸ್ಥಳಗಳಲ್ಲಿ ಅವುಗಳನ್ನು ಇಡುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಸಹಾಯವಾಣಿಯೇ ಸ್ವಿಚ್ ಆಫ್!

ಪ್ರತಿ ಇ–ಟಾಯ್ಲೆಟ್‌ ಸುತ್ತಲೂ ಹಾಕಿರುವ ಕೋಟೆಡ್ ಪೋಸ್ಟರ್‌ನಲ್ಲಿ ಎದ್ದು ಕಾಣುವಂತೆ ಹಾಕಿರುವ ಸಹಾಯವಾಣಿ ಸಂಖ್ಯೆ: 76249 60165 ಸ್ವಿಚ್ ಆಫ್ ಆಗಿದೆ. ಈ ಸಂಖ್ಯೆಗೆ ಹಲವು ಸಲ ಕರೆ ಮಾಡಿದಾಗ ಕೆಲವೊಮ್ಮೆ ‘ಈ ಸಂಖ್ಯೆ ರೀಚ್ ಆಗುತ್ತಿಲ್ಲ’ ಅಥವಾ ‘ಸ್ವಿಚ್ ಆಫ್ ಆಗಿದೆ’ ಎಂದು ಬರುತ್ತದೆ. ‘ನಿರ್ವಹಣೆ ಕಾಣದ ಟಾಯ್ಲೆಟ್ ಕುರಿತು ದೂರು ನೀಡಲು ಹಾಕಿರುವ ಸಹಾಯವಾಣಿಯೇ ಸ್ವಿಚ್‌ ಆಗಿರುವುದು ನಗರಸಭೆಯ ಕಾರ್ಯವೈಖರಿಗೆ ಕನ್ನಡಿ ಹಿಡಿಯುವಂತಿದೆ. ಜಡ್ಡುಗಟ್ಟಿರುವ ನಗರಸಭೆಗೆ ಶಾಸಕರು ಸಚಿವರು ಹಾಗೂ ಜಿಲ್ಲಾಧಿಕಾರಿ ಚುರುಕು ಮುಟ್ಟಿಸಬೇಕು. ಕರ್ತವ್ಯಗಳನ್ನು ಮರೆತಿರುವ ಅಧಿಕಾರಿಗಳ ಚಳಿ ಬಿಡಿಸಬೇಕು. ಆಗ ಮಾತ್ರ ನಗರಸಭೆ ನಾಗರಿಕ ಸ್ನೇಹಿ ಆಗಲಿದೆ. ಇಲ್ಲದಿದ್ದರೆ ಇದ್ದೂ ಇಲ್ಲದಂತೆ’ ಎಂದು ವಕೀಲ ಮಧು ನಗರಸಭೆಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT