ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಪದವಿ ಕಾಲೇಜಲ್ಲಿ ಥಿಯರಿ.. ಗೌಸಿಯಾ ಕಾಲೇಜಲ್ಲಿ ಪ್ರಾಕ್ಟಿಕಲ್!

ಸರ್ಕಾರಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಲೋಕ’ ಸಂಕಷ್ಟ; ಸೌಕರ್ಯವಿಲ್ಲದ ಕೊಠಡಿಗಳಲ್ಲಿ ಪಾಠ
Published 4 ಮೇ 2024, 7:54 IST
Last Updated 4 ಮೇ 2024, 7:54 IST
ಅಕ್ಷರ ಗಾತ್ರ

ರಾಮನಗರ: ಥಿಯರಿ ತರಗತಿಗಳಿಗಾಗಿ ಆ ವಿದ್ಯಾರ್ಥಿಗಳು ನಗರದ ಎಸ್‌.ಪಿ. ಕಚೇರಿ ವೃತ್ತದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬರಬೇಕು. ಪ್ರಾಕ್ಟಿಕಲ್ (ಪ್ರಯೋಗ) ತರಗತಿಗಳಿಗೆ ಅಲ್ಲಿಂದ ಅರ್ಧ ಕಿ.ಮೀ. ದೂರದಲ್ಲಿರುವ ಖಾಸಗಿ ಗೌಸಿಯಾ ಎಂಜಿನಿಯಿರಿಂಗ್ ಕಾಲೇಜಿಗೆ ಹೋಗಬೇಕು.  

– ನಗರದ ಹೊರವಲಯದ ದೊಡ್ಡಮಣ್ಣುಗುಡ್ಡೆ ಬಳಿ ಇರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸುಮಾರು 800 ವಿದ್ಯಾರ್ಥಿಗಳಿಗೆ, ಈ ಸಲದ ಲೋಕಸಭಾ ಚುನಾವಣೆಯು ತಂದೊಡ್ಡಿರುವ ಅನಿವಾರ್ಯತೆ ಇದು. ದೀರ್ಘಾವಧಿಯಲ್ಲಿ ನಡೆಯುತ್ತಿರುವ ಈ ಸಲದ ಚುನಾವಣೆಯ ಬಿಸಿ ಕೇವಲ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗೂ ತಟ್ಟಿದೆ. ಜೂನ್ 4ರಂದು ಮತ ಎಣಿಕೆ ಮುಗಿಯುವವರೆಗೆ ಈ ಗೋಳು ತಪ್ಪಿದ್ದಲ್ಲ.

ರಾಮನಗರದಲ್ಲಿ ಎಂಜಿನಿಯರಿಂಗ್ ಕಾಲೇಜು ಜಿಲ್ಲೆಯಲ್ಲಿ ನಡೆಯುವ ಬಹುತೇಕ ಚುನಾವಣೆಗಳ ಮತಯಂತ್ರಗಳನ್ನು ಇಡುವ ಸ್ಟ್ರಾಂಗ್ ರೂಂ ಆಗಿ  ಸಾಮಾನ್ಯವಾಗಿ ಬಳಕೆಯಾಗುತ್ತಲೇ ಇದೆ. ಅದೇ ರೀತಿ, ಈ ಸಲದ ಲೋಕಸಭಾ ಚುನಾವಣೆಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮತಯಂತ್ರಗಳನ್ನು ಇಲ್ಲಿಯೇ ಇಟ್ಟಿರುವ ಚುನಾವಣಾ ಆಯೋಗವು, ಏಪ್ರಿಲ್‌ 25ರಿಂದಲೇ ಕಾಲೇಜನ್ನು ತನ್ನ ವಶಕ್ಕೆ ಪಡೆದಿದೆ.

ಎಣಿಕೆ ಕಾರ್ಯ ಮುಗಿಯುವವರಿಗೆ ಕಾಲೇಜಿನತ್ತ ಯಾರೂ ಸುಳಿಯದಂತೆ ಮೂರು ಸುತ್ತಿನ ಭದ್ರತೆ ಒದಗಿಸಲಾಗಿದೆ. ಹಾಗಾಗಿ, ಕಾಲೇಜಿನವರು ವಿದ್ಯಾರ್ಥಿಗಳಿಗೆ ತರಗತಿ ಮುಂದುವರಿಸಲು ಪದವಿ ಮತ್ತು ಗೌಸಿಯಾ ಕಾಲೇಜಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಮಧ್ಯಾಹ್ನದಿಂದ ತರಗತಿ: ‘ಥಿಯರಿ ತರಗತಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಮತ್ತು ಪ್ರಾಕ್ಟಿಕಲ್ ತರಗತಿಗಳಿಗೆ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಪದವಿ ಕಾಲೇಜುಗಳಿಗೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ತರಗತಿ ನಡೆಯಲಿದ್ದು, ಬಳಿಕ 2 ಗಂಟೆಯಿಂದ ಸಂಜೆ 5ರವರೆಗೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಗತಿಗಳು ನಡೆಯುತ್ತವೆ’ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಪುಂಡರೀಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಲೇಜಿನಲ್ಲಿ ಮೆಕ್ಯಾನಿಕಲ್, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಹಾಗೂ ಸಿವಿಲ್ ಸೇರಿದಂತೆ ನಾಲ್ಕು ವಿಭಾಗಗಳಿದ್ದು, ಸುಮಾರು 800 ವಿದ್ಯಾರ್ಥಿಗಳಿದ್ದಾರೆ. ಅಷ್ಟೂ ವಿಭಾಗಗಳ ವಿದ್ಯಾರ್ಥಿಗಳ ತರಗತಿಗಳನ್ನು ಸ್ಥಳಾಂತರಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ, ನಮಗೂ ತೊಂದರೆ ಎನಿಸುತ್ತಿದೆ. ಆದರೂ, ಅನಿವಾರ್ಯವಾಗಿದೆ’ ಎಂದು ಪ್ರಾಧ್ಯಾಪಕರೊಬ್ಬರು ಹೇಳಿದರು.

ಹಿಂಸೆ ಎನಿಸುತ್ತಿದೆ: ‘ನಮ್ಮ ಎಂಜಿನಿಯರಿಂಗ್ ಕಾಲೇಜಿನಲ್ಲಿ ಒಂದೇ ಕಡೆ ಎಲ್ಲಾ ತರಗತಿಗಳಿಗೆ ಹಾಜರಾಗುತ್ತಿದ್ದ ನಮಗೆ, ಚುನಾವಣೆ ಹಿನ್ನೆಲೆಯಲ್ಲಿ ಬೇರೆಡೆಗೆ ತರಗತಿ ವ್ಯವಸ್ಥೆ ಮಾಡಿರುವುದರಿಂದ ತೊಂದರೆಯಾಗಿದೆ. ಥಿಯರಿ ಮತ್ತು ಪ್ರಾಕ್ಟಿಕಲ್ ತರಗತಿಗೆ ಎರಡು ಕಡೆಗೆ ಓಡಾಡುವುದು ಒಂದು ರೀತಿಯ ಹಿಂಸೆ ಎನಿಸುತ್ತಿದೆ’ ಎಂದು ಕಾಲೇಜಿನ ವಿದ್ಯಾರ್ಥಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ನಮ್ಮ ಕಾಲೇಜಿನಲ್ಲಿ ಸಕಲ ಸೌಕರ್ಯಗಳೊಂದಿಗೆ ತರಗತಿಗಲು ಸರಾಗವಾಗಿ ನಡೆಯುತ್ತವೆ. ಈಗ ಒಂದು ತಿಂಗಳ ಮಟ್ಟಿಗೆ ಬೇರೆ ಕಡೆ ಹೋಗಿ ಪಾಠ ಕೇಳುವುದು ಮತ್ತು ಪ್ರಾಕ್ಟಿಕಲ್ ತರಗತಿಗೆ ಹಾಜರಾಗುವುದಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ. ಆದರೆ, ವಿಧಿ ಇಲ್ಲದೆ ಹೋಗುತ್ತಿದ್ದೇವೆ. ನಮ್ಮಲ್ಲಷ್ಟೇ ಅಲ್ಲದೆ ಬೇರೆ ಜಿಲ್ಲೆಗಳಲ್ಲಿಯೂ ಇದೇ ರೀತಿ ತೊಂದರೆಯಾಗಿರುವುದನ್ನು ಗಮನಿಸಿದ್ದೇನೆ. ಚುನಾವಣೆ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಈ ರೀತಿ ತೊಂದರೆಯಾಗದಂತೆ ಸರ್ಕಾರ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಕಾಲೇಜು ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ, ನಮ್ಮಲ್ಲಿ ಮಧ್ಯಾಹ್ನದ ಬಳಿಕ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಅವಕಾಶ ನೀಡಿದ್ದೇವೆ. ಮತ ಎಣಿಕೆ ಕಾರ್ಯ ಮುಗಿದ ಬಳಿಕ ವಿದ್ಯಾರ್ಥಿಗಳು ಅಲ್ಲಿಗೆ ಸ್ಥಳಾಂತರವಾಗಲಿದ್ದಾರೆ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಪ್ರೊ. ಶೈಲಜಾ ಹೇಳಿದರು.

ಮತ ಎಣಿಕೆ ಕಾರ್ಯ ಮುಗಿಯುವವರೆಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಚುನಾವಣಾಧಿಕಾರಿ ನಿರ್ದೇಶನ ನೀಡಿದ್ದಾರೆ. ಅದರಂತೆ ಪದವಿ ಕಾಲೇಜು ಮತ್ತು ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ತರಗತಿಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ

– ಡಾ. ಜಿ. ಪುಂಡರೀಕ ಪ್ರಾಂಶುಪಾಲ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ರಾಮನಗರ

ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದ ಬಳಿಕ ಆ ದಿನವೇ ಮತಯಂತ್ರಗಳು ಸೇರಿದಂತೆ ಎಣಿಕೆಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳನ್ನು ಸ್ಥಳಾಂತರಿಸಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಹಸ್ತಾಂತರಿಸಲಾಗುವುದು

– ಬಿ.ಸಿ. ಶಿವಾನಂದಮೂರ್ತಿ ಸಹಾಯಕ ಚುನಾವಣಾಧಿಕಾರಿ ರಾಮನಗರ

‘ಸೌಕರ್ಯಗಳಿಲ್ಲ; ಬಿಸಿಲಲ್ಲಿ ಬರಬೇಕು’ ‘ಪದವಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಇರಬೇಕಾದ ಸೌಕರ್ಯಗಳಿಲ್ಲ. ನಮ್ಮಲ್ಲಾದರೆ ಡಿಜಿಟಲ್ ಬೋರ್ಡ್ ಸೇರಿದಂತೆ ಹಲವು ರೀತಿ ಸೌಕರ್ಯಗಳಿವೆ. ಆದರೆ ಇಲ್ಲಿ ಏನೂ ಇಲ್ಲದಿದ್ದರೂ ಅನಿವಾರ್ಯವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಠ ಮಾಡಬೇಕಿದೆ. ಪದವಿ ತರಗತಿಗಳು ಸಹ ನಡೆಯುತ್ತಿರುವುದರಿಂದ ನಮಗೆ ಮಧ್ಯಾಹ್ನದ ಬಳಿಕ 2ರಿಂದ ಸಂಜೆ 5ರವರೆಗೆ ತರಗತಿಗೆ ಸಮಯ ನಿಗದಿಪಡಿಸಲಾಗಿದೆ. ಬಿರು ಬಿಸಿಲಲ್ಲಿ ಮಧ್ಯಾಹ್ನ ವಿದ್ಯಾರ್ಥಿಗಳು ತರಗತಿಗೆ ಬಂದು ಸಂಜೆವರೆಗೆ ಇದ್ದು ಹೋಗಬೇಕಿರುವುದರಿಂದ ಅವರಿಗೂ ತೊಂದರೆಯಾಗಿದೆ’ ಎಂದು ಕಾಲೇಜಿನ ಪ್ರಾಧ್ಯಾಪಕರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT