ಮಾಗಡಿ: ಎತ್ತಿನಹೊಳೆ ಯೋಜನೆಯಿಂದ ಮಾಗಡಿಗೆ ನೀರು ಹರಿಸುವ ಬಗ್ಗೆ ಮಾಹಿತಿ ಇಲ್ಲ ಎಂದು ಶಾಸಕ ಎ.ಮಂಜುನಾಥ ಸ್ಪಷ್ಟಪಡಿಸಿದರು.
ಪಟ್ಟಣದ ಕಲ್ಯಾಬಾಗಿಲು ಬಳಿ ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಆಲಿಸಿ ಮಾತನಾಡಿದರು. ’ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಎತ್ತಿನಹೊಳೆ ನೀರು ಮರೂರು ಮಾರ್ಗವಾಗಿ ಎತ್ತಿನಮನೆ ಗುಲಗಂಜಿ ಗುಡ್ಡದ ಜಲಾಶಯ ತುಂಬಿಸುವ ಬಗ್ಗೆ ಯೋಜನೆ ತಯಾರಿಸಿದ್ದೆ ಎಂದು ಹೇಳಿದ್ದಾರೆ. ಈ ಬಗ್ಗೆ ಡಿಪಿಆರ್ ಮಾಡಿಸಿರುವ ಬಗ್ಗೆ ಮಾಹಿತಿ ನೀಡಲಿ. ಸರ್ಕಾರದೊಂದಿಗೆ ಮಾತುಕತೆ ನಡೆಸಲು ಅನುಕೂಲವಾಗಲಿದೆ’ ಎಂದು ಕುಟುಕಿದರು.
ವೈ.ಜಿಗುಡ್ಡ ಜಲಾಶಯಕ್ಕೆ ನೀರು ಬರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡ ಬ್ಯಾರೇಜ್‌ನಿಂದ ಕಣ್ವ ಜಲಾಶಯದ ಮೂಲಕ ವೈ.ಜಿಗುಡ್ಡ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದರು. ಆದರೆ, ಈಗ ಮಾಜಿ ಶಾಸಕ ಬಾಲಕೃಷ್ಣ ಅವರು ವೈ.ಜಿ.ಗುಡ್ಡದ ಜಲಾಶಯಕ್ಕೆ ಎತ್ತಿನಹೊಳೆ ನೀರು ಹರಿಸುವ ಬಗ್ಗೆ ನಾನು ಹಿಂದೆಯೇ ಪ್ರಯತ್ನ ಮಾಡಿದ್ದೆ. ಈಗಿನ ಸರ್ಕಾರ ನಿಲ್ಲಿಸಿದೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಅಧಾರ ಇರಬೇಕಲ್ಲವೇ’ ಎಂದು ಪ್ರಶ್ನಿಸಿದರು.
ಚತುಷ್ಪಥ ರಸ್ತೆ: ಬೆಂಗಳೂರಿನ ನೈಸ್ ರಸ್ತೆಯಿಂದ ಮಾಗಡಿವರೆಗೂ 4 ಪಥದ ರಸ್ತೆ, ಮಾಗಡಿಯಿಂದ ಸೋಮವಾರಪೇಟೆವರೆಗೂ 2 ಪಥದ ರಸ್ತೆ ಕಾಮಗಾರಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶಂಕು ಸ್ಥಾಪನೆ ಮಾಡಿದ್ದರು. ಮುಖ್ಯಮಂತ್ರಿ ಅವಧಿಯಲ್ಲಿ ಸಿದ್ದರಾಮಯ್ಯ ಯೋಜನೆಗೆ ಅನುಮೋದನೆ ನೀಡಿದ್ದರು. ಆದರೆ, ಅಧಿಕಾರಿಗಳು 4 ಪಥದ ರಸ್ತೆ ಬೇಡ ಎಂದು ಹೇಳಿದ್ದರು. ’ಆಗ ನಾನು ಮಾಗಡಿಗೆ ಈ ರಸ್ತೆ ಆಗಲೇಬೇಕು ಎಂದು ಎಚ್.ಎಂ.ರೇವಣ್ಣ ಅವರೊಂದಿಗೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿ ₹1250 ಕೋಟಿ ಹಣ ಬಿಡುಗಡೆ ಮಾಡಿಸಿದ್ದೆ. ಈ ಕಾಮಗಾರಿ ಪ್ರಾರಂಭವಾಗಲಿದೆ‘ ಎಂದು ತಿಳಿಸಿದರು.
ವಿದ್ಯುತ್ ಕಂಬಗಳ ಸ್ಥಳಾಂತರ, ಮರಗಳನ್ನು ಕಳೆದುಕೊಂಡ ಭೂಮಾಲೀಕರಿಗೆ ಪರಿಹಾರ ನೀಡಲಾಗುತ್ತಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಜತೆ ಅಧಿಕಾರಿಗಳು ಸಭೆ ನಡೆಸಿದ್ದು ಏಕಕಾಲದಲ್ಲಿ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದರು.
ಪುರಸಭಾ ಸದಸ್ಯರಾದ ಕೆ.ವಿ.ಬಾಲು, ಅನಿಲ್ ಕುಮಾರ್, ರಹಮತ್ ಉಲ್ಲಾಖಾನ್, ವಿಜಯಲಕ್ಷ್ಮಿ ರೂಪೇಶ್, ಮಾಜಿ ಸದಸ್ಯ ವೆಂಕಟಾಚಲಪತಿ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ ಮಹೇಶ್, ಮತ್ತು ಬೀದಿ ಬದಿ ವ್ಯಾಪಾರಸ್ಥರು ಇದ್ದರು.