ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ಸ್ಥಳ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ರೈತರ ಅಡ್ಡಿ

ಜಮೀನುಗಳಿಗೆ ಸಂಚಾರಕ್ಕೆ ಜಾಗ ನೀಡಲು ರೈತರ ಮನವಿ
Last Updated 19 ನವೆಂಬರ್ 2022, 6:33 IST
ಅಕ್ಷರ ಗಾತ್ರ

ಕನಕಪುರ: ತಹಶೀಲ್ದಾರ್ ನಿರ್ದೇಶನದಂತೆ ಸ್ಥಳ ಪರಿಶೀಲನೆಗೆ ಬಂದ ಕಂದಾಯ ಅಧಿಕಾರಿಗಳಿಗೆ ಪರಿಶೀಲನೆಗೆ ರೈತರೊಬ್ಬರು ಅವಕಾಶ ನೀಡದೆ ವಾಪಸ್ ಕಳಿಸಿದ ಪ್ರಸಂಗ ತಾಮಸಂದ್ರ ಸರ್ಕಲ್ ಬಳಿ ನಡೆಯಿತು.

ಕಸಬಾ ಹೋಬಳಿ ರಾಮನಗರ ರಸ್ತೆಯ ತಾಮಸಂದ್ರ ಸರ್ಕಲ್ ಬಳಿ ರೈತರ ಜಮೀನುಗಳಿಗೆ ಹೋಗುವ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡಿರುವ ರೈತರೊಬ್ಬರು, ಮುಂದಿನ ಜಮೀನಿನ ರೈತರಿಗೆ ರಸ್ತೆ ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಿದ್ದರು.

ಸರ್ಕಾರಿ ಗೋಮಾಳ ಸರ್ವೆ ನಂ. 72ರಲ್ಲಿ 2 ಎಕರೆ ಜಮೀನು ಮಂಜೂರಾತಿ ಪಡೆದಿರುವ ರೈತ, ಸರ್ವೆ ನಂ. 231ರಲ್ಲಿ ಎರಡು ಎಕರೆಗೂ ಹೆಚ್ಚು ಜಮೀನು ಒತ್ತುವರಿ ಮಾಡಿಕೊಂಡು ರಸ್ತೆಗೆ ಅವಕಾಶ ಕೊಡದಂತೆ ತೊಂದರೆ ನೀಡಿದ್ದರು ಎಂಬ ಆರೋಪವಿದೆ.

ಈ ಜಮೀನಿನ ಮುಂದೆ ಬರುವ ಜಮೀನುಗಳಿಗೆ ಗೋಮಾಳ ಸರ್ವೆ ನಂ. 231ರಲ್ಲಿಯೇ ಹೋಗಬೇಕು. ಆದರೆ, ಅದರಲ್ಲಿ ಜಮೀನು ಮಾಡಿರುವ ರೈತ ತಮ್ಮ ಜಮೀನಿನಲ್ಲಿ ಜನರು ಓಡಾಡಲು ಅಡ್ಡಿಪಡಿಸುತ್ತಿರುವುದರಿಂದ ಸಮಸ್ಯೆ ಉಲ್ಬಣವಾಗಿತ್ತು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿ.ಆರ್. ವಿಶ್ವನಾಥ್ ಅವರ ಸೂಚನೆ ಮೇರೆಗೆ ಆರ್.ಐ. ತಂಗರಾಜು, ವಿ.ಎ. ರವಿಕುಮಾರ್ ಮತ್ತು ಗ್ರಾಮ ಸಹಾಯಕರೊಂದಿಗೆ ಸ್ಥಳ ಪರಿಶೀಲನೆಗೆ ಮುಂದಾದಾಗ, ಸಾಗುವಳಿ ಮಾಡಿದ ರೈತ ವಿರೋಧ ವ್ಯಕ್ತಪಡಿಸಿದ್ದಾರೆ.

‘ನನ್ನ ಜಮೀನಿಗೆ ಬರಲು ನೀವ್ಯಾರು’ ಎಂದು ಅಧಿಕಾರಿಗಳನ್ನೇ ರೈತ ಬೆದರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಅಧಿಕಾರಿಗಳು ಮತ್ತು ರೈತರ ನಡುವೆ ಸಾಕಷ್ಟು ವಾಗ್ವಾದ ನಡೆದಿದೆ.

ಸಾಗುವಳಿ ಮಾಡಿರುವ ರೈತ ಅಧಿಕಾರಿಗಳನ್ನೇ ಬೆದರಿಸುತ್ತಾರೆ. ನಮ್ಮನ್ನೂ ಓಡಾಡಲು ಬಿಡುತ್ತಿಲ್ಲ. 30ಕ್ಕೂ ಹೆಚ್ಚು ರೈತರಿಗೆ ಈ ರಸ್ತೆಯ ಅಗತ್ಯವಿದ್ದು, ನಮಗೆ ರಸ್ತೆ ಮಾಡಿಸಿ ಕೊಡಬೇಕು ಎಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದರು.

ರೈತರಾದ ನಾರಾಯಣ್, ಶ್ರೀನಿವಾಸ್, ರಾಮಕೃಷ್ಣ, ಸುಜಾತ ಮುತ್ತೇಗೌಡ, ಶಿವಾನಂದ, ಮರಿಗೌಡ, ಮುದ್ದೇಗೌಡ, ಮಾರೇಗೌಡ, ದೇವಮ್ಮ, ಶಿವರಾಜು, ನಾಗರಾಜು, ತಿಮ್ಮಪ್ಪ, ಪಾರ್ಥ, ಪ್ರಕಾಶ್, ರವಿ, ದಾಸೇಗೌಡ, ವೆಂಕಟೇಗೌಡ, ಶ್ರೀನಿವಾಸ, ನಾಗರಾಜು, ಅಶ್ವಥ್, ಶಿವರಾಮು, ರವೀಂದ್ರ, ಉಮೇಶ್, ತಿಮ್ಮಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT