ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಬೆಳೆಗಾರರ ಉಪವಾಸ 15ರಿಂದ

ಸಮಸ್ಯೆ ಬಗೆಹರಿಸಲು ಸರ್ಕಾರಕ್ಕೆ ವಾರದ ಗಡುವು
Last Updated 8 ಜುಲೈ 2020, 13:57 IST
ಅಕ್ಷರ ಗಾತ್ರ

ರಾಮನಗರ: ರೇಷ್ಮೆಗೂಡು ಧಾರಣೆ ಪಾತಾಳಕ್ಕೆ ಇಳಿದಿದ್ದು, ರೈತರ ನೆರವಿಗೆ ಧಾವಿಸದ ಸರ್ಕಾರ ಕ್ರಮ ಖಂಡಿಸಿ ಇದೇ 15ರಿಂದ ಅಮರಣಾಂತ ಉಪವಾಸ ಮಾಡಲು ರೇಷ್ಮೆ ಬೆಳೆಗಾರರು ಮುಂದಾಗಿದ್ದಾರೆ.

'ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಹೀಗಾಗಿ ಸರ್ಕಾರಕ್ಕೆ ಒಂದು ವಾರ ಗಡುವು ನೀಡುತ್ತಿದ್ದೇವೆ. ಇದೇ 14ರ ಒಳಗೆ ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ರೇಷ್ಮೆ ಗೂಡು ಮಾರುಕಟ್ಟೆ ಮುಂಭಾಗ ಅಮರಣಾಂತ ಉಪವಾಸ ಕೂರುತ್ತೇವೆ’ ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಹಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಗೌತಮ್ ಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಕೊರೊನಾದಿಂದಾಗಿ ರೇಷ್ಮೆ ಕೃಷಿ ಸಂಪೂರ್ಣ ತತ್ತರಿಸಿದೆ. ಗೂಡಿನ ಧಾರಣೆಯು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರ ನಮ್ಮ ಕೈ ಹಿಡಿಯಲೇ ಬೇಕಿದೆ ಎಂದರು.

ಜಿಲ್ಲೆಯಲ್ಲಿ ಉತ್ಪಾದನೆಯಾಗುವ ರೇಷ್ಮೆ ಗೂಡು, ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಢ್ಲಘಟ್ಟ ಕೊಳ್ಳೆಗಾಲ, ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆ ಮಾರಾಟವಾಗುತ್ತಿದೆ. ಕೊರೊನಾ ಬರುವ ಮುನ್ನ ಕೆ.ಜಿ ರೇಷ್ಮೆ ಗೂಡಿಗೆ ₹500- 600 ಬೆಲೆ ಸಿಗುತ್ತಿತ್ತು. ಆದರೆ, ಪ್ರಸ್ತುತ 100-150ಕ್ಕೆ ಮಾರಾಟವಾಗುತ್ತಿದೆ ಎಂದು ಅವರು ವಿವರಿಸಿದರು.

ಕೋವಿಡ್ ಸಂಕಷ್ಟ ಕಾಲದಲ್ಲಿ ಸರ್ಕಾರವು ಇತರೆ ಕ್ಷೇತ್ರಗಳಿಗೆ ನೆರವು ನೀಡಿದೆ. ಅದೇ ರೀತಿ ರೇಷ್ಮೆ ಬೆಳೆಗಾರರ ಸಂಕಷ್ಟವನ್ನು ಅರಿಯಬೇಕು. ಪ್ರತಿ ಕೆ..ಜಿ. ಗೂಡಿಗೆ ಮಿಶ್ರ ತಳಿಗೆ ₹150 ಹಾಗೂ ಸಿಎಸ್‍ಆರ್ ತಳಿ ಗೂಡಿಗೆ ₹250 ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಧಾನ ಜಿಲ್ಲಾ ಕಾರ್ಯದರ್ಶಿ ರವಿ ಮಾತನಾಡಿ, ಕಳೆದ ತಿಂಗಳು ರೇಷ್ಮೆ ಸಚಿವರೊಂದಿಗೆ ನಡೆದ ಸಭೆಯಲ್ಲಿ, ರೇಷ್ಮೆ ಬೆಳೆಗಾರರ ಹಿತ ಕಾಯಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದರು. ಆದರೆ, ತಿಂಗಳು ಕಳೆದರೂ ಸರ್ಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ದೂರಿದರು. ರೇಷ್ಮೆ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಈಗಾಗಲೇ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

ಚಾಕಿ ಸಾಕಾಣಿಕೆ ಕೇಂದ್ರದ ಮಾಲೀಕ ಕೀರಣಗೆರೆ ಜಗದೀಶ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ಇರುವಂತೆ ರೇಷ್ಮೆ ಉದ್ಯಮವೂ ಕೋವಿಡ್ ಕಾರಣಕ್ಕೆ ತೀರ ಸಂಕಷ್ಟದಲ್ಲಿದೆ. ರೇಷ್ಮೆ ಬೆಳೆಗಾರರ ಹಿತ ಕಾಯುವ ಸಲುವಾಗಿ, ಚಾಕಿ ಸಾಕಾಣಿಕೆ ಕೇಂದ್ರ ಇವರಿಗೆ ಬೆಂಬಲ ನೀಡಲಿದೆ ಎಂದು ಹೇಳಿದರು.

ಈ ಮೊದಲು ರೇಷ್ಮೆ ಮೊಟ್ಟೆಗಳನ್ನು ₹3400– 3600 ಮಾರಾಟ ಮಾಡಲಾಗುತ್ತಿತ್ತು. ಆದರೆ, ಕೋವಿಡ್ ಸಂಕಷ್ಟದಿಂದಾಗಿ ₹2600ಕ್ಕೆ ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ರೇವಲಿಂಗಯ್ಯ, ಡಿ.ಕೆ.ರಾಮಕೃಷ್ಣ, ಗೋಪಾಲ್, ಆನಂದ್, ಕುಮಾರಸ್ವಾಮಿ, ಶಿವಕುಮಾರ್, ಶಿವಣ್ಣ ಇದ್ದರು.

ಮುಖ್ಯಮಂತ್ರಿಗೆ ಸಂಸದರ ಪತ್ರ

ರೇಷ್ಮೆಗೂಡು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಸಂಸದ ಡಿ.ಕೆ. ಸುರೇಶ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸುರೇಶ್‌, "ಈ ಹಿಂದೆ ಬೆಳೆಗಾರರು ಸಂಕಷ್ಟಕ್ಕೆ ಒಳಗಾದ ಸಮಯದಲ್ಲಿ ಸರ್ಕಾರಗಳು ಪ್ರೋತ್ಸಾಹ ಧನದ ಮೂಲಕ ಅವರ ಬೆನ್ನಿಗೆ ನಿಂತಿವೆ. ಅಂತೆಯೇ ಬಸವರಾಜು ಸಮಿತಿ ವರದಿಯಂತೆ ಪ್ರತಿ ಕೆ.ಜಿ.ಗೆ ಕನಿಷ್ಠ ಮಿಶ್ರತಳಿ ಗೂಡಿಗೆ ₹40 ಹಾಗೂ ದ್ವಿತಳಿ ಗೂಡಿಗೆ ₹50 ಪ್ರೋತ್ಸಾಹ ಧನ ಪ್ರಕಟಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

***
ಕೋವಿಡ್ ಸಂಕಷ್ಟ ಕಾಲದಲ್ಲಿ ಸರ್ಕಾರವು ಇತರೆ ಕ್ಷೇತ್ರಗಳಿಗೆ ನೆರವು ನೀಡಿದೆ. ಅದೇ ರೀತಿ ರೇಷ್ಮೆ ಬೆಳೆಗಾರರ ನೆರವಿಗೂ ಧಾವಿಸಬೇಕು

-ಗೌತಮ್ ಗೌಡ, ರೇಷ್ಮೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT