ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ | ರೈತರ ಹಾಲಿಗೆ ₹2 ಕಡಿತ: ರೈತರ ಆಕ್ರೋಶ

Published 23 ನವೆಂಬರ್ 2023, 7:02 IST
Last Updated 23 ನವೆಂಬರ್ 2023, 7:02 IST
ಅಕ್ಷರ ಗಾತ್ರ

ಚನ್ನಪಟ್ಟಣ: ರೈತರ ಹಾಲಿಗೆ ₹2 ಕಡಿತ ಹಾಗೂ ಬಮೂಲ್ ಹಾಲು ಒಕ್ಕೂಟದ ಧೋರಣೆ ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ತಾಲ್ಲೂಕಿನ ಬೈರಾಪಟ್ಟಣ ಬಳಿಯ ಬಮೂಲ್ ಶೀತಲ ಕೇಂದ್ರದ ಬಳಿ ’ನಮ್ಮ ಹಾಲು-ನಮ್ಮ ಹಕ್ಕು ಚಳವಳಿ’ ನಡೆಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು, ಹಾಲಿನ ಖರೀದಿ ಬೆಲೆಯಲ್ಲಿ ಪ್ರತಿ ಲೀಟರ್‌ಗೆ ₹2 ಕಡಿತಗೊಳಿಸಲಾಗಿದೆ. ವೈಜ್ಞಾನಿಕವಾಗಿ ಹಾಲಿನ ಬೆಲೆ ನಿಗದಿ ಪಡಿಸದೆ ಉತ್ಪಾದಕ ರೈತರನ್ನು ವಂಚಿಸಲಾಗಿದೆ. ಒಕ್ಕೂಟ ಒಂದು ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸದೆ ಸರ್ಕಾರದ ಮರ್ಜಿಯಲ್ಲಿ ಸಿಲುಕಿದೆ. ಆಡಳಿತಾತ್ಮಕ ವೆಚ್ಚ ನಿಯಂತ್ರಿಸದಿರುವುದು ಖಂಡನೀಯ ಎಂದರು.

ರೈತರ ಹಾಲಿಗೆ ಬಮೂಲ್ ಒಂದು ಕಡೆ  ₹3ಕೊಟ್ಟು ಇನ್ನೊಂದು ಕಡೆ ಎರಡು ರೂಪಾಯಿ ಕಿತ್ತುಕೊಳ್ಳವ ಮೂಲಕ ರೈತರಿಗೆ ಅನ್ಯಾಯ ಮಾಡಿದೆ. ರಾಜ್ಯದಲ್ಲಿ ಬರಗಾಲ ಆವರಿಸಿರುವುದರಿಂದ ಒಂದು ಕಡೆ ರಾಸುಗಳ ಮೇವಿಗೆ ಕೊರತೆ ಉಂಟಾಗಿದ್ದರೆ, ಇನ್ನೊಂದು ಕಡೆ ಪಶು ಆಹಾರದ ಬೆಲೆ ಏರಿಕೆಯಿಂದ ರೈತರು ತತ್ತರಿಸಿದ್ದಾರೆ. ಇಂತಹ ಸಮಯದಲ್ಲಿ ಬಮೂಲ್ ರೈತರ ಹಾಲಿಗೆ ₹2ಕಡಿತ ಮಾಡಿರುವುದು ಬರಗಾದಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ಬಮೂಲ್ ಈ ಆದೇಶ ಹಿಂಪಡೆದು ಹಾಲಿನ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಕೆಎಂಎಫ್, ಎನ್.ಡಿ.ಡಿ.ಬಿ ಸೇರಿದಂತೆ ಎಲ್ಲ ಹಾಲು ಒಕ್ಕೂಟಗಳು ಹಾಗೂ ಪಶು ಸಂಗೋಪನೆ ಇಲಾಖೆ ರೈತರು ಪೂರೈಸುವ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ಒಕ್ಕೂಟ ರೈತರಿಗೆ ಮಾಡುತ್ತಿರುವ ಈ ದ್ರೋಹದಿಂದಾಗಿ ಪರಿತಪಿಸುವಂತಾಗಿದೆ. ರಾಸುಗಳ ನಿರ್ವಹಣೆ, ಹಾಲು ಉತ್ಪಾದನಾ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಹಿರಿಯ ರೈತ ಮುಖಂಡ ಸಿ.ಪಟ್ಟಸ್ವಾಮಿ ಮಾತನಾಡಿ, ಹಾಲು ಉತ್ಪಾದನೆಯಲ್ಲಿ ಬಮೂಲ್ ಪ್ರಥಮ ಸ್ಥಾನದಲ್ಲಿದ್ದರೂ ಅನವಶ್ಯ ಆಡಳಿತ್ಮಾಕ ವೆಚ್ಚ, ಮತ್ತಿತರ ಸೌಲಭ್ಯದಿಂದ ಖರ್ಚು ದುಬಾರಿಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಮೂಲ್ ಹಾಲು ಒಕ್ಕೂಟ ತನ್ನ ರೈತ ವಿರೋಧಿ ಧೋರಣೆ ಬದಲಿಸಿಕೊಳ್ಳಬೇಕು. ರೈತರು ಪೂರೈಕೆ ಮಾಡುವ ಹಾಲಿನ ದರ ಹೆಚ್ಚಿಸುವ ಜತೆಗೆ ವಿವಿಧ 17 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.


ರೈತಸಂಘದ ಮುಖಂಡರಾದ ಮಲ್ಲಿಕಾರ್ಜುನ ಗೌಡ, ಮಂಜುನಾಥ, ಸಿದ್ದಪ್ಪ, ನರಸಿಂಹೇಗೌಡ, ದೇವರಾಜು, ಮಲ್ಲಿಕಾರ್ಜುನ್, ಶೋಭಾ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT