ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆಗೆ ಸೀಮಿತವಾದ ಬಂದ್‌

ಕರೆಗೆ ಓಗೊಡದ ಸಾರ್ವಜನಿಕರು: ಎಂದಿನಂತೆ ಜನಜೀವನ
Last Updated 8 ಡಿಸೆಂಬರ್ 2020, 13:46 IST
ಅಕ್ಷರ ಗಾತ್ರ

ರಾಮನಗರ: ಕೇಂದ್ರ ಸರ್ಕಾರದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಹಾಗೂ ವಿದ್ಯುತ್ ಚ್ಛಕ್ತಿ ಕಾಯ್ದೆ ಜಾರಿ ವಿರೋಧಿಸಿ ಮಂಗಳವಾರ ಕರೆ ನೀಡಿದ್ದ ಭಾರತ ಬಂದ್‌ ಬೆಂಬಲಿಸಿ ರೈತ ಸಂಘಟನೆಗಳು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದವು. ಆದರೆ ಸಾರ್ವಜನಿಕರಿಂದ ಯಾವುದೇ ಪ್ರತಿಕ್ರಿಯೆ ದೊರೆಯಲಿಲ್ಲ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿವಿಧ ಬಣಗಳು ನಗರದ ಐಜೂರು ವೃತ್ತದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಕೈ ಜೋಡಿಸಿದರು. ಜಿಲ್ಲೆಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಸಹ ಬೆಂಬಲ ಸೂಚಿಸಿತು.

ಐಜೂರಿನಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದರು. ಕೇಂದ್ರದಲ್ಲಿ ಪ್ರಧಾನಿ ಮೋದಿ ಸರ್ಕಾರಕ್ಕೆ ಅಸ್ತಿತ್ವಕ್ಕೆ ಬಂದಾಗಿನಿಂದ ಒಂದಲ್ಲೊಂದು ಕಾಯ್ದೆಗಳ ರೂಪದಲ್ಲಿ ರೈತರಿಗೆ ಮರಣಶಾಸನ ಬರೆಯುತ್ತಲೇ ಇದೆ. ಈಗ ಜಾರಿಗೆ ತರಲು ಹೊರಟಿರುವ ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ರೈತರನ್ನು ಬೀದಿಗೆ ತಳ್ಳುವ ಯೋಜನೆ ಆಗಿದೆ. ಇದರಿಂದ ರೈತರು ಜಮೀನು ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ. ಕೃಷಿ ಮಾರುಕಟ್ಟೆ ವ್ಯವಸ್ಥೆಯೇ ಹಳಿ ತಪ್ಪಲಿದೆ. ಹೀಗಾಗಿ ದೇಶದ ಪ್ರತಿಯೊಬ್ಬ ನಾಗರೀಕರು ರೈತ ಹೋರಾಟವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭೈರೇಗೌಡ ಮತ್ತಿತರರು ಇದ್ದರು.

ಮತ್ತೊಂದೆಡೆ, ರೈತ ಮುಖಂಡ ತುಂಬೇನಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ಸಹ ಪ್ರತಿಭಟನೆ ನಡೆಯಿತು. ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಎಲ್ಲ ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.

ಎಂದಿನಂತೆ ಜನಜೀವನ: ರಾಮನಗರದಲ್ಲಿ ಮಂಗಳವಾರ ಜನಜೀವನ ಎಂದಿನಂತೆ ಇತ್ತು. ಜನರು ಬಂದ್‌ ಕರೆಗೆ ಓಗೊಡಲಿಲ್ಲ. ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಎಂದಿನಂತೆ ತೆರೆದಿದ್ದರು. ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗಳಲ್ಲಿ ಸಹ ವಹಿವಾಟು ನಡೆಯಿತು.

ಕೆಎಸ್‌ಆರ್‌ಟಿಸಿ ಬಸ್‌ಗಳು ಮುಂಜಾನೆಯಿಂದ ಎಂದಿನಂತೆ ಸಂಚಾರ ಕೈಗೊಂಡವು. ಕೆಲವು ಜಿಲ್ಲೆಗಳಲ್ಲಿ ಬಸ್‌ ಸೇವೆ ಬಂದ್‌ ಆದ ಹಿನ್ನೆಲೆಯಲ್ಲಿ ಬಸ್‌ಗಳ ಸಂಖ್ಯೆ ಕಡಿಮೆಯಾಗಿತ್ತು. ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ವಾಹನಗಳ ಓಡಾಟ ಎಂದಿನಂತೆ ಇತ್ತು. ಆಸ್ಪತ್ರೆ, ಔಷಧಾಲಯ, ಪೆಟ್ರೋಲ್‌ ಬಂಕ್ ಸೇರಿದಂತೆ ತುರ್ತು ಮತ್ತು ಅಗತ್ಯ ಸೇವೆಗಳಿಗೂ ಯಾವುದೇ ತೊಂದರೆ ಆಗಲಿಲ್ಲ.

ಸುಳಿಯದ ರಾಜಕೀಯ ಪಕ್ಷಗಳು

ರೈತ ಹೋರಾಟ ಬೆಂಬಲಿಸುವುದಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ತಮ್ಮ ಸಾಮಾಜಿಕ ಜಾಲತಾಣಗಳ ಪುಟಗಳಲ್ಲಿ ಬರೆದುಕೊಂಡಿದ್ದವು. ಆದರೆ ರಾಮನಗರದಲ್ಲಿ ಉಭಯ ಪಕ್ಷಗಳ ಯಾವೊಬ್ಬ ಕಾರ್ಯಕರ್ತರೂ ರೈತರ ಹೋರಾಟ ಬೆಂಬಲಿಸಲು ಮುಂದೆ ಬರಲಿಲ್ಲ. ಹೀಗಾಗಿ ಬೆರಳೆಣಿಕೆಯ ಸಂಖ್ಯೆಯಲ್ಲಿ ಇದ್ದ ರೈತರೇ ಏಕಾಂಗಿಯಾಗಿ ಹೋರಾಟ ನಡೆಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT