ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; ಕಾಡು ಪ್ರಾಣಿಗಳ ಉಪಟಳ ಹೆಚ್ಚಳ

ಗೋವಿಂದರಾಜು ವಿ.
Published 20 ಮೇ 2024, 5:41 IST
Last Updated 20 ಮೇ 2024, 5:41 IST
ಅಕ್ಷರ ಗಾತ್ರ

ಹಾರೋಹಳ್ಳಿ: ತಾಲ್ಲೂಕಿನ ಅರಣ್ಯ ಪ್ರದೇಶದ ಗಡಿ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು, ರೈತರು ಮಾತ್ರವಲ್ಲದೆ ಸಾರ್ವಜನಿಕರಿಗೂ ತೊಂದರೆ ಉಂಟಾಗುತ್ತಿದೆ.

ಈ ಭಾಗದಲ್ಲಿ ಆಗಾಗ್ಗೆ ಗಡಿ ಗ್ರಾಮಗಳಿಗೆ ನುಗ್ಗಿ ಬರುವ ಕಾಡಾನೆಗಳು ಬೆಳೆ ಹಾನಿ ಮಾಡುತ್ತಿವೆ. ಇದರಿಂದ ಬೆಳೆದ ಬೆಳೆ ಕೈಗೆ ಬಾರದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಎಲ್ಲೆಲ್ಲಿ ಹೆಚ್ಚಳ: ತಾಲ್ಲೂಕಿನ ಅರಣ್ಯ ಪ್ರದೇಶದ ಗಡಿ ಗ್ರಾಮಗಳಾದ ಗುಳಟ್ಟಿ ಕಾವಲ್‌, ಯಲಚವಾಡಿ, ತಟ್ಟೆಕೆರೆ, ಉರಗನದೊಡ್ಡಿ, ದೊಡ್ಡೂರು, ಕೋಣಾಳು ದೊಡ್ಡಿ, ತೇರುಬೀದಿ, ಶೀತಲವಾಡಿ, ಸುಂಡಘಟ್ಟ ಮಣಿಯಂ ಬಾಳ್‌, ದೇವರಹಳ್ಳಿ, ಬುಡಗಯ್ಯನ ದೊಡ್ಡಿ, ಕತ್ತರಿನಾಥ , ತೇರುಬೀದಿ , ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಹಳ್ಳಿಗಳು ಅರಣ್ಯದ ಗಡಿ ಭಾಗದ ವ್ಯಾಪ್ತಿಯಲ್ಲಿವೆ. ಈ ಭಾಗಗಳಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದೆ.

ವನ್ಯಜೀವಿ ವಲಯದ ವ್ಯಾಪ್ತಿ: ತಾಲ್ಲೂಕಿನ ವನ್ಯಜೀವಿ ವಲಯ ವ್ಯಾಪ್ತಿಯು 76.90 ಚದರ ಕಿಲೋಮೀಟರ್‌ ಇದೆ. ಇಲ್ಲಿ ಆನೆ, ಚಿರತೆ ಸೇರಿದಂತೆ ಇತರೆ ಪ್ರಾಣಿಗಳ ಹಾವಳಿ ಸಹ ಹೆಚ್ಚಾಗಿದ್ದು ಬೆಳೆ ರಕ್ಷಿಸಿಕೊಳ್ಳಲು ರೈತ ಇನ್ನಿಲ್ಲದ ಹರಸಾಹಸ ಪಡಬೇಕಾದ ಅನಿವಾರ್ಯತೆ ಉಂಟಾಗಿದೆ.

ರೈಲ್ವೆ ಬ್ಯಾರಿಕೇಡ್‌: ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಆನೆಗಳ ದಾಳಿ ತೀವ್ರವಾಗಿದ್ದು 2,650 ಮೀಟರ್‌ ರೈಲ್ವೆ ಬಾರಿಕೇಡ್‌ ಹಾಗೂ ಸೋಲಾರ್‌ ಫೆನ್ಸಿಂಗ್‌, ಈಟಿಪಿ, ಸೋಲಾರ್‌ ಟೆಂಟಿಕಲ್ಸ್‌ ಇವು ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ.

200ಕ್ಕೂ ಹೆಚ್ಚು ಆನೆಗಳು: ಹಾರೋಹಳ್ಳಿ ತಾಲ್ಲೂಕಿಗೆ ಆನೇಕಲ್‌, ಬನ್ನೇರುಘಟ್ಟ, ಹಾರೋಹಳ್ಳಿ ಮೂರು ವ್ಯಾಪ್ತಿಗಳ ವನ್ಯಜೀವಿ ವಲಯ ಸೇರಿದೆ. ಹಾರೋಹಳ್ಳಿ ವನ್ಯಜೀವಿ ವಲಯ ಒಂದರಲ್ಲಿಯೇ ಸುಮಾರು 200ಕ್ಕೂ ಹೆಚ್ಚು ಆನೆಗಳಿವೆ. ಗುಂಪು ಆನೆಗಳು ಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದು ಆನೆಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.

ಚಿರತೆ ಕಾಟ: ಚಿರತೆಗಳಂತೂ ಗ್ರಾಮಗಳಿಗೆ ನುಗ್ಗುತ್ತಿವೆ. ಮೇಕೆ, ಹಸು, ಕುರಿ, ನಾಯಿಗಳನ್ನು ಹಿಡಿಯಲು ಗ್ರಾಮಗಳಿಗೆ ನುಗ್ಗುತ್ತಿವೆ. ಸಾಕುಪ್ರಾಣಿಗಳು ಸೇರಿದಂತೆ ಇನ್ನಿತರೆ ಪ್ರಾಣಿಗಳ ಮೇಲೆರಗುವ ಚಿರತೆಗಳು ಅವುಗಳನ್ನು ತಿಂದು ಕೊಂದು ಹಾಕುತ್ತಿವೆ.

ಆನೆ ಕಾರ್ಯಪಡೆ ವಿಫಲ: ಕಾಡಾನೆಗಳ ನಿಯಂತ್ರಣಕ್ಕೆ ಆನೆ ಕಾರ್ಯಪಡೆ ಕಂಟ್ರೋಲ್ ರೂಂ ಬನ್ನೇರುಘಟ್ಟದಲ್ಲಿದೆ. ಅಲ್ಲಿಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಹೋಗಿ ಆನೆಗಳ ಕಾಡಿಗೆ ಓಡಿಸುವ ಕೆಲಸ ಮಾಡುವಲ್ಲಿ ಆನೆ ಕಾರ್ಯಪಡೆ ವಿಫಲವಾಗಿದೆ ಎಂಬುದು ರೈತರ ಆಕ್ರೋಶವಾಗಿದೆ.

ಸಕಾಲಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯತತ್ಪರರಾದರೆ ಕಾಡು ಪ್ರಾಣಿಗಳ ಉಪಟಳ ತಡೆಯಬಹುದು ಎಂಬುದು ರೈತರ ಅಭಿಪ್ರಾಯ.

ಪರಿಹಾರಕ್ಕೆ ಅಲೆದಾಟ: ಕಾಡು ಪ್ರಾಣಿಗಳಿಂದ ನಾಶವಾದ ಬೆಳೆಗಳ ಪರಿಹಾರ ಪಡೆಯಲು ರೈತರು ಕಚೇರಿಗಳಿಗೆ ಅಲೆದಾಡಬೇಕು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳು ಕ್ಷಣಾರ್ಧದಲ್ಲಿ ತಿಂದು ತೇಗುತ್ತವೆ. ರೈತರಿಗೆ ಸಹಾಯವಾಗಲಿ ಎಂದು ಸರ್ಕಾರ ಪರಿಹಾರ ನೀಡುತ್ತಿದೆ. ಆದರೆ, ಆ ಮೊತ್ತ ಏನಕ್ಕೂ ಸಾಲದು ಎಂಬ ಮಾತುಗಳು ಸಹ ಕೇಳಿ ಬರುತ್ತಿದೆ.

ಸಿಬ್ಬಂದಿಗಳಿಗಿಲ್ಲ ಅಗತ್ಯ ಸೌಲಭ್ಯ: ಪ್ರಾಣಿಗಳ ಹಾವಳಿಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವ ಅರಣ್ಯ ಇಲಾಖೆಯ ಸಿಬ್ಬಂದಿಗೆ ಅಗತ್ಯ ಸೌಲಭ್ಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಅಗತ್ಯ ಸುರಕ್ಷಾ ಸಲಕರಣೆಗಳು, ಸಿಬ್ಬಂದಿಗೆ ನೀಡಬೇಕಿದೆ.

ಕಾಡಾನೆಗಳ ದಾಳಿ ಸಾಂದರ್ಭಿಕ ಚಿತ್ರ
ಕಾಡಾನೆಗಳ ದಾಳಿ ಸಾಂದರ್ಭಿಕ ಚಿತ್ರ
ಕಾಡುಪ್ರಾಣಿ ಹಾವಳಿ ಅಂಕಿ ಸಂಖ್ಯೆಗಳು ಆನೆಗಳ ದಾಳಿ ಮೃತಪಟ್ಟವರ ಸಂಖ್ಯೆ-02 ಚಿರತೆ ದಾಳಿಯಿಂದ ಮೃತ ಜಾನುವಾರುಗಳ ಸಂಖ್ಯೆ-16 ಬೆಳೆ ನಾಶ ಮತ್ತು ಇತರೆ ನಾಶ-286
ಕಾಡು ಪ್ರಾಣಿಗಳ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಹಾಗೂ ಸೋಲಾರ್ ತಂತಿ ಬೇಲಿ ಹಾಕಿ ನಿಯಂತ್ರಣಕ್ಕೆ ಕ್ರಮ ತಗೆದುಕೊಳ್ಳುತ್ತಿದ್ದು ಜೊತೆಗೆ ಸರ್ಕಾರಕ್ಕೆ ಹೆಚ್ಚು ಬ್ಯಾರಿಕೇಡ್ ಹಾಕಲು ಅನುದಾನಕ್ಕೆ ಮನವಿ ಮಾಡಲಾಗಿದೆ ಅಂತೋನಿ ರೆಗೋ ವಲಯ ಅರಣ್ಯಾಧಿಕಾರಿ ಹಾರೋಹಳ್ಳಿ ನಮ್ಮ ತೋಟದಲ್ಲಿ ಹಲವು ಸಲ ಕಾಡಾನೆಗಳು ದಾಳಿ ನಡೆಸಿ ಬಾಳೆ ತೆಂಗು ನಾಶ ಮಾಡಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡು ಪ್ರಾಣಿಗಳ ಉಪಟಳ ತಡೆಯಬೇಕು
ವೆಂಕಟೇಶ್ ರೈತ ದುರ್ಗೇಗೌಡನದೊಡ್ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT