ಗುರುವಾರ , ಸೆಪ್ಟೆಂಬರ್ 19, 2019
22 °C
ಬಾಳಲಿಂಗೇಗೌಡನದೊಡ್ಡಿ ಶಾಲೆಯ ವಿರೇಶಮೂರ್ತಿ ಇತರರಿಗೆ ಮಾದರಿ

ರಾಮನಗರ: ಸರ್ಕಾರಿ ಶಾಲೆ ಚಿತ್ರಣ ಬದಲಿಸಿದ ಶಿಕ್ಷಕ

Published:
Updated:
Prajavani

ರಾಮನಗರ: ಸರ್ಕಾರಿ ಉದ್ಯೋಗದಲ್ಲಿ ಇರುವವರು ತಾವಾಯಿತು ತಮ್ಮ ಉದ್ಯೋಗವಾಯಿತು ಎಂದು ಭಾವಿಸುವುದೇ ಹೆಚ್ಚು. ಆದರೆ ಇಲ್ಲೊಬ್ಬ ಶಿಕ್ಷಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಅವರು ತಾಲ್ಲೂಕಿನ ಬಾಳಲಿಂಗೇಗೌಡನದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿ. ವೀರೇಶಮೂರ್ತಿ. ತಾವು ಕಾರ್ಯ ನಿರ್ವಹಿಸುವ ಶಾಲೆಯನ್ನು ಮಾದರಿಯಾಗಿ ರೂಪಿಸಿದ್ದಾರೆ. ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಂಡಿದ್ದಾರೆ. ನಲಿ–ಕಲಿ ಯೋಜನೆಯಡಿ ಕಲಿಯುವ ಮಕ್ಕಳಿಗೆ ಕುಳಿತು ಕೊಳ್ಳಲು ಅನುಕೂಲವಾಗುವಂತೆ ಕುರ್ಚಿ ಮತ್ತು ಟೇಬಲ್ ವ್ಯವಸ್ಥೆಯನ್ನೂ ಮಾಡಿದ್ದಾರೆ.

ಶಾಲೆಯ ಗೋಡೆಯಲ್ಲಿ ಪ್ರತಿಯೊಂದು ವಿದ್ಯಾರ್ಥಿಗೂ ಅನುಕೂಲವಾಗುವಂತೆ 'ಗೋಡೆ ಸ್ಲೇಟ್'ಗಳನ್ನು ಮಾಡಿಸಿದ್ದಾರೆ. ಇದು ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಮೂಡಿಸುತ್ತಿದೆ. ಕಲಿಕಾ ಚಪ್ಪರವನ್ನು ನಿರ್ಮಿಸಲಾಗಿದೆ. ಮಕ್ಕಳಿಗೆ ಬಿಸಿಯೂಟ ಬಡಿಸಲು ಇತರೆ ಶಾಲೆಗಳಲ್ಲಿ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಇಲ್ಲ. ಆದರೆ ಈ ಶಾಲೆಯಲ್ಲಿ ಬಿಸಿಯೂಟಕ್ಕೆ ಪ್ರತ್ಯೇಕ ಕೊಠಡಿಯ ಜತೆಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುತ್ತಿದ್ದಾರೆ. ನವೋದಯ, ಕಿತ್ತೂರು ರಾಣಿ ಚನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಆಯ್ಕೆಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗುತ್ತಿದ್ದಾರೆ. ಪ್ರತಿ ವರ್ಷವೂ ಉಚಿತವಾಗಿ ಶೈಕ್ಷಣಿಕ ಪ್ರವಾಸವನ್ನು ಹಮ್ಮಿಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ಸಾಲಿಗೆ ಆಗುವಷ್ಟು ಶೈಕ್ಷಣಿಕ ಸಾಮಗ್ರಿಗಳು, ಟೂಥ್ ಪೇಸ್ಟ್, ಬ್ರಶ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಖಾಸಗಿ ಶಾಲೆಗಳಂತೆಯೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಟೈ, ಬೆಲ್ಟ್ ಗಳನ್ನು ನೀಡಲಾಗುತ್ತಿದೆ. ಒಂದನೇ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ದೊರೆಯುತ್ತಿದೆ.

ಗ್ರಾಮದಿಂದ ಹೊರಗೆ ಬೆಟ್ಟದ ಮೇಲಿರುವ ಇರುಳಿಗ ಸಮುದಾಯದ ಮಕ್ಕಳ ಮನವೊಲಿಸಿ ಅವರನ್ನು ಶಾಲೆಗೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಮಗಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿದ್ದಾರೆ.

‘ಶಿಕ್ಷಕ ಕೆಲಸಕ್ಕೆ ಸೇರಿ 23 ವರ್ಷವಾಯಿತು. ನನ್ನ ಪತ್ನಿ, ತಮ್ಮ, ತಂಗಿ ಎಲ್ಲರೂ ಶಿಕ್ಷಕ ವೃತ್ತಿಯಲ್ಲಿದ್ದಾರೆ. ನಾನು ಕೆಲಸ ಮಾಡಿದ ಶಾಲೆಗಳಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡಿದ್ದೇನೆ. ಈ ಶಾಲೆಯಲ್ಲಿ ನನ್ನ ಜತೆಗೆ ಇಬ್ಬರು ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಸಹಕಾರ ನೀಡಿದ್ದಾರೆ’ ಎಂದು ಶಿಕ್ಷಕ ವಿ. ವೀರೇಶಮೂರ್ತಿ 'ಪ್ರಜಾವಾಣಿ'ಗೆ ತಿಳಿಸಿದರು.

‘ಶಿಕ್ಷಕ ವೃತ್ತಿಯ ಜತೆಗೆ ಶಾಲೆ ಹಾಗೂ ಗ್ರಾಮದ ಅಭಿವೃದ್ಧಿಗೂ ಒತ್ತು ನೀಡಿದ್ದೇನೆ. ಇಲ್ಲಿನ ಬೆಟ್ಟದ ಮೇಲಿರುವ ಇರುಳಿಗ ಸಮುದಾಯದ ಮಕ್ಕಳನ್ನು ಅವರ ಮನವೊಲಿಸಿ ಶಾಲೆಗೆ ದಾಖಲಿಸಿದ್ದೇನೆ. ಅವರು ಬೆಟ್ಟದ ಮೇಲೆ ವಾಸಿಸಲು ಪ್ರಾರಂಭಿಸಿ ನಾಲ್ಕು ವರ್ಷವಾಯಿತು, ಅವರಿಗೆ ಈಗಲೂ ಮತದಾನದ ಗುರುತಿನ ಚೀಟಿ ಇಲ್ಲ, ಪಡಿತರ ಚೀಟಿಯೂ ಇಲ್ಲ. ಕಳೆದ ಬಾರಿ ನಾನೇ ಅವರ ಮಾಹಿತಿಯನ್ನು ತೆಗೆದುಕೊಂಡು ಹೋಗಿ ಮತದಾನ ಗುರುತಿನ ಚೀಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಕೊಟ್ಟಿದ್ದೆ’ ಎಂದರು.

‘ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಮೊದಲ ಆದ್ಯತೆ ನೀಡುತ್ತಿದೆ. ಜನರ ಮನಸ್ಸಿನಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಇರುವ ತಾತ್ಸಾರ ಮನೋಭಾವನೆ ಹೋಗಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿ ಹೆಚ್ಚಾಗುತ್ತದೆ’ ಎಂದರು.

ಇರುಳಿಗ ಮಕ್ಕಳಿಗೆ ಪ್ರೇರಣೆ
‘ನಮಗೆ ಇರಲು ಜಾಗವಿಲ್ಲ. ಈ ಬೆಟ್ಟದ ಮೇಲೆ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದೇವೆ. ರೇಷನ್ ಕಾರ್ಡ್, ಮತದಾರರ ಚೀಟಿ ಕೊಟ್ಟಿಲ್ಲ. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ವೀರೇಶಮೂರ್ತಿ ಮೇಷ್ಟ್ರು ಬಂದು ನಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡಿದ್ದಾರೆ. ಮಕ್ಕಳು ಶಾಲೆಗೆ ಹೋಗದಿದ್ದರೆ ಅವರೇ ಬಂದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಾರೆ’ ಎಂದು ಇರುಳಿಗ ಸಮುದಾಯದ ನಾಗಪ್ಪ, ಸಾಕಮ್ಮ ತಿಳಿಸಿದರು.

**
ವೀರೇಶ ಮೂರ್ತಿ ಶಿಕ್ಷಕರಾಗಿ ಬಂದ ನಂತರ ಶಾಲೆ ಉತ್ತಮವಾಗಿ ನಡೆಯುತ್ತಿದೆ. ಖಾಸಗಿ ಶಾಲೆಗಳಲ್ಲಿ ಸಿಗುವ ಸೌಕರ್ಯಗಳು ಇಲ್ಲಿಯೂ ಸಿಗುತ್ತಿವೆ
- ಕೆ. ರಮೇಶ್, ಎಸ್‌ಡಿಎಂಸಿ ಅಧ್ಯಕ್ಷ

Post Comments (+)