ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಬೋಧಕ ಮತದಾರರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡೊ

ರಂಗೇರಿದ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆ: ಇತರ ಪದವೀಧರರತ್ತ ಅಷ್ಟಕಷ್ಟೇ ಚಿತ್ತ
Published 29 ಮೇ 2024, 4:30 IST
Last Updated 29 ಮೇ 2024, 4:30 IST
ಅಕ್ಷರ ಗಾತ್ರ

ರಾಮನಗರ: ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ವಿವಿಧ ಪದವೀಧರ ಬೋಧಕರಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಕಣದಲ್ಲಿರುವ 16 ಅಭ್ಯರ್ಥಿಗಳಲ್ಲಿ ಸಕ್ರಿಯವಾಗಿರುವವರು ಬೋಧಕ ಮತದಾರರ ಮೇಲೆ ಕಣ್ಣಿಟ್ಟಿದ್ದು, ಅವರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದರ ಮಧ್ಯೆ ಇತರ ಪದವೀಧರ ಮತದಾರರನ್ನು ಅಷ್ಟಾಗಿ ಕೇಳುವವರೇ ಇಲ್ಲವಾಗಿದೆ.

ಫೆಬ್ರುವರಿಯಲ್ಲಿ ನಡೆದಿದ್ದ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ನಡೆದ ಬೆನ್ನಲ್ಲೇ, ಇದೀಗ ಪದವೀಧರರ ಚುನಾವಣೆಯೂ ಎದುರಾಗಿರುವುದು ಬೋಧಕ ವರ್ಗದ ಮತದಾರರ ಬೇಡಿಕೆಯನ್ನು ಹೆಚ್ಚಿಸಿದೆ. ಪದವೀಧರರ ಮತದಾರರಲ್ಲಿ ಹೆಚ್ಚಿನವರು ಶಿಕ್ಷಕರೇ ಆಗಿರುವುದು ಇದಕ್ಕೆ ಕಾರಣ. ಹಾಗಾಗಿಯೇ, ಅಭ್ಯರ್ಥಿಗಳ ಚಿತ್ತವೆಲ್ಲಾ ಅವರತ್ತವೇ ಹರಿದಿದೆ.

ಹಾಲಿ ಸದಸ್ಯರು ಆಗಿರುವ ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿ ಅ. ದೇವೇಗೌಡ, ಕಾಂಗ್ರೆಸ್‌ನ ರಾಮೋಜಿಗೌಡ, ಪಕ್ಷೇತರರಾಗಿ ಸವಾಲೊಡ್ಡುತ್ತಿರುವ ಆರ್‌.ಎಸ್. ಉದಯ್ ಸಿಂಗ್, ಪುಟ್ಟಸ್ವಾಮಿ, ನೀಲಕಂಠಗೌಡ ಶಾಲಾ–ಕಾಲೇಜುಗಳತ್ತ ತಮ್ಮ ಚಿತ್ತ ಹರಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಮಾಲೀಕರಿಂದಿಡಿದು ಅಲ್ಲಿನ ಬೋಧಕರ ಬೆಂಬಲ ಕೋರುತ್ತಿದ್ದಾರೆ.

ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಪುಟ್ಟಣ್ಣ ಅವರು, ಪಕ್ಷದ ಅಭ್ಯರ್ಥಿ ರಾಮೋಜಿಗೌಡ ಬೆನ್ನಿಗೆ ನಿಂತಿದ್ದಾರೆ. ಶಿಕ್ಷಕರ ವಲಯದಲ್ಲಿ ಪ್ರಬಲ ಹಿಡಿತ ಹೊಂದಿರುವ ಪುಟ್ಟಣ್ಣ ಅವರನ್ನೇ ರಾಮೋಜಿ ನೆಚ್ಚಿಕೊಂಡಿದ್ದಾರೆ. ಶಿಕ್ಷಕರ ಸಂಘಟನೆಗಳು, ಅನುದಾನಿತ ಮತ್ತು ಅನುದಾನ ರಹಿತ ಶಾಲಾ–ಕಾಲೇಜುಗಳ ಸಂಘ–ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡು ಮತ ಯಾಚಿಸುತ್ತಿದ್ದಾರೆ.

ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದಿರುವ ದೇವೇಗೌಡ ಅವರು, ಬಿಜೆಪಿ ಮತಗಳ ಜೊತೆಗೆ ಜೆಡಿಎಸ್‌ ಮತಗಳ ಕ್ರೋಢೀಕರಣಗೊಂಡು ತಮ್ಮ ಗೆಲುವಿನ ಹಾದಿ ಸುಲಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಆದರೂ, ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಜೊತೆ ನಿಕಟ ಸಂಪರ್ಕ ಸಾಧಿಸಿ ತಮ್ಮ ಮತಬ್ಯಾಂಕ್‌ ಬಲಪಡಿಸಿಕೊಳ್ಳುತ್ತಿದ್ದಾರೆ.

ಈ ಸಲದ ಚುನಾವಣೆಯಲ್ಲಿ ಪಕ್ಷಗಳ ಅಭ್ಯರ್ಥಿಗಳಷ್ಟೇ ಜೋರಾಗಿ ಪಕ್ಷೇತರ ಅಭ್ಯರ್ಥಿ ಉದಯ್ ಸಿಂಗ್ ಹೆಸರು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಆರೇಳು ತಿಂಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅವರು ಶಿಕ್ಷಕರ ಜೊತೆಗೆ ಇತರ ಪದವೀಧರರ ಮತದಾರರ ಮನೆಗೆ ಹೋಗಿ ಮತ ಯಾಚಿಸುತ್ತಿದ್ದಾರೆ. ಸಿಂಗ್ ಕಡೆಯಿಂದ ಮತದಾರರಿಗೆ ವೈಯಕ್ತಿಕ ಕರೆಗಳ ಜೊತೆಗೆ, ಮನೆಗಳಿಗೆ ಕರಪತ್ರಗಳು ತಲುಪುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT