ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲಾತಿ ಆಂದೋಲನ: ಮಕ್ಕಳಿಗೆ ಪೂರ್ಣಕುಂಭದೊಂದಿಗೆ ಸ್ವಾಗತ

Last Updated 3 ಜೂನ್ 2019, 13:30 IST
ಅಕ್ಷರ ಗಾತ್ರ

ಕೂಟಗಲ್(ರಾಮನಗರ): ಇಲ್ಲಿನ ಬಾಳಲಿಂಗೇಗೌಡನದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ಕಾರ್ಯಕ್ರಮವು ಸೋಮವಾರ ನಡೆಯಿತು.

ವಿದ್ಯಾರ್ಥಿಗಳನ್ನು ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ವೀರಗಾಸೆ ಕಲಾ ತಂಡದಿಂದ, ಅಲಕೃಂತ ಎತ್ತಿನ ಗಾಡಿಯಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು. ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ಮನೆಗೆ ಪೂರ್ಣಕುಂಭ ಹಾಗೂ ಕಲಾ ತಂಡದೊಂದಿಗೆ ತೆರಳಿ ಶಾಲೆಗೆ ಕರೆತಂದು ದಾಖಲು ಮಾಡಿಕೊಳ್ಳಲಾಯಿತು. ಜತೆಗೆ ಗ್ರಾಮದಲ್ಲಿ ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಕುರಿತು ಜಾಗೃತಿ ಮೂಡಿಸಲಾಯಿತು. ಗ್ರಾಮಸ್ಥರು ದಾಖಲಾತಿ ಆಂದೋಲನವನ್ನು ಹಬ್ಬದ ರೀತಿಯಲ್ಲಿ ಆಚರಿಸಿದರು. ಮನೆಯ ಮುಂದೆ ರಂಗೋಲಿ ಹಾಕಿ, ತಳಿರು ತೋರಣಗಳನ್ನು ಕಟ್ಟಿ ಮಕ್ಕಳನ್ನು ಸ್ವಾಗತಿಸಿದರು.

ಸರ್ಕಾರಿ ಶಾಲೆಗಳು ಉತ್ಕಷ್ಠ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಪೋಷಕರು ಖಾಸಗಿ ಶಾಲೆಗಳಿಗೆ ಮೊರೆ ಹೋಗದೆ ಸರ್ಕಾರಿ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಪ್ರತಿಯೊಂದು ಮಗುವಿಗೆ ಉತ್ತಮ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಬಿಸಿಯೂಟ, ಉಚಿತ ಬೈಸಿಕಲ್, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದು ಗ್ರಾಮೀಣ ಭಾಗದ ಪೋಷಕರು ಹೆಚ್ಚಿನ ರೀತಿಯಲ್ಲಿ ಅನುಕೂಲ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್ ತಿಳಿಸಿದರು.

ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷ ಮಾದೇಗೌಡ ಮಾತನಾಡಿ ಖಾಸಗಿ ಶಾಲೆಗಳು ಬಣ್ಣ ಬಣ್ಣದ ಪೋಷಾಕುಗಳನ್ನು ನೀಡುವ ಮೂಲಕ ಪೋಷಕರನ್ನು ಮರಳು ಮಾಡುತ್ತಿದ್ದಾರೆಯೇ ವಿನಹ ಗುಣಮಟ್ಟದ ಶಿಕ್ಷಕರಿಂದ ಮಕ್ಕಳಿಗೆ ಶಿಕ್ಷಣ ನೀಡುತ್ತಿಲ್ಲ. ಬಾಹ್ಯ ಅಂದಕ್ಕೆ ಮರಳಾಗಿ ಪೋಷಕರು ಮಕ್ಕಳ ಭವಿಷ್ಯವನ್ನು ಬಲಿಕೊಡಬಾರದು ಎಂದು ತಿಳಿಸಿದರು.

ಎಸ್‌ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಮಾತನಾಡಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ, ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ನೀಡುವ ಸೌಲಭ್ಯ ಗಳನ್ನು ಪಡೆದುಕೊಳ್ಳಬೇಕು. ಸರ್ಕಾರ ಸರ್ಕಾರಿ ಶಾಲೆಗಳ ಅಭಿ ವೃದ್ಧಿಗೆ ನೂತನ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ತಿಳಿಸಿದರು.

ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಬಿ.ಎಲ್. ಅಮೃತಾ, ಬಿ.ಎಚ್. ಭಾವನಾ, ಪಿ.ಕೆ. ಹರ್ಷಿತಾ ಹಾಗೂ ಪ್ರತಿಭಾನ್ವಿತಾ ವಿದ್ಯಾರ್ಥಿಗಳಾದ ಡಿ.ವಿ. ಪರಿಣಿತಮೂರ್ತಿ, ಬಿ.ಎಚ್. ಮುನಿಕುಮಾರ್ ಅವರನ್ನು ಸನ್ಮಾನಿಸಲಾಯಿತು. ಜತೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ, ಸಮವಸ್ತ್ರವನ್ನು ವಿತರಿಸಲಾಯಿತು.

ಶಾಲೆಯ ಮುಖ್ಯಶಿಕ್ಷಕ ವಿ. ವೀರೇಶಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಲಿಂಗಯ್ಯ, ಜಾಲಮಂಗಲ ಗ್ರಾಮ ಪಂಚಾಯಿತಿ ಪಿಡಿಒ ಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT