ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸಲಹೆ

ಹಸಿಕಸ ಗೊಬ್ಬರವನ್ನಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಿ: ಸುಭಾಷ್ ಜಿ ಆಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಸ್ಥಳೀಯ ಸಂಸ್ಥೆಗಳು ಕಸವನ್ನು ಒಣಕಸ ಹಾಗೂ ಹಸಿಕಸವನ್ನಾಗಿ ವಿಂಗಡಿಸಿ ನೀಡುವಂತೆ ವ್ಯಾಪಕ ಪ್ರಚಾರಮಾಡಿ ಹಸಿಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಕ್ರಮ ವಹಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ಸುಭಾಷ್ ಜಿ ಆಡಿ ಹೇಳಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ಶುಕ್ರವಾರ ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಘನ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿ ಪ್ರತಿ ಮನೆ ಮನೆಯಿಂದ ವಿಂಗಡಿತ ಕಸ ನೀಡುವಂತೆ ಮನವೊಲಿಸಬೇಕು ಎಂದು ತಿಳಿಸಿದರು.

ಎಲ್ಲೆಡೆಯೂ ಘನ ತ್ಯಾಜ್ಯ ನಿರ್ವಹಣೆಯ ಸಮಸ್ಯೆ ಎದುರಾಗುತ್ತಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವವರು ಹಾಗೂ ಕಸವನ್ನು ಬೇರ್ಪಡಿಸದೇ ಕೊಡುವವರ ಮೇಲೆ ದಂಡ ವಿಧಿಸಬೇಕು. ಶಾಲಾ ಮಟ್ಟದಿಂದಲೇ ಶಿಕ್ಷಣ ಇಲಾಖೆ ಘನ ತ್ಯಾಜ್ಯ ನಿರ್ವಹಣೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಹೊಸ ಬಡಾವಣೆ ನಿರ್ಮಾಣವಾಗುವಾಗಲೇ ಘನ ತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪಿಸುವುದನ್ನು ಕಡ್ಡಾಯಗೊಳಿಸಬೇಕು ಎಂದರು.

ಪ್ಲಾಸ್ಟಿಕ್ ಬಳಕೆ ತಡೆಯಲು ವ್ಯಾಪಕ ದಾಳಿ ಅತ್ಯಗತ್ಯವಾಗಿದೆ. ಯಾವುದೇ ಅಂಗಡಿಗಳಲ್ಲಿ ಮರು ಬಳಕೆಯಾಗದ ಪ್ಲಾಸ್ಟಿಕ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆ ತ್ಯಾಜ್ಯವನ್ನು ಕಡ್ಡಾಯವಾಗಿ ಪ್ರತ್ಯೇಕವಾಗಿ ಪಡೆದು ನಿರ್ವಹಿಸಬೇಕು. ಮನೆ ಮನೆಗಳಲ್ಲೇ ಹಸಿಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಸೂಕ್ತ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ನಾಗರಿಕರು ಹಾಗೂ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮುಂದಾಗಬೇಕು ಎಂದು ತಿಳಿಸಿದರು.

ಆರೋಗ್ಯ ಇಲಾಖೆ, ನಗರ ಸಭೆ, ಪುರಸಭೆ, ಜಿಲ್ಲಾ ಪಂಚಾಯಿತಿ ಹಾಗೂ ಇತರ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಪ್ರಾತ್ಯಕ್ಷಿಕೆ ವೀಕ್ಷಿಸಿದ ಅವರು, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನಿರ್ದೇಶನಗಳು ಹಾಗೂ ಪರಿಸರ ಸಂರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈಮುಹಿಲನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು