ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಕಾಯಂಗೆ ಆಗ್ರಹ: ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ

Published 23 ನವೆಂಬರ್ 2023, 9:02 IST
Last Updated 23 ನವೆಂಬರ್ 2023, 9:02 IST
ಅಕ್ಷರ ಗಾತ್ರ

ರಾಮನಗರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿ, ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಮನಗರ ಜಿಲ್ಲಾ ಘಟಕದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಳಿ ಬೆಳಿಗ್ಗೆ ಜಮಾಯಿಸಿದ ಉಪನ್ಯಾಸಕರು, ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ತಮ್ಮ ಬೇಡಿಕೆಗಳ ಕುರಿತು ಘೋಷಣೆ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ, ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಆದರ್ಶ ಮಾತನಾಡಿ, ‘ರಾಜ್ಯದಾದ್ಯಂತ ಇರುವ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 200 ಜನರಿದ್ದಾರೆ. ಸೇವಾ ಭದ್ರತೆ ಇಲ್ಲದೆ, ಕಡಿಮೆ ಸಂಬಳಕ್ಕೆ ಜೀತದಾಳುಗಳಂತೆ ದುಡಿಯುತ್ತಿರುವ ಉಪನ್ಯಾಸಕರನ್ನು ಸರ್ಕಾರ ಕೂಡಲೇ ಕಾಯಂ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಲ್ಲಿರುವ 430 ಪ್ರಥಮ ದರ್ಜೆ ಕಾಲೇಜುಗಳು ಬಹುತೇಕ ಅತಿಥಿ ಉಪನ್ಯಾಸಕರ ಕರ್ತವ್ಯವನ್ನು ಅವಲಂಬಿಸಿವೆ. ಆದರೆ, ಹತ್ತಾರು ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬದುಕು ಅತಂತ್ರವಾಗಿದೆ. ಅತಿಥಿ ಎಂಬ ಅನಿಷ್ಟ ಪದ್ಧತಿಯಿಂದ ನಮ್ಮನ್ನು ಮುಕ್ತಿಗೊಳಿಸಿ ಕಾಯಂಗೊಳಿಸುವ ಮೂಲಕ, ಸೇವಾ ಭದ್ರತೆ ಒದಗಿಸಬೇಕು’ ಎಂದರು.

‘ನಮ್ಮ ಬೇಡಿಕೆ ಈಡೇರಿಸುವಂತೆ ಸತತವಾಗಿ ಎಲ್ಲಾ ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಅದರಂತೆ, ಈಗಿನ ಸರ್ಕಾರಕ್ಕೂ ಮನವಿ ಕೊಟ್ಟು ಒತ್ತಾಯಿಸಿ, ನ. 23ರವರೆಗೆ ಗಡುವು ನೀಡಿದ್ದೇವೆ. ಆದರೆ, ಬೇಡಿಕೆಗೆ ಸ್ಪಂದಿಸದಿರುವುದರಿಂದ ತರಗತಿಗಳನ್ನು ಬಹಿಷ್ಕರಿಸಿ, ಬೀದಿಗಿಳಿದು ಅನಿರ್ದಿಷ್ಟಾವಧಿ ಹೋರಾಟ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

‘ಉಪನ್ಯಾಸಕರ ಪರವಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್ತಿನ ಸದಸ್ಯರು ಸಹ ಅಧಿವೇಶನಗಳಲ್ಲಿ ಗಮನ ಸೆಳೆದಿದ್ದಾರೆ. ಇಷ್ಟಾದರೂ ಯಾವ ಸರ್ಕಾರವನ್ನೂ ನಮ್ಮನ್ನು ಕಾಯಂಗೊಳಿಸುವ ಕುರಿತು ಹೆಜ್ಜೆ ಇಟ್ಟಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಈಗಿನ ಸರ್ಕಾರವಾದರೂ ನಮಗೆ ಕಾಯಂ ಭಾಗ್ಯ ಕರುಣಿಸಬೇಕು’ ಎಂದು ಹೇಳಿದರು.

ಧರಣಿ ನಿರತರಿಂದ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿ ಮನವಿ ಸ್ವೀಕರಿಸಿದರು. ಆದರೂ, ಸಂಘದ ಸದಸ್ಯರು ಧರಣಿ ಮುಂದುವರಿಸಿದರು.

ಸಂಘದ ಅಧ್ಯಕ್ಷ ಆದರ್ಶ, ಉಪಾಧ್ಯಕ್ಷೆ ಶಿವಮ್ಮ, ಪ್ರಧಾನ ಕಾರ್ಯದರ್ಶಿ ಬೈರೇಶ್, ಜಂಟಿ ಕಾರ್ಯದರ್ಶಿ ಶಂಭುಲಿಂಗಯ್ಯ, ಖಜಾಂಚಿ ಕುಮಾರಸ್ವಾಮಿ, ಸದಸ್ಯರಾದ ಡಾ. ಅಂಕನಹಳ್ಳಿ ಪಾರ್ಥ, ಮುನಿರಾಜು, ನಾರಾಯಣಗೌಡ, ರಘು, ಮಂಜುನಾಥ, ಜನಾರ್ಧನ, ವಿನೋದ್ ಕುಮಾರ್, ಪವಿತ್ರಾ, ಶ್ರುತಿ, ವಿಜಯಲಕ್ಷ್ಮಿ, ಹೂವಮ್ಮ, ಸುಲೋಚನಾ, ಸಂತೋಷ್ ಕುಮಾರ್, ಅನಂತಸ್ವಾಮಿ ಇದ್ದರು.

‘ನುಡಿದಂತೆ ನಡೆಯಲಿ’

‘ಹಿಂದೆ ವಿರೋಧ ಪಕ್ಷದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು, ಅತಿಥಿ ಉಪನ್ಯಾಸಕರ ನಿಯೋಗವು ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಭೇಟಿ ಮಾಡಿತ್ತು. ಆಗ ಅಧಿವೇಶನದಲ್ಲಿ ನಮ್ಮ ಪರ ದನಿ ಎತ್ತಿದ್ದ ಇಬ್ಬರೂ ನಾಯಕರು, ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬೈರೇಶ್ ಹೇಳಿದರು.

‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಉಪನ್ಯಾಸಕರ ಸಮಸ್ಯೆ ಬಗೆಹರಿಸುವ ಕುರಿತು ತನ್ನ ಪ್ರಣಾಳಿಕೆಯಲ್ಲೂ ಭರವಸೆ ನೀಡಿತ್ತು. ಅದರಂತೆ, ಈಗ ಪಕ್ಷವು ಅಧಿಕಾರಕ್ಕೆ ಬಂದಿದೆ. ಹಿಂದೆ ಕೊಟ್ಟ ಭರವಸೆಯಂತೆ ಇಬ್ಬರೂ ನಾಯಕರು ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಿ ನುಡಿದಂತೆ ನಡೆಯಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT