ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮದಿಂದ ಯಶಸ್ಸು ಲಭಿಸುತ್ತದೆ: ಡಾ.ನೇತ್ರಾವತಿ

ವಿದ್ಯಾ ಪ್ರಚಾರಕ ಸಂಘದ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ
Last Updated 10 ಡಿಸೆಂಬರ್ 2019, 15:24 IST
ಅಕ್ಷರ ಗಾತ್ರ

ಕನಕಪುರ: ಯಶಸ್ಸು ಹುಟ್ಟಿನಿಂದ ಬರುವುದಿಲ್ಲ. ಸಂದರ್ಭ ಮತ್ತು ಸಮಾಜದಲ್ಲಿ ಆಗುವ ಅಪಮಾನಗಳು, ಕಠಿಣ ನಿರ್ಧಾರಗಳು ನಮ್ಮನ್ನು ಯಶಸ್ಸಿನ ಕಡೆ ಕರೆದುಕೊಂಡು ಹೋಗುತ್ತವೆ ಎಂದು ತುಮಕೂರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ. ನೇತ್ರಾವತಿ ಗೌಡ ಹೇಳಿದರು.

ಇಲ್ಲಿನ ಗ್ರಾಮಾಂತರ ವಿದ್ಯಾ ಪ್ರಚಾರಕ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ 2019-20ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ಸಮಾಜದಲ್ಲಿ ಯಶಸ್ಸು ಗಳಿಸಿರುವ ಅಥವಾ ಉನ್ನತ ಸಾಧನೆ ಮಾಡಿರುವವರ ಹಿನ್ನೆಲೆಯನ್ನು ನೀವು ತಿಳಿದುಕೊಂಡಾಗ ಇದು ಗೊತ್ತಾಗುತ್ತದೆ. ಯಶಸ್ಸು ಯಾರಿಗೂ ಸುಲಭವಾಗಿ ಸಿಗುವುದಿಲ್ಲ. ಅತ್ಯಂತ ಕಠಿಣ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಅವರು ಜೀವಮಾನದ ಸಾಧನೆಯನ್ನು ಮಾಡಿರುತ್ತಾರೆ’ ಎಂದರು.
ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಯುವಕ ಯುವತಿಯರು ಹೆಚ್ಚು ಮೊಬೈಲ್‌ಗೆ ದಾಸರಾಗಿದ್ದಾರೆ. ಅವರಿಗೆ ಹೆತ್ತ ತಂದೆ ತಾಯಿ ಬಂಧು ಬಳಗಕ್ಕಿಂತ ಮೊಬೈಲ್‌ ದೇವರಾಗಿದೆ. ಸದಾ ಮೊಬೈಲ್‌ ವೀಕ್ಷಣೆಯಲ್ಲೇ ಕಾಲ ಕಳೆಯುತ್ತಿದ್ದಾರೆ, ಮೊಬೈಲ್‌ನಿಂದ ಸಂಬಂಧಗಳು ಜಾಳಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

‘ಜೀವನ ನೀವೆಂದುಕೊಂಡಷ್ಟು ಸುಲಭವಾಗಿಲ್ಲ. ನಿಮ್ಮ ತಂದೆ ತಾಯಿ ಯಾವುದಕ್ಕೂ ನೋಯಿಸದೆ ಕೇಳುವುದಕ್ಕೂ ಮೊದಲೇ ಎಲ್ಲವನ್ನೂ ಪೂರೈಸುತ್ತಿದ್ದಾರೆ. ನಿಮ್ಮ ಭವಿಷ್ಯ ರೂಪಿಸುವುದರಲ್ಲಿ ತಮ್ಮ ಭವಿಷ್ಯವನ್ನೇ ಮರೆತಿದ್ದಾರೆ. ನಾಳೆ ನೀವೇ ತಂದೆ ತಾಯಿ ಆದಾಗ ನಿಜವಾದ ಜೀವನ ನಿಮಗೆ ಅರ್ಥವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕಾಲೇಜು ದಿನಗಳು ಎಂಬುದು ಬಣ್ಣದ ಕನಸಿನ ದಿನಗಳಲ್ಲ, ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ಮುಂದಿನ ಜೀವನದ ಗುರಿಗೆ ಅಡಿಪಾಯ ಹಾಕಿಕೊಳ್ಳುವ ದಿನಗಳಾಗಿದ್ದು, ಇನ್ನು ಮುಂದಾದರು ಒಳ್ಳೆಯ ಆಲೋಚನೆಯೊಂದಿಗೆ ಅಚಲ ಗುರಿಯೊಂದಿಗೆ ನಿಮ್ಮ ಬದುಕನ್ನು ನೀವು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.

ಆರ್‌ಇಎಸ್‌ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಬೆಂಗಳೂರು ಹಿರಿಯ ವಕೀಲ ಟಿ.ವಿ.ತಾಜ್‌ಪೀರ್‌ ಸಾಬ್‌ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ; ಎಲ್ಲ ಅವಕಾಶಗಳಿವೆ. ನಮ್ಮ ಕಾಲದಲ್ಲಿ ಹತ್ತಾರು ಕಿಲೋ ಮೀಟರ್‌ ನಡೆದುಕೊಂಡು ಹೋಗಬೇಕಿತ್ತು, ಯಾವುದೆ ಸಾರಿಗೆ ವ್ಯವಸ್ಥೆಯಾಗಲಿ, ಅನುಕೂಲಗಳಾಗಲಿ ಇರಲಿಲ್ಲ. ಸ್ಥಿತಿವಂತರಿಗೆ ಮಾತ್ರ ಶಿಕ್ಷಣ ದೊರೆಯುತ್ತಿದ್ದ ಕಾಲವದು’ ಎಂದರು.
‘ಅಂತಹ ವಿಚಾರಗಳನ್ನು ತಿಳಿಸಿದರೆ ಯಾರೋ ತಲೆತಿನ್ನುತ್ತಿದ್ದಾರೆ ಎಂದು ನಿಮಗೆ ಅನಿಸುತ್ತದೆ. ಒಮ್ಮೆ ಪೋಷಕರ ಶೈಕ್ಷಣಿಕ ವಿದ್ಯಾರ್ಹತೆ, ಪಡುವ ಕಷ್ಟವನ್ನು ತಿಳಿದುಕೊಳ್ಳಿ, ನಿಮ್ಮನ್ನು ಈ ಮಟ್ಟಕ್ಕೆ ತರಲು, ಉನ್ನತ ವ್ಯಾಸಂಗ ಮಾಡಿಸಲು ಅವರು ಎಷ್ಟು ಪರಿಶ್ರಮ ಪಡುತ್ತಿದ್ದಾರೆ ಎಂಬುದನ್ನು ತಿಳಿದುಕೊಂಡರೆ ಜೀವನ ಅರ್ಥವಾಗುತ್ತದೆ’ ಎಂದರು.

ಉನ್ನತ ವ್ಯಸಂಗ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ಪೋಷಕರ ಆಸೆಯನ್ನು ಈಡೇರಿಸಿ ಎಂದು ಸಲಹೆ ನೀಡಿದರು.
ಆರ್‌ಇಎಸ್‌ ಅಧ್ಯಕ್ಷ ಕೆ.ಬಿ.ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು. ಪ್ರಾಂಶುಪಾಲ ಕೆ.ರುದ್ರೇಶ್‌ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮಿ.ಕೆ.ಎಸ್‌, ಉಸ್ಮಾಬಾನು ಗಣ್ಯರ ಪರಿಚಯ ಮಾಡಿಕೊಟ್ಟರು.
ಶಿಕ್ಷಕಿ ನಂದಿನಿ ವಾರ್ಷಿಕ ವರದಿ ಮಂಡಿಸಿದರು. ಜ್ಞಾನಯೋಗಿ ತಂಡದವರು ನಾಡಗೀತೆ ಮತ್ತು ಸ್ಮರಣಗೀತೆಯನ್ನು ಹಾಡಿದರು. ಐಶ್ವರ್ಯ ಮತ್ತು ಶರಣ್ಯ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಕನ್ನಡ ಉಪನ್ಯಾಸಕಿ ಎಚ್‌.ಕೆ.ಪಾರ್ವತಮ್ಮ ಸ್ವಾಗತಿಸಿದರು. ಉಪಾಧ್ಯಕ್ಷ ಎಂ.ಎಲ್‌.ಶಿವಕುಮಾರ್‌, ಕಾರ್ಯದರ್ಶಿ.ಸಿ.ರಮೇಶ್‌, ನಿರ್ದೇಶಕ ಕೆ.ಎಲ್‌.ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT