ಗೋವಿಂದರಾಜು. ವಿ
ಹಾರೋಹಳ್ಳಿ: ಪುರಾತನ ಕಾಲದಿಂದಲೂ ಅಂತರ್ಜಲಕ್ಕೆ ಕೊಂಡಿಯಾಗಿದ್ದ ಹಾರೋಹಳ್ಳಿ ಕೆರೆ ವಿಷದ ಕೂಪವಾಗಿ ಮಾರ್ಪಟ್ಟು ಕಾಯಕಲ್ಪಕ್ಕಾಗಿ ಎದುರು ನೋಡುತ್ತಿದೆ.
ಪಟ್ಟಣದಲ್ಲಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ದೊಡ್ಡಕೆರೆಗೆ ಕಸದ ರಾಶಿ, ಕೋಳಿ ತ್ಯಾಜ್ಯ, ಚರಂಡಿ ನೀರು, ಶೌಚಾಲಯದ ತ್ಯಾಜ್ಯ ಸೇರಿ ಕೆರೆ ಸಂಪೂರ್ಣವಾಗಿ ವಿಷದ ಕೂಪವಾಗಿ ಮಾರ್ಪಟ್ಟು ಗಬ್ಬು ನಾರುತಿದೆ. ಕೆರೆ ಸ್ವರೂಪ ಕಾಪಾಡಬೇಕಾದ ಸ್ಥಳೀಯ ಆಡಳಿತ ಯಾವುದೇ ಕಟ್ಟುನಿಟ್ಟಿನ ಕ್ರಮ ವಹಿಸದೆ ವಿಫಲವಾಗಿರುವುದು ಎದ್ದು ಕಾಣುತ್ತಿದೆ.
ಕೆರೆಯ ವಿಸ್ತೀರ್ಣ:ಸುಮಾರು 53 ಎಕರೆ 24ಗುಂಟೆ ವಿಸ್ತೀರ್ಣದಲ್ಲಿರುವ ಹಾರೋಹಳ್ಳಿ ಕೆರೆ ಪುರಾತನ ಕಾಲದಿಂದಲೂ ಅಂತರ್ಜಲಕ್ಕೆ ಕೊಂಡಿಯಾಗಿ ದೊಡ್ಡ ಕೆರೆ ಎಂದೇ ಹೆಸರು ವಾಸಿಯಾಗಿದೆ. ಕೆರೆಯಲ್ಲಿ ಬೇಸಿಗೆ ಕಾಲದಲ್ಲೂ ನೀರು ತುಂಬಿ ತುಳುಕುತ್ತಿತ್ತು. ಹಾರೋಹಳ್ಳಿ ಮತ್ತು ಸುತ್ತಮುತ್ತಲ ಕೊಳವೆ ಬಾವಿಗಳಿಗೆ ಆಸರೆಯಾಗಿತ್ತು.
ಅಭಿವೃದ್ಧಿಯೇ ಕಂಟಕ: ಹಾರೋಹಳ್ಳಿ ಅಭಿವೃದ್ಧಿಯೇ ಕೆರೆಗೆ ಕಂಟಕವಾಗಿ ಪರಿಣಮಿಸಿದೆ. ಹಾರೋಹಳ್ಳಿ ದಿನೇ ದಿನೇ ಕೈಗಾರಿಕಾ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಜತೆಗೆ ಸಮೀಪದ ಬೆಂಗಳೂರಿನಲ್ಲಿ ಜನದಟ್ಟಣೆ ಹೆಚ್ಚಾದಂತೆಲ್ಲ ಹಾರೋಹಳ್ಳಿಯತ್ತ ಜನರು ಮುಖ ಮಾಡಿದ್ದಾರೆ. ಇದರಿಂದ ಜನಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಅಂಗಡಿ ಮುಂಗಟ್ಟು ದ್ವಿಗುಣವಾಗಿ ಉತ್ಪತ್ತಿಯಾಗುವ ತ್ಯಾಜ್ಯ ತಂದು ಕೆರೆಗೆ ಸುರಿಯುತ್ತಿರುವುದರಿಂದ ವಿಷಮ ಸ್ಥಿತಿ ನಿರ್ಮಾಣವಾಗಿದೆ.
ಕೆರೆಗೆ ಕೊಳಚೆ ನೀರು: ಹಾರೋಹಳ್ಳಿಯಲ್ಲಿ ಒಳಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯದ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಇಲ್ಲದೇ ಇರುವುದು ಕೆರೆ ನೀರು ಕಲುಷಿತಗೊಳ್ಳಲು ಮತ್ತೂಂದು ಕಾರಣ. ಚರಂಡಿ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಇಲ್ಲದೆ ಕೆರೆಗೆ ಬಿಡಲಾಗುತ್ತಿದೆ. ಒಳಚರಂಡಿ ಇಲ್ಲದೆ ಕೆಲವರು ಶೌಚದ ತ್ಯಾಜ್ಯವನ್ನು ಚರಂಡಿಗೆ ಹರಿಸುತ್ತಿದ್ದಾರೆ. ಬಸ್ ನಿಲ್ದಾಣದ ಶೌಚದ ತ್ಯಾಜ್ಯ ಹಾಗೂ ಕೆಲವು ಅಂಗಡಿ ಮಾಲೀಕರು ಶೌಚದ ತ್ಯಾಜ್ಯವನ್ನು ಚರಂಡಿ ಮೂಲಕ ಕೆರೆಗೆ ಬಿಡುತ್ತಿದ್ದಾರೆ. ಇದರಿಂದ ಕೆರೆ ಮತ್ತಷ್ಟು ಕಲುಷಿತವಾಗಿದ್ದು,ಅಂತರ್ಜಲ ವಿಷಯಗೊಳ್ಳುತ್ತಿದೆ.
ಕರೆ ಸುತ್ತಲೂ ಒತ್ತುವರಿ: ವಿಶಾಲ ಕೆರೆ ದಿನ ಕಳೆದಂತೆ ಒತ್ತುವರಿಯಾಗಿದೆ. ಕಸ ಮತ್ತು ಕಟ್ಟಡ ತೆರವುಗೊಳಿಸಿದ ಇಟ್ಟಿಗೆ ಮಣ್ಣು ಸುರಿದು ಕೆರೆಯನ್ನು ಮುಚ್ಚಿ ಆ ಜಾಗದಲ್ಲಿ ತಳ್ಳುವ ಗಾಡಿಗಳಲ್ಲಿ ಕ್ಯಾಂಟೀನ್ ವ್ಯಾಪಾರಕ್ಕೆ ಆಟೊ ನಿಲುಗಡೆಗೆ ಬಳಸಿಕೊಳ್ಳಲಾಗುತ್ತಿದೆ.
ಜನಪ್ರತಿನಿಧಿಗಳಿಗೆ ಇಲ್ಲದ ಕಾಳಜಿ: ಎಚ್.ಡಿ.ಕುಮಾರಸ್ವಾಮಿ ಹಾಗೂ ಅನಿತಾ ಕುಮಾರಸ್ವಾಮಿ, ಸಂಸದ ಡಿ.ಕೆ.ಸುರೇಶ್ ಗಮನಕ್ಕೆ ತಂದರೂ ಕೆರೆ ಅಭಿವೃದ್ಧಿಗೊಳಿಸಲು ಯಾರೊಬ್ಬರೂ ಕಾಳಜಿ ವಹಿಸಿಲ್ಲ. ಕೆರೆ ಇದ್ದೂ ಇಲ್ಲದೆ ಪ್ರಯೋಜನಕ್ಕೆ ಬಾರದಂತಾಗಿದೆ. ಇನ್ನಾದರೂ ಕೆರೆ ಉಳಿಸಲಿ ಎಂಬುದು ನಾಗರಿಕರ ಒತ್ತಾಯ.
ಹಾರೋಹಳ್ಳಿ ಕೆರೆ ಕಲುಷಿತಗೊಂಡು ಪ್ರಯೋಜನಕ್ಕೆ ಬರದಂತಾಗಿದೆ. ಮನೆಗೊಂದು ಮರ, ಊರಿಗೊಂದು ಕೆರೆ ಎಂಬಂತೆ ಕೆರೆಗೆ ಪುನರ್ ಜೀವ ನೀಡಿ ಅಭಿವೃದ್ಧಿಗೊಳಿಸಬೇಕಾಗಿದೆ. ಕೆರೆ ಅಭಿವೃದ್ಧಿಗೊಳಿಸಲು ಸುಪ್ರೀಂಕೋರ್ಟ್ ಆದೇಶವಿದ್ದರೂ ಇಲ್ಲಿನ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ.
ಹಾರೋಹಳ್ಳಿ ತಾಲ್ಲೂಕು ಕೇಂದ್ರವಾಗಿ ಘೋಷಿಸಲಾಗಿದೆ. ಗ್ರಾ.ಪಂ, ಪ.ಪಂಯಾಗಿ ಮೇಲ್ದರ್ಜೆಗೇರಿದೆ. ಆಡಳಿತ ವ್ಯವಸ್ಥೆ ಚುರುಕುಗೊಂಡು ನಗರದಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕರೆ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಹಾರೋಹಳ್ಳಿ ದೊಡ್ಡಕೆರೆ ಅಭಿವೃದ್ಧಿ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದೆ. ಉನ್ನತ ಮಟ್ಟದಲ್ಲಿ ಪ್ರಗತಿಗೊಳಿಸಲು ಅನುದಾನ ಮಂಜೂರಾಗಿದೆ. ಕೆಲ ಪ್ರಕ್ರಿಯೆ ಮಾತ್ರ ಬಾಕಿ ಉಳಿದಿದೆನಟರಾಜ್ ಮುಖ್ಯಾಧಿಕಾರಿ ಹಾರೋಹಳ್ಳಿ ಪಟ್ಟಣ ಪಂಚಾಯಿತಿ
ಕೆರೆ ಅಭಿವೃದ್ಧಿಪಡಿಸುವಂತೆ ಹಲವು ವರ್ಷಗಳಿಂದ ಒತ್ತಾಯ ಮಾಡಲಾಗಿತ್ತು. ಸರ್ಕಾರ ಹಾಗೂ ಅಧಿಕಾರಿಗಳು ಅಸಡ್ಡೆಯಿಂದ ಅಭಿವೃದ್ಧಿಯಾಗಿಲ್ಲಶ್ರೀನಿವಾಸ್ಎಚ್.ಟಿ. ಅಧ್ಯಕ್ಷರು ಹಾರೋಹಳ್ಳಿ ನಾಗರಿಕ ಹಿತ ಸಂರಕ್ಷಣಾ ಸಮಿತಿ
ಕೆರೆಗೆ ಕಲುಷಿತ ನೀರು ನೇರವಾಗಿ ಬಿಟ್ಟು ಹಾಳು ಮಾಡುತ್ತಿದ್ದು ಸರ್ಕಾರ ಕೆರೆ ಶುದ್ಧ ಮಾಡಿ ಅಭಿವೃದ್ಧಿಗೊಳಿಸಬೇಕುಗಬ್ಬಾಡಿ ಕಾಡೇಗೌಡ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.