ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲರಾ: ಮುನ್ನೆಚ್ಚರಿಕೆ ವಹಿಸಲು ಸಲಹೆ

ಗೊಲ್ಲರಹಳ್ಳಿ ಗ್ರಾಮದಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ
Published 30 ಏಪ್ರಿಲ್ 2024, 6:29 IST
Last Updated 30 ಏಪ್ರಿಲ್ 2024, 6:29 IST
ಅಕ್ಷರ ಗಾತ್ರ

ರಾಮನಗರ: ‘ಕಲುಷಿತ ನೀರು ಸೇವನೆ ಮತ್ತು ಅನಾರೋಗ್ಯಕರ ಆಹಾರ ಪದ್ದತಿಯಿಂದ ಕಾಲರಾ ಸೋಂಕು ಹರಡುತ್ತದೆ. ಆಹಾರ ಸೇವನೆ ನಂತರ ವಾಂತಿಯಾಗುವುದು, ಅತಿಯಾದ ನೀರಿನಿಂದ ಕೂಡಿದ ಬೇಧಿ, ಅತಿಸಾರದ ಪರಿಣಾಮದಿಂದಾಗಿ ದೇಹದಲ್ಲಿ ನಿಶ್ಯಕ್ತಿ, ನಿರ್ಜಲೀಕರಣದಿಂದಾಗಿ ಬಾಯಿ, ಕಣ್ಣುಗಳು ಒಣಗುವುದು, ಮೂತ್ರ ವಿಸರ್ಜನೆ ಕಡಿಮೆಯಾಗುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ’ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ ಕೆ.ಜೆ ಹೇಳಿದರು.

ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ಲಕ್ಷ್ಮೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ, ಬೇಸಿಗೆ ಮುನ್ನೆಚ್ಚರಿಕೆ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಪರೀತ ಬಾಯಾರಿಕೆ ಮತ್ತು ಸುಸ್ತು, ಅತಿಯಾದ ನಿದ್ದೆ, ತಲೆನೋವು, ಮಾಂಸಖಂಡಗಳ ಸೆಳೆತ, ಹೃದಯ ಬಡಿತ ಸಾಮಾನ್ಯಕಿಂತ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ದೇಹದ ತೂಕವು ಕಡಿಮೆಯಾಗುವುದು ಸಹ ಕಾಲರಾದ ಲಕ್ಷಗಳಾಗಿವೆ. ಯಾರಲ್ಲಾದರೂ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

‘ಸಾರ್ವಜನಿಕರು ಹಬ್ಬ, ಜಾತ್ರೆ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಾಲರಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳಾದ ಕುಡಿಯುವ ನೀರಿನ ಶುದ್ದತೆ ಬಗ್ಗೆ ಎಚ್ಚರ ವಹಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು, ಸೊಪ್ಪು ತರಕಾರಿಗಳನ್ನು ಶುದ್ದವಾದ ನೀರಿನಿಂದ ಸ್ವಚ್ಚಗೊಳಿಸಿದ ನಂತರ ಸೇವಿಸಬೇಕು. ಶೌಚಾಲಯವನ್ನು ಬಳಸಿದ ನಂತರ ಹಾಗೂ ಆಹಾರವನ್ನು ತಯಾರಿಸುವ, ಸೇವಿಸುವ ಮೊದಲು ಸಾಬೂನು ಬಳಸಿ ಕೈಯನ್ನು ಚೆನ್ನಾಗಿ ತೊಳೆಯಬೇಕು’ ಎಂದು ಹೇಳಿದರು.

‘ಹೊರಗಿನ ಆಹಾರದ ಬದಲು ಮನೆ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಅಸುರಕ್ಷಿತವಾಗಿ ತಯಾರಿಸಿದ ಹೊರಗಿನ ಆಹಾರವನ್ನು ಸೇವಿಸುವ ಮುನ್ನ ಎಚ್ಚರ ವಹಿಸಬೇಕು. ದೇಹದಲ್ಲಿ ಬಳಲಿಕೆ ಕಂಡುಬಂದರೆ ಓ.ಆರ್.ಎಸ್, ಉಪ್ಪು ಬೆರೆಸಿದ ನಿಂಬೆ ಪಾನಕ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು’ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ಮಾತನಾಡಿ, ‘ಬೇಸಿಗೆಯಲ್ಲಿ ಬಿಸಿ ಗಾಳಿಯ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಲ್ಲಿ ಬಿಸಿಲಾಘಾತದ ಸಾಧ್ಯತೆ ಇರುತ್ತದೆ. ಅದರಿಂದ ರಕ್ಷಿಸಿಕೊಳ್ಳಬೇಕಾದರೆ ಮಧ್ಯಾಹ್ನ ಶ್ರಮದಾಯಕ ಕೆಲಸಗಳನ್ನು ಮಾಡುವುದನ್ನು ಕಡಿಮೆ ಮಾಡಬೇಕು. ಹೆಚ್ಚು ಶುದ್ದ ನೀರನ್ನು ಕುಡಿಯುವುದು, ತಿಳಿ ಹತ್ತಿ ಬಟ್ಟೆಯನ್ನು ಧರಿಸಬೇಕು. ಓ.ಆರ್.ಎಸ್ ಹಾಗೂ ಎಳನೀರು ಕುಡಿಯಬೇಕು’ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಶ್ವೇತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಾಸಪ್ಪ, ಎಪಿಡೆಮೋಲಜಿಸ್ಟ್ ನಿವೇದಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT