ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಮ್ಮ ನೀರಿನ ಹಕ್ಕಿಗ್ಯಾಕೆ ಅವರ ವಿರೋಧ...?

ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ; ಯೋಜನೆ ಪರ–ವಿರುದ್ಧ ಹೆಚ್ಚಿದ ಹೋರಾಟದ ಕಾವು
ಸುಧೀಂದ್ರ ಸಿ.ಕೆ
Published 3 ಜೂನ್ 2024, 4:54 IST
Last Updated 3 ಜೂನ್ 2024, 4:54 IST
ಅಕ್ಷರ ಗಾತ್ರ

ಮಾಗಡಿ: ರಾಮನಗರ ಮತ್ತು ತುಮಕೂರು ಅಕ್ಕಪಕ್ಕದ ಜಿಲ್ಲೆಗಳು. ಹಲವು ವಿಷಯದಲ್ಲಿ ಕೊಡು–ಕೊಳ್ಳುವಿಕೆ ಇರುವ ಈ ಜಿಲ್ಲೆಗಳ ಮಧ್ಯೆ ಕೆಲ ದಿನಗಳ ನಡುವೆ ‘ಶೀತಲ ಸಮರ’ ಶುರುವಾಗಿದೆ. ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಈ ಸಮರಕ್ಕೆ ಕಾರಣ.

ಅತ್ತ ತುಮಕೂರು ಭಾಗದಲ್ಲಿ ಯೋಜನೆಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ, ಇತ್ತ ಮಾಗಡಿಯಲ್ಲೂ ಯೋಜನೆ ಪರವಾದ ಹೋರಾಟದ ಕಿಚ್ಚು ಹೊತ್ತಿಕೊಂಡಿದೆ. ಎರಡೂ ಕಡೆ ನಡೆಯುತ್ತಿರುವ ಪರ–ವಿರೋಧದ ಹೋರಾಟದಲ್ಲಿ ಜನಪ್ರತಿನಿಧಿಗಳು, ಸ್ವಾಮೀಜಿಗಳು, ರೈತ ಸಂಘ ಸೇರಿದಂತೆ ವಿವಿಧ ಸಂಘ–ಸಂಸ್ಥೆ, ನಾಗರಿಕ ಸಂಘಟನೆಗಳು ಬೆಂಬಲ ಸೂಚಿಸಿ ಪಾಲ್ಗೊಂಡಿರುವುದರಿಂದ, ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಏನಿದು ಯೋಜನೆ?: ಕಾವೇರಿ ನ್ಯಾಯಾಧೀಕರಣದ ಆದೇಶದಂತೆ ಹೇಮಾವತಿ ನಾಲಾ ವಲಯ ಮತ್ತು ತುಮಕೂರಿಗೆ ಒಟ್ಟು 25.31 ಟಿಎಂಸಿ ಅಡಿ ನೀರು ನಿಗದಿಯಾಗಿದೆ. ಅದರಂತೆ ನಾಲಾ ವಲಯದಲ್ಲಿರುವ ಹಾಸನ, ಮಂಡ್ಯ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳ 14 ತಾಲ್ಲೂಕುಗಳಿಗೆ ಸ್ಥಳಗಳಿಗೆ ನೀರು ಹಂಚಿಕೆಯಾಗಿದೆ.

ಇದರಲ್ಲಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ 66 ಕೆರೆಗಳಿಗೆ ನೀರು ತುಂಬಿಸುವುದು ಸಹ ಸೇರಿದೆ. ಹೇಮಾವತಿ ನೀರಿಗಾಗಿ ತಾಲ್ಲೂಕಿನಲ್ಲಿ ಹಿರಿಯ ರಾಜಕಾರಣಿ ದಿವಂಗತ ಟಿ.ಎ. ರಂಗಯ್ಯ ಸೇರಿದಂತೆ ಇಂದಿನ ರಾಜಕಾರಣಿಗಳವರೆಗೆ ನಡೆಸಿದ ಪ್ರಯತ್ನದ ಫಲವಾಗಿ ದಶಕಗಳ ಕನಸು ನನಸಾಯಿತು.

2016ರಲ್ಲಿ ಶಂಕುಸ್ಥಾಪನೆ: ಜಲ ಸಂಪನ್ಮೂಲ ಇಲಾಖೆಯ ಕಾವೇರಿ ನೀರಾವರಿ ನಿಗಮದ ವತಿಯಿಂದ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಹಾಗೂ ಮಾಗಡಿ ತಾಲ್ಲೂಕು ಒಳಗೊಂಡಂತೆ 83 ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ₹327 ಕೋಟಿ ಮೊತ್ತದ ‘ಶ್ರೀರಂಗ ಏತ ನೀರಾವರಿ ಯೋಜನೆ’ಗೆ 2016ರಲ್ಲಿ ಚಾಲನೆ ಸಿಕ್ಕಿತು.

ಇಲ್ಲಿನ ಕೋಟೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್, ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಹಲವು ಜನಪ್ರತಿನಿಧಿಗಳು ಶಂಕುಸ್ಥಾಪನೆಗೆ ಸಾಕ್ಷಿಯಾಗಿದ್ದರು. ಆಗ ಜೆಡಿಎಸ್‌ನಿಂದ ಶಾಸಕರಾಗಿದ್ದ ಎಚ್‌.ಸಿ. ಬಾಲಕೃಷ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

2018ರಲ್ಲಿ ಲಿಂಕ್ ಕೆನಾಲ್‌ಗೆ ಚಾಲನೆ: ಏತ ನೀರಾವರಿ ಯೋಜನೆಗೆ ಚಾಲನೆ ಸಿಕ್ಕ ಎರಡೇ ವರ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ 2018ರಲ್ಲಿ ಅಸ್ತಿತ್ವಕ್ಕೆ ಬಂತು. ಆಗ ಮುಖ್ಯಮಂತ್ರಿಯಾಗಿದ್ದ ರಾಮನಗರ ಜಿಲ್ಲೆಯ ಎಚ್‌.ಡಿ. ಕುಮಾರಸ್ವಾಮಿ ಮತ್ತು ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು, ₹450 ಕೋಟಿ ವೆಚ್ಚದಲ್ಲಿ ಹೇಮಾವತಿ ಯೋಜನೆಯ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್‌ ಯೋಜನೆಗೆ ಚಾಲನೆ ಕೊಟ್ಟರು. ಕುಣಿಗಲ್‌ನಿಂದ 34.5 ಕಿ.ಮೀ. ಉದ್ದದ ಪೈಪ್‌ಲೈನ್‌ ಮೂಲಕ ಮಾಗಡಿ ತಾಲ್ಲೂಕಿಗೆ ನೀರು ತರುವ ಯೋಜನೆ ಇದಾಗಿತ್ತು.

ಅನಿರೀಕ್ಷಿತ ಬೆಳವಣಿಗೆಗಳಿಂದಾಗಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆಗ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ ಅವರು ಕೆನಾಲ್ ಕಾಮಗಾರಿ ಯೋಜನೆ ವಿರೋಧಿಸಿ ಕಾಮಗಾರಿ ತಡೆದರು. ಮತ್ತೊಂದೆಡೆ ಶ್ರೀರಂಗ ಯೋಜನೆ ಕಾಮಗಾರಿ ಮುಂದುವರಿಯಿತು. ಇದರ ರೈಸಿಂಗ್ ಮೇನ್ ಪೈಪ್‌ಲೈನ್ ಕಾಮಗಾರಿ ಶೇ 80ರಷ್ಟು ಪೂರ್ಣಗೊಳ್ಳುತ್ತಾ ಬಂದಿದೆ.

ಮರು ಚಾಲನೆ, ಏರಿದ ವೆಚ್ಚ: 2023ರ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ, ಜಲ ಸಂಪನ್ಮೂಲ ಖಾತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೆನೆಗುದಿಗೆ ಬಿದ್ದಿದ್ದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ಜೀವ ಕೊಟ್ಟರು.  ಇದರೊಂದಿಗೆ ₹450 ಕೋಟಿ ಇದ್ದ ಕಾಮಗಾರಿ ವೆಚ್ಚವು ₹900 ಕೋಟಿಗೆ ಏರಿಕೆಯಾಯಿತು.

ಯೋಜನೆಗೆ ಮರುಜೀವ ಸಿಗುತ್ತಿದ್ದಂತೆ ತುಮಕೂರು ಭಾಗದಲ್ಲಿ ವಿರೋಧ ವ್ಯಕ್ತವಾಯಿತು. ಒಂದೆಡೆ ಶ್ರೀರಂಗ ಯೋಜನೆ ಪೂರ್ಣವಾಗುವ ಹಂತದಲ್ಲಿದ್ದರೆ, ಮತ್ತೊಂದೆಡೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಡಪ ಬಳಿಯ ಡಿ. ರಾಂಪುರ ಸಮೀಪ ಲಿಂಕ್ ಕೆನಾಲ್ ಕಾಮಗಾರಿ ಶುರುವಾಯಿತು. ಇದರಿಂದಾಗಿ, ನಮಗೆ ಹಂಚಿಕೆಯಾಗಿರುವ ನೀರೇ ಪೂರ್ಣ ಪ್ರಮಾಣದಲ್ಲಿ ತಲುಪುತ್ತಿಲ್ಲ. ಹೀಗಿರುವಾಗ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ, ನಮ್ಮ ಪಾಲಿನ ನೀರನ್ನು ಮಾಗಡಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುತ್ತದೆ ಎಂಬ ಕೂಗು ಎದ್ದಿದೆ.

ಯೋಜನೆಯ ಪರ–ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ರಾಜಕೀಯದ ಸ್ಪರ್ಶವೂ ಸಿಕ್ಕಿದೆ. ಪಕ್ಷ ರಾಜಕಾರಣವೂ ಶುರುವಾಗಿದೆ. ಎರಡೂ ಭಾಗಗಳ ಜನರಿಗೆ ಯೋಜನೆಯು ಭಾವನಾತ್ಮಕ ವಿಷಯವಾಗಿದೆ. ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ತಮ್ಮ ಜನರ ಪರ ನಿಂತಿದ್ದಾರೆ. ದಿನದಿಂದ ದಿನಕ್ಕೆ ಹೋರಾಟದ ಕಾವು ಏರಿಕೆಯಾಗುತ್ತಿದ್ದು, ಎರಡೂ ಕಡೆಯವರನ್ನು ಕರೆದು ಸರ್ಕಾರವೇ ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ’ ಎಂದು ರೈತ ಸಂಘದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೇಮಾವತಿ ನೀರು ಹರಿಸುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಪರವಾಗಿ ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್‌ ಬಳಿ ಇತ್ತೀಚೆಗೆ ರೈತರು ನಡೆಸಿದ್ದ ಪ್ರತಿಭಟನೆ
ಹೇಮಾವತಿ ನೀರು ಹರಿಸುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಪರವಾಗಿ ಮಾಗಡಿ ತಾಲ್ಲೂಕಿನ ಮರೂರು ಹ್ಯಾಂಡ್ ಪೋಸ್ಟ್‌ ಬಳಿ ಇತ್ತೀಚೆಗೆ ರೈತರು ನಡೆಸಿದ್ದ ಪ್ರತಿಭಟನೆ
ಎ.ಎಚ್. ಬಸವರಾಜು ರಾಜ್ಯ ಉಪಾಧ್ಯಕ್ಷ ಬಿಜೆಪಿ ಒಬಿಸಿ ಮೋರ್ಚಾ
ಎ.ಎಚ್. ಬಸವರಾಜು ರಾಜ್ಯ ಉಪಾಧ್ಯಕ್ಷ ಬಿಜೆಪಿ ಒಬಿಸಿ ಮೋರ್ಚಾ
ಎ. ಮಂಜುನಾಥ್ ಜೆಡಿಎಸ್‌ ಮಾಜಿ ಶಾಸಕ ಮಾಗಡಿ
ಎ. ಮಂಜುನಾಥ್ ಜೆಡಿಎಸ್‌ ಮಾಜಿ ಶಾಸಕ ಮಾಗಡಿ
ಎಚ್.ಸಿ. ಬಾಲಕೃಷ್ಣ ಶಾಸಕ ಮಾಗಡಿ
ಎಚ್.ಸಿ. ಬಾಲಕೃಷ್ಣ ಶಾಸಕ ಮಾಗಡಿ
ಎಚ್.ಎಂ. ರೇವಣ್ಣ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಎಚ್.ಎಂ. ರೇವಣ್ಣ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ
ಹೊಸಪಾಳ್ಯ ಲೋಕೇಶ್ ಅಧ್ಯಕ್ಷ ರೈತ ಸಂಘ ಮಾಗಡಿ ತಾಲ್ಲೂಕು
ಹೊಸಪಾಳ್ಯ ಲೋಕೇಶ್ ಅಧ್ಯಕ್ಷ ರೈತ ಸಂಘ ಮಾಗಡಿ ತಾಲ್ಲೂಕು
ಮಾಗಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ಯೋಜನೆಯ ಪೈಪ್‌ಲೈನ್  ಕಾಮಗಾರಿ
ಮಾಗಡಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಹೇಮಾವತಿ ಯೋಜನೆಯ ಪೈಪ್‌ಲೈನ್  ಕಾಮಗಾರಿ
ಮಾಗಡಿಗೆ ಹೇಮಾವತಿ ನೀರು ಹರಿಸುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಮಾಗಡಿಯಲ್ಲಿ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದ ಸಂದರ್ಭ
ಮಾಗಡಿಗೆ ಹೇಮಾವತಿ ನೀರು ಹರಿಸುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಮಾಗಡಿಯಲ್ಲಿ 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದ ಸಂದರ್ಭ

2018ರಲ್ಲಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಚಾಲನೆ ಮಾಗಡಿಯ 66 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಯೋಜನೆ ಯೋಜನೆಗೆ ತಡೆ ಹಿಡಿದಿದ್ದ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ 2023ರಲ್ಲಿ ಯೋಜನೆಗೆ ಮರುಜೀವ ಕೊಟ್ಟ ಕಾಂಗ್ರೆಸ್ ಸರ್ಕಾರ

‘ಜೆಡಿಎಸ್–ಬಿಜೆಪಿ ನಾಯಕರು ತಿಳಿವಳಿಕೆ ಹೇಳಲಿ’ ‘ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ಪೂರ್ಣವಾದರೆ ನಮಗೆ ಬರಬೇಕಾದ ಹೇಮಾವತಿ ನೀರು ಸರಾಗವಾಗಿ ಬರುತ್ತದೆ. ಇದರಿಂದ 63 ಕೆರೆಗಳಿಗೆ ನೀರು ತುಂಬಿಸಬಹುದು. ಹಂಚಿಕೆಯಾಗಿರುವ ನೀರನ್ನಷ್ಟೇ ನಾವು ಕೇಳುತ್ತಿದ್ದೇವೆ. ತುಮಕೂರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ರಾಮನಗರ ಜಿಲ್ಲೆಯ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ತಮ್ಮ ಪಕ್ಷದ ನಾಯಕರಿಗೆ ವಿರೋಧ ವ್ಯಕ್ತಪಡಿಸದಂತೆ ತಿಳಿವಳಿಕೆ ಹೇಳಬೇಕು. ನಮ್ಮ ನೀರಿನ ಹಕ್ಕು ಕಸಿದುಕೊಳ್ಳಲು ಮುಂದಾದರೆ ನಮಗೂ ಹೋರಾಟ ಗೊತ್ತಿದೆ. ಜೊತೆಗೆ ನ್ಯಾಯಾಲಯದ ಮೂಲಕ ನಮ್ಮ ಹಕ್ಕನ್ನು ಕೇಳುತ್ತೇವೆ’. - ಎಚ್.ಸಿ. ಬಾಲಕೃಷ್ಣ ಶಾಸಕ ಮಾಗಡಿ ‘ಕಾಮಗಾರಿ ಪೂರ್ಣಕ್ಕೆ ಒತ್ತಾಯಿಸಿ ಸಿಎಂ–ಡಿಸಿಎಂ ಭೇಟಿ’ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರಲ್ಲಿ ಹೇಮಾವತಿ ಯೋಜನೆಗೆ ಚಾಲನೆ ನೀಡಿದರು. ಸರ್ಕಾರ ಜಾರಿಗೆ ತಂದ ಯೋಜನೆಯನ್ನು ವಿರೋಧ ಮಾಡಲು ಬರುವುದಿಲ್ಲ. ಹೇಮಾವತಿಯಿಂದ ಮಾಗಡಿ ತಾಲ್ಲೂಕಿಗೆ ಮುಕ್ಕಾಲು ಟಿಎಂಸಿ ಅಡಿ ನೀರು ಮಂಜೂರಾಗಿದೆ. ನಾವು ನಮ್ಮ ನೀರನ್ನು ಬಿಟ್ಟು ಹೆಚ್ಚುವರಿ ಅಥವಾ ತುಮಕೂರಿನವರ ಪಾಲಿನ ನೀರನ್ನು ಕೇಳುತ್ತಿಲ್ಲ. ಇದಕ್ಕೆ ಎದುರಾಗಿರುವ ವಿರೋಧದ ಹಿಂದೆ ರಾಜಕೀಯ ಪ್ರೇರಣೆ ಇದೆ. ಅದೇನೇ ಇದ್ದರೂ ನಮ್ಮ ನೀರನ್ನು ನಾವು ಪಡೆದುಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ತಾಲ್ಲೂಕಿನ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಭೇಟಿ ಮಾಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಲಾಗುವುದು. - ಎಚ್.ಎಂ. ರೇವಣ್ಣ ಅಧ್ಯಕ್ಷ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ‘ಪೆನ್ನು–ಪೇಪರ್ ಕೊಟ್ಟಿದ್ದೇವೆ; ಯೋಜನೆ ಜಾರಿಗೊಳಿಸಲಿ’ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯವರಾದ ಡಿ.ಕೆ. ಶಿವಕುಮಾರ್ ಅವರ ಕೋರಿಕೆಯಂತೆ ಜನರು ಅವರ ಅಧಿಕಾರದ ಪೆನ್ನು–ಪೇಪರ್ ಕೊಟ್ಟಿದ್ದಾರೆ. ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಮಾಗಡಿ ತಾಲ್ಲೂಕಿಗೆ ಹೇಮಾವತಿ ನೀರನ್ನು ತರಬೇಕಷ್ಟೆ. ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ತರುತ್ತಾರೊ ಅಥವಾ ಬೇರೆ ಯಾವುದಾದರೂ ಮಾರ್ಗದಿಂದ ತರುತ್ತಾರೊ ಗೊತ್ತಿಲ್ಲ. ಇದು ಅವರ ಜವಾಬ್ದಾರಿ. ಒಟ್ಟಿನಲ್ಲಿ ಹೇಮಾವತಿ ನೀರು ತಾಲ್ಲೂಕಿಗೆ ಹರಿದು ನಮ್ಮ ಕೆರೆಗಳು ತುಂಬಬೇಕು. ತುಮಕೂರಿನವರು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ನೀರನ್ನು ನಾವು ಕೇಳುತ್ತಿದ್ದೇವೆ. ಆದರೂ ಯೋಜನೆಗೆ ಅಡ್ಡಿಪಡಿಸಿದರೆ ನ್ಯಾಯಾಲಯದ ಮೂಲಕ ಹೋರಾಟ ಮಾಡಲು ನಾವು ಸಿದ್ಧವಿದ್ದೇವೆ. ಹೇಮಾವತಿ ನೀರಿನ ಹೋರಾಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. - ಎ. ಮಂಜುನಾಥ್ ಜೆಡಿಎಸ್‌ ಮಾಜಿ ಶಾಸಕ ಮಾಗಡಿ ‘ಜನ–ಜಾನುವಾರು ನೀರಿನ ಸಮಸ್ಯೆಗೆ ಮುಕ್ತಿ’ ಹೇಮಾವತಿ ಯೋಜನೆ ಪೂರ್ಣಗೊಂಡು ತಾಲ್ಲೂಕಿನ ಕೆರೆಗಳಿಗೆ ನೀರು ಹರಿದರೆ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಸಿಗಲಿದೆ. ನಮ್ಮ ಹಕ್ಕಿನ ನೀರನ್ನು ಪಡೆಯಲು ತುಮಕೂರಿನವರು ವಿರೋಧಪಡಿಸುತ್ತಿರುವುದು ಸರಿಯಲ್ಲ. ಅವರಿಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ಆ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಿ. ಅಲ್ಲಿ ನ್ಯಾಯ ಪಡೆಯಲಿ. ಅದು ಬಿಟ್ಟು ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯ ಕಾಮಗಾರಿ ತಡೆಯುವುದು ತಪ್ಪು. ಇದನ್ನು ನೋಡುತ್ತಾ ನಾವು ಸುಮ್ಮನೆ ಕೂರುವವರಲ್ಲ. ನಾವೂ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಯೋಜನೆಯು ಮಾಜಿ ಸಚಿವರೂ ಆಗಿರುವ ಕಾಂಗ್ರೆಸ್ ನಾಯಕ ಎಚ್‌.ಎಂ. ರೇವಣ್ಣ ಅವರ ಕನಸಿನ ಕೂಸು ಕೂಡ. ಇದೀಗ ಅವರೂ ಹೋರಾಟಕ್ಕೆ ಕೈ ಜೋಡಿಸಿರುವುದು ನಮಗೆ ದೊಡ್ಡ ಶಕ್ತಿ ಬಂದಂತಾಗಿದೆ. - ಎ.ಎಚ್. ಬಸವರಾಜು ರಾಜ್ಯ ಉಪಾಧ್ಯಕ್ಷ ಬಿಜೆಪಿ ಒಬಿಸಿ ಮೋರ್ಚಾ ‘ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟ’ ‘ತುಮಕೂರಿನ ಜನಪ್ರತಿನಿಧಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದ್ಕಕಾಗಿ ಹೇಮಾವತಿ ಯೋಜನೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ನಿಜವಾಗಿಯೂ ಅವರಿಗೆ ಜನರ ಬಗ್ಗೆ ಹಾಗೂ ಅವರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ. ಸಾಧಕ–ಬಾಧಕಗಳನ್ನು ನೋಡಿಯೇ ಸರ್ಕಾರ ಯೋಜನೆ ರೂಪಿಸಿ ಜಾರಿಗೊಳಿಸಿದೆ. ಆಗೆಲ್ಲಾ ಸುಮ್ಮನಿದ್ದವರು ಈಗ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದು ಎಷ್ಟು ಸರಿ. ತುಮಕೂರಿನವರು ಹೀಗೆಯೇ ವಿರೋಧ ಮಾಡುತ್ತಾ ಹೋದರೆ ನಾವು ಪ್ರತಿಯಾಗಿ ಹೋರಾಟ ರೂಪಿಸುತ್ತೇವೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ತೆಗೆದು ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ. - ಹೊಸಪಾಳ್ಯ ಲೋಕೇಶ್ ಅಧ್ಯಕ್ಷ ರೈತ ಸಂಘ ಮಾಗಡಿ ತಾಲ್ಲೂಕು

ಯೋಜನೆ ವಿರೋಧಿಸುವವರ ವಾದವೇನು? ತುಮಕೂರು ಜಿಲ್ಲೆ ಪ್ರವೇಶಿಸುವ ಹೇಮಾವತಿ ನೀರಿಗೆ ಕುಣಿಗಲ್‌ನಿಂದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ನಿರ್ಮಿಸಿಕೊಂಡು ಮಾಗಡಿ ತಾಲ್ಲೂಕಿಗೆ ನೀರು ಕೊಂಡೊಯ್ಯುವುದರಿಂದ ನಮ್ಮ ಪಾಲಿನ ನೀರು ಸಹ ಅವರ ಪಾಲಾಗುತ್ತದೆ. ಇದರಿಂದ ತಮ್ಮ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ ಎಂಬುದು ಕೆನಾಲ್ ವಿರೋಧಿಸುತ್ತಿರುವವರ ವಾದ. ನಾಲೆ ನೀರು ತೆಗೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸದ ತುಮಕೂರಿನವರು ಪೈಪ್‌ಲೈನ್‌ ಮೂಲಕ ತ್ವರಿತವಾಗಿ ನೀರು ಪಡೆಯುವ ಯೋಜನೆ ವಿರುದ್ಧ ಹೋರಾಟ ತೀವ್ರಗೊಳಿಸಲು ಇದೇ ಕಾರಣ. ಹೇಮಾವತಿಯಿಂದ ಜಿಲ್ಲೆಗೆ 24.5 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. ಹಂಚಿಕೆ ಮಾಡಿರುವಷ್ಟು ನೀರು ಜಿಲ್ಲೆಗೆ ಯಾವ ವರ್ಷವೂ ಹರಿದು ಬಂದಿಲ್ಲ. ಇದೀಗ ಬರುತ್ತಿರುವ ನೀರಿನಲ್ಲೇ ಮಾಗಡಿಗೆ ನೀರು ತೆಗೆದುಕೊಂಡು ಹೋಗಲಾಗುತ್ತಿದೆ. ಜಿಲ್ಲೆಯಲ್ಲಿ 23 ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿದ್ದು ಮಾಗಡಿ ಭಾಗಕ್ಕೆ ನೀರು ಹರಿಸಿದರೆ ಜನರಿಗೆ ಕುಡಿಯುವ ನೀರು ಸಿಗದಾಗುತ್ತದೆ ಎಂಬ ಆತಂಕ ಅಲ್ಲಿನ ಹೋರಾಟಗಾರರದ್ದು. ಇದೇ ಕಾರಣಕ್ಕೆ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಹೋರಾಟಗಾರರು ಕಾಮಗಾರಿ ಸ್ಥಳಕ್ಕೆ ತೆರಳಿ ನಾಲೆಗೆ ಮಣ್ಣು ಹಾಕಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಣಕು ಶವಯಾತ್ರೆ ಮಾಡಿದ್ದರು. ತುಮಕೂರು ಜಿಲ್ಲೆಯ ಸಚಿವರಾದ ಜಿ. ಪರಮೇಶ್ವರ್ ಕೆ.ಎನ್. ರಾಜಣ್ಣ ಹಾಗೂ ಶಾಸಕರ ವಿರೋಧ ಆಕ್ರೋಶ ವ್ಯಕ್ತಪಡಿಸಿ ರಾಜೀನಾಮೆಗೆ ಒತ್ತಾಯಿಸಿದ್ದರು.

-ಅಂಕಿಅಂಶ.. ₹327 ಕೋಟಿ 2016ರಲ್ಲಿ ಹೇಮಾವತಿ ನೀರು ಹರಿಸುವ ಶ್ರೀರಂಗ ಏತ ನೀರಾವರಿ ಯೋಜನೆ ಮೊತ್ತ ₹450 ಕೋಟಿ 2018ರಲ್ಲಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯ ವೆಚ್ಚ ₹900 ಕೋಟಿ 2023ರಲ್ಲಿ ಕೆನಾಲ್ ಯೋಜನೆಯ ಪರಿಷ್ಕೃತ ವೆಚ್ಚ 34.5 ಕಿ.ಮೀ. ಲಿಂಕ್ ಕೆನಾಲ್ ಹಾದು ಹೋಗುವ ಉದ್ದ **** ಪಟ್ಟಿ... ಯಾರಿಗೆ? ಎಷ್ಟು ನೀರು ಹಂಚಿಕೆ? ತಾಲ್ಲೂಕು;ನೀರು (ಎಂಸಿಎಫ್‌ಟಿಗಳಲ್ಲಿ) ತಿಪಟೂರು;1690.44 ತುರುವೇಕೆರೆ;5470.51 ಚಿಕ್ಕನಾಯಕನಹಳ್ಳಿ;860 ಗುಬ್ಬಿ;4921.06 ತುಮಕೂರು;2815.11 ಕುಣಿಗಲ್;3037.11 ಚನ್ನರಾಯಪಟ್ಟಣ;374.14 ನಾಗಮಂಗಲ;4185.41 ಶಿರಾ–ಕಳ್ಳಂಬೆಳ್ಳ;900 ಮಧುಗಿರಿ–ಕೊರಟಗೆರೆ;151 ಮಾಗಡಿ;676 ಅರಸೀಕೆರೆ;70.86 ಕಡೂರು;19.22 ಹೊಸದುರ್ಗ;32.93 ಒಟ್ಟು;25.203.78  (ಎಂ.ಸಿ.ಎಫ್‌.ಟಿ= ಮಿಲಿಯನ್ ಕ್ಯುಬಿಕ್ ಫೀಟ್‌. ಒಂದು ಎಂ.ಸಿ.ಎಫ್‌.ಟಿ ಅಡಿ ಎಂದರೆ 28 ಲಕ್ಷ ಲೀಟರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT