ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯ

ಸವಲತ್ತುಗಳು ನೇರವಾಗಿ ಜನರಿಗೇ ತಲುಪಲಿ, ಅಧಿಕಾರಿಗಳ ನಿರ್ಲಕ್ಷದ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 8 ಆಗಸ್ಟ್ 2019, 13:19 IST
ಅಕ್ಷರ ಗಾತ್ರ

ಕನಕಪುರ: ‘ಇಲಾಖೆ ಕಾರ್ಯಕ್ರಮಗಳನ್ನು ರೈತರು ಸಮಗ್ರವಾಗಿ ಬಳಸಿಕೊಳ್ಳಬೇಕಾದರೆ, ಅಧಿಕಾರಿಗಳು ಪಂಚಾಯಿತಿಗೆ ಬಂದು ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು’ ಎಂದು ಕೊಟ್ಟಗಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎಸ್‌.ಸುರೇಶ್‌ ಹೇಳಿದರು.

ಹಾರೋಹಳ್ಳಿ ಹೋಬಳಿ ಕೊಟ್ಟಗಾಳು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಡೆದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ನರೇಗಾ ಯೋಜನೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬೇಕೆಂಬ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.

‘ರೇಷ್ಮೆ, ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ ಸೇರಿದಂತೆ ಅನೇಕ ಇಲಾಖೆಗಳ ಕೇಂದ್ರ ಕಚೇರಿ ಹಾರೋಹಳ್ಳಿಯಲ್ಲಿ ಇರುವುದರಿಂದ ರೈತರು ಅಲ್ಲಿಗೆ ಹೋಗಿ ಸವಲತ್ತುಗಳನ್ನು ಪಡೆಯುವುದು ಮತ್ತು ನರೇಗಾದಲ್ಲಿ ಕಾರ್ಯಕ್ರಮ ರೂಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ ಹೋಬಳಿ ಮಟ್ಟದ ಅಧಿಕಾರಿಗಳು ಪಂಚಾಯಿತಿಗೆ ಬಂದರೆ, ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ರೈತರು ಇಲ್ಲಿಗೆ ಬಂದು ಮಾಹಿತಿ ಪಡೆದು ಯೋಜನೆಗಳನ್ನು ಬಳಸಿಕೊಳ್ಳುತ್ತಾರೆ’ ಎಂದರು.

‘ನರೇಗಾ ಯೋಜನೆಯಲ್ಲಿ ಕೃಷಿ ಅಭಿವೃದ್ಧಿಗೆ, ಭೂಮಿ ಸಮತಟ್ಟು ಮಾಡಲು, ರೀಚಾರ್ಚ್‌ ಪಿಟ್‌ ನಿರ್ಮಾಣ ಮಾಡಲು, ಆ ಮೂಲಕ ಮಾನವ ದಿನಗಳನ್ನು ಸೃಜಿಸಲು ನಮ್ಮ ಪಂಚಾಯಿತಿಗೆ ಅವಕಾಶ ಕೊಡಿ. ಇಲ್ಲದಿದ್ದರೆ ಅಧಿಕಾರಿಗಳೇ ಪಂಚಾಯಿತಿಗೆ ಬಂದು ಎನ್‌ಎಂಆರ್‌ ತೆಗೆಯಬೇಕು’ ಎಂದು ಕೃಷಿ ಅಧಿಕಾರಿಗಳಲ್ಲಿ ಮನವಿ ಮಾಡಿದರು.

‘ಆಶ್ರಯ ಯೋಜನೆಯಡಿ ಮನೆ ಮಂಜೂರಾಗಿರುವ ಫಲಾನುಭವಿಗಳು, ಶೀಘ್ರವಾಗಿ ಮನೆ ನಿರ್ಮಾಣ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹವರ ಮನೆಯನ್ನು ಬ್ಲಾಕ್‌ ಲಿಸ್ಟ್‌ಗೆ ಸೇರಿಸಲಾಗುತ್ತದೆ. ಮತ್ತೆ ಅವರು ಮನೆ ಕಟ್ಟಿಕೊಳ್ಳಲು ಅಥವಾ ಹೊಸದಾಗಿ ಮನೆ ಮಂಜೂರಾತಿ ಮಾಡಿಸಿಕೊಳ್ಳಲು ಆಗುವುದಿಲ್ಲ’ ಎಂದು ಎಚ್ಚರಿಸಿದರು.

‘ಸರ್ಕಾರ ಎಲ್ಲ ಇಲಾಖೆಗಳ ಮೂಲಕ ಸವಲತ್ತುಗಳನ್ನು ನೇರವಾಗಿ ಜನತೆಗೆ ತಲುಪಿಸಲು ಮುಂದಾಗಿದೆ. ಜನತೆ ಪಂಚಾಯಿತಿಯಿಂದಲೇ ಈ ಎಲ್ಲ ಸವಲತ್ತು ಪಡೆಯಬೇಕು. ಬಹುತೇಕ ಇಲಾಖೆ ಅಧಿಕಾರಿಗಳು ಬೇಜವಬ್ದಾರಿಯಿಂದ ಸಭೆಗೆ ಗೈರಾಗಿದ್ದಾರೆ. ಅಂತಹವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ’ ಎಂದು ಸಭೆಗೆ ತಿಳಿಸಿದರು.

‘ಈ ಬಾರಿ ಪಂಚಾಯಿತಿ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿಶೇಷವಾಗಿ, ವಿಜೃಂಭಣೆಯಿಂದ ಆಚರಣೆ ಮಾಡಲು ತೀರ್ಮಾನಿಸಿದ್ದು ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಿಗೆ ಸಿಹಿ ಹಂಚುವುದರ ಜತೆಗೆ ಅವಶ್ಯ ಇರುವ ಕೆಲಸಗಳನ್ನು ಮಾಡಿಕೊಡಲಾಗುವುದು. ಸಂಬಂಧಪಟ್ಟ ಶಾಲೆಯವರು ಪಂಚಾಯಿತಿಯನ್ನು ಭೇಟಿ ಮಾಡಿ’ ಎಂದು ಮನವಿ ಮಾಡಿದರು.

ಕೃಷಿ ಅಧಿಕಾರಿ ಶ್ರೀನಿವಾಸ ಬಿ., ರೇಷ್ಮೆ ಅಧಿಕಾರಿ ಪ್ರಕಾಶ್‌ ತಮ್ಮ ಇಲಾಖೆ ಕಾರ್ಯಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ವೈದ್ಯಾಧಿಕಾರಿ ಶೈಲೇಶ್‌, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಂ.ಎ. ಲೋಕೇಶ್‌, ಮಹೇಶ್ವರ್‌, ಕಾರ್ಯದರ್ಶಿ ರಾಮಾಂಜನಪ್ಪ, ಸದಸ್ಯರಾದ ಪಿಚ್ಚನಕೆರೆ ಪುಟ್ಟಮಾದಯ್ಯ, ಕಲ್ಬಾಳ್‌ ಲಕ್ಷ್ಮಣ್‌, ಚಿಕ್ಕಕಲ್ಬಾಳ್‌ ಕೃಷ್ಣಮೂರ್ತಿ, ಪುಟ್ಟಸ್ವಾಮಿ ಭದ್ರೇಗೌಡನದೊಡ್ಡಿ, ಶ್ರೀನಿವಾಸ್‌, ಸಾಕಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT