ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಣ್ಣ, ಶಿವಶಂಕರ್‌ಗೆ ಒಲಿದ ಪುರಸ್ಕಾರ

ಜಿಲ್ಲೆಯ ಇಬ್ಬರು ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ
Last Updated 26 ಫೆಬ್ರುವರಿ 2020, 11:40 IST
ಅಕ್ಷರ ಗಾತ್ರ

ರಾಮನಗರ: 2019-20ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿಯ ಪ್ರಶಸ್ತಿಗೆ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಭಾಜನರಾಗಿದ್ದಾರೆ.

ಪೂಜಾ ಕುಣಿತವನ್ನೇ ಜೀವನದ ಉಸಿರಾಗಿಸಿಕೊಂಡಿರುವ ತಾಲ್ಲೂಕಿನ ಕೂಟಗಲ್ ಹೋಬಳಿಯ ಅಂಕನಹಳ್ಳಿ ಶಿವಣ್ಣ ಅವರಿಗೆ ಅಕಾಡೆಮಿಯ ವಾರ್ಷಿಕ ಪುರಸ್ಕಾರದ ಗೌರವ ದೊರೆತಿದೆ. ‘ಡಾ.ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿ' ಗೆ ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿರುವ ಜಾನಪದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್ ಪಾತ್ರರಾಗಿದ್ದಾರೆ.

ಪೂಜಾ ಕುಣಿತದ ಶಿವಣ್ಣ: ಮೂರನೇ ತರಗತಿಯವರೆಗೆ ಓದಿರುವ ಅಂಕನಹಳ್ಳಿ ಶಿವಣ್ಣ 15ನೇ ವಯಸ್ಸಿಗೆ ಪೂಜಾ ಕುಣಿತ ಕಲಿತರು. ಒಮ್ಮೆ ನಾಗವಾರ ಶಿವಲಿಂಗಯ್ಯ ಅವರು ಪೂಜಾ ಕುಣಿತ ಪ್ರದರ್ಶಿಸಿದ್ದು ಇವರ ಮೇಲೆ ಪ್ರಭಾವ ಬೀರಿತು. ನಂತರದ ದಿನಗಳಲ್ಲಿ ಅಭ್ಯಾಸ ಪ್ರಾರಂಭಿಸಿದರು. ರಾಗಿ ಮಾಡುವ ಕಣದಲ್ಲಿ ಮಡಕೆ, ಒನಕೆ ಮೂಲಕ, ನಂತರ ಮಕ್ಕಳನ್ನು ಎತ್ತಿಕೊಂಡು ಅಭ್ಯಾಸ ಮಾಡಿದರು. ಮೊದಲ ಪ್ರದರ್ಶನಕ್ಕೆ ₨10 ತೆಗೆದುಕೊಂಡಿದ್ದ ಇವರು ಈಗ ಒಂದು ಪ್ರದರ್ಶನಕ್ಕೆ ₨2 ಸಾವಿರ ತೆಗೆದುಕೊಳ್ಳುತ್ತಾರೆ.

ಪೂಜೆಯ ಪಟ ಹೊತ್ತು ತಮಟೆ ಬಡಿಯುವುದು, ಮಕ್ಕಳನ್ನು ಎತ್ತಿಕೊಂಡು ಕಂಕುಳಲ್ಲಿರಿಸುವುದು, ಕಣ್ಣಿನ ರೆಪ್ಪೆ ಮೂಲಕ ನೆಲದ ಮೇಲಿನ ನೋಟು ತೆಗೆಯುವುದು ಸೇರಿದಂತೆ ಹಲವು ಸಾಹಸ ಪ್ರದರ್ಶನ ನೀಡುತ್ತಾರೆ. ಕಲೆ ಹಾಗೂ ಸಂಸಾರದ ನೊಗ ಎರಡನ್ನು ಒಟ್ಟಿಗೆ ಹೊರುವ ಮೂಲಕ ಸಮತೋಲನ ಕಾಯ್ದುಕೊಂಡಿದ್ದಾರೆ. ರಾಷ್ಟ್ರದ, ರಾಜ್ಯದ ಪ್ರಮುಖ ಎಲ್ಲಾ ಉತ್ಸವಗಳಲ್ಲೂ ಇವರು ಪ್ರದರ್ಶನ ನೀಡಿದ್ದಾರೆ.

‘ಜಾನಪದ ಲೋಕದ ನಿರ್ಮಾತೃ ಎಚ್.ಎಲ್.ನಾಗೇಗೌಡರ ಪರಿಚಯವಾದುದು ನನ್ನ ಪೂಜಾ ಕುಣಿತದ ಪ್ರದರ್ಶನಕ್ಕೆ ತಿರುವು ನೀಡಿತು’ ಎಂದು ಶಿವಣ್ಣ 'ಪ್ರಜಾವಾಣಿ'ಗೆ ತಿಳಿಸಿದರು.

‘40 ವರ್ಷಗಳಿಂದ ಪೂಜಾ ಕುಣಿತ ಪ್ರದರ್ಶನವನ್ನು ರಾಷ್ಟ್ರ ಮಟ್ಟದಲ್ಲಿ ಹಲವು ಕಡೆ ನೀಡಿದ್ದೇನೆ. ಸಾವಿರಾರು ಜನರಿಗೆ ಕಲಿಸಿಕೊಟ್ಟಿದ್ದೇನೆ. ಯುವ ಸಮುದಾಯಕ್ಕೆ ಜನಪದ ಕಲೆ ಕಲಿಯಲು ಆಸಕ್ತಿ ಇದೆ. ಆದರೆ, ಕಲಿಸುವವರ ಕೊರತೆ ಇದೆ. ಜನಪದ ಕಲೆಗಳನ್ನು ಕಲಿತರೆ ಭವಿಷ್ಯವಿಲ್ಲ. ಜೀವನ ನಡೆಸಲು ಸಾಧ್ಯವಿಲ್ಲ ಎಂದು ಬಿಂಬಿಸಲಾಗುತ್ತಿದೆ. ಈಗಲೂ ನಾನು ಜನಪದ ಕಲೆಗಳ ಪ್ರದರ್ಶನದ ಮೂಲಕ ಉತ್ತಮವಾದ ಜೀವನ ನಡೆಸುತ್ತಿದ್ದೇನೆ’ ಎನ್ನುತ್ತಾರೆ ಶಿವಣ್ಣ.

‘ನನಗೆ ಜನಪದ ಕಲಾವಿದನೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಪೂಜಾ ಕುಣಿತದ ಪ್ರದರ್ಶನ ನೀಡುವುದರಿಂದ ಎಲ್ಲರೂ ನನ್ನನ್ನು ‘ಪೂಜೆ ಶಿವಣ್ಣ’ ಎಂದು ಗುರುತಿಸುತ್ತಾರೆ. ರಾಜಸ್ಥಾನ, ಹೈದರಾಬಾದ್, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದೇನೆ’ ಎಂದು ತಿಳಿಸಿದರು.

ತರಬೇತಿ: ಪೂಜಾ ಕುಣಿತವನ್ನು ಕಲಿಯಲು ಆಸಕ್ತಿ ಇರುವವರಿಗೆ ತರಬೇತಿ ನೀಡುತ್ತೇನೆ. ಜಾನಪದ ಲೋಕದಲ್ಲಿ ಈಗಲೂ ತರಬೇತಿ ನೀಡುತ್ತಿದ್ದೇನೆ ಎಂದು ತಿಳಿಸಿದರು. ‘ರಾಮನಗರ ಜಿಲ್ಲಾ ಕೇಂದ್ರದಲ್ಲಿ ಕಲಾವಿದರು ಉಳಿದುಕೊಳ್ಳಲು ಕಲಾವಿದರ ಭವನವನ್ನು ನಿರ್ಮಿಸಬೇಕು. ಇದರಿಂದ ಕಲಾವಿದರಿಗೆ ಅನುಕೂಲವಾಗುತ್ತದೆ’ ಎಂಬುದು ಅವರ ಮನವಿ.

ಶಿವಶಂಕರ್‌: ‘ತಂದೆಯವರಿಂದ ನನಗೆ ಜಾನಪದದಲ್ಲಿ ಆಸಕ್ತಿ ಮೂಡಿತು, ಇದರಿಂದ ಈ ಕ್ಷೇತ್ರದಲ್ಲಿ ಮಹತ್ವದ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು’ ಎನ್ನುತ್ತಾರೆ ಮತ್ತೊಬ್ಬ ಪ್ರಶಸ್ತಿ ಪುರಸ್ಕೃತರಾದ ವಿದ್ವಾಂಸ ಡಾ. ಚಕ್ಕೆರೆ ಶಿವಶಂಕರ್.

‘ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದು ದೇ. ಜವರೇಗೌಡರ ಬಳಿ ಹೋದಾಗ ಮೊದಲು ಹೊಟ್ಟೆ ತುಂಬಿಸುವ ಕೆಲಸ ಮಾಡು ಎಂದರು, ನಂತರ ದೇಜಗೌ ಅವರು ಕುವೆಂಪು ಅವರ ಬಳಿ ನನ್ನನ್ನು ಕರೆದುಕೊಂಡು ಹೋದಾಗ ಅವರೇ ನನ್ನನ್ನು ಚಕ್ಕೆರೆ ಶಿವಶಂಕರ್ ಎಂದು ಗುರುತಿಸಿದರು. ಕುವೆಂಪು ಅವರ ವೈಚಾರಿಕತೆಯನ್ನು, ಶಿವರಾಮ ಕಾರಂತರ ಪ್ರಯೋಗಶೀಲತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ’ ಎಂದು ತಿಳಿಸಿದರು.

‘ಎಚ್.ಎಲ್. ನಾಗೇಗೌಡ, ಜಿ. ನಾರಾಯಣ ಅವರೊಂದಿಗೆ ಕೆಲಸ ಮಾಡಿದ ತೃಪ್ತಿ ನನಗೆ ಇದೆ. ಜಾನಪದ ಲೋಕವನ್ನು ಕಟ್ಟುವಲ್ಲಿ ನಾಗೇಗೌಡರು ಪಟ್ಟ ಕಷ್ಟವನ್ನು ಕಂಡವನು ನಾನು. ಆಷಾಡದಲ್ಲಿ ಅಂತರಜಾತಿಯ ಮದುವೆಯಾದೆ. ನನ್ನ ಪ್ರಗತಿಗೆ ಪತ್ನಿಯ ಸಹಕಾರವು ಇದೆ. ನಾಗೇಗೌಡರಲ್ಲಿದ್ದ ಕೇಳುವ ಗುಣ ನಾನು ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು’ ಎಂದರು.

ಜಾನಪದ ಲೋಕವನ್ನು ಬೆಳೆಸಿದವರಲ್ಲಿ ಶಿವಶಂಕರ್ ಕೂಡ ಒಬ್ಬರು. ರಾಜ್ಯದ ಜಾನಪದ ರಕ್ಷಣೆ, ಸಂವರ್ಧನೆ, ಪ್ರಸಾರದ ಕನಸು ಕಂಡಿದ್ದ ನಾಗೇಗೌಡರ ಆಶಯಗಳನ್ನು ಸಾಕಾರಗೊಳಿಸಿದದರು. ಜಾನಪದ ವಿದ್ವಾಂಸರಿಗೆ ಹಾಗೂ ಕಲಾವಿದರಿಗೆ ವೇದಿಕೆ ಕಲ್ಪಿಸಿದರು. ಜಾನಪದ ಲೋಕವನ್ನು 'ಕಲಾವಿದರ ಕಾಶಿ' ಎಂದು ಕರೆದರು.

ಜಾನಪದ ಲೋಕದಲ್ಲಿ ಸಂಶೋಧನಾ ಕೇಂದ್ರ ಮತ್ತು ಮಹಾವಿದ್ಯಾಲಯವನ್ನು ಪ್ರಾರಂಭ ಮಾಡಿದರು. ಜಾನಪದ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿದರು. ನಾಗೇಗೌಡರು ಧ್ವನಿಮುದ್ರಿಸಿಕೊಂಡಿದ್ದ ನೂರಾರು ಧ್ವನಿಮುದ್ರಿಕೆಗಳ ಸಾಹಿತ್ಯವನ್ನು ಬರವಣಿಗೆಗೆ ಇಳಿಸಿದರು. ಜನಪ್ರಿಯ ಜಾನಪದ ಪುಸ್ತಕ ಮಾಲೆ ಯೋಜನೆ ರೂಪಿಸಿ ಜಾನಪದ ಕಲಾವಿದರ, ವಿದ್ವಾಂಸರ ಕಿರು ಪುಸ್ತಿಕೆಗಳನ್ನು ಹೊರತಂದಿದ್ದಾರೆ. ಈವರೆಗೆ 45ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಜಾನಪದ ಪರಿಷತ್ ಹಾಗೂ ಜಾನಪದ ಲೋಕದ ಕಾರ್ಯದರ್ಶಿಯಾಗಿ 16 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

ಕಲಿಯದವರಿಂದ ಕಲಿತವರಿಗೆ ಕಲಿಸುವ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಇತರರಿಗೆ ಜನಪದ ಕಲೆಗಳು ಮತ್ತು ಮೂಡಲಪಾಯ ಯಕ್ಷಗಾನದ ತರಬೇತಿ ನೀಡಿದ್ದಾರೆ. ಸಾವಿರಾರು ಮಂದಿ ಕಲಾವಿದರಿಗೆ ಮಾಸಾಶನ ಕೊಡಿಸುವಲ್ಲಿ ಶ್ರಮಿಸಿದ್ದಾರೆ. ಜಾನಪದ ಲೋಕವನ್ನು ಸಾಂಸ್ಥಿಕವಾಗಿ ಬಲಪಡಿಸುವ ಮತ್ತು ಬೌದ್ಧಿಕವಾಗಿ ಎತ್ತರಕ್ಕೇರಿಸುವ ಪ್ರಕ್ರಿಯೆಯಲ್ಲಿ ಚಕ್ಕೆರೆ ಶಿವಶಂಕರ್ ಕೊಡುಗೆ ಅಪಾರವಾಗಿದೆ. ಈಗ ಚನ್ನಪಟ್ಟಣ ತಾಲ್ಲೂಕಿನ ಸುಣ್ಣಘಟ್ಟ ಗ್ರಾಮದಲ್ಲಿ ವಾಸವಿದ್ದಾರೆ.

ಕಲಾವಿದ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ

40 ವರ್ಷಗಳಿಂದ ರಾಷ್ಟ್ರದಾದ್ಯಂತ ಪೂಜಾ ಕುಣಿತ ಪ್ರದರ್ಶನ ನೀಡುತ್ತಿದ್ದೇನೆ. ಜನಪದ ಕಲಾವಿದ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ. -ಅಂಕನಹಳ್ಳಿ ಶಿವಣ್ಣಪೂಜಾ ಕುಣಿತದ ಕಲಾವಿದ

ಕುವೆಂಪು ವೈಚಾರಿಕತೆ, ಕಾರಂತರ ಪ್ರಯೋಗಶೀಲತೆ ಅಳವಡಿಸಿಕೊಂಡಿದ್ದೇನೆ

ಜಾನಪದದಲ್ಲಿ ಆಸಕ್ತಿ ಮೂಡಿದ್ದು ನನ್ನ ತಂದೆಯಿಂದ. ಕುವೆಂಪು ಅವರ ವೈಚಾರಿಕತೆಯನ್ನು, ಶಿವರಾಮ ಕಾರಂತರ ಪ್ರಯೋಗಶೀಲತೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ -ಚಕ್ಕರೆ ಶಿವಶಂಕರ್, ಹಿರಿಯ ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT