ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರದ ‘ಕೈ’ ಕೋಟೆ ವಶಕ್ಕೆ ಜೆಡಿಎಸ್‌ ತಂತ್ರ

ಚನ್ನಪಟ್ಟಣದತ್ತ ಡಿಕೆಶಿ ದೃಷ್ಟಿ ಹರಿಸಿದ ಬೆನ್ನಲ್ಲೇ ಕನಕಪುರದಲ್ಲಿ ಸಕ್ರಿಯವಾದ ಜನತಾದಳ
Published : 29 ಸೆಪ್ಟೆಂಬರ್ 2024, 4:58 IST
Last Updated : 29 ಸೆಪ್ಟೆಂಬರ್ 2024, 4:58 IST
ಫಾಲೋ ಮಾಡಿ
Comments

ರಾಮನಗರ: ಉಪ ಚುನಾವಣೆ ಎದುರು ನೋಡುತ್ತಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಚನ್ನಪಟ್ಟಣವನ್ನು ‘ಕೈ’ವಶ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಒಂದೆಡೆ ಬೆವರು ಹರಿಸುತ್ತಿದ್ದರೆ, ಮತ್ತೊಂದಡೆ ಅವರ ಸ್ವಕ್ಷೇತ್ರವಾದ ಕನಕಪುರದಲ್ಲಿ ಜೆಡಿಎಸ್ ತನ್ನ ನೆಲೆ ಗಟ್ಟಿ ಮಾಡಿಕೊಳ್ಳುವಲ್ಲಿ ಕಾರ್ಯೋನ್ಮುಖವಾಗಿದೆ.

ಪಕ್ಷ ಬಲವರ್ಧನೆಗಾಗಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿರುವ ಜೆಡಿಎಸ್, ಕನಕಪುರದಲ್ಲಿ ಸದಸ್ಯತ್ವ ಹೆಚ್ಚಳಕ್ಕೆ ವಿಶೇಷ ಒತ್ತು ಕೊಟ್ಟಿದೆ. ಪಟ್ಟಣದಲ್ಲಿ ಭಾನುವಾರ ನಡೆಯಲಿರುವ ಅಭಿಯಾನದಲ್ಲಿ ಪಾಲ್ಗೊಂಡು ಪಕ್ಷಕ್ಕೆ ಬಲ ತುಂಬಲು ಎಚ್‌ಡಿಕೆ ಪುತ್ರ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ರಾಜ್ಯಮಟ್ಟದ ನಾಯಕರು ಕನಕಪುರಕ್ಕೆ ಬರುತ್ತಿದ್ದಾರೆ.

ಮೇಲಕ್ಕೇಳದ ಜೆಡಿಎಸ್: ಒಂದು ಕಾಲದಲ್ಲಿ ಜೆಡಿಎಸ್ ಕೋಟೆಯಾಗಿದ್ದ ಕನಕಪುರವನ್ನು ಜೆಡಿಎಸ್‌ನ ಪಿ.ಜಿ. ಆರ್. ಸಿಂಧ್ಯ ಪ್ರತಿನಿಧಿಸುತ್ತಿದ್ದರು. ಪಕ್ಕದ ಸಾತನೂರು ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನಿಂದ ಗೆಲ್ಲುತ್ತಿದ್ದರು. ಕ್ಷೇತ್ರ ಪುನರ್ ವಿಂಗಡಣೆಯಾದಾಗ ಕನಕಪುರದಲ್ಲಿ ಸಾತನೂರು ವಿಲೀನವಾಯಿತು. ಬಳಿಕ ಕನಕಪುರ ಶಿವಕುಮಾರ್ ‘ಕೈ’ವಶವಾಯಿತು. ಅಂದಿನಿಂದ ಕ್ಷೇತ್ರದಲ್ಲಿ ಜೆಡಿಎಸ್ ಮೇಲಕ್ಕೆದ್ದಿಲ್ಲ.

ರಾಮನಗರ ಜಿಲ್ಲೆ ರಚನೆಯಾದ ಬಳಿಕ, ಜಿಲ್ಲೆಯಲ್ಲಿ ತಮ್ಮ ಹಿಡಿತ ಸಾಧಿಸಲು ರಾಜಕೀಯ ವೈರಿಗಳಾಗಿರುವ ಎಚ್‌ಡಿಕೆ ಮತ್ತು ಡಿಕೆಶಿ ಪೈಪೋಟಿ ನಡೆಸುತ್ತಲೇ ಬಂದಿದ್ದಾರೆ. ಜಿಲ್ಲೆಯ 4 ಕ್ಷೇತ್ರಗಳ ಪೈಕಿ 3ರಲ್ಲಿ ಜೆಡಿಎಸ್ ಗೆಲ್ಲುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಚನ್ನಪಟ್ಟಣದಲ್ಲಷ್ಟೇ ಗೆದ್ದು ಒಂದು ಸ್ಥಾನಕ್ಕಿಳಿದಿದೆ.

ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿಕೆ ಮಂಡ್ಯಕ್ಕೆ ಹೋಗಿ ಗೆದ್ದು ಕೇಂದ್ರ ಸಚಿವರಾಗಿರುವುದರಿಂದ, ಚನ್ನಪಟ್ಟಣ ಖಾಲಿಯಾಗಿದೆ. ಮತ್ತೊಂದೆಡೆ, ಬೆಂಗಳೂರು ಗ್ರಾಮಾಂತರದಲ್ಲಿ ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರು, ಬಿಜೆಪಿಯಿಂದ ಕಣಕ್ಕಿಳಿದ ಎಚ್‌ಡಿಕೆ ಬಾಮೈದ ಡಾ. ಸಿ.ಎನ್. ಮಂಜುನಾಥ್ ಎದುರು ಸೋತಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ಮೇಲಾಗಿರುವುದು ಹಾಗೂ ಲೋಕಸಭಾ ಚುನಾವಣೆಯಲ್ಲಿ ಎಚ್‌ಡಿಕೆಗೆ ಕೈ ಮೇಲಾಗಿರುವುದು, ಇಬ್ಬರ ನಡುವಣ ರಾಜಕೀಯ ವೈರತ್ವಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ಅಂದಿನಿಂದ ಒಬ್ಬರನ್ನೊಬ್ಬರು ಹಣಿಯಲು ಹವಣಿಯಲು ಕಾದು ಕುಳಿತಿದ್ದಾರೆ ಎನ್ನುತ್ತಾರೆ ಸ್ಥಳೀಯ ರಾಜಕಾರಣಿಗಳು.

ತಮ್ಮನ ಸೋಲಿನ ಸೇಡು ತೀರಿಸಿಕೊಳ್ಳಲು ಡಿಕೆಶಿ ಚನ್ನಪಟ್ಟಣ ಗೆಲುವಿಗೆ ಪಣ ತೊಟ್ಟಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ಅಲ್ಲಿ ಸುರೇಶ್ ಅವರನ್ನು ಕಣಕ್ಕಿಳಿಸಲು ಅಥವಾ ತಾವೇ ನಿಲ್ಲುವ ಆಲೋಚನೆಯೂ ಅವರಲ್ಲಿದೆ. ಡಿಕೆಶಿಗೆ ತಿರುಗೇಟು ಕೊಡಲು ಎಚ್‌ಡಿಕೆ ಕೂಡ ಪ್ರತಿತಂತ್ರ ಹೆಣೆದಿದ್ದಾರೆ. ಮುಂಬರುವ ಚುನಾವಣೆ ಹೊತ್ತಿಗೆ ಕನಕಪುರದಲ್ಲಿ ಪಕ್ಷ ಬಲಪಡಿಸಿ, ಬಿಜೆಪಿ ಬೆಂಬಲದೊಂದಿಗೆ ಕಾಂಗ್ರೆಸ್ ಕೋಟೆ ಬೇಧಿಸಲು ತಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಕ್ಷೇತ್ರದಲ್ಲಿ ಸಕ್ರಿಯವಾದ ಅನಸೂಯ

ಬೆಂಗಳೂರು ಗ್ರಾಮಾಂತರದಿಂದ ಗೆದ್ದಿರುವ ಡಾ. ಸಿ.ಎನ್. ಮಂಜುನಾಥ್ ಪರವಾಗಿ, ಅವರ ಪತ್ನಿ ಅನಸೂಯ ಅವರು ಕನಕಪುರದಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿದರು. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಕಪುರದಲ್ಲೇ ಹೆಚ್ಚು ಬೀಡು ಬಿಟ್ಟು, ನಿರೀಕ್ಷೆಗೂ ಮೀರಿ ಮತಗಳು ಬರಲು ಕಾರಣರಾದರು. ಚುನಾವಣೆ ನಂತರವೂ ಅನಸೂಯ ಅವರು ಕ್ಷೇತ್ರದ ಸಂಪರ್ಕ ಬಿಟ್ಟಿಲ್ಲ. ಪತಿ ಜೊತೆ ಹಾಗೂ ಕೆಲವೊಮ್ಮೆ ತಾವೊಬ್ಬರೇ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಾ, ಬಿಜೆಪಿ–ಜೆಡಿಎಸ್ ಕಾರ್ಯಕರ್ತರಿಗೆ ಉತ್ಸಾಹ ತುಂಬುತ್ತಿದ್ದಾರೆ. ಡಿ.ಕೆ ಸಹೋದರರ ಎದುರು ನಿಲ್ಲಲಾಗದೆ ತೆರೆಮರೆಗೆ ಸರಿದಿದ್ದ ಕಾರ್ಯಕರ್ತರೀಗ ಮುನ್ನೆಲೆಗೆ ಬರತೊಡಗಿದ್ದಾರೆ. ಅನಸೂಯ ಅವರು ಬಂದಾಗಲೆಲ್ಲಾ ಹೆಚ್ಚಿನ ಕಾರ್ಯಕರ್ತರು ಸೇರತೊಡಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಡಿಕೆಶಿ ಕೋಟೆ ಬೇಧಿಸಲು, ಅವರ ನೇತೃತ್ವದಲ್ಲಿ ಈಗಿನಿಂದಲೇ ಮೈತ್ರಿಕೂಟ ತಯಾರಿ ನಡೆಸುತ್ತಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಭರವಸೆ ತಂದ ಲೋಕಸಮರದ ಮತ

ಕನಕಪುರದಲ್ಲಿ ಜೆಡಿಎಸ್ ಮತ್ತು ಬಿಜೆಪಿಯ ಉತ್ಸಾಹಕ್ಕೆ ಕಾರಣ ಲೋಕಸಭಾ ಚುನಾವಣೆಯಲ್ಲಿ ಡಾ. ಸಿ.ಎನ್. ಮಂಜುನಾಥ್ ಪಡೆದ ಮತಗಳು. 10,78,914 ಮತಗಳನ್ನು ಪಡೆದಿದ್ದ ಮಂಜುನಾಥ್ ಅವರಿಗೆ ಕನಕಪುರದಲ್ಲಿ 83,303 ಮತಗಳು ಬಂದಿದ್ದವು. ಮೈತ್ರಿಕೂಟದ 50 ಸಾವಿರ ಮತಗಳ ನಿರೀಕ್ಷೆಯ ಗಡಿ ಮೀರಿ ಹೆಚ್ಚಿನ ಮತಗಳನ್ನು ಪಡೆದರು. ಎದುರಾಳಿ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ತಮ್ಮ ಸ್ವಂತ ನೆಲೆಯಲ್ಲಿ 1,08,980 ಮತಗಳನ್ನು ಪಡೆದರು. ವಿಧಾನಸಭಾ ಚುನಾವಣೆಯಲ್ಲಿ ಅವರ ಅಣ್ಣ ಡಿಕೆಶಿ 1,21,595 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಸುರೇಶ್‌ ಕೇವಲ 25,677 ಮತಗಳನ್ನಷ್ಟೇ ಹೆಚ್ಚುವರಿಯಾಗಿ ಪಡೆದರು. ಕನಕಪುರದಲ್ಲಿ ಮತಗಳಿಕೆಯು ಬಿಜೆಪಿ–ಜೆಡಿಎಸ್‌ ಉತ್ಸಾಹ ಹೆಚ್ಚಿಸಿದೆ. ಮತ್ತಷ್ಟು ಪ್ರಯತ್ನ ಹಾಕಿದರೆ ವಿಧಾನಸಭಾ ಚುನಾವಣೆಯಲ್ಲೂ ಗೆಲ್ಲಬಹುದೆಂಬ ವಿಶ್ವಾಸ ತಂದುಕೊಟ್ಟಿದೆ.

ಚನ್ನಪಟ್ಟಣದತ್ತ ಡಿಕೆಶಿ ಹೆಚ್ಚು ದೃಷ್ಟಿ ಹರಿಸಿರುವುದು ಕೂಡ ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಆ ಕ್ಷೇತ್ರದಲ್ಲಿ ಪಡೆದಿರುವ ಮತ ಪ್ರಮಾಣ ನೆಚ್ಚಿಕೊಂಡೇ. ಎಚ್‌ಡಿಕೆ ನೆಲೆಯಾದ ಕ್ಷೇತ್ರದಲ್ಲಿ ಡಾ. ಸಿ.ಎನ್. ಮಂಜುನಾಥ್ 1,06,971 ಮತಗಳೊಂದಿಗೆ 21,614 ಮತಗಳ ಮುನ್ನಡೆ ಪಡೆದರು. ಸುರೇಶ್ ಬರೋಬ್ಬರಿ 85,357 ಮತಗಳನ್ನು ಪಡೆದರು. ವಿಧಾನಸಭಾ ಚುನಾವಣೆಯಲ್ಲಿ 96,592 ಮತಗಳನ್ನು ಪಡೆದು ಗೆದ್ದಿದ್ದ ಎಚ್‌ಡಿಕೆ ಲೀಡ್ ಕೇವಲ 15,915. ಆಗ ಬಿಜೆಪಿಯ ಯೋಗೇಶ್ವರ್ 80,677 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಗಂಗಾಧರ್ ಕೇವಲ 15,374 ಮತಗಳನ್ನಷ್ಟೇ ಗಳಿಸಿದ್ದರು. ಸುರೇಶ್‌ ಪ್ರಯತ್ನದಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಗಳಿಕೆ ಭಾರಿ ವೃದ್ಧಿಯಾಗಿದೆ. ಮತ್ತಷ್ಟು ಪ್ರಯತ್ನ ಹಾಕಿದರೆ ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿ ಡಿಕೆಶಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT