ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಶಿವರಾಮ್‌ಗೆ ಕಂಬನಿಯ ವಿದಾಯ

ಸ್ವಗ್ರಾಮ ಉರಗಹಳ್ಳಿಯಲ್ಲಿ ಅಂತ್ಯಕ್ರಿಯೆ; ಮೊಳಗಿದ ‘ಜೈ ಶಿವರಾಮ್’ ಘೋಷಣೆ
Published 1 ಮಾರ್ಚ್ 2024, 20:03 IST
Last Updated 1 ಮಾರ್ಚ್ 2024, 20:03 IST
ಅಕ್ಷರ ಗಾತ್ರ

ರಾಮನಗರ: ರಾಮನಗರ: ನಿವೃತ್ತ ಐಎಎಸ್ ಅಧಿಕಾರಿ, ನಟ ಹಾಗೂ ರಾಜಕಾರಣಿ ಕೆ. ಶಿವರಾಂ (71) ಅವರ ಅಂತ್ಯಕ್ರಿಯೆ ಸ್ವಗ್ರಾಮ ಬಿಡದಿ ಹೋಬಳಿಯ ಉರಗಹಳ್ಳಿಯಲ್ಲಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಶುಕ್ರವಾರ ನೆರವೇರಿತು. ‘ಜೈ ಭೀಮ್’, ‘ಜೈ ಶಿವರಾಂ’, ‘ಶಿವರಾಂ ಚಿರಾಯುವಾಗಲಿ’ ಎಂಬ ಘೋಷಣೆಗಳೊಂದಿಗೆ ಅವರ ಅಭಿಮಾನಿಗಳು ನೆಚ್ಚಿನ ಅಧಿಕಾರಿ ಹಾಗೂ ನಾಯಕನಿಗೆ ಕಣ್ಣೀರ ವಿದಾಯ ಹೇಳಿದರು.

ಅನಾರೋಗ್ಯದಿಂದಾಗಿ ಗುರುವಾರ ಸಂಜೆ ಮೃತಪಟ್ಟಿದ್ದ ಶಿವರಾಮ್ ಅವರ ಶವವನ್ನು ಅಭಿಮಾನಿಗಳ ದರ್ಶನಕ್ಕಾಗಿ, ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿತ್ತು. ನಂತರ, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಿ, ಸಂಜೆ 5.30ರ ಸುಮಾರಿಗೆ ಉರಗಹಳ್ಳಿಗೆ ಶವವನ್ನು
ತರಲಾಯಿತು.

ಗ್ರಾಮದಲ್ಲಿ ಶಿವರಾಂ ಅವರು ಸ್ಥಾಪಿಸಿರುವ ವಿಶ್ವಚೇತನ ಪ್ರೌಢಶಾಲೆಯ ಆವರಣದಲ್ಲಿ ಸ್ಥಳೀಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ, ಗ್ರಾಮದಲ್ಲಿ ಮೆರವಣಿಗೆ ಮೂಲಕ ತೋಟಕ್ಕೆ 7 ಗಂಟೆ ಸುಮಾರಿಗೆ ತರಲಾಯಿತು. ಹಿಂದೂ ಧರ್ಮದ ವಿಧಿ ವಿಧಾನಗಳ ಮೂಲಕ ರಾತ್ರಿ 8 ಗಂಟೆಗೆ ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆ ವೇಳೆ ಬೌದ್ಧ ಧರ್ಮದ ಪಂಚಶೀಲ ತತ್ವಗಳು ಹಾಗೂ ಅಲ್ಲಮಪ್ರಭು ಅವರ ವಚನಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು. ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶಿವರಾಂ ಅವರ ಹಿರಿಯ ಅಳಿಯ ಪ್ರದೀಪ್ ಅಂತಿಮ ವಿಧಿ–ವಿಧಾನಗಳನ್ನು ಪೂರೈಸಿದರು.

ಮುಗಿಲು ಮುಟ್ಟಿದ ರೋದನ:
ಅಂತ್ಯಕ್ರಿಯೆ ವೇಳೆ ಶಿವರಾಂ ಅವರ ಪತ್ನಿ ವಾಣಿ ಶಿವರಾಂ, ಪುತ್ರಿಯರಾದ
ಇಂಚರ, ಅಂಕುರ, ನೇಸರ ಹಾಗೂ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು. ಆಪ್ತರು ಅವರನ್ನು ಸಮಾಧಾನಪಡಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಅಭಿಮಾನಿಗಳು, ಛಲವಾದಿ ಮಹಾಸಭಾದ ಕಾರ್ಯಕರ್ತರು, ದಲಿತ ಸಂಘಟನೆಗಳ ಕಾರ್ಯಕರ್ತರು ಸಹ ಅಗಲಿದ ನಾಯಕನಿಗೆ ಮಿಡಿದರು. ಭಾವಚಿತ್ರ ಪ್ರದರ್ಶಿಸಿ ಅಭಿಮಾನ ಮೆರೆದರು.

ಈ ವೇಳೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ‘ಶಿವರಾಂ ಅವರು ಕನ್ನಡ ಭಾಷೆಯಲ್ಲಿ ಮೊದಲಿಗೆ ಐಎಎಸ್ ಪರೀಕ್ಷೆ ಪಾಸು ಮಾಡಿ ತಾಲ್ಲೂಕು ಮತ್ತು ರಾಜ್ಯಕ್ಕೆ ಕೀರ್ತಿ ತಂದರು. ಅವರ ಅಗಲಿಕೆ ನೋವು ತಂದಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಆವರಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ರಾಮಲಿಂಗಾರೆಡ್ಡಿ, ನಾನು ಮೊದಲ ಸಲ ಶಾಸಕನಾಗಿದ್ದಾಗ ಶಿವರಾಂ ಅವರು ಬೆಂಗಳೂರಿನಲ್ಲಿ ಅಧಿಕಾರಿಯಾಗಿದ್ದರು. ಅಂದಿನಿಂದಲೂ ಅವರೊಂದಿಗೆ ಉತ್ತಮ ಸ್ನೇಹವಿತ್ತು. ಅವರ ಸಾವು ನೋವು ತಂದಿದೆ

ರಾಮನಗರ ತಾಲ್ಲೂಕಿನ ಉರಗಹಳ್ಳಿಯಲ್ಲಿರುವ ತೋಟದ ಮನೆಗೆ ಶುಕ್ರವಾರ ರಾತ್ರಿ ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಮ್ ಅವರ ಶವವನ್ನು ತಂದಾಗ ಅಂತಿಮ ದರ್ಶನ ಪಡೆಯಲು ಮುಗಿಬಿದ್ದ ಜನ – ಪ್ರಜಾವಾಣಿ ಚಿತ್ರ
ರಾಮನಗರ ತಾಲ್ಲೂಕಿನ ಉರಗಹಳ್ಳಿಯಲ್ಲಿರುವ ತೋಟದ ಮನೆಗೆ ಶುಕ್ರವಾರ ರಾತ್ರಿ ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಮ್ ಅವರ ಶವವನ್ನು ತಂದಾಗ ಅಂತಿಮ ದರ್ಶನ ಪಡೆಯಲು ಮುಗಿಬಿದ್ದ ಜನ – ಪ್ರಜಾವಾಣಿ ಚಿತ್ರ
ನಾನು ಮೊದಲ ಸಲ ಶಾಸಕನಾಗಿದ್ದಾಗ ಶಿವರಾಮ್ ಅವರು ಬೆಂಗಳೂರಿನಲ್ಲಿ ಅಧಿಕಾರಿಯಾಗಿದ್ದರು. ಅಂದಿನಿಂದಲೂ ಅವರೊಂದಿಗೆ ಉತ್ತಮ ಸ್ನೇಹವಿತ್ತು. ಅವರ ಸಾವು ನೋವು ತಂದಿದೆ
– ರಾಮಲಿಂಗಾ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ

ಗಣ್ಯರಿಂದ ಅಂತಿಮ ದರ್ಶನ

ಗ್ರಾಮಕ್ಕೆ ಬಂದ ಶಿವರಾಮ್ ಅವರ ಶವದ ಅಂತಿಮ ದರ್ಶನವನ್ನು ಹಲವು ಗಣ್ಯರು ಪಡೆದರು. ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಮಾಜಿ ಸಚಿವರಾದ ಎಚ್. ಆಂಜನೇಯ ಎನ್. ಮಹೇಶ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಐಪಿಎಸ್ ಅಧಿಕಾರಿ ಹರಿಶೇಖರನ್ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ‌ಬೋಡ್ಕೆ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ‌ರೆಡ್ಡಿ ಸಮತಾ ಸೈನಿಕ ದಳದ ಡಾ. ಎಂ. ವೆಂಕಟಸ್ವಾಮಿ ಕಾಂಗ್ರೆಸ್ ಮುಖಂಡ ಕೆ. ಶೇಷಾದ್ರಿ ಶಶಿ ಸೇರಿದಂತೆ ಜಿಲ್ಲೆಯ ರಾಜಕಾರಣಿಗಳು ದಲಿತ ಪ್ರಗತಿಪರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶಿವರಾಮ್ ಅವರಿಗೆ ಅಂತಿಮ ವಿದಾಯ ಹೇಳಿದರು. ಈ ವೇಳೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್ ‘ಶಿವರಾಮ್ ಅವರು ಕನ್ನಡ ಭಾಷೆಯಲ್ಲಿ ಮೊದಲಿಗೆ ಐಎಎಸ್ ಪರೀಕ್ಷೆ ಪಾಸು ಮಾಡಿ ತಾಲ್ಲೂಕು ಮತ್ತು ರಾಜ್ಯಕ್ಕೆ ಕೀರ್ತಿ ತಂದರು. ಅವರ ಅಗಲಿಕೆ ನೋವು ತಂದಿದೆ. ಜಿಲ್ಲಾಧಿಕಾರಿ ಸಮಾಜ‌ ಕಲ್ಯಾಣ ಇಲಾಖೆ ಆಯುಕ್ತ ಸೇರಿದಂತೆ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಅವರು ಜನಮನದಲ್ಲಿ ಉಳಿಯುವಂತೆ ಕೆಲಸ ಮಾಡಿದರು. ಚಲನಚಿತ್ರಗಳಲ್ಲಿ ‌ನಟನಾಗಿ ಮತ್ತು ರಾಜಕಾರಣಿಯಾಗಿದ್ದ ಅವರ ಸಮಾಜಮುಖಿ ಚಿಂತನೆಗಳು ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT