ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ: ವೈದ್ಯರು, ಶಿಕ್ಷಕರಿಲ್ಲದ ತಾಲ್ಲೂಕಿನಲ್ಲಿ ಅಭಿವೃದ್ಧಿಗೆ ಗ್ರಹಣ

Published : 15 ಆಗಸ್ಟ್ 2024, 15:24 IST
Last Updated : 15 ಆಗಸ್ಟ್ 2024, 15:24 IST
ಫಾಲೋ ಮಾಡಿ
Comments

ಕನಕಪುರ: ‘ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಶಾಲೆಗಳಲ್ಲಿ ಶಿಕ್ಷಕರಿಲ್ಲ. ಈಗಾಗಲೇ ಪ್ರಾರಂಭಗೊಂಡಿರುವ ಅಭಿವೃದ್ಧಿ ಕೆಲಸಗಳು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿವೆ. ಕೆರೆಗಳಿಗೆ ನೀರು ತುಂಬಿಸಿಲ್ಲ. ನೂತನವಾಗಿ ನಿರ್ಮಾಣವಾಗಬೇಕಿರುವ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಆರಂಭವಾಗಿಲ್ಲ’ ಎಂದು ಬಿಜೆಪಿ ಸಂಸದ ಡಾ. ಸಿ.ಎನ್. ಮಂಜುನಾಥ್  ಬೇಸರ ವ್ಯಕ್ತಪಡಿಸಿದರು.

ಕಸಬಾ ಹೋಬಳಿ ಜವನಮ್ಮನದೊಡ್ಡಿ ಗ್ರಾಮದಲ್ಲಿ ಸಂಸದರ ಕಚೇರಿ ಉದ್ಘಾಟಿಸಿದ ಅವರು, ನಂತರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಿದರು.

‘ಕೇಂದ್ರ ಸರ್ಕಾರದಿಂದ ರಾಜ್ಯದಲ್ಲಿ ಅನುಷ್ಠಾನಗೊಳ್ಳುವ ಹೆದ್ದಾರಿ ಮತ್ತು ರೈಲ್ವೆ ಕಾಮಗಾರಿ, ಬೈಪಾಸ್ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರವು ತನ್ನ ಪಾಲಿನ ಮೊತ್ತವನ್ನು ಪಾವತಿಸಬೇಕಿದೆ. ಆದರೆ, ರಾಜ್ಯದ ಬಳಿ ಹಣವಿಲ್ಲ. ಹಾಗಾಗಿ, ಯಾವುದೇ ಹೊಸ ಕಾಮಗಾರಿಗಳನ್ನು ಮಾಡಲಾಗುತ್ತಿಲ್ಲ/ ಕೇಂದ್ರ ಸರ್ಕಾರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಹಿಂದಿನ ಸಂಸದರು ನರೇಗಾ ಯೋಜನೆಯಡಿ ನಾವೇನೊ ಸಾಧನೆ ಮಾಡಿದ್ದೇವೆ ಎಂದು ಹೇಳುತ್ತಿದ್ದರು. ಆದರೆ ತಾಲ್ಲೂಕಿನ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಈ ಸಮಸ್ಯೆಯನ್ನು ಪರಿಹರಿಸುವುದು ರಾಜ್ಯ ಸರ್ಕಾರದ ಕೆಲಸ. ಸಂಸದರಾಗಿದ್ದವರು ಮೊದಲು ಆ ಕೆಲಸ ಮಾಡಬೇಕಿತ್ತು’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು.

ಸಭೆಯಲ್ಲಿದ್ದ ಮುಖಂಡರು, ‘ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಆದರೂ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿಲ್ಲ’ ಎಂದು ದೂರಿದರು. ‘ನೂತನ ಸಂಸದರು ಗ್ರಾಮಗಳಿಗೆ ಬರುತ್ತಿಲ್ಲ, ಅಭಿವೃದ್ಧಿ ಕೆಲಸ ಮಾಡುತ್ತಿಲ್ಲವೆಂದು ಕಾಂಗ್ರೆಸಿಗರು ಗೇಲಿ ಮಾಡುತ್ತಿದ್ದಾರೆ. ನೀವು ಗ್ರಾಮಗಳಿಗೆ ಬರಬೇಕು. ನಮ್ಮ ಕುಂದು ಕೊರತೆಗಳನ್ನು ಆಲಿಸಬೇಕು’ ಎಂದು ಮುಖಂಡರು ಮನವಿ ಮಾಡಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಕೆ.ಪಿ.ಕುಮಾರ್, ಮುಖಂಡರಾದ ಚಿನ್ನಸ್ವಾಮಿ, ರಾಜೇಶ್, ವೆಂಕಟೇಶ್ (ಮುತ್ತಣ್ಣ), ಮಾಯಿಗೌಡ, ನಾರಾಯಣ್, ಆನಂದ್ ಪೈ, ನಲ್ಲಳ್ಳಿ ಕುಮಾರ್, ಸ್ಟುಡಿಯೋ ಚಂದ್ರು, ಸಿದ್ದಮರಿಗೌಡ, ತಿಮ್ಮಣ್ಣ, ಕುರುಪೇಟೆ ಲೋಕೇಶ್, ಗೇರಳ್ಳಿ ಸಣ್ಣಪ್ಪ ಸೇರಿದಂತೆ ಎರಡು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಚೇರಿ ಮುಂಭಾಗ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ಡಾ. ಮಂಜುನಾಥ್ ಸಂಸದರ ನೂತನ ಕಚೇರಿಯನ್ನು ಉದ್ಘಾಟಿಸಿದರು.

‘ಅಪಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳಬೇಡಿ’

‘ವಿರೋಧಿಗಳು ಮಾಡುವ ಅಪಪ್ರಚಾರದ ಸುದ್ದಿಗಳು ಗಾಳಿಗಿಂತ ವೇಗವಾಗಿ ಹರಡುತ್ತವೆ. ಅವುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಬೇಡ. ನಾವು ಮಾಡುವ ಕೆಲಸ ತಡವಾದರೂ ಗ್ಯಾರಂಟಿಯಾಗಿ ಆಗುತ್ತದೆ.ಕೇಂದ್ರದಿಂದ ಆಗುವ ಕೆಲಸಗಳು ತ್ವರಿತವಾಗಿ ಆಗುತ್ತವೆ. ರೈಲ್ವೆ ಕಾಮಗಾರಿಯ ಬಗ್ಗೆ ರೈಲ್ವೆ ಸಚಿವರೊಂದಿಗೆ ಮಾತನಾಡಿದ್ದೇನೆ. ರಾಜ್ಯ ಸರ್ಕಾರ ಭೂಸ್ವಾದಿನ ಪ್ರಕ್ರಿಯೆ ಮುಗಿಸಿದರೆ ಶೀಘ್ರ ಕೆಲಸ ಪ್ರಾರಂಭವಾಗಲಿದೆ’ ಎಂದು ಡಾ. ಸಿ.ಎನ್. ಮಂಜುನಾಥ್ ಹೇಳಿದರು.

‘ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿ ಖಂಡಿತವಾಗಿ ಆ ಕೆಲಸಗಳನ್ನು ನಿಗದಿತ ಸಮಯದೊಳಗೆ ಮಾಡಿಸುತ್ತೇನೆ. ಸಾರ್ವಜನಿಕರ ಕುಂದುಕೊರತೆ ಆಲಿಸಲು ಇಲ್ಲಿ ಕಚೇರಿ ಪ್ರಾರಂಭಿಸಿದ್ದೇನೆ. ನಿಮ್ಮ ಸಮಸ್ಯೆಗಳ ಜೊತೆಗೆ ಸಾರ್ವಜನಿಕರ ಸಮಸ್ಯೆಗಳ ಬಗ್ಗೆಯೂ ನೇರವಾಗಿ ನನಗೆ ತಿಳಿಸಿ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT