ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕೈ’ ಜನಾಂದೋಲನಕ್ಕೆ ಸಜ್ಜಾದ ರಾಮನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಸೇರಿ ಸಚಿವರು ಭಾಗಿ
Published 3 ಆಗಸ್ಟ್ 2024, 6:34 IST
Last Updated 3 ಆಗಸ್ಟ್ 2024, 6:34 IST
ಅಕ್ಷರ ಗಾತ್ರ

ರಾಮನಗರ: ಬಿಜೆಪಿ–ಜೆಡಿಎಸ್ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಜನಾಂದೋಲನ’ದ ಎರಡನೇ ಕಾರ್ಯಕ್ರಮ ಶನಿವಾರ ರಾಮನಗರದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಸಚಿವರು ಭಾಗವಹಿಸಲಿರುವ ಕಾರ್ಯಕ್ರಮಕ್ಕೆ ಶುಕ್ರವಾರ ಸಂಜೆಯಿಂದಲೇ ಭರದ ಸಿದ್ಧತೆ ನಡೆಯಿತು.

ಕಾರ್ಯಕ್ರಮ ನಡೆಯಲಿರುವ ನಗರದ ಹಳೇ ಬಸ್ ನಿಲ್ದಾಣ ವೃತ್ತದಲ್ಲಿ ವೇದಿಕೆ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರು ತಯಾರಿ ನಡೆಸಿದರು. ಬೆಂಗಳೂರು–ಮೈಸೂರು ಹಳೆ ಹೆದ್ದಾರಿಯುದ್ದಕ್ಕೂ ಪಕ್ಷದ ಬಾವುಟ ಹಾಗೂ ನಾಯಕರ ಫ್ಲೆಕ್ಸ್‌ಗಳನ್ನು ರಾತ್ರಿಯಿಡೀ ಅಳವಡಿಸಿದರು. ಜೊತೆಗೆ ಸ್ಥಳೀಯ ಮುಖಂಡರು ಸಿಎಂ, ಡಿಸಿಎಂ, ಸಚಿವರು ಸೇರಿದಂತೆ ತಮ್ಮ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು ಅಲ್ಲಲ್ಲಿ ರಾರಾಜಿಸಿದವು.

ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮದ ರೂಪುರೇಷೆಗಳ ಕುರಿತು ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಕ್ಕಾಗಿ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಾಮನಗರದ ಕ್ಷೇತ್ರದ ಜನರನ್ನು ಸೇರಿಸಲು ಸ್ಥಳೀಯ ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದೆ. ಕಾರ್ಯಕ್ರಮ ಶುರುವಾಗುವ ಹೊತ್ತಿಗೆ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಜನ ಕಿಕ್ಕಿರಿದು ತುಂಬಿರಬೇಕು. ಮುಖ್ಯಮಂತ್ರಿ ಭಾಗಿಯಾಗುವ ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲೂ ಮುಜುಗರವಾಗದಂತೆ ಎಚ್ಚರಿಕೆ ನೀಡಬೇಕು ಎಂದು ನಾಯಕರು ಸೂಚನೆ ನೀಡಿದ್ದಾರೆ ಎಂದು ಸ್ಥಳೀಯ ಮುಖಂಡರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT