ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಕ್ತ ವಿ.ವಿ: ಯುಟ್ಯೂಬ್‌ನಲ್ಲಿ ಸಿಗಲಿದೆ ಪಠ್ಯ’

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌. ವಿದ್ಯಾಶಂಕರ್ ಜೊತೆ ಸಂವಾದ
Last Updated 22 ಜುಲೈ 2019, 19:33 IST
ಅಕ್ಷರ ಗಾತ್ರ

ರಾಮನಗರ: ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸಲುವಾಗಿ ಯುಟ್ಯೂಬ್ ಮೂಲಕ ಬೋಧನಾ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನ ನಡೆದಿದೆ ಎಂದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಹೇಳಿದರು.

ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವವಿದ್ಯಾಲಯವು ಯುಟ್ಯೂಬ್ ನಲ್ಲಿಯೂ ಎಲ್ಲಾ ವಿಭಾಗದ ಪಠ್ಯಗಳ ಉಪನ್ಯಾಸ ನೀಡುವ ವಿಡಿಯೊಗಳನ್ನು ಅಪ್ ಲೋಡ್ ಮಾಡಲಿದೆ. ಇಂದು ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳ ಬಳಿಯೂ ಮೊಬೈಲ್ ಗಳು ಇರುತ್ತವೆ. ಅಪ್ ಲೋಡ್ ಮಾಡಿದ ವಿಡಿಯೊಗಳನ್ನು ಡೌನ್ ಲೋಡ್ ಮಾಡಿಕೊಂಡು ಯಾವಾಗ ಬೇಕಾದರೂ ನೋಡಿ ವಿಷಯಗಳನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿಯೂ ಕಲಿಕಾ ಪ್ರೋತ್ಸಾಹ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ತಿಂಗಳಿಗೊಮ್ಮೆ ಪ್ರಾದೇಶಿಕ ನಿರ್ದೇಶಕರು ಮತ್ತು ಸಂಬಂಧಿಸಿದ ವಿದ್ಯಾರ್ಥಿಗಳ ಜತೆ ವಿಡಿಯೊ ಕಾನ್ಫರೆನ್ಸ್ ಮಾಡಲು ಉದ್ದೇಶಿಸಲಾಗಿದೆ. ಪ್ರತಿ ಮನೆಮನೆಗೂ ವಿಶ್ವವಿದ್ಯಾಲಯ ತಲುಪುವಂತೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಪ್ರತ್ಯೇಕ ಮಹಿಳಾ ಸಂಪರ್ಕ ಕೇಂದ್ರ ಮತ್ತು ಗ್ರಂಥಾಲಯ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರಿ ಇಲಾಖೆಗಳ ಮುಖ್ಯಸ್ಥರ ಮೂಲಕ ಉನ್ನತ ಅಧ್ಯಯನಕ್ಕೆ ಸುತ್ತೋಲೆ ಹೊರಡಿಸುವ ಯೋಜನೆ ಕೈಗೊಳ್ಳಲಾಗಿದೆ. ಕೌಶಲಾಭಿವೃದ್ಧಿಗೆ ಪ್ರತ್ಯೇಕ ವಿಭಾಗ ರಚನೆ ಮಾಡಿ, ರಾಜ್ಯದ ಎಲ್ಲಾ ಕಡೆಗಳಲ್ಲಿ ಕೌಶಲಾಭಿವೃದ್ಧಿ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಪರೀಕ್ಷಾ ವಿಭಾಗದಲ್ಲಿ ಪ್ರತಿ ವಿಭಾಗಕ್ಕೂ ವಿಶೇಷ ಅಧಿಕಾರಿಗಳನ್ನು ನೇಮಿಸಲಾಗುವುದು. ಆನ್ ಲೈನ್ ಮತ್ತು ಆಫ್ ಲೈನ್ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ. ವಿವಿಯ ಶುಲ್ಕಗಳನ್ನು ವಿದ್ಯಾರ್ಥಿ ಇರುವಲ್ಲಿಯೇ ಪಾವತಿಸಲು ಆನ್ ಲೈನ್ ಸೌಲಭ್ಯ ಜಾರಿಗೆ ತರಲಾಗುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕುಲಪತಿಗಳು ವಾರದಲ್ಲಿ ಒಂದು ದಿನ ಪರೀಕ್ಷಾ ವಿಭಾಗದ ಕಡತಗಳ ವಿಲೇವಾರಿ ಹಾಗೂ ವಿದ್ಯಾರ್ಥಿಗಳ ಮನವಿ ಪರಾಮರ್ಶಿಸುವ ನೂತನ ಯೋಜನೆ ರೂಪಿಸಲಾಗಿದೆ ಎಂದರು.

‘ನಾನು ಕುಲಪತಿಯಾದಾಗಿನಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕಾಲೇಜಿಗೆ ಬಂದು ಓದಲು ಸಾಧ್ಯವಾಗದವರಿಗೆ ಮನೆಯಲ್ಲೇ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಜಾರಿ ಗೊಳಿಸುತ್ತಿದ್ದೇವೆ. ಕೌಶಲಾಭಿವೃದ್ಧಿ ಸೇರಿದಂತೆ ಅನೇಕ ಕೋರ್ಸ್ ಗಳ ವ್ಯಾಸಂಗಕ್ಕೆ ಅವಕಾಶವಿದೆ. ಯುಜಿಸಿ 2018–-19ನೇ ಸಾಲಿನಲ್ಲಿ ವಿಶ್ವವಿದ್ಯಾಲಯ ಕೋರಿದ್ದ 32 ಕೋರ್ಸ್ ಗಳಲ್ಲಿ ಕೇವಲ 17 ಕೋರ್ಸು ಗಳಿಗೆ ಮಾನ್ಯತೆ ನೀಡಿತ್ತು. ಪುನಃ ಮನವಿ ಮಾಡಿದ ಹಿನ್ನೆಲೆಯಲ್ಲಿ ಉಳಿದ ಕೋರ್ಸ್ ಗಳಿಗೂ ಅನುಮೋದನೆ ನೀಡಿದೆ’ ಎಂದು ತಿಳಿಸಿದರು.

ದೂರಶಿಕ್ಷಣದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಮ್ಮ ವಿ.ವಿ.ಯಲ್ಲಿ ಪ್ಲೇಸ್ ಮೆಂಟ್ ವಿಭಾಗ ರಚಿಸಲಾಗಿದೆ. ಈವರೆಗೆ ಉನ್ನತ ಶಿಕ್ಷಣ ನೀಡುತ್ತಿದ್ದ ವಿವಿಯು ತನ್ನಲ್ಲಿ ಕಲಿತ ವಿದ್ಯಾರ್ಥಿಗಳ ನೌಕರಿ ಸಂಬಂಧಿತ ಯೋಜನೆ ರೂಪಿಸುವುದು ವಿನೂತನ ಹಾಗೂ ಅಗತ್ಯ ಕ್ರಮವಾಗಿದೆ. 2018–-19ನೇ ಸಾಲಿನಲ್ಲಿ 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಶುಲ್ಕ ವಿನಾಯಿತಿ: ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ 25 ರಷ್ಟು ಶುಲ್ಕ ರಿಯಾಯಿತಿ ಇದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕ ಮರುಪಾವತಿಗೊಳಪಟ್ಟು, ಶುಲ್ಕ ವಿನಾಯಿತಿ ಯೋಜನೆಯಡಿಯಲ್ಲಿ ಉಚಿತ ಪ್ರವೇಶಾತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಜಾಗ ಮಂಜೂರು: ರಾಮನಗರದ ಕನಕಪುರ ವೃತ್ತದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಕಚೇರಿ ನಿರ್ಮಾಣಕ್ಕೆ ಹತ್ತುವರೆ ಕುಂಟೆ ಸ್ಥಳ ಮಂಜೂರಾಗಿದೆ. ಈ ಸ್ಥಳದಲ್ಲಿ ಪ್ರಾದೇಶಿಕ ಕೇಂದ್ರ ಕಚೇರಿ ಕಟ್ಟಡವನ್ನು ನಿರ್ಮಿಸಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬಿ.ಎ, ಬಿ.ಕಾಂ, ಡಿಪ್ಲೊಮಾ ಕೋರ್ಸ್ ಗಳಿಗೆ ಆಗಸ್ಟ್ 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಡಿಮೆ ದರದಲ್ಲಿ ಐ.ಎ.ಎಸ್., ಕೆ.ಎ.ಎಸ್. ಹಾಗೂ ಬ್ಯಾಂಕಿಂಗ್ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಸ್ವಯಂ ಉದ್ಯೋಗ ಕೌಶಲ ತರಬೇತಿ ನೀಡಲಾಗುವುದು. ಮೊಬೈಲ್ ರಿಪೇರಿ ಸೇರಿದಂತೆ ಇತರ ಇದೇ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ ಎಂದರು.

ಜಿಲ್ಲೆಯ ಪ್ರಾದೇಶಿಕ ಕೇಂದ್ರ ಕಚೇರಿಯ ನಿರ್ದೇಶಕ ಡಾ. ವಿಜಯ್ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸ್. ಶಂಕರಪ್ಪ ಇದ್ದರು.

ದಾಖಲಾತಿಗೆ ಆತಂಕ ಬೇಡ

‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯಲು ಯಾವ ಆತಂಕವೂ ಬೇಡ. ಈವರೆಗಿದ್ದ ಕೆಲ ಸಣ್ಣ-ಪುಟ್ಟ ಗೊಂದಲಗಳು ನಿವಾರಣೆಯಾಗಿವೆ. ವಿವಿ ಮಾನ್ಯತೆ ರದ್ದು ವಿಚಾರಕ್ಕೆ ಸಂಬಂಧಿಸಿದ ಹಲವು ಸಣ್ಣ ಪುಟ್ಟ ಗೊಂದಲಗಳಿದ್ದವು. ಈಗ ಅವೆಲ್ಲವೂ ನಿವಾರಣೆಯಾಗಿವೆ. ಯುಜಿಸಿಯಿಂದ 2018–-19 ಹಾಗೂ 2022–-23ರ ಸಾಲಿನ ವರೆಗೂ ಮುಕ್ತ ವಿವಿಗೆ ಮಾನ್ಯತೆ ದೊರೆತಿದೆ. ವಿದ್ಯಾರ್ಥಿಗಳು ಗೊಂದಲ, ಅನುಮಾನ ಇಲ್ಲದೇ ತರಗತಿಗಳಿಗೆ ದಾಖಲಾಗಬಹುದು’ ಎಂದರು.

***

ವಿ.ವಿ.ಯಲ್ಲಿ ಪ್ರವೇಶ ಪಡೆಯುವವರು ಕಡ್ಡಾಯವಾಗಿ ದ್ವಿತೀಯ ಪಿ.ಯು. ಉತ್ತೀರ್ಣರಾಗಿರಬೇಕು. ಎಸ್ಸೆಸ್ಸೆಲ್ಸಿ ಓದಿದವರು ಸರ್ಟಿಫಿಕೆಟ್‌ ಕೋರ್ಸ್ ಗಳಿಗೆ ಪ್ರವೇಶ ಪಡೆಯಬಹುದು

–ಪ್ರೊ. ಎಸ್‌. ವಿದ್ಯಾಶಂಕರ್‌,ಕರ್ನಾಟಕ ರಾಜ್ಯ ಮುಕ್ತ ವಿ.ವಿ. ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT