ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು | ಸೋರುವ ಶಾಲೆಗೆ ಮಕ್ಕಳನ್ನು ಏಕೆ ಸೇರಿಸೋಣ?: ಪೋಷಕರ ಆಕ್ರೋಶ

ತಿಗಳರಪಾಳ್ಯ ಸರ್ಕಾರಿ ಶಾಲೆ ದುರಸ್ತಿಗೆ ಪೋಷಕರ ಆಗ್ರಹ
ವಿವೇಕ್ ಕುದೂರು
Published 24 ಜೂನ್ 2024, 3:25 IST
Last Updated 24 ಜೂನ್ 2024, 3:25 IST
ಅಕ್ಷರ ಗಾತ್ರ

ಕುದೂರು: ರಾಷ್ಟ್ರೀಯ ಹೆದ್ದಾರಿ 75ರ ಕೂಗಳತೆ ದೂರದಲ್ಲಿರುವ ತಿಪ್ಪಸಂದ್ರ ಹೋಬಳಿ ತಿಗಳರಪಾಳ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಳೆಯಾದರೆ ಸೋರುತ್ತದೆ.

1969ರಲ್ಲಿ ಸ್ಥಾಪಿತವಾಗಿರುವ ತಿಗಳರಪಾಳ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 36 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಶಾಲೆಯಲ್ಲಿರುವುದು ಕೇವಲ 5 ಕೊಠಡಿಗಳು. ಅದರಲ್ಲಿ ಒಂದು ಸಂಪೂರ್ಣ ಶಿಥಿಲವಾಗಿ ಬಾಗಿಲು ಹಾಕಲಾಗಿದೆ. ಈಗ ಶಾಲೆಯಲ್ಲಿ ಮೂವರು ಶಿಕ್ಷಕರು ಕಾಯಂ ಆಗಿ ಕೆಲಸ ನಿರ್ವಹಿಸುತ್ತಿದ್ದು, ಒಬ್ಬರು ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೊಬ್ಬ ಕಾಯಂ ಶಿಕ್ಷಕರ ಅವಶ್ಯ ಇದೆ ಎಂದು ಶಾಲೆ ಮುಖ್ಯ ಶಿಕ್ಷಕ ಜಿ.ಎನ್.ಕೃಷ್ಣಪ್ಪ 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ಶಾಲಾ ಮುಂಭಾಗದ ಪ್ರಾಂಗಣ ಹಾಗೂ ಶಾಲೆ ಕೊಠಡಿ ಸೀಲಿಂಗ್ ಕಳಚಿ ಬಿದ್ದಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಮಳೆಯಾದರೆ ಗೋಡೆ ಮೇಲೆ ನೀರು ಬಂದು ಗೋಡೆಗಳು ತೇವಗೊಳ್ಳುತ್ತಿವೆ. ಶಾಲೆ ಗೋಡೆಗಳಿಗೆ ಸುಣ್ಣ ಬಣ್ಣ ತೋರಿಸಿ ದಶಕಗಳೇ ಉರುಳಿದೆ.

ಇಲ್ಲಿನ ಶಾಲೆಯಲ್ಲಿ ಅಡುಗೆ ಕೋಣೆ ಶಿಥಿಲಗೊಂಡಿದೆ. ವಿದ್ಯಾರ್ಥಿಗಳು ಕೂರಲು ಕುರ್ಚಿ– ಡೆಸ್ಕ್ ಇಲ್ಲದೆ ನೆಲದ ಮೇಲೆ ಕುಳಿತು ಪಾಠ ಕೇಳಬೇಕಾಗಿದೆ. ಶಾಲೆಯಲ್ಲಿ ವಿಶಾಲವಾದ ಆಟದ ಮೈದಾನವಿದ್ದರೂ ಯಾವುದೇ ಆಟದ ಪರಿಕರ ಲಭ್ಯವಿಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕಟ್ಟಡಗಳ ದುರಸ್ತಿ, ನವೀಕರಣ, ಹೊಸ ಕೊಠಡಿ ನಿರ್ಮಾಣಕ್ಕೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಯೋಜನೆ, ಜಿ.ಪಂ, ತಾ.ಪಂ ವಿವಿಧ ಯೋಜನೆಯಡಿ ಅನುದಾನ ಮಂಜೂರು ಮಾಡಲು ಅವಕಾಶವಿದೆ. ಆದರೆ, ಬಿಡುಗಡೆ ಇಚ್ಛಾಸಕ್ತಿ ಇಲ್ಲವಾಗಿದೆ.

ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಚಾವಣಿ ಮಣ್ಣು ಉದುರುತ್ತಿವೆ. ಕೆಲವರು ಗಾಯಗೊಂಡ ನಿದರ್ಶನಗಳೂ ಇವೆ. ಶಾಲೆ ಕೊಠಡಿಗಳು ಸುಣ್ಣ- ಬಣ್ಣ ಕಂಡು ಅದೆಷ್ಟೊ ವರ್ಷಗಳು ಕಳೆದಿವೆ. ವಿದ್ಯಾರ್ಥಿಗಳು ‘ನಮ್ಮ ಶಾಲೆಗೆ ಯಾವಾಗ ಬಣ್ಣ ಬಳಸುತ್ತಾರೊ’ ಎನ್ನುತ್ತಲೇ ಮುಂದಿನ ಶಾಲೆಗಳಿಗೆ ತೆರಳುವಂತಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂತಹ ಶಾಲೆಗಳಿಗೆ ಮೂಲ ಸೌಕರ್ಯ ಕೊರತೆಯಾಗಿ ಕೊಠಡಿಗಳು ಮಳೆಗೆ ಸೋರಿ ಬೀಳುವ ಹಂತ ತಲುಪಿವೆ. ಮಕ್ಕಳನ್ನು ಈ ಸರ್ಕಾರಿ ಶಾಲೆಗಳಿಗೆ ಹೇಗೆ ಕಳುಹಿಸುವುದು ಎಂದು ಪೋಷಕರು, ಅಧಿಕಾರಿಗಳನ್ನು ಮತ್ತು ಶಿಕ್ಷಕರನ್ನು ಪ್ರಶ್ನಿಸುತ್ತಾರೆ.

‘ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತದೆ. ಆದರೆ, ಸರ್ಕಾರಿ ಶಾಲೆಗಳಿಗೆ ಮಾತ್ರ ಸೌಲಭ್ಯ ಕಲ್ಪಿಸುವುದಿಲ್ಲ. ಕಳಚಿ ಬೀಳುತ್ತಿರುವ ಕಟ್ಟಡದಲ್ಲಿ ಮಕ್ಕಳು ಹೇಗೆ ತಾನೇ ಶಿಕ್ಷಣ ಕಲಿಯಲು ಸಾಧ್ಯ. ಪೋಷಕರು ತಮ್ಮ ಮಕ್ಕಳನ್ನು ಇಂತಹ ಭೀತಿಯುಂಟು ಮಾಡುವ ಶಾಲೆಗಳಿಗೆ ಹೇಗೆ ತಾನೇ ದಾಖಲಿಸುತ್ತಾರೆ. ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು‘ ಎಂದು ಮಕ್ಕಳ ಪೋಷಕರು ಆಗ್ರಹಿಸುತ್ತಾರೆ.

ಶಾಲೆ ಉಳಿಸಲು ಎಸ್‌ಡಿಎಂಸಿ ಹೋರಾಟ: ಮಾದರಿ ಶಾಲೆ ಮಾದರಿಯಡಿ ತಿಪ್ಪಸಂದ್ರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹೆಚ್ಚಿನ ಮಕ್ಕಳಿದ್ದಾರೆ. ಶಾಲಾಭಿವೃದ್ಧಿ ಸಮಿತಿ ಸದಸ್ಯರು ಕಟ್ಟಡದ ಮೂಲ ಸೌಕರ್ಯ ಮತ್ತು ಇತರ ಅಭಿವೃದ್ಧಿಗೆ ಸಾಕಷ್ಟು ಹಣವನ್ನು ತಮ್ಮ ಕೈಯಿಂದಲೇ ವ್ಯಯ ಮಾಡಿ ದುರಸ್ತಿ ಮಾಡಿದ್ದಾರೆ. ಹೆಚ್ಚಿನ ಕಾಮಗಾರಿಗಳಿಗಾಗಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎನ್ನುವುದು ಪೋಷಕರು ಮತ್ತು ಶಾಲಾಭಿವೃದ್ಧಿ ಸದಸ್ಯರ ಅಳಲು.

60ರಿಂದ 36ಕ್ಕೆ ಕುಸಿದ ಮಕ್ಕಳ ಸಂಖ್ಯೆ: ಕೋವಿಡ್‌ ಸಮಯದಲ್ಲಿ ಶಾಲೆಯಲ್ಲಿ 60 ವಿದ್ಯಾರ್ಥಿಗಳಿದ್ದರು. ಶಿಥಿಲಗೊಂಡಿರುವ ಶಾಲೆಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ‘ತಮ್ಮ ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲದ ಶಾಲೆಗೆ ನಾವ್ಯಾಕೆ  ಕಳುಹಿಸಬೇಕು’ ಎಂದು ಪೋಷಕರು ಪ್ರಶ್ನಿಸುತ್ತಾರೆ.

ಶೌಚಾಲಯ ನಿರ್ಮಾಣಕ್ಕೆ ತಿಪ್ಪಸಂದ್ರ ಗ್ರಾಮ ಪಂಚಾಯಿತಿಗೆ ಅರ್ಜಿ ಕೊಟ್ಟ ನಂತರ ನಿರ್ಮಾಣ ಮಾಡಲಾಗಿದೆ. ಆದರೆ, ನೀರಿನ ವ್ಯವಸ್ಥೆಯೇ ಕಲ್ಪಿಸಿಲ್ಲ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರಸ್ವಾಮಿ ಆರೋಪಿಸುತ್ತಾರೆ.

ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ಹೇಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಕೊಠಡಿ ದುರಸ್ತಿಗೆ ಗಮನಹರಿಸುತ್ತಿಲ್ಲ. ಬಡವರ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿರುವ ಸರ್ಕಾರಿ ಶಾಲೆಗಳತ್ತ ಏಕಿಷ್ಟು ತಾತ್ಸಾರ ಎನ್ನುತ್ತಾರೆ ಪೋಷಕರು.

ಶಿಥಿಲಾವಸ್ಥೆಯ ಶಾಲೆಯ ಕೊಠಡಿಯೊಳಗೆ  ಮಕ್ಕಳು.
ಶಿಥಿಲಾವಸ್ಥೆಯ ಶಾಲೆಯ ಕೊಠಡಿಯೊಳಗೆ  ಮಕ್ಕಳು.
ಶಿಥಿಲಾವಸ್ಥೆಯ ಶಾಲೆಯ ಕೊಠಡಿಯೊಳಗೆ ವಿದ್ಯಾರ್ಥಿಗಳು
ಶಿಥಿಲಾವಸ್ಥೆಯ ಶಾಲೆಯ ಕೊಠಡಿಯೊಳಗೆ ವಿದ್ಯಾರ್ಥಿಗಳು
ಶಿಥಿಲಾವಸ್ಥೆಯ ಶಾಲೆಯ ಕೊಠಡಿಯೊಳಗೆ ವಿದ್ಯಾರ್ಥಿಗಳು
ಶಿಥಿಲಾವಸ್ಥೆಯ ಶಾಲೆಯ ಕೊಠಡಿಯೊಳಗೆ ವಿದ್ಯಾರ್ಥಿಗಳು

ಪೋಷಕರ ಆತಂಕ ಶಿಥಿಲಾವಸ್ಥೆ ತಲುಪಿದ ಸರ್ಕಾರಿ ಶಾಲೆ ಕೊಠಡಿಗಳ ಸ್ಥಿತಿ ಇನ್ನೂ ಬದಲಾಗಿಲ್ಲ. ಮಕ್ಕಳು ಬೀಳುವ ಹಂತದಲ್ಲಿರುವ ಕಟ್ಟಡದಲ್ಲೇ ಆತಂಕದಿಂದ ಓದು ಮುಂದುವರಿಸುವ ಅನಿವಾರ್ಯತೆ ಇದೆ. ಅನಾಹುತಕ್ಕೆ ಆಹ್ವಾನ ನೀಡುವ ಪರಿಸ್ಥಿತಿ ಇದ್ದರೂ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಎಚ್ಚೆತ್ತು ಕೊಳ್ಳದಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.

–ಕುಮಾರಸ್ವಾಮಿ ಎಸ್‌ಡಿಎಂಸಿ ಅಧ್ಯಕ್ಷ

ತಿಗಳರಪಾಳ್ಯ ಅನಗತ್ಯವಾಗಿ ಹಣ ಬಳಕೆ ಶಾಲೆ ಆವರಣದಲ್ಲಿ ನರೇಗಾ ಯೋಜನೆಯಡಿ ₹5ಲಕ್ಷ ವೆಚ್ಚ ಮಾಡಿ ಶಟಲ್ ಕೋರ್ಟ್ ನಿರ್ಮಿಸಲಾಗಿದೆ. ಆದರೆ ಇಲ್ಲಿ ಶಟಲ್ ಆಡುವವರು ಯಾರೂ ಇಲ್ಲ. ಇದರ ಬದಲು ಶಾಲಾ ಕೊಠಡಿ ದುರಸ್ತಿ ಸುಣ್ಣ ಬಣ್ಣ ಬಳಿಯಲು ಬಳಕೆಯಾಗಿದ್ದರೆ ಉತ್ತಮವಾಗಿರುತ್ತಿತ್ತು.

– ದೊಡ್ಡ ಹೊನ್ನಯ್ಯ ಗ್ರಾಮಸ್ಥ ತಿಗಳರಪಾಳ್ಯ

ಶಾಸಕರ ಸಭೆಯಲ್ಲಿ ಗಮನಕ್ಕೆ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ತಯಾರಿಸಲಾದ ಕ್ರಿಯಾ ಯೋಜನೆಯಲ್ಲಿ ತಿಗಳರಪಾಳ್ಯ ಸರ್ಕಾರಿ ಶಾಲೆಯನ್ನು ಸೇರಿಸಲಾಗಿದೆ. ಜಿಲ್ಲಾ ಪಂಚಾಯಿತಿ ಹಾಗೂ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಆಗಬೇಕಿದೆ. ಇತ್ತೀಚೆಗೆ ನಡೆದ ಶಾಸಕರ ಸಭೆಯಲ್ಲೂ ಕೂಡ ಅವರ ಗಮನಕ್ಕೆ ಈ ವಿಚಾರ ತರಲಾಗಿದೆ.

–ಚಂದ್ರಶೇಖರ್ ಕ್ಷೇತ್ರ ಶಿಕ್ಷಣಾಧಿಕಾರಿ ಮಾಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT