ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು: ಕೆರೆಗಳಲ್ಲಿ ಅಕ್ರಮ ಮಣ್ಣು ಸಾಗಾಟ

ವಿವೇಕ್ ಕುದೂರು
Published 29 ನವೆಂಬರ್ 2023, 4:20 IST
Last Updated 29 ನವೆಂಬರ್ 2023, 4:20 IST
ಅಕ್ಷರ ಗಾತ್ರ

ಕುದೂರು: ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಒಂದು ವಾರದಿಂದ ಮಣ್ಣು ಸಾಗಾಟ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಜಾಣ ಮೌನ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೋಬಳಿಯ ಕೆಲವು ಕೆರೆಗಳಲ್ಲಿ ಪ್ರಭಾವಿಗಳು ಹಾಡಹಗಲೇ ರಾಜಾರೋಷವಾಗಿ ಇಲಾಖೆಯ ಅಧಿಕಾರಿಗಳ ಅನುಮತಿ ಪಡೆಯದೆ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಬಳಸಿ ಇಟ್ಟಿಗೆ ಕಾರ್ಖಾನೆಗಳಿಗೆ, ಅನಧಿಕೃತ ಲೇಔಟ್ ನಿರ್ಮಾಣಕ್ಕೆ, ತೋಟಗಳಿಗೆ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿದ್ದಾರೆ.

ತಹಶೀಲ್ದಾರ್ ದಾಳಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಕರೆ ಮಾಡಿ ಮಣ್ಣು ಸಾಗಾಣಿಕೆ ನಿಲ್ಲಿಸುವಂತೆ ಹೇಳಿದ್ದಾರೆ. ಇದಾದ ಮೂರು ದಿನಗಳ ನಂತರ ಮತ್ತೆ ಮಣ್ಣು ಸಾಗಾಟ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅಂದೇ ಸ್ಥಳಕ್ಕೆ ಭೇಟಿ ನೀಡಿ, ವಾಹನಗಳನ್ನು ವಶಪಡಿಸಿಕೊಳ್ಳುವುದಾಗಲೀ, ಕೇಸು ದಾಖಲಿಸುವುದಾಗಲೀ, ದಂಡ ವಿಧಿಸುವುದಾಗಲೀ ಮಾಡಿದ್ದರೆ ಮತ್ತೆಂದೂ ಯಾರೂ ಕೆರೆ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು.

ಕೆರೆಗಳಲ್ಲಿ ಮಣ್ಣು ತೆಗೆಯಲು ಇರುವ ನಿಯಮಗಳು: ಕಂದಾಯ ಇಲಾಖೆ ನಿಯಮಗಳ ಪ್ರಕಾರ, ಕೆರೆಗಳಲ್ಲಿ 4 ಅಡಿಗಿಂತಲೂ ಹೆಚ್ಚು ಆಳವಾಗಿ ಹಾಗೂ ನೇರವಾಗಿ ಮಣ್ಣು ತೆಗೆಯುವಂತಿಲ್ಲ. ಸರ್ಕಾರದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅನುಮತಿ ಹಾಗೂ ಪರವಾನಗಿ ಪಡೆಯದೆ ಮಣ್ಣು ತೆಗೆಯುವಂತಿಲ್ಲ. ಜೆಸಿಬಿಯಂತಹ ಭಾರಿ ಯಂತ್ರಗಳನ್ನು ಕೆರೆಗಳಿಗೆ ಇಳಿಸುವಂತಿಲ್ಲ. ಇಷ್ಟೆಲ್ಲಾ ನಿಯಮಗಳಿದ್ದರೂ ಕೆಲ ಪ್ರಭಾವಿಗಳಿಂದ ಅವ್ಯಾಹತವಾಗಿ ಮಣ್ಣು ದಂಧೆ ನಡೆಯುತ್ತಿದೆ.

ಅಮಾಯಕರ ಪ್ರಾಣಕ್ಕೆ ಬೆಲೆಯಿಲ್ಲವೇ: ಮೇ ತಿಂಗಳಿನಲ್ಲಿ ಹೋಬಳಿಯ ಮುತ್ತುಸಾಗರ ಗ್ರಾಮದಲ್ಲಿ ಕುರಿಗಳಿಗೆ ಮೈ ತೊಳೆಯಲು ಹೋಗಿ ಮೂವರು ಪ್ರಾಣ ಕಳೆದುಕೊಂಡಿದ್ದರು. ಇದಕ್ಕೆ ಪ್ರಮುಖ ಕಾರಣ, ಅಕ್ರಮವಾಗಿ ಮಣ್ಣು ತೆಗೆಯುವಾಗ ನಿರ್ಮಾಣವಾಗುವ ಗುಂಡಿಗಳು. ಕೆರೆಯಲ್ಲಿ ಗುಂಡಿಗಳಿರುವುದು ತಿಳಿಯದೆ ಅಮಾಯಕರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ಘಟನೆಯ ನಂತರವೂ ತಾಲ್ಲೂಕು ಆಡಳಿತ ಎಚ್ಚೆತ್ತಿಲ್ಲದಿರುವುದು ಬೇಸರದ ಸಂಗತಿ.

ಇಲಾಖೆ ಅಧಿಕಾರಿಗಳ ಮೌನ: ಕೆರೆಗಳಲ್ಲಿ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿದ್ದರೂ ಕಂದಾಯ ಇಲಾಖೆ ಮೌನ ವಹಿಸಿದೆ. ವಾರದ ಹಿಂದಷ್ಟೇ ಕುದೂರು ಕೆರೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್ ಹಾಗೂ ಜೆಸಿಬಿ ಯಂತ್ರಗಳು ಅಕ್ರಮವಾಗಿ ಮಣ್ಣನ್ನು ಲೂಟಿ ಮಾಡುವುದು ಅಧಿಕಾರಿಗಳ ಗಮನಕ್ಕೆ ಬಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆಯೂ ಕೂಡ ಇದೇ ಕೆರೆಯಲ್ಲಿ ಅಕ್ರಮವಾಗಿ ಮಣ್ಣನ್ನು ಲೂಟಿ ಮಾಡುತ್ತಿರುವ ಸುದ್ದಿಯೂ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕುದೂರು ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತಿದೆ
ಕುದೂರು ಹೋಬಳಿಯ ಬೆಟ್ಟಹಳ್ಳಿ ಗ್ರಾಮದ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತಿದೆ
ಕಂದಾಯ ಇಲಾಖೆಯ ಅಧಿಕಾರಿಗಳು ಫ್ರೂಟ್ ಐ.ಡಿ ಕಾರ್ಯದಲ್ಲಿ ನಿರತವಾಗಿರುವ ಕಾರಣ ಯಾರೂ ಗಮನಿಸಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಕೆರೆ ಮಣ್ಣನ್ನು ಲೂಟಿ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ದಾಳಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಜಿ.ಸುರೇಂದ್ರ ಮೂರ್ತಿ ತಹಶೀಲ್ದಾರ್ ಮಾಗಡಿ
ಘಟನೆಯ ಕುರಿತು ತಹಶೀಲ್ದಾರ್ ಅವರಿಗೆ ವಾಹನಗಳ ಸಂಖ್ಯೆಯೊಂದಿಗೆ ವರದಿಯನ್ನು ನೀಡಲಾಗಿದೆ.
ರೆಹಮಾನ್ ಕಂದಾಯ ನಿರೀಕ್ಷಕರು ಕುದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT