ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಕಾರ್ಮಿಕರ ಮಕ್ಕಳ ಆರೈಕೆಗೆ ‘ಕೂಸಿನ ಮನೆ’

ನರೇಗಾ ಕಾರ್ಮಿಕರ ಮಕ್ಕಳ ನೋಡಿಕೊಳ್ಳಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭ
Published 23 ಡಿಸೆಂಬರ್ 2023, 4:05 IST
Last Updated 23 ಡಿಸೆಂಬರ್ 2023, 4:05 IST
ಅಕ್ಷರ ಗಾತ್ರ

ರಾಮನಗರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಮನರೇಗಾ) ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳನ್ನು ಕೆಲಸ ಅವಧಿಯಲ್ಲಿ ನೋಡಿಕೊಳ್ಳುವುದಕ್ಕಾಗಿ ಜಿಲ್ಲಾ ಪಂಚಾಯಿತಿಯು ‘ಕೂಸಿನ ಮನೆ’ ಎಂಬ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ.

ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ತಲೆ ಎತ್ತಲಿರುವ ಕೂಸಿನ ಮನೆಗಳಲ್ಲಿ, ಮಹಿಳಾ ಕಾರ್ಮಿಕರು 6 ತಿಂಗಳಿಂದ 3 ವರ್ಷದೊಳಗಿನ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು, ನಿರಾಳವಾಗಿ ಕೆಲಸ ಮಾಡಬಹುದಾಗಿದೆ. ನರೇಗಾ ಕೆಲಸದ ಅವಧಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 5.30ರವರೆಗೆ ತೆರೆದಿರುವ ಈ ಮನೆಗಳಲ್ಲಿ ಮಕ್ಕಳು ಆರೈಕೆದಾರರ ನಿಗಾದಲ್ಲಿ ಇರಲಿದ್ದಾರೆ.

175 ಮನೆಗಳ ಗುರಿ: ‘ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ 126 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 175 ಕಡೆ ಕೂಸಿನ ಮನೆಗಳನ್ನು ತೆರೆಯಲು ಗುರಿ ಹೊಂದಲಾಗಿದೆ. ಮನೆಗಳಿಗಾಗಿ ಗ್ರಾಮಗಳ ಮಟ್ಟದಲ್ಲಿ ಈಗಾಗಲೇ 96 ಕಟ್ಟಡಗಳನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಮಂಜುನಾಥ ಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕೂಸಿನ ಮನೆಗಳನ್ನು ಆರಂಭಿಸಲಾಗುತ್ತಿದೆ. ಪ್ರತಿ ಮನೆಗೆ ಒಂದು ₹1 ಲಕ್ಷ ವೆಚ್ಚ ವೆಚ್ಚವಾಗಲಿದೆ. ಹೆಚ್ಚುವರಿ ಹಣದ ಅಗತ್ಯವಿದ್ದರೆ ಗ್ರಾಮ ಪಂಚಾಯಿತಿಯ 15ನೇ ಹಣಕಾಸು, ಜಿ.ಪಂ., ತಾ. ಪಂ., ಹಾಗೂ ಗ್ರಾ.ಪಂ. ಅನುದಾನವನ್ನು ಬಳಸಬಹುದು’ ಎಂದು ಹೇಳಿದರು.

‘ಗ್ರಾಮಗಳಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ, ಸಮುದಾಯ ಭವನ ಹಾಗೂ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಹಳೆ ಕಟ್ಟಡ ಅಥವಾ ಹಾಲಿ ಇರುವ ಕಟ್ಟಡದಲ್ಲಿ ಹೆಚ್ಚುವರಿ ಕೊಠಡಿಯಲ್ಲಿ 25 ಮಕ್ಕಳ ಸಾಮರ್ಥ್ಯದ ಕೂಸಿನ ಮನೆಯನ್ನು ತೆರೆಯಲಾಗುವುದು. ಬಳಕೆಯಾಗದ ಸರ್ಕಾರಿ ಕಟ್ಟಡವನ್ನು ಮನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.

2 ಕಡೆ ಆರಂಭ: ‘ಜಿಲ್ಲೆಯ ಕನಕಪುರ ತಾಲ್ಲೂಕಿನ ಚೀಲೂರು ಗ್ರಾಮ ಮತ್ತು ಮಾಗಡಿ ತಾಲ್ಲೂಕಿನ ಲಕ್ಕೇನಹಳ್ಳಿ ಗ್ರಾಮದಲ್ಲಿ ಈಗಾಗಲೇ ಶುರುವಾಗಿದೆ. ಎರಡೂ ಕಡೆ ವಿವಿಧ ವಯೋಮಾನದ ಮಕ್ಕಳಿದ್ದಾರೆ. ಅಂಗನವಾಡಿ ಮಾದರಿಯಂತಿರುವ ಮನೆಗಳ ಕುರಿತು ಮಹಿಳಾ ಕಾರ್ಮಿಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ’ ಎಂದು ಮಾಹಿತಿ ನೀಡಿದರು.

‘ಉತ್ತಮ ಗಾಳಿ–ಬೆಳಕು ಹಾಗೂ ನೀರಿನ ವ್ಯವಸ್ಥೆ ಇರುವ ಸುಸಜ್ಜಿತ ಕಟ್ಟಡದಲ್ಲಿ ಆರಂಭಗೊಳ್ಳುವ ಈ ಕೇಂದ್ರದಲ್ಲಿ ಮಕ್ಕಳಿಗಾಗಿ ಆಟದ ಸಾಮಗ್ರಿಗಳು ಮತ್ತು ಕಲಿಕಾ ಸಾಮಗ್ರಿಗಳು ಇರಲಿವೆ. ಮಕ್ಕಳಿಗೆ ಮಧ್ಯಾಹ್ನ ಪೌಷ್ಠಿಕಾಂಶಯುಕ್ತ ಲಘು ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರತಿ ಮಗುವಿಗೆ ₹12 ನೀಡಲಾಗುವುದು’ ಎಂದು ತಿಳಿಸಿದರು.

ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ
ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ
ಮಂಜುನಾಥ ಸ್ವಾಮಿ ಯೋಜನಾ ನಿರ್ದೇಶಕ  ಜಿಲ್ಲಾ ಪಂಚಾಯಿತಿ ರಾಮನಗರ
ಮಂಜುನಾಥ ಸ್ವಾಮಿ ಯೋಜನಾ ನಿರ್ದೇಶಕ  ಜಿಲ್ಲಾ ಪಂಚಾಯಿತಿ ರಾಮನಗರ
ವಿಶಾಲಾಕ್ಷಿ ಕೂಸಿನ ಮನೆಯ ಆರೈಕೆದಾರರು  ಚೀಲೂರು ಗ್ರಾಮ ಕನಕಪುರ ತಾಲ್ಲೂಕು
ವಿಶಾಲಾಕ್ಷಿ ಕೂಸಿನ ಮನೆಯ ಆರೈಕೆದಾರರು  ಚೀಲೂರು ಗ್ರಾಮ ಕನಕಪುರ ತಾಲ್ಲೂಕು

ಅಂಕಿಅಂಶ...

126: ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳು

5: ಜಿಲ್ಲೆಯಲ್ಲಿರುವ ತಾಲ್ಲೂಕುಗಳು

₹1.25: ಕೋಟಿಕೂಸಿನ ಮನೆಗೆ ಬಿಡುಗಡೆಯಾಗಿರುವ ಮೊತ್ತ

₹1: ಲಕ್ಷಪ್ರತಿ ಕೂಸಿನ ಮನೆ ಆರಂಭದ ವೆಚ್ಚ

ಚಿಕ್ಕ ಮಕ್ಕಳನ್ನು ಹೊಂದಿರುವ ನರೇಗಾ ಕೂಲಿ ಕಾರ್ಮಿಕರಿಗೆ ‘ಕೂಸಿನ ಮನೆ’ ಯೋಜನೆಯಿಂದ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ₹1.25 ಕೋಟಿ ಅನುದಾನ ಬಿಡುಗಡೆಯಾಗಿದೆ

– ದಿಗ್ವಿಜಯ್ ಬೋಡ್ಕೆ ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ

‘ಪ್ರತಿ ಮನೆಗೆ ಇಬ್ಬರು ಆರೈಕೆದಾರರು’

‘ಕೂಸಿನ ಮನೆಗಳಲ್ಲಿ ಮಕ್ಕಳ ಆರೈಕೆಗೆ ಸಕ್ರಿಯ ನರೇಗಾ ಜಾಬ್‌ಕಾರ್ಡ್ ಹೊಂದಿರುವ ಇಬ್ಬರು ಮಹಿಳೆಯರನ್ನು ಕೂಲಿ ನಿಯೋಜಿಸಲಾಗುತ್ತದೆ. ನರೇಗಾ ಕೂಲಿಗೆ ಬರುವ ಕನಿಷ್ಠ 10ನೇ ತರಗತಿ ವಿದ್ಯಾರ್ಹತೆ ಹೊಂದಿರುವ 25ರಿಂದ 45 ವರ್ಷದೊಳಗಿನವರನ್ನು ಆರೈಕೆದಾರರಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಿಗೂ ದಿನಕ್ಕೆ ₹316ರಂತೆ ಸಂಬಳ ನೀಡಲಾಗುತ್ತದೆ. ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಆರೈಕೆಗೆ ಬೇಕಾದ ಕೌಶಲ ಹಾಗೂ ಮನೆಯ ನಿರ್ವಹಣೆ ಕುರಿತು ಏಳು ದಿನ ತರಬೇತಿ ನೀಡಲಿದ್ದಾರೆ. ಈಗಾಗಲೇ ಚನ್ನಪಟ್ಟಣ ತಾಲ್ಲೂಕಿನ ಆರೈಕೆದಾರರಿಗೆ ತರಬೇತಿ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಮಂಜುನಾಥ ಸ್ವಾಮಿ ತಿಳಿಸಿದರು.

‘ನಿಶ್ಚಿಂತೆಯಿಂದ ದುಡಿಮೆ’

‘ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದಿರುವ ಕಾರಣಕ್ಕಾಗಿ ಮನೆಯಲ್ಲೇ ಇರಬೇಕಾಗಿತ್ತು. ಪತಿಯೊಬ್ಬರೇ ಕೆಲಸಕ್ಕೆ ಹೋಗುತ್ತಿದ್ದರು. ಇದೀಗ ಪಂಚಾಯಿತಿಯವರು ಆರಂಭಿಸಿರುವ ಕೂಸಿನ ಮನೆಯಲ್ಲಿ ಮಗುವನ್ನು ಬಿಟ್ಟು ನಾನು ಸಹ ಕೆಲಸಕ್ಕೆ ಹೋಗುತ್ತೇನೆ. ಕೆಲಸ ಮುಗಿಸಿ ಬರುವ ತನಕ ಇಲ್ಲಿನ ಆರೈಕೆದಾರರು ಮಗುವಿಗೆ ಆಹಾರ ಕೊಟ್ಟು ಚನ್ನಾಗಿ ನೋಡಿಕೊಳ್ಳುತ್ತಾರೆ. ನನ್ನ ದುಡಿಮೆಯಿಂದಾಗಿ ಪತಿ ಮೇಲಿನ ಹೊರೆಯೂ ಸ್ವಲ್ಪ ತಗ್ಗಿದೆ’ ಎಂದು ಕನಕಪುರ ತಾಲ್ಲೂಕಿನ ಚೀಲೂರು ಗ್ರಾಮದ ನರೇಗಾ ಕಾರ್ಮಿಕರಾದ ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಹಿಳೆಯರಿಗೆ ತುಂಬಾ ಅನುಕೂಲ’ ‘ಮಗು ಕಾರಣಕ್ಕಾಗಿಯೇ ಮಹಿಳೆಯರು ದುಡಿಮೆಯಿಂದ ವಿಮುಖರಾಗುತ್ತಾರೆ. ಇದು ಕುಟುಂಬದ ಆರ್ಥಿಕ ಸ್ವಾವಲಂಬನೆ ಮೇಲೂ ಪರಿಣಾಮ ಬೀರುತ್ತದೆ. ಪತಿ ದುಡಿದರೆ ಪತ್ನಿ ಮಾತ್ರ ಮನೆಯಲ್ಲೇ ಕುಳಿತು ತಿನ್ನುತ್ತಾಳೆ ಎಂಬ ಮೂದಲಿಕೆಯ ಮಾತುಗಳನ್ನು ಸಹ ಎಷ್ಟೋ ಮಂದಿ ಕೇಳಿ ಮಾನಸಿಕವಾಗಿ ಕುಗ್ಗುತ್ತಾರೆ. ಕೂಸಿನ ಮನೆ ಆರಂಭದಿಂದ ಮಹಿಳೆಯರು ಕೂಸಿನ ಮನೆಯಲ್ಲಿ ಮಗು ಬಿಟ್ಟು ನಿಶ್ಚಿಂತೆಯಿಂದ ಕೆಲಸ ಮಾಡುತ್ತಾರೆ. ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಕೂಸಿನ ಮನೆ ಯೋಜನೆಯಿಂದ ಸಣ್ಣ ಮಕ್ಕಳಿರುವ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ಕನಕಪುರ ತಾಲ್ಲೂಕಿನ ಚೀಲೂರು ಗ್ರಾಮದ ಕೂಸಿನ ಮನೆಯ ಆರೈಕೆದಾರರಾದ ವಿಶಾಲಾಕ್ಷಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT