ರಾಮನಗರ: ‘ವಿದ್ಯಾರ್ಥಿಗಳಿಗೆ ವಿದ್ಯೆಯಷ್ಟೇ ಸಂಸ್ಕಾರವೂ ಅಷ್ಟೇ ಮುಖ್ಯ. ಸಂಸ್ಕಾರವಿಲ್ಲದ ವಿದ್ಯೆಗೆ ಮನ್ನಣೆ ಸಿಗದು. ನಾಡು–ನುಡಿ ಬಗ್ಗೆ ಅಭಿಮಾನ, ಹಿರಿಯರನ್ನು ಗೌರವಿಸುವುದು, ತಂದೆ–ತಾಯಿಗೆ ಹೆಮ್ಮೆ ಎನಿಸುವಂತಹ ನಡತೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದು ಉಪನ್ಯಾಸಕ ತುಳಸಿ ರಾಮಶೆಟ್ಟಿ ಸಲಹೆ ನೀಡಿದರು.
ತಾಲ್ಲೂಕಿನ ಲಕ್ಷ್ಮಿಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಮ್ಮದು ಸಾಂಸ್ಕೃತಿಕವಾಗಿ ಶ್ರೀಮಂತವಾದ ನಾಡು. ನಮ್ಮಲ್ಲಿರುವ ವೈವಿಧ್ಯಮಯ ಜಾನಪದ ಕಲೆಗಳನ್ನು ಪೋಷಿಸಿ ಉಳಿಸುವ ಜವಾಬ್ದಾರಿಯೂ ಇಂದಿನ ಯುವಜನರ ಕೈಯಲ್ಲಿದೆ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ಹನುಮಂತರಾಯ, ‘ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಬೆಳೆಸಿಕೊಳ್ಳಬೇಕು. ಕ್ರೀಡೆ ಸೇರಿದಂತೆ ಇತರ ಚಟುವಟಿಕೆಗಳು ನಮ್ಮ ವ್ಯಕ್ತಿತ್ವ ವಿಕಸನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಅವುಗಳಲ್ಲೇ ಸಾಧನೆ ಮಾಡಿ ಬದುಕು ರೂಪಿಸಿಕೊಳ್ಳುವ ಅವಕಾಶಗಳು ಸಾಕಷ್ಟಿವೆ’ ಎಂದು ತಿಳಿಸಿದರು.
‘ಕಾಲೇಜು ಜೀವನ ಶುರುವಾದಾಗಲೇ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತಯಾರಿ ನಡೆಸಬೇಕು. ದಿನಪತ್ರಿಕೆ, ಸ್ಪರ್ಧಾತ್ಮಕ ನಿಯತಕಾಲಿಕೆಗಳು, ಪುಸ್ತಕಗಳನ್ನು ಓದುವ ಮೂಲಕ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಯಾಗಬೇಕು. ಕೋರ್ಸ್‌ಗೆ ಪೂರಕವಾಗಿರುವ ಕೋರ್ಸ್‌ಗಳ ಕಡೆಗೂ ಗಮನ ಹರಿಸಬೇಕು’ ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಕ್ಯಾಲ್‌ಕ್ಯುಲೇಟರ್ ವಿತರಿಸಲಾಯಿತು. ಮಾತೃವಂದನಾ ಕಾರ್ಯಕ್ರಮದಡಿ, ಪ್ರತಿಭಾವಂತ ವಿದ್ಯಾರ್ಥಿಗಳ ತಾಯಂದಿರಿಗೆ ಉಡುಗೊರೆ ನೀಡಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕಲಾ ಮತ್ತು ವಾಣಿಜ್ಯ ವಿಭಾಗದ ತಲಾ ಮೂವರು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಉಪನ್ಯಾಸಕರಾದ ನಾಗೇಶ್ ಕಾಯಕ್ರಮ ನಿರೂಪಣೆ, ಜಯಣ್ಣ ಸ್ವಾಗತ ಹಾಗೂ ಕವಿತಾ ವಂದನಾರ್ಪಣೆ ಮಾಡಿದರು. ಮುಖ್ಯ ಅತಿಥಿ ಮಂಜುನಾಥ್, ಉಪನ್ಯಾಸಕಿ ಗ್ರೀಷ್ಮ ಇದ್ದರು. ವಕೀಲ ಗೋಪಾಲಗೌಡ, ಮಾತೃವಂದನಾ ಕಾರ್ಯಕ್ರಮದ ಪ್ರಾಯೋಜಕ ರವಿಶಂಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.