ಗುರುವಾರ , ಆಗಸ್ಟ್ 11, 2022
26 °C

ಮಕ್ಕಳಿಗೆ ಗ್ರಂಥಾಲಯ ಸದಸ್ಯತ್ವ: ಇಕ್ರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 6 ರಿಂದ 18 ವರ್ಷದೊಳಗಿನ ಮಕ್ಕಳನ್ನು ಗ್ರಂಥಾಲಯ ಸದಸ್ಯರಾಗಿ ನೊಂದಣಿ ಮಾಡಿಕೊಂಡು ಗ್ರಂಥಾಲಯದ ಸೇವೆ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾರಣೆ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಗಳಲ್ಲಿ ಸಂಗ್ರಹಿಸುವ ಗ್ರಂಥಾಲಯ ಕರವನ್ನು ಪ್ರತ್ಯೇಕ ಖಾತೆ ತೆರೆದು ಗ್ರಂಥಾಲಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೆಲವು ಗ್ರಂಥಾಲಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಳೆಯ ನಿರುಪಯುಕ್ತ ಪೀಠೋಪಕರಣಗಳಿಂದ ತುಂಬಿದೆ. ಮೊದಲು ಗ್ರಂಥಾಲಯದಲ್ಲಿರುವ ನಿರುಪಯುಕ್ತ ಪೀಠೋಪಕರಣಗಳ ವಿಲೇವಾರಿಯಾಗಬೇಕು. ಗ್ರಂಥಾಲಯ ಮೇಲ್ವಿಚರಕರಿಗೆ ಅವರ ಕೆಲಸ, ಗ್ರಂಥಾಲಯದಲ್ಲಿ ಇರುವಂತಹ ಪುಸ್ತಕಗಳ ಬಳಕೆ ಹಾಗೂ ಹೆಚ್ಚಿನ ಸಾರ್ವಜನಿಕರ ಸಹಭಾಗಿತ್ವ ಕುರಿತಂತೆ ಕಾರ್ಯಾಗಾರವನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸುವಂತೆ ತಿಳಿಸಿದರು.

ಗ್ರಂಥಾಲಯ ಮೇಲ್ವಿಚಾರಕರು ಸರಿಯಾದ ಸಮಯಕ್ಕೆ ಗ್ರಂಥಾಲಯ ತೆರೆದು ಕಾರ್ಯನಿರ್ವಹಿಸಲು ಮೊದಲ ಹಂತದಲ್ಲಿ ಕೈಜಾಲ ಆ್ಯಪ್‌ನಲ್ಲಿ ಹಾಜರಾತಿ ಪಡೆದುಕೊಳ್ಳಬೇಕು. ಗ್ರಂಥಾಲಯಗಳಿಗೆ ಕಂಪ್ಯೂಟರ್ ಒದಗಿಸಲು ಚಿಂತಿಸಲಾಗುತ್ತಿದ್ದು, ವಿದ್ಯುತ್ ವ್ಯವಸ್ಥೆ ಇರುವ ಗ್ರಂಥಾಲಯದ ಮಾಹಿತಿ ಪಡೆದುಕೊಳ್ಳಿ. ಸ್ವಂತ ಕಟ್ಟಡ ಹೊಂದಿರುವ ಗ್ರಂಥಾಲಯ, ನಿವೇಶನ ಹೊಂದಿರುವ ಗ್ರಂಥಾಲಯ, ದುರಸ್ತಿ ಪಡಿಸಬೇಕಿರುವ ಗ್ರಂಥಾಲಯದ ಮಾಹಿತಿ ಪಡೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಮಕ್ಕಳನ್ನು ಗ್ರಂಥಾಲಯದ ಕಡೆಗೆ ಅಕರ್ಷಿಸಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಲು ‘ಓದುವ ಬೆಳಕು’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳಿಗೆ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಾಲಾ ಶಿಕ್ಷಕರ ಸಹಯೋಗದೊಂದಿಗೆ ವಿಷಯಾಧಾರಿತ ಕಥೆ ಹೇಳುವ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಿ. ವಿಷಯ ಕುರಿತಂತೆ ಗ್ರಂಥಾಲಯದಲ್ಲಿ ದೊರಕುವ ಪುಸ್ತಕಗಳನ್ನು ಪರಿಚಯಿಸುವಂತೆ ತಿಳಿಸಿದರು. ಗ್ರಂಥಾಲಯದಲ್ಲಿ ಎಲ್ಲಾ ಮಕ್ಕಳಿಗೂ ಮುಕ್ತ ಅವಕಾಶ ನೀಡಿ. ಮಕ್ಕಳು ನೊಂದಣಿ ಮಾಡಿಕೊಳ್ಳದಿರುವುದು ಕಂಡುಬಂದಲ್ಲಿ ಸ್ಥಳದಲ್ಲೇ ನೊಂದಣಿ ಮಾಡಿಕೊಳ್ಳಿ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್, ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಗ್ರಂಥಾಲಯ ಇಲಾಖೆ ಉಪನಿರ್ದೇಶಕಿ ಮಮತಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು