ಹೈ ವೋಲ್ಟೇಜ್ ಆಗಿದ್ದ ಕ್ಷೇತ್ರದ ಮೇಲೆ ಈ ಸಲ ಚುನಾವಣಾ ಆಯೋಗ ವಿಶೇಷ ನಿಗಾ ಇಟ್ಟಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅರೆ ಸೇನಾಪಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿತ್ತು. ಅದರಲ್ಲೂ ಕನಕಪುರ ಕ್ಷೇತ್ರದ ಹಲವು ಮತಗಟ್ಟೆಗಳಲ್ಲಿ ಅರೆ ಸೇನಾಪಡೆಯ ತಲಾ ಇಬ್ಬರು ಸಿಬ್ಬಂದಿ ಜೊತೆಗೆ ಪೊಲೀಸರು ಸಹ ಬಂದೋಬಸ್ತ್‌ನಲ್ಲಿದ್ದರು. ಪೊಲೀಸರು ಗೃಹ ರಕ್ಷಕ ಸಿಬ್ಬಂದಿ ಜೊತೆಗೆ ಅರೆ ಸೇನಾಪಡೆ ತುಕಡಿಯನ್ನು ಸಹ ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯಿಂದ 2300 ಪೊಲೀಸರು ಕೆಎಸ್‌ಆರ್‌ಪಿಯಿಂದ 5 ತುಕಡಿ 94 ಸೆಕ್ಟರ್ ಅಧಿಕಾರಿಗಳು 63 ತುಕಡಿಗಳು 1041 ಸಿವಿಲ್ ಪೊಲೀಸರು ಹಾಗೂ 824 ಗೃಹ ರಕ್ಷಕರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಇನ್‌ಸ್ಪೆಕ್ಟರ್‌ಗಳು ಮತ್ತು ಡಿವೈಎಸ್ಪಿಗಳ ನೇತೃತ್ವದ ಮೊಬೈಲ್ ಸ್ಕ್ವಾಡ್‌ಗಳು ಕ್ಷೇತ್ರದಾದ್ಯಂತ ಸಂಚರಿಸಿ ನಿಗಾ ವಹಿಸಿದವು. ಕ್ಷೇತ್ರವಾರು ಡಿ ಮಸ್ಟರಿಂಗ್ ಮತದಾನ ಅವಧಿ ಮುಗಿಯುತ್ತಿದ್ದಂತೆ ವಿಧಾನಸಭಾ ಕ್ಷೇತ್ರವಾರು ಗುರುತಿಸಲಾಗಿದ್ದ ಶಾಲಾ–ಕಾಲೇಜುಗಳಿಗೆ ಬಂದ ಮತಗಟ್ಟೆ ಸಿಬ್ಬಂದಿ ಮತಯಂತ್ರ ಹಾಗೂ ಚುನಾವಣಾ ಪರಿಕರಗಳನ್ನು ರಾತ್ರಿ ಒಪ್ಪಿಸಿದರು. ರಾಮನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚನ್ನಪಟ್ಟಣದಲ್ಲಿ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕನಕಪುರದಲ್ಲಿ ರೂರಲ್ ಪದವಿ ಪೂರ್ವ ಕಾಲೇಜು ಮಾಗಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕುಣಿಗಲ್‌ನ ಮಹಾತ್ಮ ಗಾಂಧೀಜಿ ಪದವಿ ಪೂರ್ವ ಕಾಲೇಜು ರಾಜರಾಜೇಶ್ವರಿ ನಗರದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಬೆಂಗಳೂರು ದಕ್ಷಿಣದ ಜಯನಗರ ನ್ಯಾಷನಲ್ ಕಾಲೇಜು ಹಾಗೂ ಆನೇಕಲ್ ಕ್ಷೇತ್ರದಲ್ಲಿ ಚಂದಾಪುರ ಸ್ವಾಮಿ ವಿವೇಕಾನಂದ ಗ್ರಾಮಾಂತರ ಶಾಲೆಯಲ್ಲಿ ಡಿ ಮಸ್ಟರಿಂಗ್ ಕಾರ್ಯ ಜರುಗಲಿದೆ. ಅಂತಿಮವಾಗಿ ರಾಮನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು ಅಂದು ಅಭ್ಯರ್ಥಿಗಳು ಭವಿಷ್ಯ ಗೊತ್ತಾಗಲಿದೆ. ನಾಯಕರು ಗಣ್ಯರ ಮತ ಚಲಾವಣೆ ಕ್ಷೇತ್ರದ ಘಟಾನುಘಟಿ ನಾಯಕರು ಹಾಗೂ ಜನಪ್ರತಿನಿಧಿಗಳು ತಮ್ಮೂರಿನ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮತ್ತು ಅವರ ಅಣ್ಣ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಹುಟ್ಟೂರಾದ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿಯಲ್ಲಿ ಕುಟುಂಬದೊಂದಿಗೆ ಬಂದು ಮತ ಚಲಾಯಿಸಿದರು. ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ಸಖಿ ಮತಗಟ್ಟೆಯಲ್ಲಿ ಪತ್ನಿ ಅನಿತಾ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆ ರೇವತಿ ಅವರೊಂದಿಗೆ ಬಂದು ಮತ ಚಲಾಯಿಸಿದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಕುಟುಂಬದೊಂದಿಗೆ ತಾಲ್ಲೂಕಿನ ಹುಲಿಕಲ್‌ನಲ್ಲಿ ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಕನಕಪುರ ತಾಲ್ಲೂಕಿನ ಹೂಕುಂದದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಸ್ವಗ್ರಾಮ ಚಕ್ಕೆರೆಯಲ್ಲಿ ಮಾಜಿ ಶಾಸಕ ಎ. ಮಂಜುನಾಥ್ ಬೈರಮಂಗಲದಲ್ಲಿ ಸಿ.ಎಂ. ಲಿಂಗಪ್ಪ ಅವರು ಇಟ್ಟಮಡುವಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು. ತಾಂತ್ರಿಕ ಸಮಸ್ಯೆ; ಮತದಾನ ವಿಳಂಬ ಜಿಲ್ಲೆಯ ಕೆಲವೆಡೆ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಕೆಲ ಹೊತ್ತು ಮತದಾನ ವಿಳಬವಾಯಿತು. ರಾಮನಗರದ ಶಾಂತಿನಿಕೇತನ ಮತಗಟ್ಟೆಯಲ್ಲಿ ಬೆಳಿಗ್ಗೆ ತಾಂತ್ರಿಕ ದೋಷದಿಂದಾಗಿ ಅರ್ಧ ತಾಸು ವಿಳಂಬವಾಗಿ ಮತದಾನ ನಡೆಯಿತು. ಬಿಡದಿಯ ಕಲ್ಲುಗೋಪಹಳ್ಳಿಯಲ್ಲಿ30 ನಿಮಿಷ ಮತದಾನ ಸ್ಥಗಿತಗೊಂಡಿತ್ತು. ಚನ್ನಪಟ್ಟಣ ನಗರದ ಮತಗಟ್ಟೆ ಸಂಖ್ಯೆ 84ರಲ್ಲಿ ಜಯಮ್ಮ ಎಂಬವರ ಹೆಸರು ಬದಲಾಗಿ ಸೈಯದ್ ಜಾವಿದ್ ಎಂಬ ಹೆಸರು ಮುದ್ರಣ ಮಾಡಿದ್ದರಿಂದ ಮತಗಟ್ಟೆ ಅಧಿಕಾರಿಗಳು ಜಯಮ್ಮ ಅವರಿಗೆ ಹಕ್ಕು ಚಲಾಯಿಸಲು ಅವಕಾಶ ನೀಡಲಿಲ್ಲ. ಉಳಿದಂತೆ ಬಹುತೇಕ ಕಡೆ ಯಾವುದೇ ತೊಂದರೆ ಇಲ್ಲದೆ ಮತದಾನ ಜರುಗಿತು.