ಬಿಜೆಪಿಯ ಹಿಂದುತ್ವದ ಪ್ರಯೋಗ ನಡೆಯದ ಜಿಲ್ಲೆಯಲ್ಲಿ ಮೃದು ಹಿಂದುತ್ವ ಪ್ರಯೋಗಿಸಿ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಲೆಕ್ಕಾಚಾರ ಕಾಂಗ್ರೆಸ್‌ನದ್ದು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಚುನಾವಣಾ ವಿಷಯವಾಗಿರುವ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಅಲೆಯ ಪರಿಣಾಮ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಗೆಲುವಿನ ಓಟಕ್ಕೆ ಅಡ್ಡಿಯಾಗದಂತೆ ತಡೆಯಬೇಕಿದೆ. ಅದಕ್ಕಾಗಿ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ ಹಾಗೂ ರಾಮನಗರದಲ್ಲಿ ರಾಮೋತ್ಸವ ವಿಷಯವನ್ನು ಸ್ಥಳೀಯವಾಗಿ ಮುನ್ನೆಲೆಗೆ ತರಲಾಗಿದೆ. ಇದರಿಂದ ಮತದಾರರರನ್ನು ತಮ್ಮತ್ತ ಸೆಳೆದು ಬಿಜೆಪಿ–ಜೆಡಿಎಸ್ ಮೈತ್ರಿಗೆ ತಿರುಗೇಟು ಕೊಡಲು ಕಾಂಗ್ರೆಸ್ ತಂತ್ರ ಹೆಣೆದಿದೆ ಎಂದು ಹೇಳಲಾಗುತ್ತಿದೆ.
ರಣಹದ್ದುಗಳ ಸಂರಕ್ಷಿತ ವಲಯ
‘ಪರಿಸರ ಸೂಕ್ಷ್ಮವಲಯ ಹಾಗೂ ಉದ್ದ ಕೊಕ್ಕಿನ ರಣಹದ್ದುಗಳ ಆವಾಸಸ್ಥಾನವಾಗಿರುವ ಬೆಟ್ಟದಲ್ಲಿ ಮಂದಿರ ನಿರ್ಮಾಣಕ್ಕೆ ಜಾಗ ಲಭ್ಯತೆ ಕುರಿತು ಸರ್ವೇ ನಡೆಸಲು ಅರಣ್ಯ ಇಲಾಖೆ ಮತ್ತು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಸಂಸದ ಡಿ.ಕೆ. ಸುರೇಶ್ ಎರಡು ದಿನದ ಹಿಂದೆ ಹೇಳಿದ್ದಾರೆ. ರಾಮದೇವರ ಬೆಟ್ಟವನ್ನು 2012ರಲ್ಲಿ ಸಂರಕ್ಷಿತ ಹಾಗೂ ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲಾಗಿದೆ. ಅಳಿವಿನ ಅಂಚಿನಲ್ಲಿರುವ ಉದ್ದ ಕೊಕ್ಕಿನ ರಣಹದ್ದುಗಳ ವಾಸಸ್ಥಾನವಾಗಿದೆ. ಹಾಗಾಗಿ ಬೆಟ್ಟದ ಅಭಿವೃದ್ಧಿ ಅಥವಾ ರಾಮಮಂದಿರ ನಿರ್ಮಾಣ ಕುರಿತು ಯಾವುದೇ ಬೆಳವಣಿಗೆ ನಡೆದಿಲ್ಲ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.