ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಗಳಿಗೆ ಬೇಕು ಹೊಸತನದ ಸ್ಪರ್ಶ: ಹಂಸಲೇಖ

ಜಾನಪದ ಪರಿಷತ್ತಿನಿಂದ ಸಾಧಕರಿಗೆ ಜಾನಪದ ಲೋಕ ಪ್ರಶಸ್ತಿ ಪ್ರದಾನ; ಗಮನ ಸೆಳೆದ ಕಲಾ ವೈಭವ
Published 12 ಫೆಬ್ರುವರಿ 2024, 6:03 IST
Last Updated 12 ಫೆಬ್ರುವರಿ 2024, 6:03 IST
ಅಕ್ಷರ ಗಾತ್ರ

ರಾಮನಗರ: ‘ಜನಪದಕ್ಕೆ ಆಯುಸ್ಸು ಜಾಸ್ತಿ, ಜಗತ್ತಿಗೆ ಅದು ಅನಿವಾರ್ಯ ಕೂಡ. ನಮ್ಮ ಕಲೆಗಳಿಗೆ ಹೊಸತನ ಕೊಡುವ ಕೆಲಸವಾಗಬೇಕಿದೆ. ನಾವು ಸುಮ್ಮನಿದ್ದರೆ, ನಮ್ಮದೆಲ್ಲವೂ ಪರರ ಸ್ವತ್ತಾಗುತ್ತದೆ. ಹಾಗಾಗಿ, ನಮ್ಮ ಮೀಸೆಯನ್ನು ನಾವು ಮೊದಲು ತಿರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಕರ್ನಾಟಕ ಜಾನಪದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಜಾನಪದ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಜಗತ್ತಿಗೆ ಜನಪದರು ಅನಿವಾರ್ಯವಾಗಿದ್ದಾರೆ. ಇದಕ್ಕೆ ಪೂರಕವಾಗಿ ಜನಪದರು ಪಾರಿಭಾಷಿಕ ಜ್ಞಾನ, ಸಂಗೀತದ ತಾಂತ್ರಿಕ ಹಾಗೂ ಶಾಸ್ತ್ರೀಯ ಜ್ಞಾನ ಮೈಗೂಡಿಸಿಕೊಳ್ಳಬೇಕು. ಏನೇ ಬಂದರೂ ಎದುರಿಸುವೆ ಎಂಬ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಮಕ್ಕಳಿಗೆ ಜನಪದವೇ ನಮ್ಮ ಉಸಿರು ಎಂದು ಹೇಳಿಕೊಡಬೇಕು. ಕಲಾವಿದರಿಗೆ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ದೇಸಿ ಕಬಡ್ಡಿಯನ್ನು ಪ್ರೊ ಕಬಡ್ಡಿ ಮಾಡಿ, ಸಿಮೆಂಟ್ ಮೈದಾನದಲ್ಲಿ ಕಬಡ್ಡಿ ಆಡಿಸಿ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆ. ನಾವು ಇದು ನಮ್ಮ ಕಬಡ್ಡಿ ಕಣ್ಲಾ ಅಂತ ಎಂಜಾಯ್ ಮಾಡುತ್ತಿದ್ದೇವೆ. ನಮ್ಮ ಕಲೆಗಳನ್ನು ನಾವೇ ಮೇಲ್ಮಟ್ಟಕ್ಕೆ ಏರಿಸಬೇಕು. ಜಾನಪದದ ಸೊಗಡಿಗೆ ಸಿಲಬಸ್ ಇಲ್ಲ. ಲಾವಣಿಗೆ ವ್ಯಾಕರಣವಿಲ್ಲ. ಮುಗುಳುನಗೆಗೆ ಛಂದಸ್ಸಿಲ್ಲ. ಶಾಸ್ತ್ರವಿಲ್ಲದಿದ್ದರೆ ನಾವು ಕಡೆಗಣನೆಯಾಗುತ್ತವೆ. ಶಾಸ್ತ್ರಗಳೇ ಅವರ ಅಸ್ತ್ರವಾಗಿರುವಾಗ, ನಾವು ಸಹ ಶಾಸ್ತ್ರ ಪಾರಂಗತರಾಗಬೇಕು’ ಎಂದು ಕಿವಿಮಾತು ಹೇಳಿದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಮಾತನಾಡಿ, ‘ಈಗಿನ ವ್ಯಕ್ತಿಗಳಲ್ಲಿ ಇರುವ ದುರಾಸೆ ಬುಡಕಟ್ಟು ಸಮುದಾಯದವರಲ್ಲಿಲ್ಲ. ಶ್ರೀಮಂತನಾಗಬೇಕು ಎಂಬುದು ತಪ್ಪಲ್ಲ. ಆದರೆ, ಕಾನೂನು ಚೌಕಟ್ಟಿನಲ್ಲಿ ಆಗಬೇಕು. ಈಗಿನ ಪರಿಸ್ಥಿತಿ ಅದಕ್ಕೆ ತದ್ವಿರುದ್ದವಾಗಿದೆ. ತಿಜೋರಿ ಎಂಬುದು ಕೆಟ್ಟ ಅಭ್ಯಾಸ.‌ ಈಗ ತಿಜೋರಿ ಸೇರುತ್ತಿರುವ ಹೆಚ್ಚಿನ ಸಂಪತ್ತು ಕೆಟ್ಟ ಹಾದಿಯಲ್ಲಿ ಸಂಪಾದನೆ ಮಾಡಿದ್ದು ಎಂಬುದು ಬೇಸರದ ಸಂಗತಿ’ ಎಂದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಪರಿಷತ್ತಿನ ಕಾರ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ, ‘ರಾಜಕಾರಣಿಗಳು ಮತ್ತು ಉದ್ಯಮಿಗಳ‌ ಮೆರವಣಿಗೆಯಲ್ಲಿ ಜಾನಪದ ಕಲಾವಿದರ ದುರ್ಬಳಕೆ ಆಗಬಾರದು ಎಂದು ನಾಗೇಗೌಡ ಅವರು ಹೇಳಿದ್ದರು‌‌. ಅದಕ್ಕೆ ಪೂರಕವಾಗಿ ಜಾನಪದ ಲೋಕದಲ್ಲಿ ಕಲಾವಿದರಿಗೆ ಗೌರವ ತಂದುಕೊಡುವ ಕೆಲಸ ಮಾಡಿದರು’ ಎಂದು ನೆನೆದರು.

ದತ್ತಿ ಘೋಷಣೆ: ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರು, ತಮ್ಮ ಸಂಸ್ಥೆ ಹೆಸರಲ್ಲಿ ಇಬ್ಬರು ಕಲಾವಿದರಿಗೆ ದತ್ತಿ ಪ್ರಶಸ್ತಿ ನೀಡಲು ₹2 ಲಕ್ಷ ಘೋಷಿಸಿದರು. ರಾಮನಗರದ ಚಂದ್ರ ಸ್ಟೋರ್‌ನ ಕೆ.ಎಸ್.‌ ಕಾಂತರಾಜು ಅವರು ಯುವ ಜನೋತ್ಸವಕ್ಕೆ ₹1 ಲಕ್ಷ ದತ್ತಿ ಘೋಷಣೆ ಮಾಡಿದರು.

ಜಾನಪದ ಕಡಲೋತ್ಸವದ ಪೋಸ್ಟರ್ ಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಕಲಾವಿದೆ ವೈ.ಜಿ. ಉಮಾ ಜಾನಪದ ಹಾಡು ಗಮನ ಸೆಳೆಯಿತು. ಪರಿಷತ್ತಿನ ಆಡಳಿತಾಧಿಕಾರಿ ನಂದಕುಮಾರ್, ಕ್ಯುರೇಟರ್ ಡಾ.ಯು.ಎಂ. ರವಿ, ಕಾರ್ಯನಿರ್ವಾಹಕ ಅಧಿಕಾರಿ ಸರಸವಾಣಿ ಹಾಗೂ ಸಿಬ್ಬಂದಿ ಇದ್ದರು.

ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದ ಜಾನಪದ ಕಲಾಮೇಳಗಳ ಮೆರವಣಿಗೆಯಲ್ಲಿ ಪೂಜಾ ಕುಣಿತ ಗಮನ ಸೆಳೆಯಿತು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ನಡೆದ ಜಾನಪದ ಕಲಾಮೇಳಗಳ ಮೆರವಣಿಗೆಯಲ್ಲಿ ಪೂಜಾ ಕುಣಿತ ಗಮನ ಸೆಳೆಯಿತು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪೂಜಾ ಕುಣಿತದ ಜೊತೆಗೆ ತಮಟೆ ಬಡಿದು ಗಮನ ಸೆಳೆದ ಬಾಲ ಕಲಾವಿದ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದ ಸಮಾರೋಪ ಸಮಾರಂಭದಲ್ಲಿ ಪೂಜಾ ಕುಣಿತದ ಜೊತೆಗೆ ತಮಟೆ ಬಡಿದು ಗಮನ ಸೆಳೆದ ಬಾಲ ಕಲಾವಿದ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ಗೊರವನ ಕುಣಿತದ ಕಲಾವಿದರು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ಗೊರವನ ಕುಣಿತದ ಕಲಾವಿದರು
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ವೇಷಧಾರಿ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕೋತ್ಸವದಲ್ಲಿ ಗಮನ ಸೆಳೆದ ವೇಷಧಾರಿ
ಮನುಷ್ಯನ ಬೆಳವಣಿಗೆಗೆ ವಿಜ್ಞಾನ ಮನಃಶಾಂತಿಗೆ ಅಧ್ಯಾತ್ಮ ಹಾಗೂ ಮಂಗಳಕರಕ್ಕೆ ಕಲೆ ಬೇಕು. ಜಾನಪದ ಕಲೆಗಳು ಮನುಷ್ಯನಿಗೆ ಸಂಸ್ಕಾರದ ಜೊತೆಗೆ ಮನಸ್ಸಿಗೆ ಶಾಂತಿ‌ ಕೊಡುತ್ತವೆ.
– ನಿರ್ಮಲಾನಂದನಾಥ ಸ್ವಾಮೀಜಿ ಪೀಠಾಧೀಶರು ಆದಿಚುಂಚನಗಿರಿ ಮಹಾಸಂಸ್ಥಾನ ಮಠ
ಕಾಲಚಕ್ರದ ಬದಲಾವಣೆ ಒಳ್ಳೆಯ ಕಡೆಗೆ ಹೋಗಬೇಕು. ಈ ನಿಟ್ಟಿನಲ್ಲಿ ಅಕ್ಷರಸ್ಥರಷ್ಟೇ ಅನಕ್ಷರಸ್ಥರ ಅನುಭವವೂ ಬೇಕು. ನಮ್ಮೊಳಗಿರುವ ಅನಿಷ್ಟಗಳನ್ಮು ತಿದ್ದಿಕೊಂಡು ಮನುಷ್ಯರಾಗಿ ಒಳ್ಳೆಯದರತ್ತ ಸಾಗಬೇಕು.
– ಡಾ. ಕಾಳೇಗೌಡ ನಾಗವಾರ ಜಾನಪದ ವಿದ್ವಾಂಸ

ಸಂಶೋಧನಾ ಕೇಂದ್ರ ಉದ್ಘಾಟನೆ

ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಲೋಕದಲ್ಲಿ ನಾಡೋಜ ಎಚ್‌.ಎಲ್. ನಾಗೇಗೌಡ ಜಾನಪದ ಸಂಶೋಧನಾ ಕೇಂದ್ರವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಉದ್ಘಾಟಿಸಿದರು.

ನಂತರ ಸಂಶೋಧಕರಾದ ಡಾ. ಅರುಣ್ ಜೋಳದಕೂಡ್ಲಿಗಿ ಡಾ. ಶಿವರಾಜ್ ಬ್ಯಾಡರಹಳ್ಳಿ ಹಾಗೂ ಡಾ. ಕೃಷ್ಣಮೂರ್ತಿ ಸಂಶೋಧನಾ ಫಲಿತಗಳನ್ನು ಬಿಡುಗಡೆ ಮಾಡಿದರು. ಗೀತ ನೃತ್ಯ ವೈವಿಧ್ಯದ ರಸದೌತಣ ಸಂಜೆ ಶುರುವಾದ ಗೀತ ಮತ್ತು ನೃತ್ಯ ವೈವಿಧ್ಯವು ನೋಡುಗರ ಮನಸೂರೆಗೊಂಡಿತು.

ಕೋಲಾರದ ವೈ.ಜಿ. ಉಮಾ ಮತ್ತ ತಂಡ ಪ್ರಸ್ತುತಪಡಿಸಿದ ಜನಪದ ಗೀತ ವೈವಿಧ್ಯ ರೋಮಾಂಚನಗೊಳಿಸಿತು. ಶಿವಮೊಗ್ಗದ ಗುಡ್ಡಪ್ಪ ಜೋಗಿ ತಂಡದ ಕಿನ್ನರಿ ಜೋಗಿ ಪದಗಳು ರಾಮನಗರದ ಶಿವಪ್ಪ ಅವರ ಏಕತಾರಿ ಪದಗಳು ಧಾರವಾಡದ ಲಕ್ಷ್ಮಿಬಾಯಿ ಹರಿಜನ ಮತ್ತು ತಂಡದ ಗೀಗಿ ಪದ ಬೀದರ್‌ನ ನಾಗಮ್ಮ ಮರಖಲ ಅವರ ಬುಲಾಯಿ ಪದ ಶಿವಮೊಗ್ಗದ ಬೆಳ್ಳಿಯಪ್ಪ ಅವರ ಡೊಳ್ಳು ಕುಣಿತ ಹಾಸನದ ದ್ಯಾವೇಗೌಡ ಮತ್ತು ತಂಡದ ಸೋಮನ ಕುಣಿತ ಚಾಮರಾಜನಗರದ ಮಹದೇವೇಗೌಡ ಮತ್ತು ತಂಡ ಗೊರವರ ಕುಣಿತ ಕುಮಾರನಾಯ್ಕ ತಂಡದ ಕಂಸಾಳೆ ಎಚ್‌ಎಲ್‌ಎನ್‌ ಕಲಾ ಶಾಲೆ ವಿದ್ಯಾರ್ಥಿಗಳ ಪಟ ಕುಣಿತ ಹಾಗೂ ಮಳವಳ್ಳಿಯ ಎಂ. ನಾಗೇಂದ್ರ ಅವರ ತಂಬೂರಿ ಪದ ಬಯಲು ರಂಗಮಂದಿರದಲ್ಲಿ ಕಿಕ್ಕಿರಿದು ನೆರೆದಿದ್ದವರಿಗೆ ರಸದೌತಣ ಬಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT