ಮಂಗಳವಾರ, ಫೆಬ್ರವರಿ 18, 2020
28 °C

ಕಳಪೆ ಬಿತ್ತನೆ ಬೀಜ: ₹93 ಸಾವಿರ ಪರಿಹಾರಕ್ಕೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕಲಬೆರಕೆ ಬಿತ್ತನೆ ಬೀಜದಿಂದ ನಷ್ಟ ಅನುಭವಿಸಿದ ರೈತನಿಗೆ ಪರಿಹಾರವಾಗಿ ₨93,219 ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಆದೇಶ ನೀಡಿತು.

ಮಾಗಡಿ ತಾಲ್ಲೂಕಿನ ಕಸಬಾ ಹೋಬಳಿಯ ಬೆಳಗುಂಬ ಗ್ರಾಮದ ನರಸೇಗೌಡ ಪರಿಹಾರ ಪಡೆಯಲಿರುವ ರೈತ. ಇವರು ತಮ್ಮ 2 ಎಕರೆ 36 ಗುಂಟೆ ಕುಷ್ಕಿ ಜಮೀನಿನಲ್ಲಿ ಬಿತ್ತನೆ ಮಾಡಲು ಮಾಗಡಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ 2018ರ ಜೂನ್ 19ರಂದು ₨500 ಪಾವತಿಸಿ 25 ಕೆ.ಜಿ ಎಂ.ಆರ್-6 ಬಿತ್ತನೆ ರಾಗಿ ಖರೀದಿಸಿ ಬಿತ್ತನೆ ಮಾಡಿದ್ದರು. ಪ್ರತಿ ವರ್ಷ 45 ಕ್ವಿಂಟಲ್ ರಾಗಿ ಇಳುವರಿ ಪಡೆಯುತ್ತಿದ್ದ ನರಸೇಗೌಡ ಅವರಿಗೆ ಈ ವರ್ಷ ಕೇವಲ 18 ಕ್ವಿಂಟಲ್‌ ಫಸಲು ಸಿಕ್ಕಿತ್ತು. ಕಳಪೆ ಬಿತ್ತನೆ ಬೀಜದ ಕಾರಣ ಹೀಗಾಗಿದೆ ಎಂದು ದೂರಿ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು.

ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ದೂರಿನ ವಿಚಾರಣೆ ನಡೆಸಿತು. ಬೆಳೆ ನಷ್ಟದ ಪರಿಹಾರವಾಗಿ ₨78,219, ಮಾನಸಿಕ ಹಾಗೂ ದೈಹಿಕ ತೊಂದರೆಗೆ ಪರಿಹಾರವಾಗಿ ₨10 ಸಾವಿರ ಹಾಗೂ ವ್ಯಾಜ್ಯದ ಖರ್ಚು ₨5 ಸಾವಿರ ಅನ್ನು ಆರು ವಾರದ ಒಳಗೆ ನೀಡುವಂತೆ ವೇದಿಕೆಯು ಆದೇಶ ನೀಡಿತು. ಪರಿಹಾರ ನೀಡಲು ತಡವಾದಲ್ಲಿ ದೂರು ಸಲ್ಲಿಸಿದ ದಿನದಿಂದ ಪರಿಹಾರ ವಿತರಣೆ ದಿನದವರೆಗೂ ಶೇ 6ರ ಬಡ್ಡಿ ನೀಡುವಂತೆಯೂ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಅಧ್ಯಕ್ಷ ಎಸ್. ಎಲ್. ಪಾಟೀಲ್, ಸದಸ್ಯ ಪಿ.ಕೆ ಶಾಂತ ಆದೇಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು