ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಗಡಿ | ಉರ್ದು ಶಾಲೆ ನೆಲಸಮ: ವಿದ್ಯಾರ್ಥಿ, ಶಿಕ್ಷಕರಿಗೆ ಸಂಕಷ್ಟ

ಅನುದಾನದ ಭರವಸೆ ನಂಬಿ ದುಃಸ್ಥಿತಿಗೊಳಗಾದ ಮಾಗಡಿಯ ಸರ್ಕಾರಿ ಶಾಲೆ
ಸುಧೀಂದ್ರ ಸಿ.ಕೆ.
Published 2 ಜುಲೈ 2024, 4:04 IST
Last Updated 2 ಜುಲೈ 2024, 4:04 IST
ಅಕ್ಷರ ಗಾತ್ರ

ಮಾಗಡಿ: ಅಧಿಕಾರಿಗಳ ಆತುರ ಹಾಗೂ ಬೇಜವಾಬ್ದಾರಿಯಿಂದಾಗಿ ಮಾಗಡಿಯ 20ನೇ ವಾರ್ಡ್‌ನ ಹಳೇ ಮಸೀದಿ ಮೊಹೊಲ್ಲಾದ ಸರ್ಕಾರಿ ಉರ್ದು ಜಿಯುಎನ್‌ಟಿಎಂಎಸ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.

ನೂತನ ಶಾಲೆ ಕಟ್ಟಡಕ್ಕೆ ಅನುದಾನ ನೀಡುವುದಾಗಿ ಅಧಿಕಾರಿಗಳು ನೀಡಿದ್ದ ಭರವಸೆ ಮೇರೆಗೆ ಶಿಥಿಲಾವಸ್ಥೆ ಯಲ್ಲಿದ್ದ ಉರ್ದು ಶಾಲೆಯ ಕಟ್ಟಡವನ್ನು ನೆಲಸಮ ಮಾಡಲಾಗಿದೆ.

ಆದರೆ, ಅತ್ತ ಅನುದಾನವೂ ಇಲ್ಲದೇ ಇತ್ತ ಶಾಲಾಕಟ್ಟಡವೂ ಇಲ್ಲದೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ.‌‌

ಅಧಿಕಾರಿಗಳ ಎಡವಟ್ಟಿನಿಂದ, ಇದ್ದ ಕೊಠಡಿಗಳನ್ನೂ ಕೆಡವಿದ ಪರಿಣಾಮ, ಈಗ ಒಂದೇ ಕೊಠಡಿಯಲ್ಲಿ ಬೇರೆ ಬೇರೆ ತರಗತಿಯ ವಿದ್ಯಾರ್ಥಿಗಳು ಒಟ್ಟಿಗೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ಉರ್ದು ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಒಟ್ಟು 65 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮೂರು ಕೊಠಡಿಗಳು ಮಾತ್ರ ಇವೆ. ಇದರಲ್ಲಿ ಒಂದು ಕೊಠಡಿ ಮುಖ್ಯ ಶಿಕ್ಷಕರದ್ದು.  ಒಂದು ಕೊಠಡಿ ಶಿಥಿಲಾವಸ್ಥೆಯಲ್ಲಿ ದ್ದರೆ, ಮತ್ತೊಂದು ಕೊಠಡಿಯಲ್ಲಿ ಮಳೆ ಬಂದರೆ ನೀರು ಸೋರುತ್ತದೆ. ಈ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ ಮಾಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಮುಖ್ಯಶಿಕ್ಷಕಿ ನಗೀನಾ ತಾಜ್.

ಮಾಗಡಿ ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆ ಕಟ್ಟಡ ನೆಲಸಮ ಮಾಡಿರುವುದು

ಮಾಗಡಿ ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆ ಕಟ್ಟಡ ನೆಲಸಮ ಮಾಡಿರುವುದು

ಅಧಿಕಾರಿಗಳ ಎಡವಟ್ಟು:

ತಾಲ್ಲೂಕಿನಲ್ಲಿ ‘ವಿವೇಕ ಶಾಲೆ’ ಯೋಜನೆ ಅಡಿಯಲ್ಲಿ ಉರ್ದು ಶಾಲೆಗೆ ಎರಡು ಕೊಠಡಿಗಳು ಮಂಜೂರಾತಿ ಮಾಡಲಾಗಿತ್ತು. ಈ ಹಿಂದೆ ಇದ್ದ ಬಿಇಒ ಯತೀಕುಮಾರ್ ಅವರು, ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಅನುದಾನ ಬಿಡುಗಡೆಯಾಗಿದೆ ಎಂದು 2022ರಲ್ಲಿ ನಾಲ್ಕು ಕೊಠಡಿಯನ್ನು ಏಕಾಏಕಿ ನೆಲಸಮ ಮಾಡಿದ್ದಾರೆ. ₹ 13.90 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನ ದಿಂದ ಈ ಶಾಲೆಗೆ ಬರಬೇಕಾದ ಅನುದಾನವನ್ನು ಪಟ್ಟಣದ ಮತ್ತೊಂದು ಉರ್ದುಶಾಲೆಗೆ ಬಿಡುಗಡೆಯಾಯಿತು. ಅನುದಾನದ ನಿರೀಕ್ಷೆಯಲ್ಲಿದ್ದ ನಮಗೆ ಸಂಕಷ್ಟ ತಂದೊಡ್ಡಿದೆ ಎಂದು ಹಳೇ ಮಸೀದಿ ಮೊಹೊಲ್ಲಾದ ಸರ್ಕಾರಿ ಉರ್ದು ಜಿಯುಎನ್‌ಟಿಎಂಎಸ್ ಶಾಲಾ ಆಡಳಿತ ಮಂಡಳಿಯವರು ಆರೋಪಿಸುತ್ತಾರೆ.

ಪ್ರಯೋಜನ ತಾರದ ಭೇಟಿ:

ಶಾಲೆಗೆ ಅನುದಾನ ಬಿಡುಗಡೆಯಾಗದ ಕುರಿತು ಮೇಲಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿದ್ದಾರೆ. ಆದರೂ ಇದುವರೆಗೆ ಶಾಲೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಸಿಲ್ಲ. ಈ ಹಿಂದೆ ಇದ್ದ ರಾಮನಗರದ ಡಿಡಿಪಿಐ ಗಂಗಣ್ಣ ಸ್ವಾಮಿ ಅವರು ನಮ್ಮ ಶಾಲೆಗೆ ಭೇಟಿ ನೀಡಿ ಅನುದಾನ ತಂದು ಹೊಸ ಕಟ್ಟಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಉರ್ದು ಶಾಲೆಯ ಶಿಕ್ಷಕರು ನೊಂದು ನುಡಿದರು.

ಚುನಾವಣೆ ಬಂದರೆ ತೊಂದರೆ: ಪಟ್ಟಣದ ಹಳೆ ಮಸೀದಿ ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಶಾಲೆಯನ್ನು ಚುನಾವಣೆ ಬಂದಾಗ ಮತದಾನದ ಕೇಂದ್ರವಾಗಿ ಮಾಡಿಕೊಳ್ಳಲಾಗುತ್ತದೆ. ಆಗ ಶಾಲೆಯ ಪೀಠೋಪಕರಣ ಹಾಗೂ ಶಾಲೆಗೆ ಸಂಬಂಧಿಸಿದ ಪುಸ್ತಕಗಳನ್ನು ಬೇರೆ ಕೊಠಡಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಚುನಾವಣೆ ಬಂದು, ಮುಗಿಯುವುದರೊಳಗೆ ಶಿಕ್ಷಕರು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಮುಖ್ಯ ಶಿಕ್ಷಕರ ಕೊಠಡಿಯಲ್ಲೇ ಪಾಠ: ಇದ್ದ ಕೊಠಡಿಗಳನ್ನು  ಒಡೆದಿರುವುದರಿಂದ ಮಕ್ಕಳಿಗೆ ಪಾಠ ಮಾಡಲು ಕೊಠಡಿಗಳ ಸಮಸ್ಯೆ ಎದುರಾಗಿದೆ.  ಹಾಗಾಗಿ, ಮುಖ್ಯ ಶಿಕ್ಷಕರ ಕೊಠಡಿಯಲ್ಲೇ ಪಾಠ ಮಾಡಬೇಕಿದೆ. ಅಲ್ಲಿಯೇ ವಿದ್ಯಾರ್ಥಿಗಳ ಪುಸ್ತಕ, ಪೀಠೋಪಕರಣಗಳು, ಆಟವಾಡುವ ವಸ್ತುಗಳನ್ನು ಇಡುವಂತಾಗಿದೆ. ಸರ್ಕಾರ ಕೂಡಲೇ ಹೊಸ ಕಟ್ಟಡ ಕಟ್ಟಲು ಅನುದಾನ ಬಿಡುಗಡೆ ಮಾಡಿ, ಅನುಕೂಲ ಮಾಡಿಕೊಡಬೇಕೆಂದು ಶಿಕ್ಷಕರ ಮನವಿ.

ಕೊಠಡಿಗಳ ಸಮಸ್ಯೆಯಿಂದ ಶಾಲೆಯ ಪೀಠೋಪಕರಣಗಳ ಮಧ್ಯೆ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಕೊಠಡಿಗಳ ಸಮಸ್ಯೆಯಿಂದ ಶಾಲೆಯ ಪೀಠೋಪಕರಣಗಳ ಮಧ್ಯೆ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಅನುದಾನಕ್ಕೆ ಕ್ರಮ

ತಾಲ್ಲೂಕಿಗೆ ವಿವೇಕ ಶಾಲೆ ಯೋಜನೆ ಅಡಿ 20 ಶಾಲೆಗಳಿಗೆ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆಯಾಗಿತ್ತು. ಸರ್ಕಾರ ಅನುದಾನವನ್ನು ತಡೆಹಿಡಿದ ಪರಿಣಾಮ ಪಟ್ಟಣದ ಉರ್ದು ಶಾಲೆಗೆ ಹೊಸ ಕಟ್ಟಡಕ್ಕೆ ಅನುದಾನ ಬಿಡುಗಡೆ ಆಗಿಲ್ಲ. ಕಟ್ಟಡವನ್ನು ಒಡೆದಿರುವುದರಿಂದ ವಿದ್ಯಾರ್ಥಿಗಳಿಗೆ ಅನನುಕೂಲವಾಗಿದ್ದು ಶಾಸಕರ ಗಮನಕ್ಕೆ ತರಲಾಗಿದೆ. ಅನುದಾನ ಬಿಡುಗಡೆ ಆದ ಕೂಡಲೇ ಹೊಸ ಕಟ್ಟಡಕ್ಕೆ ಚಾಲನೆ ಕೊಡಲಾಗುತ್ತದೆ. ಚಂದ್ರಶೇಖರ್‌, ಬಿಇಒ ಮಾಗಡಿ

ಹಿಂದಿನ ಬಿಇಒ ಎಡವಟ್ಟಿನಿಂದ ಕಟ್ಟಡ ಒಡೆಯಲಾಗಿದೆ. ಸ್ಥಳೀಯ ಶಾಸಕ ಕೂಡಲೇ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಬೇಕು

-ಕೆ.ವಿ.ಬಾಲು, ಸದಸ್ಯ, ಮಾಗಡಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT