ರಾಮನಗರ: ಜಿಲ್ಲೆಯಲ್ಲಿರುವ ಸಫಾಯಿ ಕರ್ಮಚಾರಿಗಳಿಗೆ ವಸತಿ ಸೇರಿದಂತೆ ಕೆಲ ಪುನರ್ವಸತಿ ಸೌಲಭ್ಯ ಮತ್ತು ಪೌರ ಕಾರ್ಮಿಕರಿಗೆ ಕೆಲ ಸವಲತ್ತು ಕೊಡುವಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ನಿರ್ಲಕ್ಷ್ಯದ ಕುರಿತು, ಸಫಾಯಿ ಕರ್ಮಚಾರಿ ಆಯೋಗದ ಹೆಚ್ಚುವರಿ ನಿರ್ದೇಶಕಿ ಮತ್ತು ಕಾರ್ಯದರ್ಶಿ ಚಂದ್ರಕಲಾ ಹಾಗೂ ಸಂಶೋಧನಾ ಅಧಿಕಾರಿ ಮಹದೇವಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರಿಗೆ, ಅಧಿಕಾರಿಗಳ ನಿರ್ಲಕ್ಷ್ಯದ ಜೊತೆಗೆ ಹಲವು ಸಮಸ್ಯೆಗಳು ಗಮನಕ್ಕೆ ಬಂದು. ಕರ್ಮಚಾರಿಗಳಿಗೆ ಮನೆ ನಿರ್ಮಾಣ ಕುರಿತ ಪ್ರಶ್ನೆಗೆ, ಅಧಿಕಾರಿಗಳಿಂದ ‘ಜಾಗ ಗುರುತಿಸಿಲ್ಲ’ ಎಂಬ ಪ್ರತಿಕ್ರಿಯೆ ಬಂದಿತು.
‘ಯಾರೂ ಮಾಡದ ಕೆಲಸ ಮಾಡುವ ಸಫಾಯಿ ಕರ್ಮಚಾರಿಗಳಿಗೆ ಸೌಲಭ್ಯ ಕೊಡುವಲ್ಲಿ ನಿರ್ಲಕ್ಷ್ಯ ಸಲ್ಲದು. ಕರ್ಮಚಾರಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ಸೌಲಭ್ಯ ಕಲ್ಪಿಸಲು ತಮ್ಮ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ವರದಿ ನೀಡಬೇಕು. ಜೊತೆಗೆ ಪೌರ ಕಾರ್ಮಿಕರಿಗೂ ವಸತಿ ವ್ಯವಸ್ಥೆಗೂ ಕ್ರಮ ಕೈಗೊಳ್ಳಬೇಕು’ ಎಂದು ಇಬ್ಬರೂ ಅಧಿಕಾರಿಗಳು ಸೂಚನೆ ನೀಡಿದರು.
ಭೂ ಮಾಲೀಕರನ್ನಾಗಿಸಿ: ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರಿಗೆ ಸ್ವಂತ ಸೂರಿಲ್ಲ. ಅವರಿಗೆ ವಸತಿ ಸಂಕೀರ್ಣ ನಿರ್ಮಿಸಿ ಮನೆ ಕೊಡುವ ಬದಲು, ನಿವೇಶನ ಕೊಟ್ಟು ಅಲ್ಲಿ ಮನೆ ನಿರ್ಮಿಸಿ ಕೊಟ್ಟರೆ ಅವರೂ ಭೂಮಿ ಮಾಲೀಕರಾಗುತ್ತಾರೆ’ ಎಂದು ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಆರ್. ನಾಗರಾಜು ಮನವಿ ಮಾಡಿದರು.
ಅದಕ್ಕೆ ಅಧಿಕಾರಿಗಳು, ‘ನಗರ ಮತ್ತು ಪಟ್ಟಣಗಳಲ್ಲಿ ಜಾಗ ಲಭ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಿ. ಕಾರ್ಮಿಕರು ನಿವೇಶನಕ್ಕೆ ಅರ್ಜಿ ಹಾಕಲೇಬೇಕೆಂದೇನಿಲ್ಲ. ಕರ್ಮಚಾರಿಗಳ ಪಟ್ಟಿ ಆಧರಿಸಿ ಅವರ ವಸತಿ ಸೌಲಭ್ಯ ಕುರಿತು ಸಮೀಕ್ಷೆ ನಡೆಸಿ. ಬಳಿಕ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಿ’ ಎಂದರು.
ವೇತನ ಕಡಿತಗೊಳಿಸಿ: ‘ಪೌರ ಕಾರ್ಮಿಕರಿಗೆ ಸರಿಯಾಗಿ ಸುರಕ್ಷತಾ ಪರಿಕರ ವಿತರಿಸುತ್ತಿಲ್ಲ’ ಎಂದು ಸಮಿತಿ ಸದಸ್ಯರು ಆರೋಪಿಸಿದರು. ಅದಕ್ಕೆ ಅಧಿಕಾರಿಗಳು, ‘ಪರಿಕರ ಕೊಟ್ಟರೂ ಬಳಸುತ್ತಿಲ್ಲ’ ಎಂದು ಅಸಹಾಯಕತೆ ತೋಡಿಕೊಂಡರು. ಆಗ, ಕಾರ್ಯದರ್ಶಿ, ‘ಪರಿಕರ ಧರಿಸದಿದ್ದರೆ ಎಚ್ಚರಿಕೆ ಕೊಡಿ. ಅದಕ್ಕೂ ಬಗ್ಗದಿದ್ದರೆ ಒಂದು ದಿನದ ವೇತನ ಕಡಿತಗೊಳಿಸಿ’ ಎಂದು ಸಲಹೆ ನೀಡಿದರು. ಅದಕ್ಕೆ ಆಕ್ಷೇಪಿಸಿದ ಸಮಿತಿ ಸದಸ್ಯರು, ‘ಎಚ್ಚರಿಕೆ ಕೊಡಿ’ ಸಾಕು ಎಂದರು.
ಸಫಾಯಿ ಕರ್ಮಚಾರಿಗಳ ಮತ್ತು ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರಿ ವಸತಿ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಕೆಲ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳದ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು. ಅದಕ್ಕೆ ಕೆಲವರನ್ನು ತರಾಟೆಗೆ ತೆಗೆದುಕೊಂಡ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಜೊತೆ ಸಮನ್ವಯ ಸಾಧಿಸಿ ಮಕ್ಕಳಿಗೆ ಪ್ರವೇಶ ಕಲ್ಪಿಸಿ ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ಜಾಗೃತಿ ಸಮಿತಿ ಸದಸ್ಯರಾದ ಹರೀಶ್ ಬಾಲು, ಮಂಜುನಾಥ್, ಸ್ಥಳೀಯ ಆಡಳಿತ ಸಂಸ್ಥೆಗಳ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ಸಭೆ ಮುಗಿದ ಬಳಿಕ, ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಫಾಯಿ ಕರ್ಮಕಾರಿಗಳು ಮತ್ತು ಪೌರ ಕಾರ್ಮಿಕರು ಆಯೋಗದ ಅಧಿಕಾರಿಗಳಿಗೆ ತಮ್ಮ ವಿವಿಧ ಅಹವಾಲು ಸಲ್ಲಿಸಿದರು.
ಸಭೆಯಲ್ಲಿ ಕೇಳಿ ಬಂದಿದ್ದು
* ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಸಫಾಯಿ ಕರ್ಮಚಾರಿಗಳಿಗೆ ಯಾವುದೇ ಸೌಲಭ್ಯ ಸಿಗದಿದ್ದಕ್ಕೆ ಬೇಸರ.
* ಕರ್ಮಚಾರಿಗಳಿಗೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿ, ಕೌಶಲ ತರಬೇತಿ ನೀಡಬೇಕು. ಸ್ವಂತ ಉದ್ಯೋಗಕ್ಕೆ ಸಾಲ ಸೌಲಭ್ಯ ಒದಗಿಸಬೇಕು.
* ಮಾಗಡಿಯಲ್ಲಿರುವ ಪೌರ ಕಾರ್ಮಿಕರಿಗೆ ಜಾಗದ ಹಕ್ಕುಪತ್ರ ನೀಡಲು ಸೂಚನೆ.
* ಪೌರ ಕಾರ್ಮಿಕರಿಗೆ ಇಎಸ್ ಐ ಮತ್ತು ಪಿಎಫ್ ಸಿಗುತ್ತಿರುವ ಕಾರ್ಮಿಕ ಇಲಾಖೆ ಅಧಿಕಾರಿ ವರದಿ ನೀಡಬೇಕು.
* ಕಾರ್ಮಿಕರಿಗೆ 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಬೇಕು. ಉಪಾಹಾರ ವ್ಯವಸ್ಥೆ ಜೊತೆಗೆ, ವಿಶ್ರಾಂತಿ ಕೊಠಡಿ ನಿರ್ಮಿಸಬೇಕು.
*ಕಾಯಂ ಪೌರ ಕಾರ್ಮಿಕರಿಗೆ ಸಕಾಲದಲ್ಲಿ ಸಂಕಷ್ಟ ಭತ್ಯೆ ಪಾವತಿಸಬೇಕು.
ಅವಲಂಬಿತರಿಗೆ ಇನ್ನೂ ಸಿಗದ ಉದ್ಯೋಗ!
ರಾಮನಗರದಲ್ಲಿ 2021ರಲ್ಲಿ ಮ್ಯಾನ್‌ಹೋಲ್ ಸ್ವಚ್ಛತೆಗೆ ಇಳಿದು ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬದದ ಅವಲಂಬಿತರಿಗೆ ಇದುವರೆಗೆ ಉದ್ಯೋಗ ಸಿಗದ ವಿಷಯ ಸಭೆಯಲ್ಲಿ ಚರ್ಚೆಗೆ ಬಂತು. ಎಂ.ಎಸ್. ಕಾಯ್ದೆ ಪ್ರಕಾರ ಪರಿಹಾರದ ಜೊತೆಗೆ ಉದ್ಯೋಗ ಸಹ ಕೊಡಬೇಕು. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರದೆ ವಾರದೊಳಗೆ ಕ್ರಮ ಕೈಗೊಳ್ಳಿ ಎಂದು ಕಾರ್ಯದರ್ಶಿ ಸೂಚಿಸಿದರು. ಅಲ್ಲದೆ ಜಿಲ್ಲೆಯಲ್ಲಿ ವಿಮೆ ಮಾಡಿಸದ ಕಾರಣಕ್ಕೆ ಇತ್ತೀಚೆಗೆ ಮೃತಪಟ್ಟ ಪೌರ ಕಾರ್ಮಿಕರಿಗೆ ವಿಮೆ ಸೌಲಭ್ಯ ಸಿಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು ಕಾರ್ಮಿಕರಿಗೆ ಅಪಘಾತ ಮತ್ತು ಜೀವ ವಿಮೆ ಮಾಡಿಸುವಂತೆ ನಿರ್ದೇಶನ ನೀಡಿದರು.
ಅಧಿಕಾರಿಗಳು ಸಭೆಗೆ ಏನೋ ಹೇಳಿ ನುಣಚಿಕೊಳ್ಳುವಂತಿಲ್ಲ. ಪುನರ್ವಸತಿ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕಿದೆ ಎಂಬ ಎಚ್ಚರಿಕೆ ಇರಲಿ– ಮಹದೇವಸ್ವಾಮಿ ಸಂಶೋಧನಾಧಿಕಾರಿ ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗ
ಜಿಲ್ಲಾ ಮಟ್ಟದಲ್ಲಿ ಸಫಾಯಿ ಕರ್ಮಚಾರಿಗಳ ಪುನರ್ವಸತಿಗಾಗಿಯೇ ಕೆಲಸ ಮಾಡಲು ಆಯೋಗವು ಅದೇ ಸಮುದಾಯದ ವ್ಯಕ್ತಿಯೊಬ್ಬರನ್ನು ಗೌರವಧನದ ಆಧಾರದ ಮೇಲೆ ಸಮನ್ವಯ ಅಧಿಕಾರಿಯಾಗಿ ನೇಮಿಸಿದರೆ ಉತ್ತಮ– ರಮೇಶ್ ಯೋಜನಾ ನಿರ್ದೇಶ ಜಿಲ್ಲಾ ನಗರಾಭಿವೃದ್ಧಿ ಕೋಶ ರಾಮನಗರ
ಸಫಾಯಿ ಕರ್ಮಚಾರಿಗಳು ಮತ್ತು ಪೌರ ಕಾರ್ಮಿಕರ ಮಕ್ಕಳ ಶಾಲಾ ಪ್ರವೇಶಕ್ಕೆ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಾಲೆಗಳು ಮತ್ತು ವಸತಿ ಶಾಲೆಗಳಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗುವುದು. ಈ ಕುರಿತು ಸ್ಥಳೀಯ ಸಂಸ್ಥೆ ಅಧಿಕಾರಿಗಳು ನಮ್ಮೊಂದಿಗೆ ಸಮನ್ವಯ ಸಾಧಿಸಬೇಕು– ಶಿವಕುಮಾರ್ ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.