ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ನೃತ್ಯಕ್ಕಾಗಿ ವೃತ್ತಿ ತೊರೆದ ಬಹುಮುಖಿ ಕಲಾವಿದ ರೇಣುಕಾಪ್ರಸಾದ್

Published 17 ಮೇ 2024, 6:31 IST
Last Updated 17 ಮೇ 2024, 6:31 IST
ಅಕ್ಷರ ಗಾತ್ರ

ರಾಮನಗರ: ಚಿಕ್ಕಂದಿನಿಂದಲೂ ನೃತ್ಯವೆಂದರೆ ಅತೀವ ಆಸಕ್ತಿ. ಕಿವಿಗೆ ಸಂಗೀತ ಬಿದ್ದರೆ ಮೈಯಲ್ಲೇನೊ ರೋಮಾಂಚನ. ಕುಣಿದು ಕುಪ್ಪಳಿಸುವ ಬಯಕೆ. ಬದುಕಿಗಾಗಿ ವೃತ್ತಿ ಸೇರಿದರೂ ಕುಗ್ಗದ ನೃತ್ಯದ ಆಸಕ್ತಿಯಿಂದಾಗಿ, ವೃತ್ತಿಯಿಂದಲೂ ಬಿಡುಗಡೆ ಪಡೆದ ಆ ಕಲಾವಿದ ಕಡೆಗೆ ನಾಟ್ಯರಾಜ ನಟರಾಜನಿಗೆ ಶರಣಾದರು. ನೃತ್ಯವನ್ನೇ ಉಸಿರಾಡುತ್ತಾ ಬದುಕು ಕಟ್ಟಿಕೊಂಡರು. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.

ನೃತ್ಯದ ಮೂಲಕವೇ ಮನೆ ಮಾತಾಗಿರುವ ರಾಮನಗರದ ಐಜೂರಿನ ಮಲ್ಲೇಶ್ವರ ಬಡಾವಣೆಯ ರೇಣುಕಾಪ್ರಸಾದ್ ಎಸ್. ಅವರ ಯಶೋಗಾಥೆ ಇದು. ನಗರದಲ್ಲಿ ಎಬಿಸಿಡಿ ಡಾನ್ಸ್ ಅಕಾಡೆಮಿ ನಡೆಸುತ್ತಲೇ ತಂಡ ಕಟ್ಟಿಕೊಂಡು ರಾಜ್ಯದಾದ್ಯಂತ ನೃತ್ಯ, ಯಕ್ಷಗಾನ ಹಾಗೂ ಜಾನಪದ ಕಲಾವಿದರಾಗಿ ಪ್ರದರ್ಶನ ನೀಡುತ್ತಾ ಬಂದಿರುವ ಪ್ರಸಾದ್ ಅವರು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಿರುತೆರೆಯ ಟಿ.ವಿ ಷೋಗಳಲ್ಲಿ ಸಹ ಛಾಪು ಮೂಡಿಸಿದ್ದಾರೆ.

‘ಶಾಲಾ ದಿನಗಳಿಂದಲೇ ನನಗೆ ನೃತ್ಯವೆಂದರೆ ಅಚ್ಚುಮೆಚ್ಚು. ಶಾಲಾ–ಕಾಲೇಜುಗಳಲ್ಲಿ ವೇದಿಕೆ ಸಿಕ್ಕಾಗಲೆಲ್ಲಾ ನೃತ್ಯದ ಮೂಲಕ ಎಲ್ಲರನ್ನು ರಂಜಿಸುತ್ತಿದ್ದೆ. ಆತ್ಮೀಯ ವಲಯದಲ್ಲಿ ಇದೊಂದು ರೀತಿಯಲ್ಲಿ ಜನಪ್ರಿಯತೆ ತಂದುಕೊಟ್ಟಿತು. ನೃತ್ಯದ ಗೀಳಿನ ಜೊತೆಗೆ ಬಿ.ಕಾಂ ಓದಿ ಬಿಡದಿಯ ಟೊಯೊಟಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆದರೂ, ನನ್ನ ನೃತ್ಯ ಪ್ರೀತಿ ಕಡಿಮೆಯಾಗಲಿಲ್ಲ’ ಎಂದು ರೇಣುಕಾ ಪ್ರಸಾದ್ ‘ಪ್ರಜಾವಾಣಿ’ಯೊಂದಿಗೆ ತಮ್ಮ ಆರಂಭದ ಪಯಣವನ್ನು ಹಂಚಿಕೊಂಡರು.

ಸಿನಿಮಾಗಳಲ್ಲಿ ನೃತ್ಯ: ‘ಸಿನಿಮಾ ಡಾನ್ಸ್ ಕೊರಿಯೊಗ್ರಫಿಯಲ್ಲಿ ಹೆಸರಾಗಿದ್ದ ಫೈವ್‌ಸ್ಟಾರ್ ಗಣೇಶ್ ಅವರ ಬಳಿ ನೃತ್ಯ ಕಲಿಯಬೇಕೆಂದು 2005ರಲ್ಲಿ ಬೆಂಗಳೂರಿಗೆ ಬಂದೆ. ಅವರನ್ನು ಭೇಟಿ ಮಾಡಿದಾಗ ನನ್ನಲ್ಲಿದ್ದ ಉತ್ಸಾಹ ಗಮನಿಸಿ, ತಾವು ಕೊರಿಯೊಗ್ರಫಿ ಮಾಡುತ್ತಿದ್ದ ಸಿನಿಮಾಗಳಲ್ಲಿ ಸಹ ನೃತ್ಯಗಾರನಾಗಿ ನರ್ತಿಸಲು ಅವಕಾಶ ಕೊಟ್ಟರು. ಅವರ ಒಡನಾಟವು ನನ್ನ ನೃತ್ಯದ ಪಯಣಕ್ಕೆ ತಿರುವು ಕೊಟ್ಟಿತು’ ಎಂದು ಹೇಳಿದರು.

‘ಇತ್ತ ಟೊಯೊಟಾದಲ್ಲಿ ಬದುಕಿಗಾಗಿ ಕೆಲಸ ಮಾಡುತ್ತಲೇ, ನೆಚ್ಚಿನ ಪ್ರವೃತ್ತಿಯಾದ ನೃತ್ಯವನ್ನು ಮುಂದುವರಿಸಿಕೊಂಡು ಬಂದೆ. ಮಾಸ್ಟರ್ ಪೀಸ್, ಜಾಗ್ವಾರ್, ಗೂಗ್ಲಿ, ಮಾರುತಿ 800 ಚಿತ್ರಗಳು ಸೇರಿದಂತೆ ಸುಮಾರು 22 ಚಿತ್ರಗಳಲ್ಲಿ ಸಹ ನೃತ್ಯಗಾರನಾಗಿ ನೃತ್ಯ ಮಾಡಿದೆ. ನೃತ್ಯ ಗುರುಗಳಾದ ಗಣೇಶ್ ಅವರ ಮಾರ್ಗದರ್ಶನದ ಮೇರೆಗೆ 2011ರಲ್ಲಿ ರಾಮನಗರದಲ್ಲಿ ಎಬಿಸಿಡಿ ಡಾನ್ಸ್ ಅಕಾಡೆಮಿ ಸ್ಥಾಪಿಸಿದೆ’ ಎಂದು ತಿಳಿಸಿದರು.

‘ನೃತ್ಯದಲ್ಲೇ ಬದುಕು ಕಟ್ಟಿಕೊಳ್ಳಲು ತೀರ್ಮಾನಿಸಿ 16 ವರ್ಷ ಅನ್ನ ಹಾಕಿದ ಉದ್ಯೋಗಕ್ಕೆ ಗುಡ್‌ಬೈ ಹೇಳಲು ತೀರ್ಮಾನಿಸಿದೆ. ತಾಯಿ ನನ್ನ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದರು. ನಿನ್ನಿಷ್ಟದ ದಾರಿಯಲ್ಲಿ ಸಾಗಿ ಯಶಸ್ಸು ಕಾಣು ಎಂದು ಆಶೀರ್ವದಿಸಿದರು. ಅದೇ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ’ ಎಂದು ಸಂತಸ ಹಂಚಿಕೊಂಡರು.

ಹಲವು ಹೆಗ್ಗಳಿಕೆ: 2022ರ ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ಥಬ್ದಚಿತ್ರ ಜೊತೆ ಯಕ್ಷಗಾನ ಪ್ರದರ್ಶನ ನೀಡಿ, ದ್ವಿತೀಯ ಸ್ಥಾನ ಪಡೆದ ಹೆಗ್ಗಳಿಕೆ ರೇಣುಕಾ ಪ್ರಸಾದ್ ಅವರದ್ದು. ಟಿ.ವಿ ಷೋಗಳಲ್ಲಿ ನೃತ್ಯ ಪ್ರದರ್ಶನ, ಬೆಂಗಳೂರಿನಲ್ಲಿ ನಡೆದಿದ್ದ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್‌ನಲ್ಲಿ ಸಾವಿರಕ್ಕೂ ಹೆಚ್ಚು ಕಲಾವಿದರ ನೇತೃತ್ವದಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ದುಬೈ ಮತ್ತು ಥಾಯ್ಲೆಂಡ್‌ನಲ್ಲಿ ಜರುಗಿದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ರಾಷ್ಟೀಯ ಮತ್ತು ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಜೊತೆಗೆ, 350ಕ್ಕೂ ಹೆಚ್ಚು ಶಾಲಾ– ಕಾಲೇಜುಗಳಿಗೆ ರೇಣುಕಾ ಪ್ರಸಾದ್ ಅವರು ನೃತ್ಯ ತರಬೇತಿ ನೀಡಿದ್ದಾರೆ.

ರೇಣುಕಾ ಪ್ರಸಾದ್ ಅವರ ನೃತ್ಯ ಸಾಧನೆಗೆ ಅವರ ಸಾಧನೆಗೆ ಅಂತರರಾಷ್ಟ್ರೀಯ ಯಕ್ಷಗಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಮನಗರ ಜಿಲ್ಲಾ ಅಸಾಧಾರಣ ಪ್ರತಿಭೆ ಪ್ರಶಸ್ತಿ, ಕಲಾ ರತ್ನ ಪ್ರಶಸ್ತಿ, ಪುಟ್ಟರಾಜ ಗವಾಯಿ ಪ್ರಶಸ್ತಿ, ರಾಮನಗರ ಕಲಾರತ್ನ ಪ್ರಶಸ್ತಿ, ನಾಟ್ಯ ಪ್ರೇರಕ, ಕಲಾ ಮಾಣಿಕ್ಯ, ನಾಟ್ಯ ಕಲಾವಿದ ಪ್ರಶಸ್ತಿ, ಕನ್ನಡ ಮಾಣಿಕ್ಯ, ಕಲಾ ಆರಾಧಕ ಪ್ರಶಸ್ತಿ, ಕಲಾಕಾರ್ ಪ್ರಶಸ್ತಿ, ಜಾನಪದ ರಂಜೀತ ಪ್ರಶಸ್ತಿ, ರಾಮನಗರ ಡಾನ್ಸ್ ಸ್ಟಾರ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ–ಬಿರುದುಗಳು ಸಂದಿವೆ. ವಿವಿಧ ಸಂಘ–ಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವಾ ಚಟುವಟಿಕೆಗಳಲ್ಲಿ ಸಹ ತೊಡಗಿಸಿಕೊಂಡಿದ್ದಾರೆ.

ರೇಣುಕಾ ಪ್ರಸಾದ್ ಅವರ ಪತ್ನಿ ಶಶಿಕಲಾ ಕೂಡ ಭರತನಾಟ್ಯ ಕಲಾವಿದೆ. ಪುತ್ರ ಚಂದನ್ ಕೂಡ ನೃತ್ಯ ಕಲಾವಿದ. ಇಡೀ ಕುಟುಂಬವೇ ಕಲಾ ಸೇವೆಯಲ್ಲಿ ತೊಡಗಿಕೊಂಡಿದೆ.

ಮೆಚ್ಚುಗೆ ವ್ಯಕ್ತಪಡಿಸಿದ್ದ ಪುನೀತ್ ರಾಜಕುಮಾರ್

‘ವಂಶಿ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಕೆಲ ದೃಶ್ಯಗಳಲ್ಲಿ ಸಹ ಕಲಾವಿದನಾಗಿ ಮತ್ತು ಹಾಡುಗಳಲ್ಲಿ ಸಹ ನೃತ್ಯಗಾರನಾಗಿ ಕಾಣಿಸಿಕೊಂಡಿದ್ದೆ. ಇದೇ ಸಂದರ್ಭದಲ್ಲಿ ‘ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು’ ಎಂಬ ಹಾಡಿಗೆ ರಾಮನಗರದ 60 ಕಲಾವಿದರನ್ನು ಬಳಸಿಕೊಂಡು ನೃತ್ಯ ಸಂಯೋಜಿಸಿ ವಿಡಿಯೊ ಆಲ್ಬಂ ಮಾಡಿದ್ದೆ. ಇಲ್ಲಿನ ಜಾನಪದ ಕಲೆ ಹಾಗೂ ಪ್ರಖ್ಯಾತ ಸ್ಥಳಗಳಲ್ಲಿ ಚಿತ್ರೀಕರಿಸಿದ್ದ ಆ ಹಾಡನ್ನು ‘ವಂಶಿ’ ಚಿತ್ರೀಕರಣದ ಸಂದರ್ಭದಲ್ಲಿ ಪುನೀತ್ ಸರ್ ಅವರಿಗೆ ತೋರಿಸಿದ್ದೆ. ಪೂರ್ತಿಯಾಗಿ ಹಾಡನ್ನು ನೋಡಿದ್ದ ಅವರು ನನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರೀತಿಯ ಅಪ್ಪುಗೆಯೊಂದಿಗೆ ಆಟೊಗ್ರಾಫ್ ಕೂಡ ನೀಡಿದ್ದರು’ ಎಂದು ಕರ್ನಾಟಕ ರಾಜ್ಯ ನೃತ್ಯ ಶಾಲಾ ಮಾಲೀಕರ ಸಂಘದ ಜಿಲ್ಲಾಧ್ಯಕ್ಷರೂ ಆಗಿರುವ ರೇಣುಕಾಪ್ರಸಾದ್ ನೆನೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT