ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಲಿನ ದರ ಏರಿಕೆ: ಸಿ.ಎಂ ಸಿದ್ದರಾಮಯ್ಯ

ದರ ಏರಿಕೆ ವಿರೋಧಿಸುವ ಬಿಜೆಪಿ ಬಾಯಿ ಮುಚ್ಚಿಸಲು ರೈತರಿಗೆ ಸಿದ್ದರಾಮಯ್ಯ ಕರೆ
Published : 13 ಸೆಪ್ಟೆಂಬರ್ 2024, 15:30 IST
Last Updated : 13 ಸೆಪ್ಟೆಂಬರ್ 2024, 15:30 IST
ಫಾಲೋ ಮಾಡಿ
Comments

ಮಾಗಡಿ: ‘ಹೈನುಗಾರಿಕೆ ನೆಚ್ಚಿಕೊಂಡಿರುವ ರೈತರಿಗೆ ಲಾಭವಾಗುತ್ತಿಲ್ಲ. ಹಾಲಿನ ದರ ₹5ರಷ್ಟು ಹೆಚ್ಚಿಸಲು ಸಹಕಾರ ಇಲಾಖೆ ಸೇರಿದಂತೆ ಹಲವು ಕಡೆಯಿಂದ ಒತ್ತಾಯವಿದೆ. ದರ ಏರಿಸಿ, ಅದರ ಲಾಭ ರೈತರಿಗೆ ಸಿಗುವಂತೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಸಮಾರಂಭದಲ್ಲಿ ಸಚಿವ ಕೆ.ಎನ್.ರಾಜಣ್ಣ, ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಮಾಡಿದ ಹಾಲಿನ ದರ ಏರಿಕೆ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಾಲಿನ ದರ ಏರಿಕೆ ಜತೆಗೆ ಸಹಕಾರ ಸಂಘಗಳಿಗೆ ಪ್ರತಿ ಲೀಟರ್ ಹಾಲಿಗೆ 20 ಪೈಸೆ ಹೆಚ್ಚುವರಿ ನೀಡುವಂತೆಯೂ ಒತ್ತಾಯವಿದೆ. ಆ ಬಗ್ಗೆಯೂ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

‘ಇತ್ತೀಚೆಗೆ  ಹಾಲಿನ ಪ್ಯಾಕೆಟ್ ಗಾತ್ರ ಹೆಚ್ಚಿಸಿ ಅದಕ್ಕೆ ತಕ್ಕಂತೆ ₹2ರಷ್ಟು ದರ ಹೆಚ್ಚಿಸಿದ್ದೆವು. ಆಗ, ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ಹಾಕುತ್ತಿದೆ ಎಂದು ಬಿಜೆಪಿಯವರು ಅರಚಿಕೊಂಡರು. ಬೆಲೆ ಏರಿಕೆ ಲಾಭ ಪಡೆದ ನೀವು ಸುಮ್ಮನಿದ್ದಿರಿ. ರೈತರಿಗೆ ಅನುಕೂಲವಾಗುವ ದರ ಏರಿಕೆಗೆ ಯಾಕೆ ವಿರೋಧಿಸುತ್ತೀರಿ ಎಂದು ಬಿಜೆಪಿಯವರ ಬಾಯಿ ಮುಚ್ಚಿಸಬೇಕು ತಾನೇ? ಅವರು ಬರೀ ಸುಳ್ಳು ಹೇಳುತ್ತಾರೆ. ನಮ್ಮವರಿಗೆ ಸತ್ಯ ಗೊತ್ತಿದ್ದರೂ ಹೇಳುವುದಕ್ಕೆ ಬರುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಗೌಡರ ವಿರುದ್ಧ ವಾಗ್ದಾಳಿ: ‘ಹಾಲಿಗೆ ಪ್ರೋತ್ಸಾಹಧನ ನೀಡುವ ಜತೆಗೆ ಹಾಲಿನ ಉತ್ಪಾದನೆ ಜಾಸ್ತಿಯಾದಾಗ ಕ್ಷೀರಭಾಗ್ಯ ಕಾರ್ಯಕ್ರಮ ಜಾರಿಗೊಳಿಸಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಹಾಲು ವಿತರಣೆ ಶುರು ಮಾಡಿದೆ. ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದೆ. ಆದರೆ, ರೈತರಿಗಾಗಿ ಏನೂ ಮಾಡದವರು ನಾವು ರೈತರ ಮಕ್ಕಳು, ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ’ ಎಂದು ಜೆಡಿಎಸ್ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT