ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌: ರಾಮನಗರ ಜನರ ಮಿಶ್ರ ಪ್ರತಿಕ್ರಿಯೆ

ಆದಾಯ ತೆರಿಗೆ ವಿನಾಯಿತಿಗೆ ಸ್ವಾಗತ: ಅಗತ್ಯ ವಸ್ತು ತೆರಿಗೆ ಹೆಚ್ಚಿಸಿದ್ದಕ್ಕೆ ಅಸಮಾಧಾನ
Last Updated 1 ಫೆಬ್ರುವರಿ 2020, 14:00 IST
ಅಕ್ಷರ ಗಾತ್ರ

ರಾಮನಗರ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ಗೆ ಜಿಲ್ಲೆಯ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ನೆರೆಯ ಬೆಂಗಳೂರು ಮಹಾನಗರಕ್ಕೆ ಉಪ ನಗರ ರೈಲು ವ್ಯವಸ್ಥೆಗೆ ಕೇಂದ್ರ ಸರ್ಕಾರ ₨18,600 ಕೋಟಿ ವೆಚ್ಚ ಅಂದಾಜಿಸಿದ್ದು, ಅದನ್ನು ಬಜೆಟ್‌ನಲ್ಲಿ ಉಲ್ಲೇಖಿಸಿದೆ. ಶೇ 20ರಷ್ಟು ವೆಚ್ಚ ಭರಿಸುವ ಜೊತೆಗೆ ಶೇ 60ರಷ್ಟು ತಾಂತ್ರಿಕ ಸಹಾಯ ನೀಡುವ ಭರವಸೆಯನ್ನೂ ನೀಡಿದೆ. ಕಳೆದ ಬಾರಿಯ ಬಜೆಟ್‌ನಲ್ಲೂ ಸರ್ಕಾರ ಇದನ್ನು ಉಲ್ಲೇಖ ಮಾಡಿತ್ತಾದರೂ ಇನ್ನೂ ಚಾಲನೆ ದೊರೆತಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ರಾಮನಗರ ಜಿಲ್ಲೆಯ ಜನರಿಗೂ ಅನುಕೂಲ ಆಗಲಿದೆ.

ಬೆಂಗಳೂರಿನಿಂದ ಕನಕಪುರದ ಮಾರ್ಗವಾಗಿ ತಮಿಳುನಾಡಿನ ಸತ್ಯಮಂಗಲದವರೆಗೆ ರೈಲು ಮಾರ್ಗ ನಿರ್ಮಾಣ ಯೋಜನೆಯು ದಶಕದಿಂದ ನನೆಗುದಿಗೆ ಬಿದ್ದಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಬಗ್ಗೆ ಪ್ರಸ್ತಾವ ಆಗಬಹುದು ಎನ್ನುವುದು ಜನರ ನಿರೀಕ್ಷೆ ಆಗಿತ್ತು. ಅದು ಸಹ ಸಾಕಾರಗೊಂಡಿಲ್ಲ. ಈ ಭಾಗದ ಜನರ ಜೀವನಾಡಿ ರೇಷ್ಮೆ ಕೃಷಿಯ ಉತ್ತೇಜನಕ್ಕೆ ಬಜೆಟ್‌ನಲ್ಲಿ ಯಾವುದೇ ಪೂರಕವಾದ ಘೋಷಣೆಗಳು ಆಗಿಲ್ಲ.

ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ರೈತರಿಗಾಗಿ 16 ಅಂಶಗಳ ಕ್ರಿಯಾ ಯೋಜನೆ ರೂಪಿಸಿರುವುದಕ್ಕೆ ಕೆಲವು ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈತರ ಆದಾಯ ದ್ವಿಗುಣದ ಆಶಯದ ಜೊತೆಗೆ ಕೃಷಿ ಸಾಲ ವಿಸ್ತರಣೆ, 20 ಲಕ್ಷ ರೈತರಿಗೆ ಸೋಲಾರ್ ಪಂಪ್‌ಸೆಟ್‌ ವಿತರಣೆ, ಹಾಲು ಉತ್ಪಾದನೆ ದ್ವಿಗುಣಕ್ಕೆ ಆದ್ಯತೆ, ಕೃಷಿ ಉತ್ಪನ್ನಗಳ ಸಾಗಣೆಗೆ ಕಿಸಾನ್‌ ರೈಲುಗಳ ಘೋಷಣೆ ಮಾಡಲಾಗಿದೆ. ಇದಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇದು ಕೇವಲ ಗಿಮಿಕ್‌ ಎನ್ನುತ್ತಾರೆ.

‘ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನೇ ಸಂಪೂರ್ಣ ಖಾಸಗಿಯವರಿಗೆ ಒಪ್ಪಿಸಲು ಹೊರಟಿದ್ದು, ಅದಕ್ಕೆ ಪೂರಕವಾದ ಯೋಜನೆಗಳು ಮಾತ್ರ ಬಜೆಟ್‌ನಲ್ಲಿ ಇವೆ. ರೈತರ ಬೀಜ ಸಾರ್ವಭೌಮತೆಯನ್ನು ಕಿತ್ತುಕೊಂಡು ಖಾಸಗಿಯವರಿಗೆ ಒಪ್ಪಿಸುವ ಹುನ್ನಾರ ನಡೆದಿದೆ’ ಎಂದು ದೂರುತ್ತಾರೆ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್‌. ಲಕ್ಷ್ಮಣಸ್ವಾಮಿ.

ದಿನಬಳಕೆಯ ಕೆಲವು ವಸ್ತುಗಳ ಮೇಲಿನ ತೆರಿಗೆಯನ್ನು ಸರ್ಕಾರ ಏರಿಸಿರುವುದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ‘ವಾಹನಗಳ ಬಿಡಿ ಭಾಗ, ಪಾದರಕ್ಷೆ, ಕಚ್ಚಾ ಸಕ್ಕರೆ ಸೇರಿದಂತೆ ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಏರಿಸಿರುವುದು ನೇರವಾಗಿ ಹೊಡೆತ ಬೀಳಲಿದೆ. ಸರ್ಕಾರ ಇವುಗಳನ್ನು ಇಳಿಸುವ ನಿರೀಕ್ಷೆ ನಮ್ಮದಾಗಿತ್ತು’ ಎಂಬುದು ಜನರ ಅಭಿಪ್ರಾಯ.

ಮತ್ತೊಂದೆಡೆ, ವೈಯಕ್ತಿಕ ಆದಾಯ ತೆರಿಗೆ ಮೇಲೆ ಸಾಕಷ್ಟು ವಿನಾಯಿತಿ ನೀಡಿರುವುದು ತೆರಿಗೆದಾರರಿಗೆ ಸಮಾಧಾನ ತಂದಿದೆ. ಮೂರು ವಿಭಾಗಕ್ಕೆ ಬದಲಾಗಿ ಆರು ಸ್ಲ್ಯಾಬ್‌ಗಳಲ್ಲಿ ತೆರಿಗೆಯನ್ನು ಪುನರ್‌ ವಿಂಗಡನೆ ಮಾಡಲಾಗಿದ್ದು, ಇದರಲ್ಲಿ ಕಡಿಮೆ ಆದಾಯ ಇರುವ ತೆರಿಗೆದಾರರಿಗೆ ಒಂದಿಷ್ಟು ಹೊರೆ ತಪ್ಪಲಿದೆ ಎನ್ನುತ್ತಾರೆ ಉದ್ಯೋಗಿಗಳು. ಉದ್ಯೋಗ ಸೃಷ್ಟಿ ಕುರಿತು ಯಾವುದೇ ಘೋಷಣೆ ಮಾಡದೇ ಇರುವುದು ಯುವಜನರನ್ನು ಕಂಗೆಡಿಸಿದೆ.

‘ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷದ ಬಜೆಟ್‌ ಪರವಾಗಿಲ್ಲ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತರಬೇತಿ, ಕೃಷಿ ಉಡಾನ್‌, ಪ್ರತಿ ಜಿಲ್ಲೆಗೊಂದು ಮೆಡಿಕಲ್‌ ಕಾಲೇಜು, ಆದಾಯ ತೆರಿಗೆ ವಿನಾಯಿತಿಯಂತಹ ಹೊಸ ಪ್ರಯತ್ನಗಳಿವೆ. ಆದರೆ ಜಿಡಿಪಿಯನ್ನು ಶೇ 10ಕ್ಕೆ ಏರಿಸುತ್ತೇವೆ ಎಂಬಿತ್ಯಾದಿ ಘೋಷಣೆಗಳು ಸುಳ್ಳು. ರೈತರಿಗೆ ಸಾಲ ವಿತರಣೆ ಹೆಚ್ಚಿಸುವ ಬದಲು ಸಬ್ಸಿಡಿ ಘೋಷಣೆ ಮಾಡಬೇಕಿತ್ತು. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದಾಗಿ ಸರ್ಕಾರ ಪ್ರಕಟಿಸಿದೆ. ಅದು ಯಾವ ರೀತಿ ಪರಿಣಾಮಕಾರಿಯಾಗಿ ಇರಲಿದೆ ಎಂಬುದರ ಬಗ್ಗೆ ನಿರೀಕ್ಷೆಯಿಂದ ಇದ್ದೇವೆ’ ಎನ್ನುತ್ತಾರೆ ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠದ ಪಿ.ಯು. ಕಾಲೇಜು ಪ್ರಾಚಾರ್ಯ ಪ್ರೊ. ಜಿ. ಶಿವಣ್ಣ ಕೊತ್ತೀಪುರ.

***

ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂಬ ಸುಳ್ಳನ್ನು ಸರ್ಕಾರ ಪುನರುಚ್ಛರಿಸಿದೆ. ಕೃಷಿ ಉತ್ಪನ್ನಕ್ಕೆ ಮಾರಕಟ್ಟೆ ಭದ್ರತೆ ಕಲ್ಪಿಸುವುದಾಗಲಿ, ಬೆಲೆ ನಿಗದಿ ಮಾಡುವುದಾಗಲೀ ಪ್ರಸ್ತಾಪಿಸಿಲ್ಲ. ರೈತರಿಗೆ ಇನ್ನೂ ಹೆಚ್ಚಿಗೆ ಸಾಲ ಕೊಡುತ್ತೇವೆ ಎಂದಿದ್ದಾರೆಯೇ ಹೊರತು ಸಾಲ ಮನ್ನಾ ಮಾಡಿಲ್ಲ. ಸೋಲಾರ್ ಪಂಪ್‌ಸೆಟ್‌ ವಿತರಣೆ, ಕೃಷಿ ಉಡಾನ್‌ ಎಂಬುದೆಲ್ಲ ಬರೀ ಗಿಮಿಕ್‌. ಇದೊಂದು ಅನನುಭವಿ ಬಜೆಟ್‌.

-ಕೆ.ಎಸ್. ಲಕ್ಷ್ಮಣಸ್ವಾಮಿ,ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

***
ಇದೊಂದು ಸಾಧಾರಣ ಮುಂಗಡ ಪತ್ರ. ರಾಮನಗರ ಜಿಲ್ಲೆಗೆ ಅಗತ್ಯವಾಗಿದ್ದ ಯಾವುದೇ ಯೋಜನೆಗಳಿಗೂ ಒಪ್ಪಿಗೆ ದೊರೆಯದೇ ಹೋದರೂ ಕೆಲವು ಆಶಾದಾಯಕವಾದ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ಅಗತ್ಯ ವಸ್ತುಗಳ ತೆರಿಗೆ ಏರಿಕೆ ಶಾಕ್‌ ನೀಡಿದ ಸರ್ಕಾರ, ಆದಾಯ ತೆರಿಗೆ ಸ್ಲ್ಯಾಬ್‌ ಪರಿಷ್ಕರಿಸಿ ಕೊಂಚ ಸಮಾಧಾನ ಮಾಡಿದೆ. ಇದಕ್ಕಿಂತ ಉತ್ತಮ ಬಜೆಟ್ ಮಂಡನೆ ಸಾಧ್ಯವಿತ್ತು.

-ಜಿ. ಶಿವಣ್ಣ ಕೊತ್ತೀಪುರ,ಪ್ರಾಚಾರ್ಯ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪಿ.ಯು. ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT