ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Mysuru Dasara 2023: ಚನ್ನಪಟ್ಟಣ ಗೊಂಬೆಗೆ ಮತ್ತೆ ಬೇಡಿಕೆ

Published 14 ಅಕ್ಟೋಬರ್ 2023, 6:53 IST
Last Updated 14 ಅಕ್ಟೋಬರ್ 2023, 6:53 IST
ಅಕ್ಷರ ಗಾತ್ರ

ಚನ್ನಪಟ್ಟಣ: ಚನ್ನಪಟ್ಟಣ ಗೊಂಬೆಗಳಿಗೂ ಮೈಸೂರು ದಸರಾಕ್ಕೂ ಅವಿನಾಭಾವ ಸಂಬಂಧ. ದಸರಾ ವೇಳೆಯಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಹುತೇಕ ಮನೆಗಳಲ್ಲಿ ದಸರಾ ಗೊಂಬೆ ಪ್ರದರ್ಶನ ಏರ್ಪಡಿಸುವುದು ವಾಡಿಕೆ. ಈ ಗೊಂಬೆ ಪ್ರದರ್ಶನಕ್ಕೆ ಬಳಕೆಯಾಗುವುದು ಚನ್ನಪಟ್ಟಣ ಗೊಂಬೆಗಳು ಎನ್ನುವುದು ವಿಶೇಷ. ದಸರಾ ಸಮೀಪಿಸುತ್ತಿರುವಂತೆ ಚನ್ನಪಟ್ಟಣ ಗೊಂಬೆಗಳಿಗೆ ಬೇಡಿಕೆ ಹೆಚ್ಚಾಗಲಾರಂಭಿಸಿದೆ.

ಕೊರೊನಾ ಹಾಗೂ ಬೆಂಗಳೂರು– ಮೈಸೂರು ಹೆದ್ದಾರಿ ನಿರ್ಮಾಣದಿಂದಾಗಿ ಬೇಡಿಕೆ ಕಳೆದುಕೊಂಡಿದ್ದ ಚನ್ನಪಟ್ಟಣ ಗೊಂಬೆಗಳಿಗೆ ಈಗ ಬೇಡಿಕೆ ಹೆಚ್ಚಾಗುತ್ತಿದ್ದು, ಗೊಂಬೆ ಅಂಗಡಿಗಳು ಹಾಗೂ ಗೊಂಬೆ ಬಿಡಿ ಮಾರಾಟಗಾರರ ಬಳಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಾರಂಭಿಸಿದ್ದಾರೆ.

ಕೊರೊನಾ ನಂತರ ಚನ್ನಪಟ್ಟಣ ಗೊಂಬೆಗಳಿಗೆ ಬೇಡಿಕೆ ಕಡಿಮೆಯಾಗಿತ್ತು. ಇದರ ನಡುವೆ ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣವಾಗಿ ಕಳೆದ ಮೂರು ವರ್ಷಗಳಿಂದ ಗೊಂಬೆ ಉದ್ಯಮ ನಷ್ಟ ಅನುಭವಿಸಿತ್ತು. ಪ್ರವಾಸಿಗಳು, ವಾಹನಗಳು ಬೈಪಾಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಣ ದಸರಾ ಬಂದಿದ್ದರೂ ಚನ್ನಪಟ್ಟಣ ಗೊಂಬೆಗಳಿಗೆ ಬೇಡಿಕೆ ಕುಸಿತವಾಗಿ, ಗೊಂಬೆ ತಯಾರಕರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು.

ಬೆಂಗಳೂರು– ಮೈಸೂರು ಹೆದ್ದಾರಿಯನ್ನು ಬಿಡದಿ ಸಮೀಪ ಪ್ರಾರಂಭಿಸಿ ರಾಮನಗರ, ಚನ್ನಪಟ್ಟಣ ನಗರಗಳಿಂದ ಹೊರಗೆ ಹೋಗುವಂತೆ ನಿರ್ಮಾಣ ಮಾಡಲಾಗಿದ್ದು, ಪರವಾಸಿಗರನ್ನೆ ಹೆಚ್ಚಾಗಿ ಸೆಳೆಯುತ್ತಿದ್ದ ಗೊಂಬೆಗಳನ್ನು ಕೇಳುವವರೆ ಇಲ್ಲದಂತಾಗಿತ್ತು. ಮೈಸೂರಿಗೆ ಪ್ರಯಾಣಿಸುವ ಪ್ರವಾಸಿಗರು, ದಸರಾಕ್ಕೆ ತೆರಳುವ ವಾಹನಗಳು ಚನ್ನಪಟ್ಟಣದಿಂದ ಹೊರಗೆ ದಶಪಥ ರಸ್ತೆಯಲ್ಲಿ ತೆರಳುತ್ತಿದ್ದ ಕಾರಣ ಗೊಂಬೆ ಕೊಳ್ಳುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈಗ ಗೊಂಬೆ ಉದ್ಯಮ ಮತ್ತೆ ಚೇತರಿಸಿಕೊಳ್ಳಲಾರಂಭಿಸಿದ್ದು, ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶೇ 30 ರಷ್ಟು ವ್ಯಾಪಾರ ಹೆಚ್ಚಾಗಿದೆ ಎಂದು ಗೊಂಬೆ ವ್ಯಾಪಾರಿಗಳು ತಿಳಿಸುತ್ತಾರೆ.

ಚೀನಾ ಗೊಂಬೆಗಳ ಪೈಪೋಟಿಯ ನಡುವೆಯೂ ಚನ್ನಪಟ್ಟಣ ಗೊಂಬೆಗಳಿಗೆ ಭಾರೀ ಬೇಡಿಕೆ ಇದೆ. ಗುಣಮಟ್ಟ, ಬಾಳಿಕೆ ವಿಚಾರದಲ್ಲಿ ಚನ್ನಪಟ್ಟಣ ಗೊಂಬೆಗಳಿಗೆ ಸರಿಸಾಟಿ ಇಲ್ಲ. ಇಂತಹ ಗೊಂಬೆಗಳ ಉದ್ಯಮಕ್ಕೆ ಬೆಂಗಳೂರು ಮೈಸೂರು ಬೈಪಾಸ್ ರಸ್ತೆಯಿಂದ ಹೊಡೆತ ಬಿದ್ದಿತ್ತು. ಕೊರೊನಾ ಹಾಗೂ ಬೈಪಾಸ್ ರಸ್ತೆಯ ನಿರ್ಮಾಣ ಹೊಡೆತದ ಪರಿಣಾಮ ನೇರವಾಗಿಯೆ ನಮಗೆ ತಟ್ಟುತ್ತಿತ್ತು. ಈಗ ಸ್ವಲ್ಪ ಸುಧಾರಣೆ ಕಾಣುತ್ತಿದ್ದೇವೆ ಎಂದು ಗೊಂಬೆ ವ್ಯಾಪಾರಸ್ಥರು ಅಭಿಪ್ರಾಯಿಸುತ್ತಾರೆ.


ತಿಂಗಳೊಂದಕ್ಕೆ ಚನ್ನಪಟ್ಟಣ ಗೊಂಬೆ ಉದ್ಯಮ ಕನಿಷ್ಟ ₹ 1.50 ಕೋಟಿ ವಹಿವಾಟು ನಡೆಸುತ್ತಿತ್ತು. ಕೊರೊನಾ ಹಾಗೂ ದಶಪಥ ರಸ್ತೆ ಬಂದ ನಂತರ ಇದು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಈಗ ದಸರಾ ಆರಂಭಗೊಂಡ ನಂತರ ಗೊಂಬೆ ಮಾರಾಟ ಹೆಚ್ಚಾಗುತ್ತಿದೆ, ಇತರೆ ದಿನಗಳಿಗೆ ಹೋಲಿಸಿದರೆ ಪ್ರವಾಸಿಗರು, ಗೊಂಬೆ ಪ್ರದರ್ಶನ ಮಾಡುವವರು ಗೊಂಬೆ ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರಾದ ಶ್ರೀನಿವಾಸ್, ಕರಿಯಪ್ಪ ತಿಳಿಸುತ್ತಾರೆ.

ತಾಲ್ಲೂಕಿನ ಕರಿಯಪ್ಪನದೊಡ್ಡಿ, ಎಲೆಕೇರಿ, ಕೋಟೆ, ಸುಣ್ಣಘಟ್ಟ, ನೀಲಸಂದ್ರ, ಪಟ್ಟಣದ ವಿವಿಧೆಡೆ ಗುಡಿ ಕೈಗಾರಿಕೆಗಳಲ್ಲಿ ಗೊಂಬೆ ತಯಾರಿಸಲಾಗುತ್ತಿದೆ. ಇದರ ಜೊತೆಗೆ ಚನ್ನಪಟ್ಟಣದ ಹೊರವಲಯದ ಮಹದೇಶ್ವರ ದೇವಸ್ಥಾನದ ಬಳಿ ಚನ್ನಪಟ್ಟಣ ಕ್ರಾಪ್ಟ್ ಪಾರ್ಕ್ ತೆರೆದಿರುವ ಸರ್ಕಾರ ಗೊಂಬೆ ಉದ್ಯಮಕ್ಕೆ ಉತ್ತೇಜನ ಕೊಡಲು ಗೊಂಬೆ ತಯಾರಿಕಾ ತರಬೇತಿ ನೀಡುತ್ತಿದೆ. ಜೊತೆಗೆ ಇಲ್ಲಿ ತಯಾರಾದ ಗೊಂಬೆಗಳಿಗೆ ಮಾರುಕಟ್ಟೆಯನ್ನು ಸಹ ಕಲ್ಪಿಸಿದೆ.

ಆಧುನಿಕತೆ ಬಂದಂತೆ ಗೊಂಬೆ ತಯಾರಿಕೆಯಲ್ಲಿಯೂ ಆಧುನಿಕ ಸ್ಪರ್ಷ ಕಾಲಿಟ್ಟಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಗೊಂಬೆ ತಯಾರಿಕೆ ನಡೆಯುತ್ತಿದೆ. ದೇವರ ಗೊಂಬೆಗಳು, ಚಾಮುಂಡೇಶ್ವರಿ ಗೊಂಬೆ, ರಾಮ ಸೀತೆ ಗೊಂಬೆ, ರಾಜ ರಾಣಿ ಗೊಂಬೆ, ಮ್ಕಳ ಆಟಿಕೆಗಳು, ಬಳೆಗಳು ಹೀಗೆ ವಿವಿಧ ರೀತಿಯ ಗಮನ ಸೆಳೆಯುವ ಗೊಂಬೆಗಳ ತಯಾರಿಕೆ ಮಾಡಲಾಗುತ್ತಿದೆ ಎಂದು ಗೊಂಬೆ ತಯಾರಕರಾದ ಸಿದ್ದಪ್ಪ, ಚಂದ್ರು, ಪುಟ್ಟರಾಮಣ್ಣ ತಿಳಿಸುತ್ತಾರೆ.

ದಸರಾ ಆರಂಭವಾದ ನಂತರ ಚನ್ನಪಟ್ಟಣ ಗೊಂಬೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈ ಬೇಡಿಕೆ ಕೇವಲ ದಸರಾ ವೇಳೆಯಲ್ಲಿ ಮಾತ್ರ ಇದ್ದು, ಮಿಕ್ಕ ದಿನಗಳಲ್ಲಿ ಇಳಿಮುಖವಾಗದಂತೆ ನೋಡಿಕೊಳ್ಳುವ ಅಗತ್ಯ ಇದೆ ಎಂದು ಪ್ರಜ್ಞಾವಂತರು ಅಭಿಪ್ರಾಯಿಸುತ್ತಾರೆ.

ಗಮನ ಸೆಳೆಯವ ಗೊಂಬೆ
ಗಮನ ಸೆಳೆಯವ ಗೊಂಬೆ

ಮತ್ತೆ ಬೇಡಿಕೆ ಬಂತು

ಅಂದಚಂದಕ್ಕೆ ಹೆಸರುವಾಸಿಯಾದ ಚನ್ನಪಟ್ಟಣದ ಗೊಂಬೆಗಳ ಉದ್ಯಮದ ಮೇಲೆ ವಿವಿಧ ಕಾರಣಗಳಿಂದಾಗಿ ದುಷ್ಪರಿಣಾಮ ಎದುರಾಗಿತ್ತು. ಆದರೆ ನವರಾತ್ರಿ ಆರಂಭದ ನಂತರ ಗೊಂಬೆಗೆ ಬೇಡಿಕೆ ಪ್ರಾರಂಭವಾಗಿದೆ. ಇದು ಶುಭ ಸೂಚನೆಯಾಗಿದ್ದು ಮುಂದಿನ ದಿನಗಳಲ್ಲಿ ಗೊಂಬೆ ಉದ್ಯಮ ಮತ್ತಷ್ಟು ಚೇತರಿಕೆ ಕಾಣುವ ಭರವಸೆ ಇದೆ. ಶ್ರೀನಿವಾಸ್ ಗೊಂಬೆ ತಯಾರಕ ಮುನಿಯಪ್ಪನದೊಡ್ಡಿ ಮಾರಾಟ ಹೆಚ್ಚಿದೆ ಎರಡು ವರ್ಷ ಕೊರೊನಾದಿಂದ ಹಾಗೂ ಬೆಂಗಳೂರು ಮೈಸೂರು ಹೆದ್ದಾರಿ ನಿರ್ಮಾಣದಿಂದ ಸಂಕಷ್ಟ ಎದುರಿಸಿದ್ದ ನಾವು ಈಗ ಮೈಸೂರು ದಸರಾ ಹಾಗೂ ದಸರಾ ಗೊಂಬೆ ಪ್ರದರ್ಶನದ ಹಿನ್ನೆಲೆಯಲ್ಲಿ ಚೇತರಿಕೆ ಕಾಣುವಂತಾಗಿದೆ. ಗೊಂಬೆ ಮಾರಾಟ ಗಣನೀಯವಾಗಿ ಹೆಚ್ಚಾಗುತ್ತಿದೆ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಗೊಂಬೆ ಮಾರಾಟ ಹೆಚ್ಚಾಗಿದೆ. ನಾಗರಾಜು ಗೊಂಬೆ ಮಾರಾಟಗಾರ ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT