ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಸೋರುತಿಹುದು ನಗರಸಭೆ ಮಾಳಿಗೆ...

Published 9 ನವೆಂಬರ್ 2023, 5:22 IST
Last Updated 9 ನವೆಂಬರ್ 2023, 5:22 IST
ಅಕ್ಷರ ಗಾತ್ರ

ರಾಮನಗರ: ನಗರದ ಪ್ರಥಮ ಪ್ರಜೆ– ಪ್ರತಿನಿಧಿಗಳಿಂದ ನಗರದ ಅಭಿವೃದ್ಧಿ ರೂಪುರೇಷೆಗಳನ್ನು ನಿರ್ಧರಿಸುವ ನಗರಸಭೆಯ ಕಟ್ಟಡದ ಮಾಳಿಗೆ ಕೆಲ ತಿಂಗಳಿಂದ ಸೋರುತ್ತಿದೆ. ಮಳೆ ಬಂದರೆ, ಮೊದಲ ಮತ್ತು ನೆಲ ಮಹಡಿಯ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸ ಮಾಡಲಾಗದ ಸ್ಥಿತಿ ಇದೆ.

ಕಟ್ಟಡದ ಮೇಲ್ಭಾಗದಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಾಣ ಕೆಲಸ ವರ್ಷಾರಂಭದಲ್ಲಿ ಶುರುವಾಗಿತ್ತು. ಆರಂಭದಲ್ಲಿ ಭರದಿಂದ ಸಾಗಿದ ಕೆಲಸವು, ಮೂರ್ನಾಲ್ಕು ತಿಂಗಳಿಂದ ಸ್ಥಗಿತವಾಯಿತು. ಇದರಿಂದಾಗಿ, ಮಳೆ ಬಂದರೆ ನಗರಸಭೆ ಕಟ್ಟಡದ ಆವರಣ ನೀರಿನಿಂದ ತೋಯ್ದು ಹೋಗುತ್ತದೆ.

ಇದರ ಜೊತೆಗೆ, ಶೆಟ್ಟಿಹಳ್ಳಿ ಬೀದಿಯಿಂದ ಅರ್ಕಾವತಿ ನದಿ ಮಾರ್ಗವಾಗಿ ಜಿಗೇನಹಳ್ಳಿಯ ಈಗಿನ ಎಂ.ಎಚ್‌. ಕಾಲೇಜಿನವರೆಗೆ ಹಿಂದೆ ಹಳೆಯದಾದ ಬಂಡಿ ದಾರಿ ಇತ್ತು. ಅದಕ್ಕೆ ಹೊಸ ರೂಪ ಕೊಡುವುದಕ್ಕಾಗಿ ಸೇತುವೆ ನಿರ್ಮಾಣ ಆರಂಭಿಸಲಾಗಿತ್ತು. ಗುತ್ತಿಗೆದಾರರಿಗೆ ಕಾರ್ಯಾದೇಶ ಕೂಡ ನೀಡಲಾಗಿತ್ತು. ಭರದಿಂದ ಸಾಗಿದ್ದ ಕಾಮಗಾರಿ ಶೇ 30ರಷ್ಟು ಪೂರ್ಣಗೊಂಡಿತ್ತು.

ಸೇತುವೆ ನಿರ್ಮಾಣದಿಂದ ವಾರ್ಡ್ 3, 4, 5, 6, 9, 10ರ ಜನರ ಓಡಾಟಕ್ಕೆ ತುಂಬಾ ಅನುಕೂಲವಾಗುತ್ತಿತ್ತು. ಶೀಘ್ರದಲ್ಲೇ ಸೇತುವೆ ಕೆಲಸ ಮುಗಿಯಲಿದೆ ಎಂಬ ನಿರೀಕ್ಷೆ ಅಷ್ಟೇ ಬೇಗ ಹುಸಿಯಾಯಿತು. ಸೇತುವೆ ಕೆಲಸ ಇದೀಗ ನನೆಗುದಿಗೆ ಬಿದ್ದಿದೆ. ಸದ್ಯ ಅಲ್ಲಿ ಅಳವಡಿಸಿರುವ ಸೇತುವೆ ಕಂಬಳ ಕಬ್ಬಿಣವು ತುಕ್ಕು ಹಿಡಿದಿದೆ ಎನ್ನುತ್ತಾರೆ ಸ್ಥಳೀಯರು.

ಅಭಿವೃದ್ಧಿ ರಾಜಕೀಯ: ‘ಶಾಸಕರು ಬದಲಾದಂತೆ ಅಭಿವೃದ್ಧಿ ಆದ್ಯತೆಗಳು ಸಹ ಬದಲಾಗುತ್ತವೆ. ಹಾಗಾಗಿ, ಕೆಲ ಕಾಮಗಾರಿಗಳು ಜನಪ್ರತಿನಿಧಿಗಳ ಸೂಚನೆ ಮೇರೆಗೆ ನಿಂತಿವೆ.  ಅವರ ಸೂಚನೆ ಧಿಕ್ಕರಿಸಿ ನಾವು ಕೆಲಸ ಮುಂದುವರಿಸಲು ಸಾಧ್ಯವಿಲ್ಲ. ಇದೀಗ, ಮತ್ತೆ ಆರಂಭಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಡೆ ಸರಿಯಲ್ಲ: ‘ನಗರಸಭೆಯಲ್ಲಿ ಅನುಮೋದನೆ ಪಡೆದು, ಟೆಂಡರ್ ಆಗಿ ಶುರುವಾಗಿದ್ದ ಕೆಲಸವನ್ನು ನಿಲ್ಲಿಸುವ ಪ್ರಯತ್ನಗಳು ಹಿಂದೆಂದೂ ನಡೆದಿರಲಿಲ್ಲ. ಹಾಗೆ, ಮಾಡಿದರೆ, ಅದು ನಗರಸಭೆಯ ಹಕ್ಕನ್ನು ಕಸಿದುಕೊಂಡಂತೆ’ ಎಂದು ನಗರಸಭೆಯ ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ನಗರಸಭೆ ಕಟ್ಟಡ ಮತ್ತು ಸೇತುವೆ ಕಾಮಗಾರಿ ಶೇ 30ರಷ್ಟು ಪೂರ್ಣಗೊಂಡಿದ್ದರೂ, ಅವುಗಳನ್ನು ನಿಲ್ಲಿಸಿದ್ದು ಸರಿಯಲ್ಲ. ಹೀಗಾದರೆ, ಸ್ಥಳೀಯ ಸಂಸ್ಥೆಗೆ, ಅಲ್ಲಿನ ಚುನಾಯಿತಿ ಪ್ರತಿನಿಧಿಗಳು ಯಾವ ಗೌರವ ಇರುತ್ತದೆ?’ ಎಂದು ಪ್ರಶ್ನಿಸಿದರು.

ನನೆಗುದಿಗೆ ಬಿದ್ದಿರುವ ಅರ್ಕಾವತಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ

ನನೆಗುದಿಗೆ ಬಿದ್ದಿರುವ ಅರ್ಕಾವತಿ ನದಿಗೆ ಸೇತುವೆ ನಿರ್ಮಾಣ ಕಾಮಗಾರಿ

ಪ್ರಜಾವಾಣಿ ಚಿತ್ರ: ಚಂದ್ರೇಗೌಡ

ನಗರಸಭೆ ಕಟ್ಟಡದ ಮೇಲ್ಭಾಗದ ಸಭಾಂಗಣ ಮತ್ತು ಅರ್ಕಾವತಿ ನದಿಗೆ ಅಡ್ಡವಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿಗಳನ್ನು ಮತ್ತೆ ಮುಂದುವರಿಸಲು ಕ್ರಮ ಕೈಗೊಳ್ಳಲಾಗುವುದು
– ಎಲ್. ನಾಗೇಶ್ ಪೌರಾಯುಕ್ತ ರಾಮನಗರ

‘ಸಭಾಂಗಣ ಬೇಕಿಲ್ಲ; ಸೇತುವೆ ನಿರ್ಮಾಣಕ್ಕೆ ತೀರ್ಮಾನ’

‘ಸೇತುವೆ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಸಂಪರ್ಕ ರಸ್ತೆ ಇಲ್ಲವೆಂದು ಎಂಜಿನಿಯರ್ ಹೇಳಿದ್ದರಿಂದ ಕಾಮಗಾರಿ ನಿಂತಿತ್ತು. ಮೊನ್ನೆ ಸ್ಥಳ ಪರಿಶೀಲನೆ ನಡೆಸಿದಾಗ ನಗರಸಭೆ ಸದಸ್ಯರು ಅಲ್ಲಿ ಹಳೆ ರಸ್ತೆ ಇದ್ದಿದ್ದರ ಕುರಿತು ಗಮನ ಸೆಳೆದಾಗ ಕಾಮಗಾರಿ ಮುಂದುವರಿಸಲು ಸಲಹೆ ನೀಡಿರುವೆ.ನಗರಸಭೆ ಕಟ್ಟಡದ ಮೇಲೆ ಸಭಾಂಗಣ ನಿರ್ಮಾಣದ ಬದಲು ಪಕ್ಕದಲ್ಲಿರುವ ಕೊಠಡಿಯ ಜಾಗದಲ್ಲೇ ಸಭಾಂಗಣ ನಿರ್ಮಿಸುವುದು ಸೂಕ್ತ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಮಗಾರಿಗೆ ಅನುಮತಿ ಕೊಡುತ್ತಿಲ್ಲ’ ‘ಚುನಾವಣೆ ಬಂದಾಗ ನಗರಸಭೆ ಮೇಲ್ಭಾಗದ ಸಭಾಂಗಣದ ಕೆಲಸ ನಿಲ್ಲಿಸಲು ಹೇಳಿದರು. ಮುಗಿದ ಬಳಿಕ ಮತ್ತೆ ಕೆಲಸ ಮಾಡಲು ಅನುಮತಿ ಕೊಡಿ ಎಂದು ಪೌರಾಯುಕ್ತರು ಮತ್ತು ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಾಗಲೇ ಮಾಡಿರುವ ಕೆಲಸದ ಬಿಲ್ ಸಹ ಕೊಡುತ್ತಿಲ್ಲ. ಕೆಲಸಕ್ಕಾಗಿ ಸಿಮೆಂಟ್ ಜಲ್ಲಿ ಸಿಮೆಂಟ್ ಇಟ್ಟಿಗೆ ಸೇರಿದಂತೆ ವಿವಿಧ ಸಾಮಗ್ರಿಯನ್ನು ನಗರಸಭೆ ಆವರಣದಲ್ಲಿ ತಂದು ಹಾಕಿ ಕಾಯುತ್ತಿದ್ದೇನೆ. ವಿಳಂಬದಿಂದಾಗಿ ನನಗೆ ಕೊಟ್ಟಿದ್ದ ಕಾರ್ಯಾದೇಶದ ಅವಧಿಯೂ ಮುಗಿಯುತ್ತಾ ಬಂದಿದೆ. ಒಟ್ಟಿನಲ್ಲಿ ನಗರಸಭೆಯವರು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ’ ಎಂದು ಗುತ್ತಿಗೆದಾರ ಆನಂದ್ ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT