ಗುರುವಾರ , ಫೆಬ್ರವರಿ 25, 2021
28 °C
ಮುಸ್ಲಿಂ ಕನ್ನಡ ರಕ್ಷಣಾ ವೇದಿಕೆ ಕಚೇರಿ ಉದ್ಘಾಟನೆ

ಕನ್ನಡಕ್ಕೆ ಮುಸ್ಲಿಮರ ಕೊಡುಗೆ ಅಪಾರ: ಖಾಜಾ ಅಲಿಯಾಸ್‌ ಅಲ್ತಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಗೆ ಜಾತಿ, ಧರ್ಮ, ಲಿಂಗಭೇದ ಮರೆತು ಸಂಘಟಿತರಾಗಿ ಹೋರಾಟ ಮಾಡಬೇಕಿದೆ ಎಂದು ಕರ್ನಾಟಕ ಸ್ವಾಭಿಮಾನಿ ಮುಸ್ಲಿಂ ಕನ್ನಡ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಖಾಜಾ ಅಲಿಯಾಸ್‌ ಅಲ್ತಾಜ್‌ ತಿಳಿಸಿದರು.

ಪಟ್ಟಣದಲ್ಲಿ ಕರ್ನಾಟಕ ಸ್ವಾಭಿಮಾನಿ ಮುಸ್ಲಿಂ ಕನ್ನಡ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಕಚೇರಿ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಪರ್ಷಿಯನ್‌, ರೋಮನ್‌, ಗ್ರೀಕ್‌, ಅರಬ್ಬಿ, ಉರ್ದು ಭಾಷೆಯಿಂದ ಕೊಡುಕೊಳ್ಳುವಿಕೆ ಹಿಂದಿನಿಂದಲೂ ನಡೆದುಬಂದಿದೆ. ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಮುಸ್ಲಿಂ ಲೇಖಕರ ಪಾತ್ರ ಅನನ್ಯವಾದುದು. ತತ್ವಪದಕಾರ ಶಿಶುನಾಳ ಷರೀಫ, ಹಜರತ್ ಟಿಪ್ಪು ಸುಲ್ತಾನ್‌ ನಾಡು, ನುಡಿಗೆ ಸಲ್ಲಿಸಿರುವ ಸೇವೆಯನ್ನು ಮರೆಯುವಂತಿಲ್ಲ ಎಂದರು.

ಜನಪದ ವಿದ್ವಾಂಸ ಎಸ್‌.ಕೆ. ಕರೀಂಖಾನ್‌ ಮೊದಲ ಬಾರಿಗೆ ರಾಜಾ ಕೆಂಪೇಗೌಡ ನಾಟಕ ರಚಿಸಿ ರಂಗದ ಮೇಲೆ ತಂದರು. ಜೋಗದ ಸಿರಿಯನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದು ಮನೆ ಮಾತಾದ ಪ್ರೊ.ನಿಸಾರ್‌ ಅಹಮದ್, ಸಾ.ರಾ. ಅಬೂಬ್‌ಕರ್‌, ಎಂ. ಅಕಬರ ಅಲಿ, ರಹಮತ್‌ ತರೀಕೆರೆ ಸೇರಿದಂತೆ ಹಲವರು ಕನ್ನಡ ಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾರೆ ಎಂದು ತಿಳಿಸಿದರು.

ಪುರಸಭೆ ಉಪಾಧ್ಯಕ್ಷ ರಹಮತ್ ಉಲ್ಲಾ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ತಾಲ್ಲೂಕು ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಮಾತನಾಡಿ, ಕನ್ನಡಿಗರ ವಿರುದ್ಧ ಬೆಳಗಾವಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿಲುವು ಖಂಡನೀಯ ಎಂದು ಹೇಳಿದರು.

ವೇದಿಕೆಯ ರಾಜ್ಯ ಕಾರ್ಯದರ್ಶಿ ರೇಷ್ಮಾ ತಾಜ್ ಮಾತನಾಡಿ, ಕನ್ನಡದ ಚಳವಳಿಯಲ್ಲಿ ಮುಸ್ಲಿಂ ಯುವತಿಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಪುರಸಭೆ ಸದಸ್ಯರಾದ ರಿಯಾಜ್ ಅಹಮದ್, ಶಬ್ಬೀರ್‌ ಪಾಷಾ, ವೇದಿಕೆಯ ಜಿಲ್ಲಾ ಅಧ್ಯಕ್ಷ ಆಸೀಫ್‌ ಪಾಷಾ, ತಾಲ್ಲೂಕು ಶಾಖೆಯ ಉಪಾಧ್ಯಕ್ಷ ಸಯ್ಯದ್‌ ತಯ್ಯಬ್‌ ನಬಿ, ಕಾರ್ಯದರ್ಶಿ ಸಯ್ಯದ್ ಶಬ್ಬೀರ್ ಪಾಷಾ, ಖಜಾಂಚಿ ಆಸ್ಮಾಬಾನು, ಸದಸ್ಯ ಮಹಬೂಬ್‌ ಪಾಷಾ, ಗುಲಾಬ್‌, ತಬಸುಮ್‌ ಸುಲ್ತಾನಾ, ಶಭಾನ್, ಮಹಮದ್ ಬರ್ಕತ್ ಅಲಿ, ತಾಲಿಬ್‌, ಸಲಿಮಬಾನು, ಬಿ.ವಿ. ಹಾಜೀರಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು