ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಉದ್ಯೋಗಿಗಳು, ವಿದ್ಯಾರ್ಥಿಗಳಿಗೂ ನರೇಗಾ ಕೂಲಿ!

ಚಾಕನಹಳ್ಳಿ ಗ್ರಾಮ ಪಂಚಾಯಿತಿ: ಸಾಮಾಜಿಕ ಪರಿಶೋಧನೆ ವರದಿಯಲ್ಲಿ ಬಹಿರಂಗ
Published 11 ಜುಲೈ 2024, 6:00 IST
Last Updated 11 ಜುಲೈ 2024, 6:00 IST
ಅಕ್ಷರ ಗಾತ್ರ

ಕನಕಪುರ: ನರೇಗಾ ಕೂಲಿ ಹಣ ಸರ್ಕಾರಿ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮೃತಪಟ್ಟವರ ಹೆಸರಿಗೂ ಪಾವತಿಯಾಗಿರುವುದು ಚಾಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾಜಿಕ ಪರಿಶೋಧನೆ ವರದಿಯಲ್ಲಿ ಬಹಿರಂಗಗೊಂಡಿದೆ.

ತಾಲ್ಲೂಕಿನ ಕಸಬಾ ಹೋಬಳಿ ಚಾಕನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾಜಿಕ ಪರಿಶೋಧನಾ ವರದಿ ಮಂಡನೆ ಸಭೆಯಲ್ಲಿ ಪರಿಶೋಧನಾ ಸಮಿತಿಯ ಸಂಯೋಜಕ ಚೇತನ್‌ಕುಮಾರ್‌ ಕಾಮಗಾರಿಗಳ ಲೋಪವನ್ನು ಸಭೆಗೆ ತಿಳಿಸಿದರು.

‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆ ಅಡಿಯಲ್ಲಿ ಸರ್ಕಾರಿ ರಸ್ತೆ ಅಭಿವೃದ್ಧಿಗೆ ಮಾತ್ರ ಅವಕಾಶವಿದೆ. ಆದರೆ ಖಾಸಗಿ ವ್ಯಕ್ತಿಗೆ ಅನುಕೂಲವಾಗುವಂತೆ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ಆರೋಪಿಸಿದರು.

ಕಾಮಗಾರಿ ನಡೆದ ದಿನಗಳಿಗಿಂತ ಹೆಚ್ಚು ಹಣ ಬಿಡುಗಡೆ ಮಾಡಿ, ಸರ್ಕಾರಕ್ಕೆ ವಂಚಿಸಲಾಗಿದೆ. ಎರಡು ಕಾಮಗಾರಿಗಳಲ್ಲಿ 208 ಮೀಟರ್‌ ಮತ್ತು 75 ಮೀಟರ್‌ ಹೆಚ್ಚುವರಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಯಲ್ಲಿ 2023-24ನೇ ಸಾಲಿನಲ್ಲಿ ಒಟ್ಟು 982 ಕಾಮಗಾರಿ ಮಾಡಿದ್ದು, ₹2.64 ಕೋಟಿ ಖರ್ಚಾಗಿದೆ.
18 ಅಪೂರ್ಣ ಕಾಮಗಾರಿಗಳಿಗೆ ಹಣ ಪಾವತಿಯಾಗಿದೆ. ಕೆಲವು ಕಾಮಗಾರಿಗಳನ್ನು ಒಡೆದು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಕಾಮಗಾರಿಗಳಲ್ಲಿ ಆಗಿರುವ ಲೋಪಗಳನ್ನು ನಿಗದಿತ ಕಾಲಾವಧಿಯಲ್ಲಿ ಸರಿಪಡಿಸಬೇಕು. ಇಲ್ಲದಿದ್ದರೆ ಹಣ ಮರುಪಾವತಿಸಬೇಕು ಎಂದು ಸೂಚಿಸಿದರು.

ಶಿಕ್ಷಣ ಇಲಾಖೆ ಎಸ್.ಮುರುಳಿಧರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷ ಗಂಗರಾಜು, ಪಿಡಿಒ ವಿನುತ, ಶಿಕ್ಷಣ ಇಲಾಖೆ ಸಿಆರ್‌ಪಿ ದೀಪಕ್, ರೇಷ್ಮೆ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು, ಕಾಮಗಾರಿ ಮೇಲ್ವಿಚಾರಕ ಭರತ್, ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT