ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖಿಲ್ ಕುಮಾರಸ್ವಾಮಿ ಮದುವೆ: ಒಂದೂವರೆ ಲಕ್ಷ ಮನೆಗಳಿಗೆ ಸೀರೆ, ಪಂಚೆ ಗಿಫ್ಟ್

ಪ್ರತಿ ಮನೆಗೂ ತಲುಪಲಿದೆ ಲಗ್ನಪತ್ರಿಕೆ; ಜೆಡಿಎಸ್‌ ಕಾರ್ಯಕರ್ತರಿಂದಲೇ ಹಂಚಿಕೆ
Last Updated 4 ಮಾರ್ಚ್ 2020, 12:17 IST
ಅಕ್ಷರ ಗಾತ್ರ

ರಾಮನಗರ: ಅವಳಿ ನಗರದ ಶಾಸಕರಾದ ಎಚ್‌.ಡಿ. ಕುಮಾರಸ್ವಾಮಿ–ಅನಿತಾ ದಂಪತಿ ತಮ್ಮ ಮಗನ ಮದುವೆ ಅಂಗವಾಗಿ ರಾಮನಗರ–ಚನ್ನಪಟ್ಟಣದ ಜನರಿಗೆ ಉಡುಗೊರೆಯೊಂದನ್ನು ನೀಡಲಿದ್ದಾರೆ. ಸದ್ಯದಲ್ಲೇ ಈ ಉಡುಗೊರೆಯು ಪ್ರತಿ ಮನೆಯ ಬಾಗಿಲು ತಲುಪಲಿದೆ.

ಅರ್ಚಕರಹಳ್ಳಿಯ ಜಾನಪದ ಲೋಕದ ಬಳಿ ಮೈದಾನದಲ್ಲಿ ಏಪ್ರಿಲ್‌ 17ರಂದು ನಿಖಿಲ್‌–ರೇವತಿ ವಿವಾಹ ನೆರವೇರಲಿದೆ. ಈಗಾಗಲೇ ಇದರ ಲಗ್ನಪತ್ರಿಕೆ ಮುದ್ರಣ ಕಂಡಿದ್ದು, ಎರಡೂ ವಿಧಾನಸಭಾ ಕ್ಷೇತ್ರಗಳ ಮನೆಮನೆಗೆ ಇದನ್ನು ಹಂಚಲು ಸಿದ್ಧತೆ ನಡೆದಿದೆ. ಇದರ ಜೊತೆಯಲ್ಲೇ ಮದುವೆಗಾಗಿ ಉಡುಗೊರೆಯೊಂದನ್ನು ನೀಡಲು ಕುಮಾರಸ್ವಾಮಿ ಬಯಸಿದ್ದಾರೆ.

ಪ್ರತಿ ಆಹ್ವಾನ ಪತ್ರಿಕೆಯ ಜೊತೆಗೆ ತಲಾ ಒಂದು ಸೀರೆ, ಶರ್ಟ್‌, ಪಂಚೆ, ಶಲ್ಯವನ್ನು ಒಳಗೊಂಡ ಉಡುಗೊರೆಯನ್ನು ನೀಡಲು ಸಿದ್ಧತೆ ನಡೆದಿದೆ. ಕುಮಾರಣ್ಣನ ಪರವಾಗಿ ಕಾರ್ಯಕರ್ತರೇ ಮನೆಮನೆಗೆ ತೆರಳಿ ಮದುವೆಗೆ ಆಹ್ವಾನ ನೀಡಲಿದ್ದಾರೆ.

ಮನೆಮನೆ ಮಾಹಿತಿ: ರಾಮನಗರ ಹಾಗೂ ಚನ್ನಪಟ್ಟಣದಲ್ಲಿನ ಮನೆಗಳ ಸಂಖ್ಯೆ ಕುರಿತು ಮಾಹಿತಿ ನೀಡುವಂತೆ ಕುಮಾರಸ್ವಾಮಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅದರಂತೆ ಜೆಡಿಎಸ್‌ ಕಾರ್ಯಕರ್ತರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಮನೆಗಳ ಲೆಕ್ಕವನ್ನು ಒಪ್ಪಿಸಿದ್ದಾರೆ. ರಾಮನಗರದಲ್ಲಿ 68 ಸಾವಿರ ಹಾಗೂ ಚನ್ನಪಟ್ಟಣದಲ್ಲಿ 70 ಸಾವಿರ ಮನೆಗಳು ಇರುವುದಾಗಿ ಅಂದಾಜಿಸಲಾಗಿದೆ.

‘ಪಟ್ಟಣ ಹಾಗೂ ಹಳ್ಳಿಗಳಲ್ಲಿನ ಮನೆಗಳ ಮಾಹಿತಿಯನ್ನು ಕುಮಾರಣ್ಣ ಕೇಳಿದ್ದು, ಈಗಾಗಲೇ ಒದಗಿಸಿದ್ದೇವೆ. ಆಹ್ವಾನ ಪತ್ರಿಕೆಯ ಜೊತೆಗೆ ಸಾಂಪ್ರದಾಯಿಕವಾದ ಉಡುಗೆಗಳ ಉಡುಗೊರೆಯೂ ಇರಲಿದೆ. ಮದುವೆಗೆ ಎರಡು–ಮೂರು ವಾರ ಇರುವಾಗ ಇದನ್ನು ಹಂಚಲು ಯೋಜಿಸಿದ್ದೇವೆ’ ಎಂದು ಜೆಡಿಎಸ್ ಮುಖಂಡರೊಬ್ಬರು ಮಾಹಿತಿ ನೀಡಿದರು.

ಅದ್ದೂರಿ ಸೆಟ್‌: ಮತ್ತೊಂದೆಡೆ, ‘ಸಪ್ತಪದಿ ಮಂಟಪ’ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಸುಮಾರು 20 ಎಕರೆಯಷ್ಟು ಪ್ರದೇಶದಲ್ಲಿ ಈ ಸೆಟ್‌ ತಲೆ ಎತ್ತಲಿದೆ. ಬೆಂಗಳೂರಿನ ಮಂಜಣ್ಣ ಎಂಬುವರು ಇದರ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ. ನೀರಿನ ಸೌಕರ್ಯಕ್ಕಾಗಿ ಸ್ಥಳದಲ್ಲಿ ಈಗಾಗಲೇ ನಾಲ್ಕಾರು ಕೊಳವೆಬಾವಿಗಳನ್ನು ಕೊರೆಯಲಾಗಿದೆ.

ಮದುವೆಗೆ ಸುಮಾರು 7ರಿಂದ 8 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಇವರೆಲ್ಲರಿಗೆ ಊಟೋಪಚಾರದ ವ್ಯವಸ್ಥೆಯನ್ನು ಬೆಂಗಳೂರಿನ ಬಳೆಪೇಟೆ ಬಳಿಯ ಬಾಣಸಿಗರ ತಂಡವೊಂದು ಮಾಡಲಿದೆ. ಸಾವಿರಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಭೋಜನ ವ್ಯವಸ್ಥೆಗೆಂದೇ ಹತ್ತಾರು ಎಕರೆ ಪ್ರದೇಶವನ್ನು ಸಮತಟ್ಟು ಮಾಡುವ ಕಾರ್ಯ ನಡೆದಿದೆ.

**

ನಿಖಿಲ್‌ಮದುವೆ ಸರಳವಾಗಿಯೇ ನಡೆಯಲಿದೆ. ಬಂದವರೆಲ್ಲರನ್ನೂ ಹಾಗೆಯೇ ಕಳಿಸಲು ಆಗದು. ಊಟೋಪಚಾರವೂ ಸರಳವಾಗಿರಲಿದೆ.
-ಎಚ್‌.ಡಿ. ದೇವೇಗೌಡ, ಜೆಡಿಎಸ್‌ ವರಿಷ್ಠ

**

ಇದು ಕಾರ್ಯಕರ್ತರೆಲ್ಲರೂ ಸೇರಿ ಮಾಡುತ್ತಿರುವ ಮದುವೆ. ಜನರ ಆಹ್ವಾನ, ಉಡುಗೊರೆ ಎಲ್ಲವನ್ನೂ ಅವರೇ ನಿರ್ಧರಿಸುತ್ತಾರೆ.
-ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT