ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ | ಸ್ಮಶಾನವಿಲ್ಲದೆ ರಸ್ತೆ ಬದಿಯೇ ಶವ ದಹನ

ತಾಲ್ಲೂಕು ಆಡಳಿತದ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ
Published 16 ಜೂನ್ 2024, 15:45 IST
Last Updated 16 ಜೂನ್ 2024, 15:45 IST
ಅಕ್ಷರ ಗಾತ್ರ

ರಾಮನಗರ: ಸ್ಮಶಾನ ಜಾಗದ ಸಮಸ್ಯೆಯಿಂದಾಗಿ ಗ್ರಾಮಸ್ಥರು ವೃದ್ಧರೊಬ್ಬರ ಶವವನ್ನು ರಸ್ತೆ ಬದಿಯೇ ದಹನ ಮಾಡಿರುವ ಘಟನೆ ತಾಲ್ಲೂಕಿನ ಕೂನಮುದ್ದನಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಗ್ರಾಮದ 65 ವರ್ಷದ ರುದ್ರಯ್ಯ ಅವರು ಬೆಳಿಗ್ಗೆ ತೀರಿಕೊಂಡಿದ್ದರು. ಗ್ರಾಮದಲ್ಲಿ ಸ್ಮಶಾನಕ್ಕೆಂದು ಅಧಿಕೃತವಾಗಿ ಇದುವರೆಗೆ ಯಾವುದೇ ಜಾಗವನ್ನು ತಾಲ್ಲೂಕು ಆಡಳಿತ ಗುರುತಿಸಿ ಹದ್ದುಬಸ್ತು ಮಾಡಿಕೊಟ್ಟಿಲ್ಲ. ಗ್ರಾಮದ ಕಲ್ಯಾಣಿ ಎದುರಿನ ಜಾಗದಲ್ಲೇ ಅಂತ್ಯಸಂಸ್ಕಾರ ಮಾಡಿಕೊಳ್ಳಿ ಎಂದು ಮೌಖಿಕವಾಗಿ ಹೇಳಿ ಹೋದ ಅಧಿಕಾರಿಗಳು ಮತ್ತೆ ವಾಪಸ್ ತಲೆ ಹಾಕಲಿಲ್ಲ ಎಂದು ಗ್ರಾಮಸ್ಥರು ದೂರಿದರು.

ಕಲ್ಯಾಣ ಎದುರಿನ ಜಾಗಕ್ಕೆ ಅಂತ್ಯಸಂಸ್ಕಾರಕ್ಕಾಗಿ ಶವ ತೆಗೆದುಕೊಂಡು ಹೋದಾಗ, ಖಾಸಗಿ ವ್ಯಕ್ತಿಯೊಬ್ಬರು ಈ ಜಾಗ ತಮಗೆ ಸೇರಿದ್ದು ಎಂದು ಆಕ್ಷೇಪ ವ್ಯಕ್ತಪಡಿಸಿ ಕೆಲ ದಾಖಲೆಗಳನ್ನು ತೋರಿಸಿ, ಅಂತ್ಯಕ್ರಿಯೆ ಮಾಡದಂತೆ ತಾಕೀತು ಮಾಡಿದರು. ಕಡೆಗೆ ಬೇರೆ ಜಾಗವಿಲ್ಲದಿದ್ದರಿಂದ ರಸ್ತೆ ಬದಿಯಲ್ಲೇ ಶವವನ್ನು ದಹನ ಮಾಡಿದೆವು ಎಂದು ಗ್ರಾಮಸ್ಥರು ಹೇಳಿದರು.

ಹಲವು ವರ್ಷಗಳ ಸಮಸ್ಯೆ:

ಗ್ರಾಮದಲ್ಲಿ ಹಲವು ವರ್ಷಗಳಿಂದ ಸ್ಮಶಾನ ಸಮಸ್ಯೆ ಇದೆ. ಈ ಕುರಿತು ಜನಪ್ರತಿನಿಧಿಗಳು, ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಎಚ್‌.ಸಿ. ಬಾಲಕೃಷ್ಣ ಅವರ ಗಮನಕ್ಕೂ ತಂದಿದ್ದೆವು. ತಕ್ಷಣ ಸ್ಪಂದಿಸಿದ ಅವರು, ಜಾಗ ಗುರುತಿಸಿ ಸ್ಮಶಾನ ಮಂಜೂರು ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದುವರೆಗೆ ಜಾಗ ಅಂತಿಮಗೊಳ್ಳಲಿಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿ ಸುಮಾರು 250 ಕುಟುಂಬಗಳಿದ್ದು, 125 ಕುಟುಂಬಗಳಿಗೆ ಸ್ವಂತ ಜಮೀನಿಲ್ಲ. ಸ್ಮಶಾನಕ್ಕಾಗಿ ಗ್ರಾಮದಲ್ಲಿರುವ ಸರ್ಕಾರಿ ಜಮೀನನ್ನು ನಾವೇ ಗುರುತಿಸಿ ಅಧಿಕಾರಿಗಳ ಗಮನಕ್ಕೆ ದಾಖಲೆ ಸಮೇತ ಗಮನಕ್ಕೆ ತಂದರು ನಿರ್ಲಕ್ಷ್ಯಿಸಿದರು. ಈಗಲಾದರೂ ಎಚ್ಚೆತ್ತುಕೊಂಡು ನಮ್ಮೂರಿಗೆ ಸ್ಮಶಾನ ಮಂಜೂರು ಮಾಡಿ ಹದ್ದುಬಸ್ತು ಮಾಡಿಕೊಡಬೇಕು. ಇಲ್ಲದಿದ್ದರೆ, ಮುಂದೆ ಜಿಲ್ಲಾಧಿಕಾರಿ ಕಚೇರಿ ಎದುರು ಶವಸಂಸ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT