ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯದಂತೆ ಒತ್ತಾಯ

Last Updated 8 ಜೂನ್ 2020, 15:04 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ದೊಡ್ಡತುಮಕೂರು ಗ್ರಾಮದ ಜನವಸತಿ ಪ್ರದೇಶದಲ್ಲಿ ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ತೆರೆಯಲು ನಡೆದಿರುವ ಪ್ರಯತ್ನ ನಿಲ್ಲಿಸಬೇಕು. ಗ್ರಾಮ ಪಂಚಾಯಿತಿ ವತಿಯಿಂದ ಪರವಾನಗಿ ನೀಡದಂತೆ ಒತ್ತಾಯಿಸಿ ಗ್ರಾಮಸ್ಥರು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ,ಪಿಡಿಒ ಸೌಮ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮುಖಂಡರಾದ ರವಿಕುಮಾರ್, ನಿವೃತ್ತ ಶಿಕ್ಷಕ ಚಿಕ್ಕಣಪ್ಪ, ದೊಡ್ಡತುಮಕೂರು ವ್ಯಾಪ್ತಿಯಲ್ಲಿ ಜನರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಿದ್ದಲ್ಲಿ ಇಲ್ಲಿನ ಜನರ ನೆಮ್ಮದಿ ಹಾಳಾಗಲಿದೆ. ಈ ಭಾಗದ ಜನರು ಬಹುತೇಕ ಕೂಲಿ ಕಾರ್ಮಿಕರಿದ್ದು, ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಚಿಕ್ಕ ಮಕ್ಕಳಿಂದ ಹಿಡಿದು ಹಲವರು ಕುಡಿತದ ಚಟಕ್ಕೆ ಬಲಿಯಾಗಿದ್ದು, ಪ್ರತಿನಿತ್ಯ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮದ್ಯದ ಅಂಗಡಿ ತೆರೆಯುವುದರಿಂದ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಗ್ರಾಮ ಪಂಚಾಯಿತಿ ದಾರಿಮಾಡಿಕೊಟ್ಟಂತಾಗಲಿದೆ ಎಂದರು.

ಯುವ ಮುಖಂಡರಾದ ಟಿ.ಜಿ.ಮಂಜುನಾಥ್, ಲೋಕೋಶ್‌ ಮಾತನಾಡಿ, ಮದ್ಯದಂಗಡಿ ತೆರೆಯಲು ಗೊತ್ತುಪಡಿಸಿದ ಸ್ಥಳ ಮುಖ್ಯ ರಸ್ತೆಯಲ್ಲಿದೆ. ಇಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ಸಂಚರಿಸುವುದರಿಂದ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯದಂಗಡಿ ಸ್ಥಾಪಿಸಲು ಪರವಾನಗಿ ನೀಡಬಾರದು. ಒಂದೊಮ್ಮೆ ಅವಕಾಶ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸ್ತ್ರೀಶಕ್ತಿ ಸಂಘದ ನರಸಮ್ಮ, ಕಮಲ, ಭಾಗ್ಯಮ್ಮ, ಅಂಬುಜಮ್ಮ, ಆಶಾ, ವೆಂಕಟೇಶಮ್ಮ, ಮರಿಯಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ, ವಿಎಸ್‍ಎಸ್‍ಎನ್ ಅಧ್ಯಕ್ಷ ಪ್ರಭಾಕರ್, ನಿರ್ದೇಶಕ ಶಿವಕುಮಾರ್, ಚನ್ನಗೌಡ, ಆಂಜಿನಪ್ಪ, ಟಿ.ಎಲ್ ರಘು, ಲೋಕೇಶ್, ವಸಂತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT